ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟಿಂಗೇರಿ
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಕಟ್ಟಿಂಗೇರಿ ಗ್ರಾಮದಲ್ಲಿದೆ. ಈ ದೇವಸ್ಥಾನದ ಸಮೀಪದಲ್ಲಿರುವ ಕೆರೆಯಿಂದ ಕಟ್ಟಿಂಗೇರಿ ಎಂಬ ಹೆಸರು ಬಂದಿದೆ.
ಇತಿಹಾಸ
[ಬದಲಾಯಿಸಿ]ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಒಂದು ಇತಿಹಾಸವನ್ನು ಹೊಂದಿದೆ. ದಂತಕಥೆಯ ಪ್ರಕಾರ ಈ ದೇವಾಲಯವನ್ನು ಸುಮಾರು ೮೦೦ ವರ್ಷಗಳ ಹಿಂದೆ ಬ್ರುಘು ಎಂಬ ಋಷಿ (ಮುನಿ) ಸ್ಥಾಪಿಸಿದರು. ಪ್ರಾರಂಭದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಮೂರ್ತಿಯನ್ನು ಬ್ರಹ್ಮಗುಡ್ಡದ ಪಿಪ್ಪಲ ಮರದ ಕೆಳಗೆ ಸ್ಥಾಪಿಸಲಾಯಿತು. ಹೆಚ್ಚುತ್ತಿರುವ ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳವು ಚಿಕ್ಕದಾಗಿದೆ ಎಂದು ಭಾವಿಸಿದ್ದರಿಂದ ಆ ವಿಗ್ರಹವನ್ನು ದೇವಾಲಯವನ್ನು ನಿರ್ಮಿಸಿದ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ದೇವಾಲಯದ ನಿರ್ಮಾಣದ ಸಮಯದಲ್ಲಿ ದೇವಾಲಯದ ಸಮೀಪವಿರುವ ಕಟ್ಟಿಂಗೇರಿಯ ಪಟೇಲರ ಮನೆಯಲ್ಲಿ ವಿಗ್ರಹವನ್ನು ಇರಿಸಲಾಯಿತು. ಇದನ್ನು ಇಂದಿಗೂ 'ಬ್ರಹ್ಮರ ಚಾವಡಿ' ಎಂದು ಕರೆಯಲಾಗುತ್ತದೆ.
ಶ್ರೀ ಬ್ರಹ್ಮಲಿಂಗೇಶ್ವರವು ಬ್ರಹ್ಮಲಿಂಗೇಶ್ವರ, ದುರ್ಗಾ ಪರಮೇಶ್ವರಿ ಮತ್ತು ನಾಗ ಸುಬ್ರಹ್ಮಣ್ಯ ಎಂಬ ಮೂರು ದೇವತೆಗಳನ್ನು ಪೂಜಿಸುವ ಒಂದು ಸಂಯುಕ್ತ ದೇವಾಲಯವಾಗಿದೆ. ದೇವಾಲಯದ ವಾರ್ಷಿಕ ಉತ್ಸವಗಳು ಪ್ರತಿ ವರ್ಷ ಮಾರ್ಚ್ ಎರಡನೇ ವಾರದಲ್ಲಿ ಮೀನ ಸಂಕ್ರಮಣದ ಸಂದರ್ಭದಲ್ಲಿ ಐದು ದಿನಗಳ ಕಾಲ ನಡೆಯುತ್ತದೆ. ಈ ಅವಧಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಹಾಗೂ ದೇವತೆಗಳಿಗೆ ಪ್ರಾರ್ಥನೆ, ಹೂವುಗಳು, ಹಣ್ಣುಗಳು ಮತ್ತು ತೆಂಗಿನಕಾಯಿಗಳನ್ನು ಅರ್ಪಿಸುತ್ತಾರೆ. ಐದು ದಿನಗಳ ಕಾಲ ಭಕ್ತರಿಗೆ ಮತ್ತು ಗ್ರಾಮದ ಇತರ ನಿವಾಸಿಗಳಿಗೆ ಅವರ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಉಚಿತ ಊಟವನ್ನು ನೀಡಲಾಗುತ್ತದೆ. ಸಂಜೆ ಧಾರ್ಮಿಕ ನಾಟಕಗಳು, ಐತಿಹಾಸಿಕ ನಾಟಕಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಹಿಂದೆ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯದಲ್ಲಿ ವರಸರೆ ಬಕ್ಯಾರ್ ಎಂದು ಕರೆಯಲ್ಪಡುವ ಬೃಹತ್ ಗದ್ದೆಯಲ್ಲಿ ‘ಕತ್ತಿ ಕಾಳಗ’ ಎಂದೂ ಕರೆಯಲ್ಪಡುವ ಕತ್ತಿವರಸೆಗಳ ಪ್ರದರ್ಶನವಿತ್ತು. ವರಸರೆ ಎಂದರೆ ಉದ್ದನೆಯ ಕುಡುಗೋಲು ಅಥವಾ ಕತ್ತಿ. ಈ ಅಣಕು ದ್ವಂದ್ವಯುದ್ಧದಲ್ಲಿ ೧೨ ಗ್ರಾಮಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಇದು ವಾರ್ಷಿಕ ಉತ್ಸವಕ್ಕೆ ಹಾಜರಾಗುವ ಭಕ್ತರ ಮತ್ತು ಜನರ ಮನರಂಜನೆಯ ಉದ್ದೇಶವಾಗಿತ್ತು.
ಇದೇ ವರಸರೆ ಬಕ್ಯಾರದಲ್ಲಿ ನ್ಯಾಯ ಪಂಚಾಯಿತಿ ನಡೆಯುತ್ತಿತ್ತು. ಈ ನ್ಯಾಯಾಂಗ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಕುತ್ಯಾರ್ ಅರಸು (ರಾಜ) ಮತ್ತು ಕಟ್ಟಿಂಗೇರಿಯ ಪಟೇಲ್ ವಹಿಸುತ್ತಿದ್ದರು. ಸುಮಾರು ೬೦ ಹಳ್ಳಿಗಳ ಜನರು ಈ ಪಂಚಾಯತ್‌ಗೆ ಹಾಜರಾಗುತ್ತಾರೆ ಮತ್ತು ತಮ್ಮ ಕುಂದುಕೊರತೆಗಳು ಅಥವಾ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳುತ್ತಿದ್ದರು.
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಪಂಚ ಪರ್ವಗಳೆಂದು ಕರೆಯಲ್ಪಡುವ ಇತರ ಹಬ್ಬಗಳನ್ನು ಆಚರಿಸುತ್ತದೆ. ಅವುಗಳೆಂದರೆ ಶ್ರೀ ಕೃಷ್ಣ ಜನ್ಮಾಷ್ಟಮಿ, ಹೊಸ ಜೋಳದ ಹಬ್ಬ (ಕೊರಲು ಪರ್ಬ), ನವರಾತ್ರಿ, ದಸರಾ ಮತ್ತು ದೀಪಾವಳಿ. ಡಿಸೆಂಬರ್ ತಿಂಗಳಲ್ಲಿ ಸುಬ್ರಹ್ಮಣ್ಯ ಷಷ್ಟಿಯನ್ನು ಆಚರಿಸಲಾಗುತ್ತದೆ. ರಾತ್ರಿ ರಂಗಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ದೇವಸ್ಥಾನದಲ್ಲಿ ಪುಷ್ಪ ಪೂಜೆ (ಪೂತಪೂಜೆ) ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣ ದಿನದಂದು ದೇವಸ್ಥಾನದ ಆವರಣದಲ್ಲಿ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
೧೯೬೦ ರ ದಶಕದಲ್ಲಿ ಕರ್ನಾಟಕ ಸರ್ಕಾರವು ಭೂಸುಧಾರಣಾ ಕಾಯಿದೆಗಳನ್ನು ಜಾರಿಗೊಳಿಸುವ ಮೊದಲು ದೇವಾಲಯವು ತನ್ನ ಭೂಮಿಯಿಂದ ೬೦ ಮುರಾ ಅಕ್ಕಿ ಮತ್ತು ೬ ಟಿನ್ ಎಣ್ಣೆಯನ್ನು ಬಾಡಿಗೆಗೆ ಪಡೆಯುತ್ತಿತ್ತು. ಭೂಸುಧಾರಣಾ ಕಾಯಿದೆಗಳಿಂದ ದೇವಸ್ಥಾನವು ತನ್ನ ಭೂಮಿಯನ್ನು ಕಳೆದುಕೊಂಡಿದ್ದರಿಂದ ದೇವಾಲಯದ ಟ್ರಸ್ಟಿಗಳು ಅದರ ನಿರ್ವಹಣೆ ಮತ್ತು ದೈನಂದಿನ ಪೂಜೆಗಳಿಗೆ ಭಕ್ತರ ಹಿತೈಷಿಗಳನ್ನು ಅವಲಂಬಿಸಬೇಕಾಯಿತು. ಭಕ್ತರು ಸ್ವಯಂಪ್ರೇರಿತರಾಗಿ ೩೬೫ ದಿನಗಳವರೆಗೆ ದಿನಕ್ಕೆ ೧೦೦೦ ರೂ. ದೇಣಿಗೆ ನೀಡಿದರು ಮತ್ತು ಈ ಒಟ್ಟು ಮೊತ್ತದ ಬಡ್ಡಿಯಲ್ಲಿ ಪೂಜೆಯ ವೆಚ್ಚವನ್ನು ಭರಿಸುತ್ತಾರೆ. ಸುಮಾರು ೪೦೦ ವರ್ಷಗಳಿಂದ ಈ ದೇವಾಲಯವನ್ನು ಹೆಬ್ಬಾರ ಮನೆತನ ಆಡಳಿತ ನಡೆಸುತ್ತಿದೆ.
ಕಟ್ಟಿಂಗೇರಿಯ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ದೇವಾಲಯದ ಸಮೀಪವಿರುವ ಬೃಹತ್ ಕೆರೆ. ಈ ಬೃಹತ್ ಕೆರೆಯ ಕಾರಣದಿಂದಾಗಿ ಗ್ರಾಮವು ಅದರ ಪ್ರಸ್ತುತ ಹೆಸರನ್ನು ಪಡೆದುಕೊಂಡಿದೆ. ಮೂಲತಃ ಈ ಕೆರೆಯನ್ನು ದೇವರ ಕೆರೆ ಎಂದು ಕರೆಯಲಾಗುತ್ತಿತ್ತು. ಈ ಕೆರೆಯು ೫.೭೮ ಎಕರೆ ವಿಸ್ತೀರ್ಣವನ್ನು ಹೊಂದಿದೆ. ಸುಬ್ರಹ್ಮಣ್ಯ ಷಷ್ಟಿ ಮತ್ತು ವಾರ್ಷಿಕ ಉತ್ಸವದ ಸಮಯದಲ್ಲಿ ಭಕ್ತರು ಸರೋವರದಲ್ಲಿ ಸ್ನಾನ ಮಾಡುತ್ತಾರೆ ಮತ್ತು ದೇವಾಲಯದ ಮುಂದೆ ಉರುಳುವ ಪೂಜೆಯನ್ನು (ಮದಸ್ಥಾನ) ಕೈಗೊಳ್ಳುತ್ತಾರೆ. ಈ ಧಾರ್ಮಿಕ ಕ್ರಿಯೆಯ ನಂತರ ಅದೇ ಸರೋವರದಲ್ಲಿ ಸ್ನಾನ ಮಾಡುತ್ತಾರೆ.[೧]
ವಾರ್ಷಿಕ ಉತ್ಸವದ ಸಮಯದಲ್ಲಿ ವರಸರೆ ಉತ್ಸವವನ್ನು ಸಂಜೆಯ ಸಮಯದಲ್ಲಿ ಕೈಗೊಳ್ಳಲಾಗುತ್ತದೆ.ದೇವಸ್ಥಾನದ ಉತ್ಸವ ಮೂರ್ತಿಯನ್ನು ಬಣ್ಣ ಬಳಿದು ನದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ ಹಾಗೂ ಮಾರ್ಗದಲ್ಲಿ ಹತ್ತು ಸ್ಥಳಗಳಲ್ಲಿ ಕಟ್ಟೆ ಪೂಜೆಯನ್ನು ನೆರವೇರಿಸಿ ಪಾಂಬೂರು ಬಳಿಯ ದಿಂಡೋಟ್ಟು ನದಿಯನ್ನು ತಲುಪಲಾಗುತ್ತದೆ. ಭಕ್ತರೂ ಸಂಭ್ರಮದಿಂದ ಬಣ್ಣ ಹಚ್ಚಿಕೊಂಡು ನದಿಯಲ್ಲಿ ಉತ್ಸವ ಮೂರ್ತಿಗೆ ವಿಧ್ಯುಕ್ತ ಸ್ನಾನವನ್ನು ನೀಡಲಾಗುತ್ತದೆ. ಜೊತೆಗೆ ಭಕ್ತರು ಸಹ ಮೂರು ಬಾರಿ ನೀರಿನಲ್ಲಿ ಮುಳುಗುತ್ತಾರೆ. ನದಿಯಿಂದ ಹಿಂತಿರುಗಿದ ನಂತರ ಗರುಡ ಪಟವನ್ನು ಕೆಳಗಿಳಿಸಲಾಗುತ್ತದೆ. ಇದು ಉತ್ಸವದ ಅಂತ್ಯವನ್ನು ಸೂಚಿಸುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]