ಶ್ರೀ ಪಾರ್ಶ್ವನಾಥ ಸ್ವಾಮಿ ಜೈನ ಬಸದಿ, ಮಿಜಾರು,ಎಡಪದವು
ಪಾರ್ಶ್ವನಾಥ ಸ್ವಾಮಿ ಜೈನ ಬಸದಿ, ಮಿಜಾರು, ಎಡಪದವು ಕರ್ನಾಟಕದ ಬಸದಿಗಳಲ್ಲಿ ಒಂದಾಗಿದೆ. ಮಂಗಳೂರು ತಾಲೂಕು, ತೆಂಕ ಎಡಪದವು ಗ್ರಾಮ, ಎಡಪದವು ಎಂಬ ಊರಲ್ಲಿ ಈ ಜೈನ ಬಸದಿ ಇದೆ
ಸ್ಥಳ
[ಬದಲಾಯಿಸಿ]ಬಸದಿಯ ಹತ್ತಿರ ಪುರೋಹಿತರ ಮನೆ ಅಡಿಕೆ ಮತ್ತು ತೆಂಗಿನ ತೋಟವಿದೆ. ಇದಕ್ಕೆ ಹತ್ತಿರವಿರುವ ಬಸದಿ ಎಂದರೆ ಮಳಲಿ ಶ್ರೀ ಅನಂತನಾಥ ಸ್ವಾಮಿ ಬಸದಿ. ಅದು ಸುಮಾರು ೬ ಕಿ.ಮೀ ದೂರದಲ್ಲಿದೆ. ಈ ಬಸದಿಗೆ ಬರುವ ಕುಟುಂಬಗಳು ಸುಮಾರು ೭-೮ ಮುಖ್ಯವಾಗಿ ಹೊಸಮನೆ, ಶ್ರೀ ಎಂ. ಜೀವಂಧರ್ ಕುಮಾರ್ ಹೆಗಡೆ ಮತ್ತು ಎಡಪದವು ಗುತ್ತು ಪಡಿವಾಳ್ ಕುಟುಂಬ. ಬಸದಿಯು ಮೂಡಬಿದರೆ ಧಾರ್ಮಿಕ ಸೀಮೆಗೆ ಒಳಪಟ್ಟಿದೆ. ಇದು ಮಂಗಳೂರು ಮೂಡಬಿದಿರೆ ಹೆದ್ದಾರಿಯ ಎಡಪದವು ಬಂಡಸಾಲೆ ಕಟ್ಟೆಯಿಂದ ೧ ಪರ್ಲಾಂಗ್‌ನಿಂದ ನಡೆದು ಬರುವ ದೂರದಲ್ಲಿದೆ. ಅಲ್ಲದೇ ಎಡಪದವು ಬಸ್‌ಸ್ಟಾಂಡ್‌ನಿಂದ, ಮಾಪಾಡಿ ಕಲ್ಲಿಗೆ ಹೋಗುವ ರಸ್ತೆಯಲ್ಲಿ ಒಂದೂವರೆ ಕಿಲೋಮೀಟರ್ ಬಂದಾಗ ಎಡಗಡೆ ೧ ಫರ್ಲಾಂಗ್‌ನಷ್ಟು ದೂರದಲ್ಲಿ ಡಾಮರ್‌ನ ಸುಸಜ್ಜಿತವಾದ ಮಾರ್ಗವಿದೆ. ಮಾಡಾಡಿ ಕಲ್ಲಿನ ದಾರಿಯಲ್ಲಿ ಬಸದಿ ಹೋಗುವ ದಾರಿ ಎಂಬ ನಾಮಫಲಕವು ಕೂಡಾ ಇರುತ್ತದೆ. ಈ ಮಾರ್ಗವಾಗಿ ಬರುವುದು ಸುಲಭ. ಬಸದಿಯ ಹೊರಗಿನ ಗೋಪುರಗಳು ಹಂಚು ಮತ್ತು ಟೇರೇಸ್‌ನದ್ದು ಆಗಿರುತ್ತದೆ. ಈಗ ಈ ಬಸದಿಯನ್ನು ಎಡಪದವು ಹೊಸ ಮನೆ ಶ್ರೀ ಜೀವಂಧರ್ ಕುಮಾರ್ ನಡೆಸುತ್ತಿರುತ್ತಾರೆ. ಅಲ್ಲದೇ ಅದರ ಮುಕ್ತೇಸರರು ಆಗಿರುತ್ತಾರೆ. ಅರ್ಚಕರಾಗಿ ಶ್ರೀ ವೃಷಭ ಇಂದ್ರರು ಪೂಜೆ ಮಾಡುತ್ತಿದ್ದಾರೆ.
ಇತಿಹಾಸ
[ಬದಲಾಯಿಸಿ]ಈ ಬಸದಿಯನ್ನು ಕೋಸ್ಥಟೆ ಹೆಗಡೆ ಎನ್ನುವವರು ಕಟ್ಟಿಸಿರುತ್ತಾರೆ. ಸುಮಾರು ೧೫೦ ವರ್ಷಗಳ ಹಿಂದೆ ಆ ಮನೆತನಕ್ಕೆ ಸಂಬಂಧಪಟ್ಟವರು ಈಗಲೂ ಈ ಗ್ರಾಮದಲ್ಲಿ ವಾಸ್ತವ್ಯವಿದ್ದಾರೆ. ೧೯೫೪ರಲ್ಲಿ ಪಂಚಕಲ್ಯಾಣವು ಜರುಗಿದ್ದು, ಕಾಲ-ಕಾಲಕ್ಕೆ ಜೀರ್ಣೋದ್ಧಾರವು ನಡೆದಿದ್ದು ಬಸದಿಯು ಈಗ ಸುಸ್ಥಿಯಲ್ಲಿದೆ. ಬಸದಿಗೆ ಮೇಗಿನ ನೆಲೆಯಿದ್ದು ಅಲ್ಲಿ ಯಾವುದೇ ವಿಗ್ರಹಗಳಿರುವುದಿಲ್ಲ. [೧]
ವಿನ್ಯಾಸ
[ಬದಲಾಯಿಸಿ]ಪದ್ಮಾವತಿ ಅಮ್ಮ ಮತ್ತು ಬ್ರಹ್ಮದೇವರ ಮೂರ್ತಿ ಇದೆ. ಬಸದಿಯ ಎದುರು ಮಾನಸ್ತಂಭವಿರುವುದಿಲ್ಲ. ಬಸದಿಯ ಬಳಿ ಪಾರಿಜಾತದ ಗಿಡ ಇರುವುದಿಲ್ಲ. ಬಸದಿಯ ಎಡ ಮತ್ತು ಬಲ ಬದಿಯಲ್ಲಿ ಗೋಪುರಗಳಿದ್ದು ಖಾಲಿ ಇದೆ. ಯಾರಾದರೂ ಮುನಿಗಳು ಬಂದಾಗ ಉಪಯೋಗಿಸುತ್ತಾರೆ. ಬಸದಿಯ ಮಂಟಪದ ಎಡ ಮತ್ತು ಬಲ ಬದಿಗಳಲ್ಲಿ ಬಣ್ಣದಿಂದ ಚಿತ್ರಿಸಿದ ದ್ವಾರಪಾಲಕರ ಚಿತ್ರಗಳಿವೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳ ಮಂಟಪವಿದ್ದು ಅಲ್ಲಿ ಗಂಟೆ ಜಾಗಟೆಯನ್ನು ತೂಗು ಹಾಕಲಾಗಿದೆ. ಮಧ್ಯ ಸಿಗುವ ಮಂಟಪವನ್ನು ತೀರ್ಥಂಕರ ಮಂಟಪವೆಂದು ಕರೆಯುತ್ತಾರೆ. ಗಂಧ ಕುಟಿಯು ಈ ತೀರ್ಥಂಕರ ಮಂಟಪದಲ್ಲಿದೆ. ಅದಕ್ಕೆ ಮುಂದೆ ಒಂದು ಮಂಟಪವಿದ್ದು ಆ ಮಂಟಪ ಘಂಟಾ ಮಂಟಪ ಎಂದು ಕರೆಯಲ್ಪಡುತ್ತದೆ. ಗಂಧ ಕುಟಿಯ ಬಳಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ದೇವರ ಬಿಂಬಗಳಿದ್ದು ಪೂಜೆ ನಡೆಯುತ್ತದೆ.
ವಿಧಿ-ವಿಧಾನ
[ಬದಲಾಯಿಸಿ]ಮಾತೆ ಪದ್ಮಾವತಿ ದೇವಿಯ ಮೂರ್ತಿಯಿದ್ದು ಪೂಜೆ ನಡೆಯುತ್ತದೆ. ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖಮಾಡಿಕೊಂಡಿದ್ದು, ಕಾಲ ಬಳಿ ಕುಕ್ಕುಟ ಸರ್ಪವಿದೆ. ನಿತ್ಯ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನ ಅಲಂಕಾರ ಮಾಡುವುದಲ್ಲದೇ, ವಿಶೇಷ ಸಂದರ್ಭಗಳಲ್ಲಿ ಬಂಗಾರದ ಕವಚವನ್ನು ಇಟ್ಟು ವಿಶೇಷವಾಗಿ ಶೃಂಗಾರವನ್ನು ಮಾಡಲಾಗುತ್ತದೆ. ವಾರ್ಷಿಕ ಜಾತ್ರೆ, ರಥೋತ್ಸವಗಳು ಇಲ್ಲ. ಆದರೆ, ಜನವರಿ ೧ರಂದು ಬಸದಿಯಲ್ಲಿ ದೀಪೋತ್ಸವ ನಡೆಯುತ್ತದೆ. ಅಗತ್ಯವಿದ್ದಲ್ಲಿ ಅಮ್ಮನವರ ಎದುರಲ್ಲಿ ಹೂ ಹಾಕಿ ನೋಡುವ ಸಂಪ್ರದಾಯವಿದೆ. ಇಲ್ಲಿರುವ ಜಿನಬಿಂಬಗಳ ಪೈಕಿ ಪದ್ಮಾವತಿ ದೇವಿಯ ಪಾಣಿಪೀಠದಲ್ಲಿ ಎಡಪದವು ಗುತ್ತಿನ ಬಿರ್ಮ್ಮು ಹೆಗ್ಗಡೆಯವರು ಮಾಡಿಸಿದ್ದಾಗಿ ತಾಮ್ರ ಶಾಸನವಿದೆ. ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂಲ ಮೂರ್ತಿಯು ಕಪ್ಪು ಶಿಲೆಯದ್ದಾಗಿರುತ್ತದೆ. ಸುಮಾರು ೪ ಅಡಿ ಎತ್ತರವಿದೆ. ಪದ್ಮಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿ ಇದೆ. ನಿತ್ಯವೂ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ ನಡೆಯುತ್ತದೆ. ಬಸದಿಯಲ್ಲಿ ಒಂದು ಹೊತ್ತು ಪೂಜೆ ನಡೆಯುತ್ತಿದ್ದು, ಅದು ಮಧ್ಯಾಹ್ನದ್ದಾಗಿದೆ. ಬಸದಿಯಲ್ಲಿ ನೂಲ ಹುಣ್ಣಿಮೆ, ರಕ್ಷಾವಳಿ ಹಬ್ಬಗಳು ಜರಗುತ್ತವೆ. ಬಸದಿಯ ಎಡ ಮೂಲೆಯಲ್ಲಿ ಕ್ಷೇತ್ರಪಾಲ ಸನ್ನಿಧಿ ಇದೆ. ಅಲ್ಲಿ ನಾಗರ ಮೂರ್ತಿ, ತ್ರಿಶೂಲವಿದೆ. ಇವೆಲ್ಲಾ ಒಂದು ವಿಶೇಷ ಪೀಠದ ಮೇಲೆ ಸ್ಥಾಪಿತವಾಗಿದ್ದು, ಕಾಂಕ್ರೀಟ್‌ನ ಗುಡಿಯನ್ನು ಹೊಂದಿದೆ. ಅಷ್ಟದಿಕ್ಪಾಲಕರ ಅಥವಾ ಬಲಿ ಕಲ್ಲುಗಳು ಇರುವುದಿಲ್ಲ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆಗಳು ಇವೆ. ಬಸದಿಗೆ ಆಫೀಸು ಎನ್ನುವುದು ಇರುವುದಿಲ್ಲ. ಕೆಲವು ದಿಗಂಬರ ಮೂನಿಗಳೂ ಭೇಟಿಕೊಟ್ಟಿದ್ದರು. ಬಸದಿಯು ಮುಕ್ತೇಸರದಿಂದ ನಡೆಸಲ್ಪಡುತ್ತದೆ. ಅಲ್ಲದೇ ಸರಕಾರದಿಂದ ವರ್ಷಕ್ಕೆ ೮೦೦ರೂ. ತಸ್ತೀಕ್ ಬರುತ್ತಿದ್ದು ಧ್ರುವನಿಧಿಯ ಸ್ವಲ್ಪ ಆದಾಯವೂ ಇದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೬ ed.). ಮಂಜುಶ್ರೀ ಪ್ರಿಂಟರ್ಸ್. p. ೨೮೦.