ಶ್ರೀರಾಘವೇಂದ್ರಸ್ವಾಮಿಗಳವರ ಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀರಾಘವೇಂದ್ರಸ್ವಾಮಿಗಳವರ ಮಠ ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರ ಮುಖ್ಯಪರಂಪರೆಯಲ್ಲಿ ಹದಿನಾರನೆಯ ಪೀಠಾಧಿಪತಿಗಳು ಶ್ರೀರಾಘವೇಂದ್ರತೀರ್ಥ ಶ್ರೀಪಾದಂಗಳವರು ಅಥವಾ ಶ್ರೀರಾಘವೇಂದ್ರಸ್ವಾಮಿಗಳು. ಭಕ್ತರಿಂದ ಶ್ರೀರಾಯರು, ಗುರುಸಾರ್ವಭೌಮರು, ಮಂತ್ರಾಲಯ ಪ್ರಭುಗಳು, ತುಂಗಾತೀರ ನಿವಾಸ ಎಂದೆಲ್ಲಾ ಕರೆಸಿಕೊಳ್ಳುತ್ತಾರೆ.

ಭಾರತವು ದಾರ್ಶನಿಕರ ನೆಲೆವೀಡು. ಮೂರುವಿಧವಾದ ಜನಪ್ರಿಯ ಮತಾಚಾರ್ಯರ ಜನ್ಮ ಹಾಗು ಕಾರ್ಯಕ್ಷೇತ್ರವಿದು ನಮ್ಮ ಭಾರತ. ಅದ್ವೈತಾಚಾರ್ಯರಾದ ಆದಿಶಂಕರಾಚಾರ್ಯರು, ವಿಶಿಷ್ಟಾದ್ವೈತವನ್ನು ಬೋಧಿಸಿದ ರಾಮಾನುಜಾಚಾರ್ಯರು ಹಾಗು ದ್ವೈತಸಿದ್ಧಾಂತಪ್ರತಿಪಾದಕರಾದ ಶ್ರೀಮನ್ಮಧ್ವಾಚಾರ್ಯರೇ ಆ ಮೂರು ಚೇತನರು. ಕಾಲಕ್ರಮೇಣ ಮೂರೂ ಮತಗಳಲ್ಲಿ ಅನೇಕ ಯತಿಗಳು ಆಗಿಹೋಗಿದ್ದಾರೆ. ಅನೇಕ ಶಾಖೆಗಳೂ ಹೊರಹೊಮ್ಮಿವೆ. ಇದರಲ್ಲಿ ಶ್ರೀಮನ್ಮಧ್ವಾಚಾರ್ಯರ ನಿರ್ದೇಶನದ ಮೇರೆಗೆ ಶ್ರೀಪದ್ಮನಾಭತೀರ್ಥರೇ ಮೊದಲಾದ ಮಹನೀಯರಿಂದ ಮುಂದುವರೆದ ಪ್ರಧಾನ ಶಾಖೆಯಲ್ಲಿ ೧೬ನೇ ಶತಮಾನದಲ್ಲಿದ್ದ ಶ್ರೀರಾಘವೇಂದ್ರತೀರ್ಥರು ಜನಸ್ತೋಮದೆಡೆಗಿದ್ದ ತಮ್ಮ ಅಪಾರ ಕರುಣೆ ಹಾಗು ಅಗಾಧವಾದ ಪಾಂಡಿತ್ಯದಿಂದ ಇಂದಿಗೂ ಜನಮಾನ್ಯರಾಗಿದ್ದಾರೆ. ಇವರ ಪ್ರಭಾವಶಾಲಿ ವ್ಯಕ್ತಿತ್ವದಿಂದಾಗಿ ಜಗದ್ಗುರುಗಳ ಈ ಪರಂಪರೆಯು ಶ್ರೀರಾಘವೇಂದ್ರಸ್ವಾಮಿಗಳವರ ಮಠ (ಮೊದಲು ಈ ಮಠಕ್ಕೆ ದಕ್ಷಿಣಾದಿ ಮಠ ಎಂದೂ ನಂತರ ಶ್ರೀವಿಜಯೀಂದ್ರ ಮಠ ಎಂದೂ ಕರೆಯಲಾಗುತ್ತಿತ್ತು)ಎಂದೇ ಪ್ರಸಿದ್ಧಿ ಹೊಂದಿದೆ.


ಆಂಧ್ರಪ್ರದೇಶದಲ್ಲಿರುವ ಕರ್ನೂಲುಜಿಲ್ಲೆಯ ಮಂತ್ರಾಲಯದಲ್ಲಿ ತುಂಗಭದ್ರಾನದಿಯ ದಡದ ಮೇಲೆ ಇವರ ವೃಂದಾವನವು ನೆಲೆಗೊಂಡಿದೆ. ಹೀಗಾಗಿ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಎಂದೂ ಇದಕ್ಕೆ ಹೆಸರಿದೆ.