ಶಂಪಾ ದೈತೋಟ
ಜೀವನ
[ಬದಲಾಯಿಸಿ]ಶಂಪಾ ದೈತೋಟ(೧೯೩೧-೨೦೦೨) ಅವರ ಪೂರ್ಣ ಹೆಸರು ಶಂಕರನಾರಾಯಣ ಭಟ್ಟ ಪಾಣಾಜೆ ದೈತೋಟ. ಶಂಪಾ ದೈತೋಟ ಎಂಬ ಹೆಸರನ್ನು ಕೇಳದವರು ದ.ಕ.ಜಿಲ್ಲೆಯಲ್ಲೂ ಇರಲಾರರು.ಎಂದರೆ ತಪ್ಪಾಗಲಾರದು.ಇವರು ಖ್ಯಾತ ಹಿರಿಯ ಪರಿಸರವಾದಿ ,ಇವರು ಹಲವು ಹೋರಾಟಗಳ ರೂವಾರಿ. ಶಂಪಾರವರು ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಜನಿಸಿದ್ದರು.ಶಂಪಾ ದೈತೋಟ ಎಂದೇ ಖ್ಯಾತರಾದ ಇವರು ಆಯುರ್ವೇದ ಪಂಡಿತ, ಪಣಾಜೆ ಪಂಡಿತರೆಂದೇ ಪ್ರಸಿದ್ದರಾದ ಶಂಕರನಾರಾಯಣ ಭಟ್ಟರ ಪುತ್ರ, ಕಾಸರಗೋಡು, ಬಂಟ್ವಾಳ, ಪೆರ್ಲಗಳಲ್ಲಿ ಕನ್ನಡ, ಸಂಸ್ಕೃತ ಅಧ್ಯಯನ ನಡೆಸಿದ ಅವರು ಸಹಕಾರಿ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದು ಪಾಣಾಜೆ ಸಹಕಾರಿ ಬ್ಯಾಂಕ್ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದರು.
ಆಸಕ್ತಿ-ಹವ್ಯಾಸ
[ಬದಲಾಯಿಸಿ]ಶಂಪಾದೈತೋಟರವರು ಅಲ್ಲಿಂದಲೇ ಸಾಹಿತ್ಯ ಪತ್ರಿಕೋದ್ಯಮ, ಪರಿಸರಗಳ ಆಸಕ್ತಿ, ನಂಟು, ಸಾಹಿತ್ಯ ಪತ್ರಿಕೆ, ಪ್ರವಾಸ, ಛಾಯಾಗ್ರಹಣ, ಮೂಲಿಕಾಚಿಕಿತ್ಸೆ ಜೊತೆಗೆ ನಿಸರ್ಗದ ನಂಟನ್ನು ಬೆಳೆಸಿಕೊಂಡರು. ವಿಚಾರವಾಣಿ, ನಿಸರ್ಗಲೋಕ ಪತ್ರಿಕೆಗಳನ್ನು ಪ್ರಕಾಶಿಸಿ, ಸಂಪಾದಿಸಿದರು. ಪಾಣಾಜೆ ಆಯುರ್ವೇದ ಪ್ರಕಾಶನನ್ನು ರೂಪಿಸಿದರು. ರಾಷ್ಟ್ರಮತದಿಂದ ಹಿಡಿದು ಅಡಿಕೆ ಪತ್ರಿಕೆ ತನಕ ನೂರಾರು ಪತ್ರಿಕೆಗಳಲ್ಲಿ ಲೇಖನ, ಕತೆ, ಕವನ, ಅಣಕು, ಚುಟುಕು, ವೈಚಾರಿಕ ಬರಹ ಬರೆದವರು, ಅಲ್ಲದೆ ಆಕಾಶವಾಣಿಗೆ ಭಾಷಣ, ಸಂದರ್ಶನ, ರೂಪಕವನ್ನು ಸಂಯೋಜಿಸಿದವರು. ಕೃಷಿ, ತೋಟಗಾರಿಕೆ, ಅರಣ್ಯಗಾರಿಕೆ, ಮೂಲಿಕಾ ಪಾಲನೆ ಹೀಗೆ ವಿವಿಧ ಕೃಷಿ ಪ್ರಯೋಗಗಳಲ್ಲಿ ಇವರಿಗೆ ತುಂಬ ಅಸಕ್ತಿ. ಮನೆತನದ ಮೂಲಿಕಾ ಜ್ಞಾನ, ಗಿಡಮೂಲಿಕೆಗಳ ಔಷಧೀಯ ಗುಣಗಳ ಗ್ರಹಿಕೆ, ಬಳಕೆ ಮತ್ತು ಪ್ರಸಾರ ಶಂಪಾರ ಪ್ರಿಯ ಪ್ರವೃತ್ತಿಯಾಗಿತ್ತು.
ಹಲವು ಹೋರಾಟಗಳ ರೂವಾರಿಯಾದ ಶಂಪಾರವರು ಕೊಜೆಂಟ್ರಿಕ್ಸ್, ಪೈಪ್ ಲೈನ್ ಹೋರಾಟ, ಹಕ್ಕೊತ್ತಾಯ, ನೇತ್ರಾವತಿ ನದಿ ತಿರುಗಿಸುವ ವಿಚಾರ, ಕುದುರೆ ಮುಖ ಗಣಿಗಾರಿಕೆ- ಹೀಗೆ ಒಂದಲ್ಲ ಒಂದು ಪರಿಸರ ಸಂಬಂಧಿ ವಿಚಾರಗಳಲ್ಲಿ ಸರಕಾರ,ಸಚಿವರು, ಅಧಿಕಾರಿಗಲ ಜತೆ ನೇರ ಹೋರಾಟ ನಡೆಸುತ್ತಿದ್ದರು. ಶಂಪಾ ಪ್ರಾಮಾಣಿಕ ಪರಿಸರ ಪ್ರೇಮಿ. ದಕ್ಷಿಣ ಕನ್ನಡ ಪರಿಸರಾಸಕ್ತ ಒಕ್ಕೂಟದ ಅಧ್ಯಕ್ಷರೂ ಆಗಿದ್ದರು. ಜೀವನದಲ್ಲಿ ನೈಜತೆಯನ್ನು ಇಷ್ಡಪಡುತ್ತಿದ್ದ, ಜವಾಬ್ದಾರಿಯನ್ನು ನೆನಪಿಸಿಕೊಂಡು ಮುನ್ನುಗ್ಗುತ್ತಿದ್ದ ಶಂಪಾ, ವೈಚಾರಿಕ ನೆಲೆಯಲ್ಲಿ ಯಾರದ್ದೇ ವೈಯಕ್ತಿಕ ವಿಚಾರಗಳನ್ನು ಕೆದಕಿದವರಲ್ಲ, ಕೀಳಾಗಿ ಕಂಡವರಲ್ಲ. ದಕ್ಷಿಣಕನ್ನಡ ಜಿಲ್ಲೆಯ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ನಲ್ಲಿ ಶಂಪಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಟ್ರಸ್ಟ್ ನ ವಿವಿಧ ಚಟುವಟಿಗಳ ಸ್ಪೂರ್ತಿಯ ಬಿಂದು ಅವರಾಗಿದ್ದರು. ವೃತ್ತಿ ಬದುಕಿನೊಂದಿಗೆ ಅನೇಕ ಪ್ರವೃತ್ತಿಗಳನ್ನೊಳಗೊಂಡ ಬದುಕು ಇವರದಾಗಿತ್ತು. ಯಕ್ಷಗಾನ, ನಾಟಕ, ನೃತ್ಯ, ಕ್ರಿಕೆಟ್ ಹೀಗ ಅನೇಕ ರೀತಿಯ ಪ್ರವೃತ್ತಿಯು ಇವರ ಹವ್ಯಾಸವಾಗಿತ್ತು.
ಪ್ರತಿಕಯಲ್ಲಾಗುತ್ತಿದ್ದ ತಪ್ಪನ್ನು ಇವರೆಂದೂ ಸಹಿಸುತ್ತಿರಲಿಲ್ಲ. ಸಮಯ ಪಾಲನೆ ಮತ್ತು ಶಿಸ್ತಿಗೆ ಶಂಪಾ ಹೆಸರುವಾಸಿಯಾಗಿದ್ದರು. ತಮಗೆ ಬಂದ ಆಮಂತ್ರಣ ಪತ್ರಗಳಿಗೆಲ್ಲಾ ಸಕಾಲದಲ್ಲಿ ಸ್ಪಂದಿಸುತ್ತಿದ್ದರು. ತಾನು ತೊಂದರೆ ಅನುಭವಿಸಿದರೂ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಸರಕಾರಿ ಕಾರ್ಯಕ್ರಮಗಳ, ಯೋಜನೆಗಳ ಅಂಕಿಅಂಶಗಳು ಶಂಪಾರಿಗೆ ಕಂಠಸ್ಥ. 'ಕರಾವಳಿ ಕರ್ನಾಟಕ' ಬೇರೆಯೇ ರಾಜ್ಯವಾಗಬೇಕು. ಇದರಿಂದ ಪರಿಸರಕ್ಕೂ, ಅಭಿವೃದ್ಧಿಗೂ ಒಳ್ಳೆಯದು. ಪರಸ್ಪರ ಕಚ್ಚಾಡುವ ಪ್ರಮೇಯವಿಲ್ಲ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.
ಹೋರಾಟದ ಹಾದಿ
[ಬದಲಾಯಿಸಿ]೧೯೮೨-೮೬ ರಲ್ಲಿ ಧರ್ಮಸ್ಥಳ ಬಳಿ ಪಟ್ರಮೆಯಲ್ಲಿ ಕ್ಯಾಸನೂರು ಕಾಡಿನ ಕಾಯಿಲೆ(ಮಂಗನ ಕಾಯಿಲೆ)ತಾಂಡವವಾಡಿದಾಗ ಶಂಪಾ ಪರಿಸರ ಬೆಳವಣಿಗೆಗೆ ಧುಮುಕಿದರು. ಕಾಯಿಲೆಯ ನಿವಾರಣೆ, ಚಿಕಿತ್ಸೆ, ಪುನರ್ವಸತಿ, ಸಂತ್ರಸ್ತರಿಗೆ ಪರಿಹಾರ ವ್ಯವಸ್ಥೆಯಲ್ಲಿ ಶಂಪಾರದ್ದು ಹಗಲಿರುಳಿನ ದುಡಿತ. ಕಾಯಿಲೆಯ ತೀವ್ರತೆಯ ಬಗ್ಗೆ ಪ್ರಚಾರಾಂದೋಳನ ಕೈಗೊಂಡು ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಮಂಗನಕಾಯಿಲೆ ಕುರಿತು ರೂಪಿಸಿದ ಹೋರಾಟ ರಾಷ್ಟ್ರವ್ಯಾಪಿ ಸುದ್ದಿಯಾಯಿತು.ಮುಂದೆ ರಾಜ್ಯದ ಎಲ್ಲಾ ಪರಿಸರ ಚಳವಳಿಗಳಲ್ಲಿ ಅವರು ಗರಿಷ್ಠ ಪಾತ್ರ ವಹಿಸಿದರು. ಹಕ್ಕೊತ್ತಾಯ ಎಂಬ ಪದದ ಜನಕರಾಗಿ ಅವರು ಪರಿಸರ ಚಳುವಳಿಗೆ ತಾದಾತ್ಮ್ಯ ತಂದರು. ೧೯೫೬ರಲ್ಲಿ ಗಡಿನಾಡು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ೧೯೮೭ರಲ್ಲಿ 'ಪಶ್ಚಿಮ ಘಟ್ಟ ಉಳಿಸಿ' ಹೋರಾಟ ನಡೆಸಿದರು.
ಸಾಹಿತ್ಯ-ಕೃತಿ
[ಬದಲಾಯಿಸಿ]ಶಂಪಾರವರು ಅನೇಕ ಕವನ ಸಂಕಲನಗಳನ್ನು ರಚಿಸಿದ್ದಾರೆ. ೧೯೬೩ರಲ್ಲಿ 'ಅಭಾವ ಗೀತೆ' ಕವನವನ್ನು ರಚಿಸಿದರು. ತ್ರಿಕಟು, ಪರಿಸರ ಗೀತೆ, ಜನಪ್ರಿಯ ಸಾಹಿತ್ಯ, ರಬ್ಬರ್ ಕೃಷಿ, ಪರಿಸರ ಗೀತೆ, ಅಜ್ಜಿಮದ್ದು, ಅರೋಗ್ಯ ಸಾಧನ, ಮಧು ದೀಪಿಕಾ, ತುಳು ವೈದ್ಯ ರತ್ನಮಾಲೆ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- . ಪರಿಸರ ಗೀತೆಗೆ- ಕೇಂದ್ರ ಪರಿಸರ ಇಲಾಖೆ ಪ್ರಶಸ್ತಿ
- . ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಪ್ರಶಸ್ತಿ
- . ಶ್ರೇಷ್ಠ ಗ್ರಾಮೀಣ ವರದಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿನ್ನದ ಪದಕ.
- . ಕರ್ನಾಡಕ ರಾಜ್ಯೋತ್ಸವ ಸನ್ಮಾನ
- . ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಪ್ರಶಸ್ತಿ
ಶಂಪಾ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ. ಜೀವನದ ಕೊನೆಯ ಕೆಲವು ತಿಂಗಳುಗಳಲ್ಲಿ ಶಂಪಾರ ಆಲೋಚನೆ, ವಿಚಾರಗಳು ವಿಕ್ಷಪ್ತವಾಗಿರುತ್ತಿದ್ದವು. ಆಲೋಚನೆಯಲ್ಲಿ ಆಧ್ಯಾತ್ಮದ ನಂಟಿತ್ತು. ಶಂಪಾ ದೈತೋಟ ಎಂದೇ ಖ್ಯಾತರಾಗಿದ್ದ ಹಿರಿಯ ಪರಿಸರವಾದಿ, ಸಾಮಾಜಿಕ ಚಳುವಳಿಯ ಮುಂದಾಳು, ಚಿಂತಕ, ಲೇಖಕ, ಪತ್ರಕರ್ತ ಹಾಗೂ ಸಾಹಿತಿ ಶಂಕರನಾರಾಯಣ ಭಟ್ಟ ಪಾನಾಜೆಯವರು ೭೧ನೆಯ ವಯಸ್ಸಿನಲ್ಲಿ ೨೭ ಸಪ್ಟೆಂಬರ್ ೨೦೦೨ರ ಶುಕ್ರವಾರ ರಾತ್ರಿ ಪಾನಾಜೆ ಗ್ರಾಮದ ದೈತೋಟದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.[೧]
ಉಲ್ಲೇಖ
[ಬದಲಾಯಿಸಿ]- ↑ ಮನೀಷಾ ವಾರ್ಷಿಕ ಸಂಚಿಕೆ