ವೀಣಾ ರಾಜಾರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀಣಾ ರಾಜಾರಾವ್
ಜನನಮಾರ್ಚ್ ೨೬, ೧೯೦೯
ಮೈಸೂರು
ಮರಣನವೆಂಬರ್ ೨೮, ೧೯೭೯
ವೃತ್ತಿವೈಣಿಕರು
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಸಂಗೀತ
ವಿಷಯಕರ್ಣಾಟಕ ಶಾಸ್ತ್ರೀಯ ಸಂಗೀತ

ರಾಜಾರಾವ್ (ಮಾರ್ಚ್ ೨೬, ೧೯೦೯ - ನವೆಂಬರ್ ೨೮ ೧೯೭೯) “ಪ್ರಸಿದ್ಧ ವೈಣಿಕರು ಮತ್ತು ಸಂಗೀತ ಶಾಸ್ತ್ರಜ್ಞರಾದ” ರಾಜಾರಾವ್ ಅವರು ವೀಣಾ ರಾಜಾರಾವ್ ಎಂದು ಪ್ರಖ್ಯಾತರಾಗಿದ್ದಾರೆ.

ಜೀವನ[ಬದಲಾಯಿಸಿ]

ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದ ವೀಣಾ ರಾಜಾರಾವ್ ಅವರು ಮಾರ್ಚ್ ೨೬, ೧೯೦೯ರ ವರ್ಷದಲ್ಲಿ ಜನಿಸಿದರು. ರಾಜಾರಾಯರ ತಂದೆ ಮೈಸೂರು ಆಸ್ಥಾನ ವಿದ್ವಾನ್ ಭೈರವಿ ಲಕ್ಷ್ಮೀನಾರಾಯಣಪ್ಪನವರು ಪ್ರಸಿದ್ಧ ವೈಣಿಕ ವೀಣೆ ಶೇಷಣ್ಣನವರ ನೇರ ಶಿಷ್ಯರಾಗಿದ್ದರು. ತಮ್ಮ ಪೂಜ್ಯ ತಂದೆಯವರಲ್ಲಿ ಶಿಷ್ಯವೃತ್ತಿ ಮಾಡಿ ಪಳಗಿದ್ದ ರಾಜಾರಾಯರು, ತಾರುಣ್ಯದಲ್ಲೇ ತಮ್ಮ ನೆಚ್ಚಿನ ಗುರುಗಳಾದ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಜೊತೆಗೆ ವಿನಿಕೆ ಮಾಡುವಷ್ಟು ಔನ್ನತ್ಯ ಸಾಧಿಸಿದ್ದರು.

ಸಂಗೀತ ಸೇವೆ[ಬದಲಾಯಿಸಿ]

ಸಂಗೀತ ಗಾಯನದಲ್ಲೂ ಪ್ರಖ್ಯಾತರಾದ ರಾಜಾರಾಯರು ದೇಶದಾದ್ಯಂತ ಸಾವಿರಾರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. ತಮ್ಮ ಸಹೋದರ ಎಲ್. ಗೋಪಾಲರಾಯರೊಂದಿಗೆ ‘ಮೈಸೂರು ಸಹೋದರರು’ ಎಂದು ಪ್ರಖ್ಯಾತಿ ಪಡೆದಿದ್ದರು. ಅವರಿಗೆ ಅಂದಿನ ಕಾಲದಲ್ಲಿ ಅದೆಷ್ಟು ಬೇಡಿಕೆ ಇತ್ತೆಂದರೆ ೧೯೩೪ರ ವರ್ಷದಲ್ಲಿ ಮದ್ರಾಸು ರಾಜ್ಯದಲ್ಲಿ ಅಲ್ಲಿನ ಸಂಗೀತ ಪ್ರೇಮಿಗಳ ಕೋರಿಕೆಯ ಮೇರೆಗೆ ಮೂರು ತಿಂಗಳ ಸತತ ವಾಸ್ತವ್ಯ ಹೂಡಿ ಮೈಸೂರು ವಾಸುದೇವಾಚಾರ್ಯರ ಕೃತಿಗಳು ಪ್ರಸಿದ್ಧಿ ಪಡೆಯುವಲ್ಲಿ ಪ್ರಶಂಸನೀಯ ಕೊಡುಗೆಯಿತ್ತರು.

ಕೃತಿ ರಚನೆ[ಬದಲಾಯಿಸಿ]

ರಾಜಾರಾಯರು ಉತ್ಕಟ ಕನ್ನಡಾಭಿಮಾನಿಯಾಗಿದ್ದರು. ಅವರ ಆತ್ಮೀಯ ಗೆಳೆಯರಾದ ಅ.ನ.ಕೃಷ್ಣರಾಯರು ಕನ್ನಡದ ಬಳಕೆ ಸಂಗೀತದಲ್ಲಿ ಸೂಕ್ತವಾಗಿ ಆಗುತ್ತಿಲ್ಲವೆಂದು ಖಾಳಜಿ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ನೂರಾರು ಹರಿದಾಸರ ಪದಗಳು ಮತ್ತು ಶಿವಶರಣರ ವಚನಗಳಿಗೆ ಸಂಗೀತದ ಮುಖೇನ ಬೆಳಕು ಮೂಡಿಸಿದರು. ಇವರ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಹರಿದಾಸರ ಕೃತಿಗಳು, ಹರಿದಾಸ ಕಥಾಮಂಜರಿ, ಶಿವಶರಣರ ವಚನಗಳು ಮತ್ತು ಬಸವೇಶ್ವರ ವಚನಗಾನ ಮಂಜರಿ ಎಂಬ ನಾಲ್ಕು ಭಾಗಗಳಲ್ಲಿ ಪ್ರಕಟಪಡಿಸಿತು. ತಮ್ಮದೇ ಆದ ಸ್ವಂತ ಕೃತಿಗಳನ್ನು ‘ವೀಣೆ ರಾಜಾರಾವರ ಕೃತಿಗಳು’ ಎಂಬ ಹೆಸರಿನಲ್ಲಿ ಪ್ರಕಟಿಸಿದರು.

ರಾಜಾರಾಯರು ಶ್ರೇಷ್ಠ ಸಂಗೀತ ಶಾಸ್ತ್ರಜ್ಞರಾಗಿದ್ದರು. ಕನ್ನಡದಲ್ಲಿ ಸಂಗೀತ ಶಾಸ್ತ್ರದಲ್ಲಿ ಗ್ರಂಥಗಳ ಕೊರತೆ ಇರುವುದನ್ನು ಕಂಡ ರಾಜಾರಾಯರು ‘ಸಂಗೀತ ಶಾಸ್ತ್ರ ಸಾರ’ ಮತ್ತು ‘ಸಂಗೀತ ಚಂದ್ರಿಕೆ’ ಎಂಬ ಎರಡು ಮಹತ್ವಪೂರ್ಣ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ಇದಲ್ಲದೆ ‘ಭಾರತೀಯ ಸಂಗೀತ ವಾದ್ಯಗಳು’ ಎಂಬ ಮಹತ್ವಪೂರ್ಣ ಕೃತಿಯನ್ನು ಕೂಡಾ ರಚಿಸಿದರು. ಈ ಎಲ್ಲ ಕೊಡುಗೆಗಳು ಸಂಗೀತ ಲೋಕದಲ್ಲಿ ಕನ್ನಡಕ್ಕೆ ಸಂದ ಐತಿಹಾಸಿಕ ದಾಖಲೆಗಳಾಗಿವೆ.

ಪ್ರತಿಭಾ ವೈವಿಧ್ಯತೆ[ಬದಲಾಯಿಸಿ]

ರಾಜಾರಾಯರು ಚಿತ್ರರಚನೆ ಮತ್ತು ರಂಗಭೂಮಿ ಕಲಾವಿದರಾಗಿ ಸಹಾ ಸಾಧನೆ ಮಾಡಿದ್ದರು. ಅದ್ಭುತ ವಾಗ್ಮಿಗಳಾಗಿದ್ದರು. ಕರ್ನಾಟಕ ಸಂಗೀತ ಮತ್ತು ಸಂಗೀತ ಶಾಸ್ತ್ರದ ಕುರಿತಾದಂತೆ ವಿದ್ವತ್ಪೂರ್ಣವಾಗಿ ಮಾತನಾಡಬಲ್ಲ ಪರಿಪೂರ್ಣರೆಂದು ರಾಜಾರಾಯರ ಪ್ರಖ್ಯಾತಿ ಎಲ್ಲೆಡೆ ಹರಡಿತ್ತು. ಗಮಕ ಕಲೆ, ಸುಗಮ ಸಂಗಿತ ಮತ್ತು ಜೈನ್ ಭಕ್ತಿ ಸಂಗೀತಗಳಿಗೆ ಸಹಾ ಅವರು ಗಣನೀಯ ಕೊಡುಗೆ ನೀಡಿದರು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಗಾನವಿದ್ಯಾವಿಶಾರದ, ರಾಗರಸಾಭಿಜ್ಞ, ಗಾಯನ ವಾದನ ಪ್ರವೀಣ, ಗಾನಕಲಾಭೂಷಣ ಮುಂತಾದವು ಆವರಿಗೆ ಸಂದ ಬಿರುದುಗಳಾಗಿದ್ದವು.

ಕರ್ನಾಟಕ ಗಾನ ಕಲಾ ಪರಿಷತ್ ಮತ್ತು ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ನಡೆಸಿದ ಎರಡು ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಿಗೆ ವೀಣೆ ರಾಜಾರಾಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಸಂಗೀತಾಚಾರ್ಯರಾಗಿ[ಬದಲಾಯಿಸಿ]

ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ ಮತ್ತು ತಾವು ಸ್ಥಾಪಿಸಿದ ಶ್ರೀನಿವಾಸ ಸಂಗೀತ ಕಲಾ ಶಾಲೆಯಲ್ಲಿ ನೂರಾರು ಮಂದಿಗೆ ಶಿಕ್ಷಣ ನೀಡಿದ ರಾಜಾರಾಯರು ಪ್ರಾತಃಸ್ಮರಣೀಯರಾಗಿದ್ದಾರೆ.

ವಿದಾಯ[ಬದಲಾಯಿಸಿ]

ಅವರು ನಿಧನರಾದದ್ದು ನವೆಂಬರ್ ೨೮, ೧೯೭೯ರ ವರ್ಷದಲ್ಲಿ. 2009ರ ವರ್ಷದಲ್ಲಿ ರಾಜಾರಾಯರ ನೆನಪಿನಲ್ಲಿ ಸಂಗೀತಲೋಕ ಅವರ ಶತಮಾನೋತ್ಸವ ವರ್ಷವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಿತ್ತು.

ಕೊಂಡಿಗಳು[ಬದಲಾಯಿಸಿ]

ವೀಣಾ ರಾಜಾರಾವ್ ಕುರಿತ ಮಾಹಿತಿ ತಾಣ Archived 2011-02-03 ವೇಬ್ಯಾಕ್ ಮೆಷಿನ್ ನಲ್ಲಿ.