ಶ್ರೀ ಭಟ್ಟೆವಿನಾಯಕ ದೇವಾಲಯ
ಪೀಠಿಕೆ
[ಬದಲಾಯಿಸಿ]ಈ ದೇವಾಲಯವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆಯ ಕಟ್ಟಿನಹೊಳೆ ಎಂಬ ಸಣ್ಣ ಊರಿನಲ್ಲಿದೆ. ವಿಶಿಷ್ಟ ಹೆಸರಿನಿಂದ ಕರೆಯಲ್ಪಡುವ ಈ ದೇವಾಲಯಕ್ಕೆ ನಾನಾ ರಾಜ್ಯಗಳಿಂದ ಭಕ್ತಾಧಿಗಳು ಬರುವುದಲ್ಲದೆ, ದೇಶ ವಿದೇಶಗಳಲ್ಲಿ ಹಲವಾರು ಭಕ್ತರೂ ಇದ್ದಾರೆ. ಶ್ರೀ ಭಟ್ಟೆವಿನಾಯಕ ಎಂಬ ಹೆಸರಿಗೆ ಸಾಮಾನ್ಯವಾಗಿ ಹಾದಿಯ ಬದಿಯಲ್ಲಿರುವ ದೇವಾಲಯ ಎಂಬ ಅರ್ಥವಿದೆ. ಇದನ್ನು ಹೊರತು ಪಡಿಸಿ "ಭಟ್ಟೆ" ಎಂದರೆ "ದಾರಿ" ಎಂದೂ "ವಿನಾಯಕ" ಎಂದರೆ "ಗಣಪತಿ" ಎಂದೂ ಅರ್ಥವಿದ್ದು, ಒಟ್ಟಾರೆಯಾಗಿ ನಂಬಿದವರಿಗೆ ದಾರಿತೋರಿಸುವ ದೇವರು ಎಂಬ ಅರ್ಥವನ್ನು ಒಳಗೊಂಡಿದೆ.
ಶಿವಮೊಗ್ಗದಿಂದ 110 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ ವಿಶ್ವ ವಿಖ್ಯಾತ ಕೊಡಚಾದ್ರಿ ಪರ್ವತದ ಮಡಿಲಿನಲ್ಲಿದೆ. ಇಲ್ಲಿಂದ ಕೊಡಚಾದ್ರಿ ಪರ್ವತದ ತುದಿಗೆ 12 ಕಿ.ಮೀ ದೂರವಿದೆ. ಸುತ್ತ ಮುತ್ತಲಿನ ಜನರ ಆರಾಧ್ಯದೈವವಾಗಿರುವ ಈ ಕ್ಷೇತ್ರ ಬಲಮುರಿ ಗಣಪತಿಯ ದೇವಾಲಯವಾಗಿದೆ. ದೂರದಿಂದ ಗಮನಿಸಿದಾಗ ಶಿವಲಿಂಗದ ರೂಪದಲ್ಲಿ ಕಾಣುವ ಈ ವಿನಾಯಕನ ವಿಗ್ರಹ ಸೂಕ್ಷ್ಮವಾಗಿ ಗಮನಿಸಿದಾಗ ಲಿಂಗದಂತಹ ಶಿಲೆಯಲ್ಲಿ ಬಲಮುರಿ ಗಣೇಶನ ಮುಖಚಹರೆ ಇರುವುದು ಸ್ಪಷ್ಟವಾಗಿ ಕಣ್ಣಿಗೆ ಗೋಚರವಾಗುತ್ತದೆ. ಈ ದೇವಾಲಯದ ಸುತ್ತಮುತ್ತಲೂ ಸೂಜಿಪುರ, ಸೂಳ್ಯಾರಿ ಹಾಗು ದೊಡ್ಡಗುಡ್ಡ ಎಂದು ಕರೆಸಿಕೊಳ್ಳಲ್ಪಡುವ ಬೃಹತ್ ಬೆಟ್ಟಗಳನ್ನು ಕಾಣಬಹುದಾಗಿದೆ. ಹಲವಾರು ವರ್ಷಗಳಿಂದ ಸಿಮೆಂಟಿನಿಂದ ರಚಿಸಲಾಗಿದ್ದ ಈ ದೇವಾಲಯವನ್ನು ವರ್ಷಗಳಿಂದೀಚೆ ಸಂಪೂರ್ಣ ಶಿಲೆಗಳಿಂದ ವಿನ್ಯಾಸಗೊಳಿಸಲಾಗಿದೆ.
ಹಿನ್ನೆಲೆ
[ಬದಲಾಯಿಸಿ]ಶ್ರೀ ಕ್ಷೇತ್ರವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಭೂಮಿಯ ಆಳದಿಂದ ಸುಮಾರು 200 ಅಡಿಗಳ ಶಿಲೆಯ ಮೇಲೆ ಈ ವಿಗ್ರಹ ರೂಪುಗೊಂಡಿದೆ. ಈ ವಿಗ್ರಹ ಸಾಮಾನ್ಯವಾಗಿ ಕಾಣಲು ಶಿವಲಿಂಗವನ್ನು ಹೋಲುವಂತಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಬಲಮುರಿ ಹೊಂದಿದ ಗಣೇಶನ ಮುಖಚಹರೆಯ ದರ್ಶನವಾಗುತ್ತದೆ. ಈ ವಿನ್ಯಾಸವನ್ನು ಯಾವುದೆ ಶಿಲ್ಪಿಗಳೂ ಕೆತ್ತಿರುವುದಲ್ಲ. ಬದಲಾಗಿ ನೈಸರ್ಗಿಕವಾಗಿ ರಚನೆಯಾಗಿದೆ. ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾಧಿಸಿ ಜಗತ್ತಿಗೆ ಸಾರಿದ ಶಂಕರಾಚಾರ್ಯರು ಪ್ರಸಿದ್ಧ ಕೊಡಚಾದ್ರಿ ತಪ್ಪಲಿನಲ್ಲಿ ತಪಸ್ಸನ್ನು ಆಚರಿಸಿ ನಂತರ ಇಲ್ಲಿ ಬಂದು ಪೂಜೆ ಸಲ್ಲಿಸಿದರು ಎನ್ನಲಾಗಿದೆ. ಇನ್ನು ಹಲವು ವರ್ಷಗಳ ಹಿಂದೆ ಇಬ್ಬರು ದೃಷ್ಠಿದೋಷವಿರುವ ಮುನಿಗಳು ಇಲ್ಲಿಗೆ ಆಗಮಿಸಿ ಇಲ್ಲಿ ಹಲವಾರು ರೀತಿಯಾದ ಪೂಜೆಗಳನ್ನು ಮಾಡಿ ತಮ್ಮ ಕಣ್ಣಿನ ದೃಷ್ಠಿಯನ್ನು ಪಡೆದುಕೊಂಡರು ಎನ್ನಲಾಗಿದೆ. ಅಲ್ಲದೆ ಹಲವಾರು ಭಕ್ತಾದಿಗಳು ಚರ್ಮಕ್ಕೆ ಸಂಭಂದಿಸಿದ ಸಮಸ್ಯೆಗಳಿಗೆ ಇಲ್ಲಿ ಬಂದು ಪೂಜೆ ಸಲ್ಲಿಸಿ ದೇವಾಲಯದ ಸುತ್ತಲೂ ಭಕ್ತಿಯಿಂದ ಎಳ್ಳನ್ನು ಚೆಲ್ಲಿದರೆ ಅವರ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಂಬುತ್ತಾರೆ. ಇನ್ನು ಸಂತಾನಕ್ಕೆ ಸಂಭಂದಿಸಿದ ಸಮಸ್ಯೆಗಳಿರುವವರು ಇಲ್ಲಿ ಬಂದು ಪೂಜೆ ಸಲ್ಲಿಸಿದರೆ ಅವರ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಒಟ್ಟಾರೆಯಾಗಿ ನಂಬಿದವರ ಸಮಸ್ಯೆಗಳಿಗೆ ತಕ್ಷಣ ಪರಿಹಾರವನ್ನು ನೀಡುವ ದೇವರು ಎಂದು ಕರೆಯುತ್ತಾರೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿನ ನಾನಾ ರಾಜರುಗಳು ಈ ದೇವಾಲಯಕ್ಕೆ ಆಗಮಿಸಿ ರಾಜ ಮರ್ಯಾದೆಯಲ್ಲಿ ಪೂಜೆಗಳನ್ನು ಸಲ್ಲಿಸುತ್ತಿದ್ದರು. ಹಾಗೂ ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನೂ ಕೈಗೊಳ್ಳುತ್ತಿದ್ದರು ಎನ್ನಲಾಗಿದೆ.
ಪೂಜಾ ವಿಧಾನ
[ಬದಲಾಯಿಸಿ]ಪ್ರತಿ ನಿತ್ಯವೂ ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ. ಇದಲ್ಲದೆ ಸಂಕಷ್ಟಿಯ ದಿನ ಬೆಳಿಗ್ಗೆ ಹಾಗೂ ರಾತ್ರಿ ವಿಶೇಷ ಪೂಜೆಗಳು ಇಲ್ಲಿ ನೆರವೇರುತ್ತದೆ. ಈ ದೇವಾಲಯದಲ್ಲಿ ಚೌತಿಹಬ್ಬದ ಆಚರಣೆ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ. ದೇವರಿಗೆ ಬೆಳ್ಳಿಯ ಮುಖವಾಡವನ್ನು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಊರಿನ ಹಾಗೂ ಪರವೂರಿನ ಜನರನ್ನು ಒಳಗೊಂಡಂತೆ ಹಲಾವಾರು ಭಕ್ತಾದಿಗಳು ಆಗಮಿಸುತ್ತಾರೆ. ಇಲ್ಲಿ ವರ್ಷಕೊಮ್ಮೆ ಎರಡು ದಿನ ನೆಡೆಯುವ 108 ಕಾಯಿ ಗಣಹೋಮ ಅತ್ಯಂತ ಪ್ರಸಿದ್ದವಾಗಿದೆ. ಎರಡು ದಿನಗಳ ಕಾಲ ನಡೆಯಲಾಗುವ ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸುವ ಮೂಲಕ ಶ್ರೀ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ. ಹಾಗೂ ರಾತ್ರಿ ವೇಳೆ ಭಕ್ತಾದಿಗಳಿಗೆಂದು ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಊರಿನ ಹಲವಾರು ಕುಟುಂಬಗಳು ದೇವಾಲಯಲ್ಲಿ ದೀಪಗಳನ್ನು ಹಚ್ಚಿ ಊರಿನವರನ್ನೆಲ್ಲಾ ಆಮಂತ್ರಿಸಿ "ದೀಪ" ಎಂಬ ಹಬ್ಬವನ್ನು ಆಚರಿಸುತ್ತಾರೆ.
ಮಾರ್ಗಸೂಚಿ
[ಬದಲಾಯಿಸಿ]ಶಿವಮೊಗ್ಗ ಜಿಲ್ಲೆಯಿಂದ ಸುಮಾರು 65ಕಿ.ಮೀ ದೂರಕ್ಕೆ ಕ್ರಮಿಸಿದರೆ ಹೊಸನಗರ ಎಂಬ ಪಟ್ಟಣ ದೊರೆಯುತ್ತದೆ. ಅಲ್ಲಿಂದ ಕೊಲ್ಲೂರಿಗೆ ತೆರಳುವ ಮಾರ್ಗವಾಗಿ ಪ್ರಯಾಣ ಮಾಡಿದರೆ ಸುಮಾರು 40 ಕಿ.ಮೀ ದೂರದಲ್ಲಿ ಸಂಪೇಕಟ್ಟೆ ಎಂಬ ಊರು ದೊರೆಯುತ್ತದೆ. ಅಲ್ಲಿಂದ ಬಲಕ್ಕೆ ತೆರಳುವ ರಸ್ತೆಯಲ್ಲಿ ಸುಮಾರು 4 ಕಿ.ಮೀ ತೆರಳಿದರೆ ಶ್ರೀ ಭಟ್ಟೆವಿನಾಯಕ ದೇವಾಲಯ ಕಾಣಸಿಗುತ್ತದೆ. ಸಾಮಾನ್ಯವಾಗಿ ಕೊಡಚಾದ್ರಿಗೆ ತೆರಳುವ ಭಕ್ತರು ಹಾಗೂ ಪ್ರವಾಸಿಗರು ಈ ದೇವಲಯಕ್ಕೆ ಭೇಟಿ ನೀಡಿ ತೆರಳುತ್ತಾರೆ.