ಶ್ರೀ ಸೀತಾರಾಮಚಂದ್ರ ದೇವಾಲಯ ಅಶ್ವತ್ಥಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಸೀತಾರಾಮಚಂದ್ರ ದೇವಾಲಯ
ಶ್ರೀ ಸೀತಾರಾಮಚಂದ್ರ ದೇವಾಲಯ, ಅಶ್ವತ್ಥಪುರ
ಧರ್ಮ ಮತ್ತು ಸಂಪ್ರದಾಯ
ಜಿಲ್ಲೆಮಂಗಳೂರು
ಸ್ಥಳ
ಸ್ಥಳಅಶ್ವತ್ಥಪುರ
ರಾಜ್ಯಕರ್ನಾಟಕ
ದೇಶIndia
ವಾಸ್ತುಶಿಲ್ಪ
ನಿರ್ಮಾತೃದೇಶಸ್ಥ ಬ್ರಾಹ್ಮಣರು
ನಿರ್ಮಾಣ ಮುಕ್ತಾಯ೧೯೧೫

ಶ್ರೀ ಸೀತಾರಾಮಚಂದ್ರ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಅಶ್ವತ್ಥಪುರದಲ್ಲಿದೆ. ಈ ದೇವಾಲಯ ಒಂದು ನೂರು ವರ್ಷದಷ್ಟು ಇತಿಹಾಸವನ್ನು ಹೊಂದಿದೆ. ಶ್ರೀ ಶೃಂಗೇರಿ ಶಾರದ ಮಠದ ಪರಮ ಭಕ್ತರಾದ ದೇಶಸ್ಥ ಬ್ರಾಹ್ಮಣರು ಸೀತಾರಾಮಚಂದ್ರ ಮಂದಿರವನ್ನು ಅಧ್ಯಾತ್ಮಿಕ ಅರಿವು ಹಾಗೂ ಸಾಮಾಜಿಕ ಸಂಘಟನೆಗಾಗಿ ಹತ್ತೋಂಬತ್ತನೇ ಶತಮಾನದ ಆಧಿಭಾಗದಲ್ಲಿ ನಿರ್ಮಿಸಿದರು.ಶ್ರೀ ಬ್ರಹ್ಮಾಚೈತನ್ಯರ ಇಚ್ಚಾನುಸಾರ ಮಹಾರಾಜರ ಪರಮ ಶಿಷ್ಯರಾದ ಶ್ರೀ ಬ್ರಹ್ಮಾನಂದ ಗುರುಗಳವರು ಅಶ್ವತಪುರಕ್ಕೆ ಆಗಮಿಸಿ ಸೀತಾ ಲಕ್ಷ್ಮಣ ಸಹಿತ ಶ್ರೀ ರಾಮನ ಮೂರ್ತಿಯನ್ನು ರಾಕ್ಷಸನಾಮ ಸಂವತ್ಸರ ನಿಜ ವೈಶಾಖ ಶುದ್ಧ ಪಂಚಮಿಯ ದಿನ ೧೯೧೫ನೇ ಮೇ ೧೯ರ ಬುಧವಾರದಂದು ಮಧ್ಯಾಹ್ನ ಹನ್ನೆರಡು ಗಂಟೆಯ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಪ್ರತಿಷ್ಠಾಪಿಸಿದರು.

ವಾಸ್ತುಶಿಲ್ಪ[ಬದಲಾಯಿಸಿ]

ದೇವಾಲಯವು ಪೂರ್ವಾಭಿಮುಖವಾಗಿದ್ದು ವಾಸ್ತುಶಿಲ್ಪದಲ್ಲಿ ಸರಳತೆಯನ್ನು ಹೊಂದಿದೆ. ಮುಖಮಂಟಪ ಮತ್ತು ಸಭಾಮಂಟಪಗಳನ್ನು ಹೊಂದಿದ್ದು, ಪಲ್ಲಕಿ ಉತ್ಸವಕ್ಕಾಗಿ ಪ್ರದಕ್ಷಿಣಪಥ ಹಾಗೂ ರಥೋತ್ಸವಕ್ಕಾಗಿ ಗುಡಿಯ ಹೊರಾಂಗಣದಲ್ಲಿ ರಥಪ್ರದಕ್ಷಿಣಪಥವಿದೆ. ದೇವಾಲಯದ ಹೊರಾಂಗಣದ ಬಲಭಾಗದಲ್ಲಿ ಮಹಾಗಣಪತಿಯ ಮಂದಿರ ಹಾಗೂ ಹಿಂಭಾಗದಲ್ಲಿ ವಿಶಾಲವಾದ ಕಲ್ಯಾಣ ಮಂಟಪ, ಅತಿಥಿಗೃಹವಿದೆ.ರಾಮ ಮಂದಿರದ ಎಡಭಾಗದಲ್ಲಿ ಶಂಕರ ಮಠದ ಕಟ್ಟಡವಿದೆ. ದೇವಾಲಯದ ಅನತಿ ದೂರದಲ್ಲಿ ಹನುಮ ಮಂದಿರ ಮತ್ತು ಗುರುಮಂದಿರಗಳನ್ನು ಸ್ಥಾಪಿಸಲಾಗಿದೆ.

ಶಂಕರ ಮಠ[ಬದಲಾಯಿಸಿ]

ಜಗದ್ಗುರು ಶ್ರೀ ಶಂಕರಾಚಾರ್ಯರ ಅಮೃತ ಶಿಲಾ ವಿಗ್ರಹವನ್ನು ೧೯೫೬ ರಲ್ಲಿ ಶೃಂಗೇರಿ ಸಂಸ್ಥಾನದ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥರು ಅಶ್ವತ್ಥಪುರದಲ್ಲಿ ಪ್ರತಿಷ್ಠಾಪಿಸಿ ಅನುಗ್ರಹಿಸಿದರು.ಅಶ್ವತ್ಥಪುರದ ಶಂಕರ ಮಠದ ಮೇಲ್ಭಾಗದಲ್ಲಿ ಶಂಕರಾಚಾರ್ಯರ ವಿಗ್ರಹ,ಅದರ ಕೆಳಭಾಗದ ನೆಲಮಾಳಿಗೆಯೊಳಗೆ ಧ್ಯಾನ ಮಂದಿರ ಇರುವಂತೆ ನಿರ್ಮಿಸಲಾಗಿದೆ. ಅಶ್ವತ್ಥಪುರದ ಶ್ರೀ ಜಗದ್ಗುರು ಶಂಕರಾಚಾರ್ಯ ಮಠವು ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠ ಮತ್ತು ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ನಡುವಿನ ಗುರು-ಶಿಷ್ಯ ಪರಂಪರೆಯ ಪ್ರತೀಕವಾಗಿದೆ.

ಉತ್ಸವಗಳು[ಬದಲಾಯಿಸಿ]

ಶ್ರೀ ರಾಮ ನವಮಿಯು ದೇವಾಲಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದ್ದು ಪ್ರತಿ ಚೈತ್ರ ಮಾಸದಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಶ್ರೀರಾಮ ನವಮಿ ಮಹೋತ್ಸವು ಹತ್ತು ದಿನಗಳ ಆಚಾರಣೆಯಾಗಿದ್ದು, ಪ್ರತಿವರ್ಷ ಚೈತ್ರ ಶುದ್ಧ ಪಾಡ್ಯದಿಂದ ಆರಂಭವಾಗಿ ಏಕಾದಶಿ ಪರ್ಯಂತ ನಡೆಯುತ್ತದೆ.ರಾಮೋತ್ಸವದ ಪ್ರತಿ ದಿನವು ನಸುಕಿನಲ್ಲಿ ಕಾಕಡರತಿ,ಪ್ರವಚನ,ಭಜನೆ,ಅನ್ನಸಂತರ್ಪಣೆ ಹಾಗೂ ರಾತ್ರಿ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ವೈಶಾಖ ಮಾಸದ ಪಂಚಮಿಯಂದು ದೇವಾಲಯದ ಪ್ರತಿಷ್ಠಾಪನೋತ್ಸವವನ್ನು ನಡೆಸಲಾಗುವುದು. ಕಾರ್ತೀಕ ಮಾಸದ ಪ್ರತಿಪದೆಯಿಂದ ಅಮಾವಾಸ್ಯೆಯ ವರೆಗೆ ಒಂದು ತಿಂಗಳ ಕಾಲ ದೀಪೋತ್ಸವ ನಡೆಯುತ್ತದೆ. ದೇವಾಲಯದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಎಂಟು ದಿನಗಳ ಅವಧಿಯ ಅಖಂಡ ಶ್ರೀರಾಮ ನಾಮ ಸಪ್ತಾಹವು ಅಹೋರಾತ್ರಿ ನಡೆಯುತ್ತದೆ.

ನಿತ್ಯ ಪೂಜೆಗಳು[ಬದಲಾಯಿಸಿ]

ದೇವಾಲಯದಲ್ಲಿ ಪ್ರತಿ ನಿತ್ಯವು ತ್ರಿಕಾಲಪೂಜೆ ನಡೆಯುತ್ತದೆ. ಪ್ರಾತಃಕಾಲದಲ್ಲಿ ಸುಮಾರು ಐದು ಗಂಟೆಯ ಭೂಪಾಳಿಯ ನಂತರ ಶ್ರೀ ಸೀತಾರಾಮಚಂದ್ರ ಮತ್ತು ಪರಿವಾರ ದೇವರುಗಳಿಗೆ ಅಭಿಷೇಕ, ಪೂಜೆ ಹಾಗೂ ನೈವೇದ್ಯ ನೆರವೇರುತ್ತದೆ. ಬಳಿಕ ಆರು ಗಂಟೆಗೆ ಕಾಕಡಾರತಿ ನಡೆಯುತ್ತದೆ. ಮಧ್ಯಾಹ್ನ ಪಂಚೋಪಚಾರ ಪೂಜೆ, ಮಹಾನೈವೇದ್ಯ ಹಾಗೂ ಮಹಾಮಂಗಳಾರತಿ ನಡೆಯುತ್ತದೆ. ರಾತ್ರಿಯ ನಿತ್ಯಭಜನೆಯ ನಂತರ ಪಂಚೋಪಚಾರ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಮಂತ್ರಪುಷ್ಟ ಹಾಗೂ ಅಷ್ಟಾವಧಾನ ನೆರವೇರುತ್ತದೆ. ಬ್ರಹ್ಮಸ್ತುತಿ ಬಳಿಕ ಶಯ್ಯೆ ನಡೆಯತ್ತದೆ. ಶಯ್ಯೆಯ ನಂತರ ತೀರ್ಥಪ್ರಸಾದ ವಿತರಣೆಯಾಗುತ್ತದೆ.

ಸೇವೆಗಳು[ಬದಲಾಯಿಸಿ]

ಶ್ರೀ ಸೀತಾರಾಮಚಂದ್ರ ಮತ್ತು ಪರಿವಾರ ದೇವರುಗಳ ಸನ್ನಿಧಿಯಲ್ಲಿ ಈ ಕೆಳಕಂಡ ಪೂಜೆ ಮತ್ತು ಹರಕೆ ಸೇವೆಗಳು ನಡೆಯುತ್ತದೆ.

  • ಕಾರ್ತಿಪೂಜೆ
  • ಅಷ್ಟೋತ್ತರ ಕುಂಕುಮಾರ್ಚನೆ
  • ಸಹಸ್ರ ಕುಂಕುಮಾರ್ಚನೆ
  • ಅಷ್ಟೋತ್ತರ ತುಳಸೀ ಅರ್ಚನೆ
  • ಸಹಸ್ರ ತುಳಸೀ ಅರ್ಚನೆ
  • ಹೂವಿನಪೂಜೆ
  • ಪಂಚಕಜ್ಜಾಯ
  • ನಿರೂಪ ಕಾಣಿಕೆ
  • ಸತ್ಯನಾರಾಯಣ ಪೂಜೆ
  • ಪವಮಾನ ಪಂಚಾಮೃತ ಅಭಿಷೇಕ
  • ಪಲ್ಲಕಿ ಉತ್ಸವ, ಪುಷ್ಷರಥೋತ್ಸವ
  • ತುಲಾಭಾರ ಸೇವೆ
  • ವಸಂತ ಪೂಜೆ
  • ಸರ್ವಾಲಂಕಾರ ಸೇವೆ
  • ಏಕವಾರ ರುದ್ರಾಭಿಷೇಕ
  • ಏಕಾದಶ ರುದ್ರಾಭಿಷೇಕ
  • ಮನ್ಯುಸೂಕ್ತಾಭಿಷೇಕ

ಉಲ್ಲೇಖ ಗ್ರಂಥಗಳು[ಬದಲಾಯಿಸಿ]

  1. ಅನಂತ ಚೈತನ್ಯ ವಿಶೇಷಾಂಕ - ೨೦೦೪
  2. ಅನಂತ ಚೈತನ್ಯ ವಿಶೇಷಾಂಕ - ೨೦೦೫
  3. ಶತಮಾನೋತ್ಸವ ಸ್ಮರಣಸಂಚಿಕೆ - ೨೦೧೫