ಷರಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಬ್ಬ ಪುರುಷನು ಧರಿಸಿರುವ ಷರಾಯಿ

ಷರಾಯಿ ಎಂದರೆ ಸೊಂಟದಿಂದ ಕಣಕಾಲಿನವರೆಗೆ ಧರಿಸಲಾದ ಒಂದು ಉಡುಪು. ಇದು (ನಿಲುವಂಗಿ, ಲಂಗದಂತಹ ಎರಡೂ ಕಾಲುಗಳ ಉದ್ದಕ್ಕೂ ವಿಸ್ತರಿಸುವ ಉಡುಪಿನ ಬದಲಾಗಿ) ಎರಡೂ ಕಾಲುಗಳನ್ನು ಪ್ರತ್ಯೇಕವಾಗಿ ಮುಚ್ಚುತ್ತದೆ.

ಪರಿಚಿತವಿರುವ ಅತ್ಯಂತ ಹಳೆಯ ಷರಾಯಿ ಪಶ್ಚಿಮ ಚೀನಾದ ಷಿನ್‍ಜಾಂಗ್‍ನ ಟರ್ಪನ್‍ನ ಯಾಂಘಾಯ್ ಸ್ಮಶಾನದಲ್ಲಿ ಕಂಡುಬಂದಿದೆ. ಇದರ ಕಾಲಮಾನ ಕ್ರಿ.ಪೂ. ೧೩ನೇ ಮತ್ತು ೧೦ನೇ ಶತಮಾನಗಳ ನಡುವೆ ಎಂದು ನಿರ್ಧರಿಸಲಾಗಿದೆ. ಉಣ್ಣೆಯಿಂದ ತಯಾರಿಸಲಾದ ಈ ಷರಾಯಿ ನೇರ ಕಾಲುಗಳು ಮತ್ತು ಅಗಲವಾದ ಕೂಡುಭಾಗವನ್ನು ಹೊಂದಿತ್ತು, ಮತ್ತು ಇವನ್ನು ಕುದುರೆ ಸವಾರಿಗಾಗಿ ತಯಾರಿಸಿರಬಹುದು.[೧]

ಯೂರೋಪ್‍ನ ಬಹುತೇಕ ಭಾಗದಲ್ಲಿ, ಷರಾಯಿಯನ್ನು ಪ್ರಾಚೀನ ಕಾಲ ಮತ್ತು ಮಧ್ಯಕಾಲೀನ ಯುಗದಾದ್ಯಂತ ಧರಿಸಲಾಗುತ್ತಿದೆ. ಆಧುನಿಕ ವಿಶ್ವದಲ್ಲಿ, ಚಲ್ಲಣಗಳನ್ನೂ ವ್ಯಾಪಕವಾಗಿ ಧರಿಸಲಾಗುತ್ತದಾದರೂ, ಷರಾಯಿಯು ವಯಸ್ಕ ಗಂಡಸರಿಗೆ ಅತ್ಯಂತ ಸಾಮಾನ್ಯ ರೂಪದ ಕೆಳದೇಹದ ಉಡುಪಾಗಿದೆ. ವಿವಿಧ ಪ್ರದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಕಿರುಲಂಗಗಳು ಮತ್ತು ಇತರ ಉಡುಪುಗಳನ್ನು ಧರಿಸಬಹುದು. ಮುಂಚಿನ ಆಧುನಿಕ ಯೂರೋಪ್‍ನಲ್ಲಿ ಸಮಾಜದ ಉಚ್ಚ ವರ್ಗಗಳ ಕೆಲವು ಗಂಡಸರು ಷರಾಯಿಯ ಬದಲು ಬ್ರೀಚ್‍ಗಳನ್ನು ಧರಿಸುತ್ತಿದ್ದರು. ೨೦ನೇ ಶತಮಾನದ ಮಧ್ಯದಿಂದ, ಹೆಂಗಸರು ಕೂಡ ಷರಾಯಿಯನ್ನು ಹೆಚ್ಚಾಗಿ ಧರಿಸುತ್ತಿದ್ದಾರೆ.

ಡೆನಿಮ್‍ನಿಂದ ತಯಾರಿಸಲಾದ ಜೀನ್ಸ್ ಸಾಂದರ್ಭಿಕ ಉಡುಗೆಗಾಗಿ ಧರಿಸಲಾದ ಷರಾಯಿಯ ಒಂದು ರೂಪವಾಗಿದೆ ಮತ್ತು ಈಗ ವಿಶ್ವದಾದ್ಯಂತ ಎರಡೂ ಲಿಂಗಗಳಿಂದ ವ್ಯಾಪಕವಾಗಿ ಧರಿಸಲ್ಪಡುತ್ತದೆ. ಷರಾಯಿಯನ್ನು ಸೊಂಟ ಅಥವಾ ಟೊಂಕದ ಮೇಲೆ ಧರಿಸಲಾಗುತ್ತದೆ ಮತ್ತು ಇದನ್ನು ಅದರ ಸ್ವಂತ ಬಂಧನಿ, ಬೆಲ್ಟ್ ಅಥವಾ ಬಿಗಿಪಟ್ಟಿಯಿಂದ ಭದ್ರಪಡಿಸಲಾಗಿರಬಹುದು.

ಐತಿಹಾಸಿಕವಾಗಿ ಅವು ಮುಚ್ಚುಪಟ್ಟಿಯನ್ನು ಹೊಂದಿರುತ್ತವೆಯೊ ಅಥವಾ ಇಲ್ಲವೊ ಎಂಬುದನ್ನು ಆಧರಿಸಿ ಷರಾಯಿಗಳು ಬದಲಾಗುತ್ತವೆ. ಮೂಲತಃ, ಕಾಲುಗಳ ನಡುವಿನ ಪ್ರದೇಶವನ್ನು ಹೋಸ್ ಮುಚ್ಚುತ್ತಿರಲಿಲ್ಲ. ಬದಲಾಗಿ ಇದನ್ನು ಕುಡತಿ ಅಥವಾ ಕಾಡ್‍ಪೀಸ್ ಮುಚ್ಚುತ್ತಿತ್ತು. ಬ್ರೀಚ್‍ಗಳನ್ನು ಧರಿಸಲಾಗುತ್ತಿದ್ದಾಗ, ಅವು ಮುಂಭಾಗದಲ್ಲಿ ಫ಼ಾಲ್‍ಗಳನ್ನು ಹೊಂದಿರುತ್ತಿದ್ದವು. ನಂತರ ಷರಾಯಿಯನ್ನು ಆವಿಷ್ಕರಿಸಿದೆ ಮೇಲೆ, ಮುಚ್ಚುಪಟ್ಟಿಯಿರುವ ಮುಂಭಾಗ ಹೊರಹೊಮ್ಮಿತು. ಈಗ ಬಹುತೇಕ ಮುಚ್ಚುಪಟ್ಟಿಗಳು ಜ಼ಿಪ್ ಬಳಸುತ್ತವೆ, ಆದರೆ ಗುಂಡಿಗಳಿರುವ ಷರಾಯಿಗಳು ಲಭ್ಯವಾಗುವುದು ಮುಂದುವರೆದಿದೆ.

ಉಲ್ಲೇಖಗಳು[ಬದಲಾಯಿಸಿ]

  1. Beck, Ulrike; Wagner, Mayke; Li, Xiao; Durkin-Meisterernst, Desmond; Tarasov, Pavel E. (22 May 2014). "The invention of trousers and its likely affiliation with horseback riding and mobility: A case study of late 2nd millennium BC finds from Turfan in eastern Central Asia". Quaternary International. doi:10.1016/j.quaint.2014.04.056. Retrieved 9 June 2014.
"https://kn.wikipedia.org/w/index.php?title=ಷರಾಯಿ&oldid=841033" ಇಂದ ಪಡೆಯಲ್ಪಟ್ಟಿದೆ