ವಿಷಯಕ್ಕೆ ಹೋಗು

ವಿ.ಎಸ್. ಶ್ರೀನಿವಾಸ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೈಟ್ ಆನರೆಬಲ್, ಸಿಲ್ವರ್ ಟಂಗ್ ಶ್ರೀನಿವಾಸ ಶಾಸ್ತ್ರಿಗಳೆಂದೇ ಲೋಕ ಪ್ರಸಿದ್ದರಾಗಿರುವ ವಲಂಗಿಮಾನ್ ಶಂಕರನಾರಾಯಣ ಶ್ರೀನಿವಾಸ ಶಾಸ್ತ್ರಿಗಳು ಭಾರತೀಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಶಿಕ್ಷಣಗಳಂತ ಅನೇಕ ಗಂಭೀರ ಪ್ರಕಾರಗಳಲ್ಲಿ ಮಾಸಲಾಗದ ಮುದ್ರೆಯನ್ನು ಒತ್ತಿದ್ದಾರೆ. ವಿ.ಎಸ್.ಶ್ರೀನಿವಾಸ ಶಾಸ್ತ್ರಿಗಳು ಆಧುನಿಕ ಭಾರತ ಕಂಡ ಒಬ್ಬ ಪ್ರಕಾಂಡ ಪಂಡಿತ, ಮಹಾನ್ ವಾಗ್ಮಿ, ಶ್ರೇಷ್ಠ ಶಿಕ್ಷಕ, ಶಿಕ್ಷಣ ತಜ್ಙ, ರಾಜಕಾರಣಿ, ರಾಜ ನೀತಿಜ್ಞ, ಸಾಹಿತಿ, ಆಡಳಿತಗಾರ, ಸ್ವಾತಂತ್ರ ಹೋರಾಟಗಾರ ಹಾಗು ಒಬ್ಬ ಮಹಾನ್ ದೇಶಭಕ್ತ. ಬಹುಮುಖ ಪ್ರತಿಭೆಯ ಘನ ಪಾಂಡಿತ್ಯದ ಅತೀ ವಿರಳ ವ್ಯಕ್ತಿತ್ವ ಇವರದು.

V. S. Srinivasa Sastri 1921

ವಿ.ಎಸ್. ಶ್ರೀನಿವಾಸ ಶಾಸ್ತ್ರಿಗಳು ಹುಟ್ಟಿದ್ದು ೧೮೬೯ ಸೆ.೨೨ ರಂದು ಅಂದಿನ ಮದರಾಸು ಪ್ರಾಂತ್ಯದ ತಂಜಾವೂರು ಜಿಲ್ಲೆಯ ಕುಂಭಕೋಣಂ ಬಳಿಯ ವಲಂಗಿಮಾನ್ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ. ಇವರ ತಂದೆ ವೈಧಿಕ ಶಂಕರನಾರಾಯಣ ಶಾಸ್ತ್ರಿಗಳು. ಅವರು ಶ್ರೀಮದ್ರಾಮಾಯಣದ ಪುರಾಣ ಹೇಳುತ್ತಿದ್ದರು. ಅವರದು ಬಡ ಅರ್ಚಕರ ಕುಟುಂಬ. ಇವರ ತಾಯಿಗೂ ಕೂಡ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ತುಂಬಾ ಆಸಕ್ತಿ ಇತ್ತು. ಇವುಗಳು ಶಾಸ್ತ್ರಿಗಳ ಬಾಲ್ಯದಲ್ಲಿ ಬಹಳ ಪ್ರಭಾವ ಬೀರಿದ್ದವು.

ವಿದ್ಯಾಭ್ಯಾಸ

[ಬದಲಾಯಿಸಿ]

ಶಾಸ್ತ್ರಿಗಳು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಕುಂಭಕೋಣಂನ ನೇಟಿವ್ ಪ್ರೌಢಶಾಲೆಯಲ್ಲಿ ಪಡೆದರು. ನಂತರ ೧೮೮೭ ರಲ್ಲಿ ಕುಂಭಕೋಣಂನ ಸರಕಾರಿ ಕಲಾ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದರು. ಪದವಿಯಲ್ಲಿ ಸಂಸ್ಕೃತದಲ್ಲಿ ಪಾರಿತೋಷಕ ಚಿನ್ನದ ಪದಕ ಗೆದ್ದರು. ಇಂಗ್ಲೀಷ್ ನಲ್ಲಿ ಇಡೀ ಮದರಾಸು ಪ್ರಾಂತ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾದರು. ವಿದ್ಯಾರ್ಥಿ ದೆಸೆಯಿಂದಲೆ ಓದುವ ಗೀಳು ಹಚ್ಚಿಸಿಕೊಂಡಿದ್ದ ಶಾಸ್ತ್ರಿಗಳು ಪದವಿ ಮುಗಿಯುವುದರ ಒಳಗೆ ಅನೇಕ ಖ್ಯಾತ ನಾಮರ ಪುಸ್ತಕಗಳನ್ನ ಓದಿದ್ದರು.

ಶಿಕ್ಷಕ ವೃತ್ತಿ

[ಬದಲಾಯಿಸಿ]

ಶಾಸ್ತ್ರಿಗಳು ಶಿಕ್ಷಕ ವೃತ್ತಿಯನ್ನು ಬಯಸಿ ಬಂದವರು. ಅತ್ಯುತ್ತಮ ಶಿಕ್ಷಕರಾಗಿ ಖ್ಯಾತಿ ಗಳಿಸಿದರು. ಪ್ರಾರಂಭದಲ್ಲಿ ಮಾಯಾವರಂ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ನಂತರ ಕೆಲಕಾಲ ಸೇಲಂನ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ೧೮೯೪ ರಲ್ಲಿ ಟ್ರಿಪ್ಲಿಕೇನ್ ಹಿಂದೂ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು. ೧೯೦೨ ರ ತನಕ ಅಲ್ಲೇ ಸೇವೆ ಸಲ್ಲಿಸಿದರು. ಕಾಲಾನಂತರ ೧೯೩೫ ರಲ್ಲಿ ಪ್ರತಿಷ್ಠಿತ ಅಣ್ಣಾ ಮಲೈ ವಿಶ್ವ ವಿದ್ಯಾನಿಲಯದ ಉಪ ಕುಲಪತಿಗಳಾಗಿ ನೇಮಕಗೊಂಡರು. ಅಣ್ಣಾ ಮಲೈ ವಿಶ್ವವಿದ್ಯಾನಿಲಯದಲ್ಲಿ ವಿದ್ವಾಂಸರಾಗಿದ್ದ ಮಹಾವಿದ್ವಾನ್ ಶ್ರೀ.ರಾಘವ ಐಯ್ಯಂಗಾರರ ಕೈಯಲ್ಲಿ ಮಹಾಕವಿ ಕಾಳಿದಾಸನ ಅಭಿಜ್ಙಾನ ಶಾಕುಂತಲವನ್ನು ತಮಿಳಿಗೆ ಅನುವಾದ ಮಾಡಿಸಿದರು. ಅವರ ಇಂತಹ ಅನೇಕ ಕೆಲಸಗಳು ಒಳ್ಳೆಯ ಜನಮನ್ನಣೆ ಗಳಿಸಿತು. ೧೯೪೦ ರ ತನಕ ಅಲ್ಲಿ ಉಪಕುಲಪತಿಗಳಾಗಿದ್ದರು.

ಸಮಾಜ ಸೇವೆ, ರಾಜಕೀಯ

[ಬದಲಾಯಿಸಿ]

ಪ್ರತಿಯೊಬ್ಬರು ಒಂದು ತತ್ವಕ್ಕಾಗಿ ಬದುಕಬೇಕೆಂದು ಅಂದುಕೊಂಡಿದ್ದರು. ಒಂದು ನಿರ್ದಿಷ್ಣ ತತ್ವವಿಲ್ಲದೆ ಗಾಳಿ ಬೀಸಿದ ಕಡೆ ತೂರಿದರೆ ನಮ್ಮ ಶೀಲನೆ ನಾಶವಾಗುತ್ತದೆ, ಜೀವನವೇ ಭ್ರಷ್ಟವಾಗುತ್ತದೆ. ನೀರು ಮರಳುಗಳಂತೆ ಸ್ಥಾನ ಬದಲಿಸಬಾರದು, ಬೆಟ್ಟ-ಗುಡ್ಡಗಳಂತೆ ಒಂದು ತತ್ವದಲ್ಲಿ ಸ್ಥಿರವಾಗಿರಬೇಕು ಎನ್ನುತ್ತಿದ್ದರು. ಒಂದು ಕ್ಷಣದ ಅನುಕೂಲವನ್ನು ಯೋಚಿಸುವವರು, ಸಂದರ್ಭಕ್ಕೆ ತಕ್ಕಂತೆ ಹೊರಳಿ ಕೊಳ್ಳುವವರು, ಲಾಭವನ್ನು ನೀತಿ ಎಂದು ನಂಬಿರುವವರು ದೇಶದಲ್ಲಿ ಎಲ್ಲಿಯವರೆಗೂ ಪ್ರಮುಖ ಸ್ಥಾನವನ್ನು ಅಲಂಕರಿಸಿರುತ್ತಾರೋ ಅಲ್ಲಿಯವರೆಗೆ ಆ ದೇಶಕ್ಕೆ ಕ್ಷೇಮವಾಗಲಾರದು ಎಂದು ನಂಬಿದ್ದರು. ಅವರು ತತ್ವಗಳನ್ನು ಇಟ್ಟುಕೊಂಡು ರಾಜಕೀಯ ಹಾಗು ಸಮಾಜ ಸೇವೆಗಿಳಿದರು. ಶಾಸ್ತ್ರಿಗಳು ಲಿಬರಲ್ ವಾದಿಗಳು, ಗೋಖಲೆ ವಾದಿಗಳು ಆಗಿದ್ದರು. ಶಾಸ್ತ್ರಿಗಳು ಮದರಾಸಿನ ಟ್ರಿಪ್ಲಿಕೇನ್ ನ ಹಿಂದೂ ಹೈ ಸ್ಕೂಲ್ ನ ಮುಖ್ಯೋಪಾದ್ಯಾಯರಾಗಿದ್ದಾಗ ಶಿಕ್ಷಕರೆ ಕ್ಷೇಮಾಭಿವೃದ್ದಿಗೆ ಶಿಕ್ಷಕರ ಸಂಘ ಕಟ್ಟಿದ್ದರು. ಭಾರತ ದೇಶದಲ್ಲಿ ಸಹಕಾರ ಚಳುವಳಿಯ ಮೊದಲಿಗರಾಗಿದ್ದಾರೆ. ೧೯೦೪ ರಲ್ಲಿ ಭಾರತದ ಪ್ರಥಮ ಸಹಕಾರ ಸಂಘವಾದ ಟ್ರಿಪ್ಲಿಕೇನ್ ಅರ್ಬನ್ ಕೋ- ಆಪರೇಟಿವ್ ಸೊಸೈಟಿ" ಸ್ಥಾಪಿಸಿದರು.

೧೯೦೬ರಲ್ಲಿ ಅವರು ಗೋಪಾಲಕೃಷ್ಣ ಗೋಖಲೆಯವರನ್ನು ಪ್ರಥಮಬಾರಿಗೆ ಭೇಟಿ ಮಾಡಿದರು. ಅವರಿಂದ ಪ್ರಭಾವಿತರಾಗಿ ೧೯೦೬ ರಲ್ಲಿ ಗೋಖಲೆ ಸ್ಥಪಿಸಿದ್ದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಿದರು. ೧೯೧೫ ರಲ್ಲಿ ಅದರ ಅಧ್ಯಕ್ಷರಾದರು. ಗೋಖಲೆಯವರ ಧ್ಯೇಯ ವಾಕ್ಯ ಪಬ್ಲಿಕ್ ಲೈಫ್ ಮಸ್ಟ್ ಬಿ ಸ್ಪಿರಿಚುಯಲ್ ಲೈಸ್ಡ್ ಶಾಸ್ತ್ರಿಗಳನ್ನು ಬಹಳ ಆಕರ್ಷಿಸಿತ್ತು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಯಿಂದ ಭಾರತದಾದ್ಯಂತ ಅನೇಕ ಉಪನ್ಯಾಸ ಕೊಟ್ಟರು. ಇದರ ಮಧ್ಯೆ ೧೯೦೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸೇರಿಕೊಂಡರು. ಕಾಂಗ್ರೇಸ್ ಮತ್ತು ಮುಸ್ಲಿಂ ಲೀಗ್ ನ ಸಾಮರಸ್ಯಕ್ಕೆ ಶ್ರಮಿಸಿದರು. ೧೯೧೯ ರಲ್ಲಿ ಕಾಂಗ್ರೇಸ್ ನ ಅಸಹಕಾರ ಚಳುವಳಿಯ ವಿರುದ್ದ ಬೇಸರಗೊಂಡು ಎಂ.ಆರ್. ಜಯಕರ್, ತೇಜ್ ಬಹದ್ದೂರ್ ಸಪ್ರು ರವರ ಜೊತೆಗೂಡಿ ಭಾರತೀಯ ಲಿಬರಲ್ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿದರು. ಭಾರತೀಯ ಲಿಬರಲ್ ಪಾರ್ಟಿ ಪಕ್ಷ ತನ್ನದೇ ಆದ ರೀತಿಯಲ್ಲಿ ಸ್ವಾತಂತ್ರ ಸಂಗ್ರಾಮಕ್ಕೆ ಕೊಡುಗೆ ನೀಡಿತು. ಈ ಬೆಳವಣಿಗೆಯಿಂದಾಗಿ ಅವರನ್ನು ಇಂಡಿಯನ್ ಲಿಬರಲ್ ಸೊಸೈಟಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ೧೯೨೪ ರಲ್ಲಿ ಅನಿಬೆಸೆಂಟ್ ಜೊತೆ ಹೋಂ ರೂಲ್ ಚಳುವಳಿಯಲ್ಲಿ ಬ್ರಿಟೀಷರ ವಿರುದ್ದ ಹೋರಾಡಿದರು. ೧೯೩೦-೧೯೩೧ ರಲ್ಲಿ ಲಂಡನ್ ನಲ್ಲಿ ನಡೆದ ಪ್ರಥಮ ಹಾಗು ದ್ವಿತಿಯ ದುಂಡು ಮೇಜಿನ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿ ಅದರಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ನಂತರದ ದಿನಗಳಲ್ಲಿ ಭಾರತದ ವಿಭಜನೆಯ ವಿರುದ್ದ ಹೋರಾಡಿದರು.

ವಿ.ಎಸ್.ಶ್ರೀನಿವಾಸ ಶಾಸ್ತ್ರಿಗಳ ಕೃತಿಗಳು

[ಬದಲಾಯಿಸಿ]

೧. ಸೆಲ್ಫ್ ಗೌರ್ನಮೆಂಟ್ ಫಾರ್ ಇಂಡಿಯಾ ಅಂಡರ್ ದ ಬ್ರಿಟೀಷ್ ಫ್ಲಾಗ್

೨. ಕಾಂಗ್ರೇಸ್ -ಲೀಗ್ ಸ್ಕೀಮ್ : ಎಕ್ಸ್ ಪೊಝಿಸನ್.

೩. ಅ ಕಾನ್ ಸೈಝ್ ಕ್ಲಾಸ್ ಫಾರ್ ಇಂಡಿಯನ್ಸ್ ಇನ್ ಇಂಡಿಯನ್ ಎಜುಕೇಷನ್.

೪. ದ ಕೀನ್ಯಾ ಕ್ವಸ್ಚನ್.

೫. ರಿಪೋರ್ಟ್ ಬೈ ರೈಟ್ ಆನರೆಬಲ್ ವಿ.ಎಸ್.ಶ್ರೀನಿವಾಸ ಶಾಸ್ತ್ರಿ ರಿಗಾರ್ಡಿಂಗ್ ಹಿಸ್ ಡೆಪ್ಯೂಟೇಷನ್ ಟು ದ ಡಾಮಿನಿಯೋಸ್ ಆಫ್ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್.

೬. ರಿಸಲ್ಟ್ಸ್ ಆಫ್ ರೌಂಡ್ ಟೇಬಲ್ ಕಾನ್ಫರೆನ್ಸ್ ಅಡ್ರೆಸ್ ಅಟ್ ದ ಮೀಟಿಂಗ್ ಆಫ್ ಅ ಕಮಿಟಿ ಆಫ್ ದ ಎಂಪೈಯರ್ ಪಾರ್ಲಿಮೆಂಟರಿ ಅಸೋಷಿಯೇಷನ್ ಆಫ್ ಇಂಡಿಯನ್ ಸ್ಟಡೀಸ್.

೭. ದ ರೈಟ್ಸ್ ಅಂಡ್ ಡ್ಯೂಟಿಸ್ ಆಫ್ ಇಂಡಿಯನ್ ಸಿಟಿಜನ್, ಕಮಲ ಲೆಕ್ಚರ್ಸ್.

೮. ವಾಲ್ಮೀಕಿ ರಾಮಾಯಣ.

೯. ರಿಪೋರ್ಟ್ ಆನ್ ದ ಕಂಡೀಷನ್ಸ್ ಆಫ್ ಇಂಡಿಯನ್ ಲೇಬರರ್ಸ್ ಇನ್ ಮಲೈ.

೧೦. ಗೋಪಾಲಕೃಷ್ಣ ಗೋಖಲೆ.

೧೧. ಮೈ ಮಾಸ್ಟರ್ ಗೋಖಲೆ.

ಮಹಾತ್ಮ ಗಾಂಧಿಯವರೊಡನೆ ಇವರ ಸಂಬಂಧ: ಒಮ್ಮೆ ಕನ್ನಡ ಸಾಹಿತ್ಯ ದಿಗ್ಗಜ ಶ್ರೀ ಮಾನ್ ಡಿ.ವಿ.ಗುಂಡಪ್ಪ ನವರೊಡನೆ ಮಾತನಾಡುವಾಗ ಶಾಸ್ತ್ರಿಗಳು ಹೇಳಿದ್ದರಂತೆ, ನಾನು ಯಾರನ್ನು ಹೆಚ್ಚಾಗಿ ತಿದ್ದುವುದಿಲ್ಲ ಸಾರ್ ಏಕೆಂದರೆ ನನಗೆ ಪದವಿಯಲ್ಲಿ ಸಂಸ್ಕೃತದಲ್ಲಿ ಪಾರಿತೋಷಕ ಚಿನ್ನದ ಪದಕ ಬಂದಾಗ ನಮ್ಮ ತಂದೆ ಅವರ ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಸಂಸ್ಕೃತ ಕಾವ್ಯದ ಬಗ್ಗೆ ಸಹಜವಾಗಿ ಮಾತು ಬಂದಾಗ ಶಾಸ್ತ್ರಿಗಳು ಅವರ ತಂದೆಯ ಸ್ನೇಹಿತರನ್ನು ತಿದ್ದಿದರು. ಇದರಿಂದ ಕುಪಿತಗೊಂಡ ಶಾಸ್ತ್ರಿಗಳ ತಂದೆ ನಿನಗೆ ಓದಿದ್ದೇನೆ ಎಂಬ ಅಹಂ ಇದೆ, ಇದು ಒಳ್ಳೆಯದಲ್ಲ ಎಂದು ಎಲ್ಲರ ಮುಂದೆ ಛೀಮಾರಿ ಹಾಕಿದರಂತೆ. ಆಗಿನಿಂದ ಶಾಸ್ತ್ರಿಗಳು ಬೇರೆಯವರ ತಪ್ಪುಗಳನ್ನು ತಿದ್ದಲು ಕಡಿಮೆ ಮಾಡಿದೆ ಎಂದು ಹೇಳಿದರಂತೆ. ತಕ್ಷಣ ಡಿ.ವಿ.ಜಿ ಹೇಳಿದರಂತೆ ಸರಿ ಸಾರ್ ಆದರೆ ನೀವು ತಪ್ಪು ತಿದ್ದುವುದನ್ನು ತಪ್ಪಿಸಿಕೊಳ್ಳುವ ಅವಕಾಶವನ್ನು ಮಹಾತ್ಮ ಗಾಂಧಿಯವರು ವಂಚಿಸಿಕೊಂಡಿದ್ದಾರೆ!! ಅವರ ವ್ಯಾಕರಣ ದೋಷಗಳನ್ನು ನೀವು ತಿದ್ದಿದ್ದ ಬಗ್ಗೆ ಅವರು ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಹೇಳಿದ್ದಾರೆ. ಇದು ಶ್ರೀನಿವಾಸ ಶಾಸ್ತ್ರಿಗಳಿಗೆ ಗಾಂಧೀಜಿಯವರ ಜೊತೆ ಇದ್ದ ಸಲುಗೆ. ಗಾಂಧೀಜಿಯವರು ಶಾಸ್ತ್ರಿಗಳನ್ನು ಹಿರಿಯ ಅಣ್ಣನಂತೆ ನೋಡುತ್ತಿದ್ದರು. ಇದು ಶಾಸ್ತ್ರಿಗಳ ಹಿರಿಮೆಯ, ಒಳ್ಳೆತನದ ಸಂಕೇತ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸದಸ್ಯತ್ವ

[ಬದಲಾಯಿಸಿ]

ವಿ.ಎಸ್.ಶ್ರೀನಿವಾಸಶಾಸ್ತ್ರೀಗಳು ಒಬ್ಬ ಮಹಾನ್ ವಾಗ್ಮಿ. ಅವರ ಘನ ಪಾಂಡಿತ್ಯ, ವಿಚಾರಶೀಲತೆ, ಸೂಕ್ಷ್ಮತೆ, ಚತುರತೆ, ಆಗರ್ಭ ಜೀವನಾನುಭವಗಳನ್ನು ನೋಡಿದ ಅಂದಿನ ಭಾರತದ ಬ್ರಿಟಿಷ್ ಸರ್ಕಾರ ಹಾಗೂ ಮಹಾರಾಜರುಗಳು ಅವರನ್ನು ಅನೇಕ ಪ್ರಮುಖ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಿತಿಗಳಿಗೆ ಸದಸ್ಯರನ್ನಾಗಿ ಮಾಡಿತು. ಆ ಎಲ್ಲಾ ಸಮಿತಿಗಳಲ್ಲಿಯೂ ಶಾಸ್ತ್ರಿಗಳು ಆಸಕ್ತಿಯಿಂದ ಶ್ರದ್ಧೆಯಿಂದ ಸಕ್ರಿಯವಾಗಿ ಭಾಗವಹಿಸಿದರು.

1913 ರಲ್ಲಿ ಮದ್ರಾಸ್ ಲೆಜಿಸ್ಲೆಟಿವ್ ಕೌನ್ಸಿಲ್ ಗೆ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಅರಿತಿದ್ದ ಶಾಸ್ತ್ರಿಗಳು ಪ್ರತಿಯೊಬ್ಬ ಭಾರತೀಯರಿಗೂ ಪ್ರಾಥಮಿಕ ಶಿಕ್ಷಣ ಕೊಡಿಸಬೇಕೆಂದು ಅಂದಿನ ಭಾರತದ ಬ್ರಿಟಿಷ್ ಸರ್ಕಾರವನ್ನು ಕೇಳಿಕೊಂಡರು. ಇದರ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಢಿಸಲು ಯಶಸ್ವಿಯಾದರು. 1916 ರಿಂದ 1919 ರವರೆಗೆ ಇಂಪಿರಿಯಲ್ ಲೆಜಿಸ್ಲೆಟಿವ್ ಕೌನ್ಸಿಲ್ ಗೆ ಅವರನ್ನು ಅಂದಿನ ಭಾರತದ ಬ್ರಿಟಿಷ್ ಸರ್ಕಾರ ಸದಸ್ಯರನ್ನಾಗಿ ನೇಮಕ ಮಾಡಿತ್ತು. 1919 ರಲ್ಲಿ ಬ್ರಿಟಿಷ್ ಸರ್ಕಾರ ರೌಲತ್ ಕಾಯಿದೆಯನ್ನು ಭಾರತದಲ್ಲಿ ತರಲು ಯೋಚಿಸಿತು. ಈ ರೌಲತ್ ಕಾಯಿದೆ ಪೂರ್ವಾಗ್ರಹದಿಂದ ಮತ್ತು ಅವಿವೇಕತನದಿಂದ ಕೂಡಿತ್ತು. ಭಾರತೀಯರನ್ನು ಗುರಿಯಾಗಿರಿಸಿಕೊಂಡು ಅವರನ್ನು ಹೆಣೆಯಲು ತಯಾರು ಮಾಡಿದ್ದ ಈ ರೌಲತ್ ಕಾಯಿದೆಯ ವಿರುದ್ದ ಶಾಸ್ತ್ರಿಗಳು ಧ್ವನಿಯೆತ್ತಿದರು. ತಮ್ಮ ಆಗರ್ಭ ಪಾಂಡಿತ್ಯದಿಂದ ಈ ಕಾಯಿದೆಯ ವಿರುದ್ದ ಪುಂಖಾನುಪುಂಖವಾಗಿ ಅನೇಕ ಪತ್ರಿಕೆಗಳಲ್ಲಿ ಬರೆದು ಜನರಲ್ಲಿ ಅದರ ಬಗ್ಗೆ ಜಾಗೃತಿ ಉಂಟು ಮಾಡಿ, ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟರು. 1920 ರಿಂದ 1925 ರವರೆಗೆ ಕೌನ್ಸಿಲ್ ಆಫ್ ಸ್ಟೇಟ್ಸ್ ನ ಗೌರವ ಸದಸ್ಯರಾಗಿದ್ದರು. 1940 ರಲ್ಲಿ ಮದ್ರಾಸ್ ಸರ್ಕಾರ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಾಂತೀಯ ಭಾಷೆಗಳಲ್ಲಿ ವಿಜ್ಞಾನ ತಂತ್ರಜ್ಞಾನದ ಪದಬಳಕೆಗೆ ಸೂತ್ರ ನಿರ್ಮಿಸಲು ಒಂದು ಸಮಿತಿ ರಚಿಸಿತು. ಇದರ ಮಧ್ಯೆ ಶಾಸ್ತ್ರಿಗಳು ವ್ಹಿಟ್ಲಿ ಕಮಿಷನ್ ನ ಸದಸ್ಯರಾಗಿದ್ದರು. ಈ ಸಮಿತಿಯ ಕೆಲಸವೇನೆಂದರೆ ಸರ್ಕಾರಿ ಕಛೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ಆಯಾ ಕಛೇರಿ, ಕಾರ್ಖಾನೆ ಮುಖ್ಯಸ್ಥರಿಗೂ, ಜೀತಗಾರರಿಗೂ ಆಗಬಹುದಾದ ತಕರಾರನ್ನು ಪರಿಹರಿಸುವುದು ಹೇಗೆ, ಆಡಳಿತ ವರ್ಗಕ್ಕೂ, ಯಜಮಾನ ವರ್ಗಕ್ಕೂ, ಜೀತ ವರ್ಗಕ್ಕೂ ಸ್ನೇಹ ಸಂಬಂಧವನ್ನು ಉಂಟು ಮಾಡುವುದು ಹೇಗೆ ಎಂಬ ಪ್ರಶ್ನೆಗಳಿಗೆ ಎಲ್ಲಾ ದೃಷ್ಟಿಯಿಂದಲೂ ಯೋಚಿಸಿ ಜನಾಭಿಪ್ರಾಯವನ್ನು ಸಂಗ್ರಹಿಸಿ, ಒಂದು ವಿಮರ್ಶೆ ಮಾಡಿ, ಅದರ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿತ್ತು. ಶಾಸ್ತ್ರಿಗಳು ಲಿಬರಲ್ ಪಂಥದವರಾಗಿದ್ದರಿಂದ ಸಹಕಾರ ಚಳುವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಟ್ರಿಪ್ಲಿಕೆನ್ ಅರ್ಬನ್ ಕೋಆಪರೇಟಿವ್ ಸೊಸೈಟಿ ಎಂಬ ಸಹಕಾರ ಸಂಘವನ್ನು ಸ್ಥಾಪಿಸಿದರು. ಇದು ಭಾರತೀಯ ಸಹಕಾರ ಸಂಘಟನೆಯ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಿ ನೋಡಲಾಗುತ್ತದೆ. ಶಾಸ್ತ್ರಿಗಳು ಹಿಂದೂ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದಾಗ ಶಿಕ್ಷಕರ ಕ್ಷೇಮಾಭಿವೃದ್ಧಿಗೆ ಒಂದು ಶಿಕ್ಷಕ ಸಂಘವನ್ನು ಕಟ್ಟಿದ್ದರು.

ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸದಸ್ಯತ್ವ

[ಬದಲಾಯಿಸಿ]

1919 ರಲ್ಲಿ ಇಂಗ್ಲೆಂಡ್ ಸರ್ಕಾರಕ್ಕೆ ಕೆಲವು ಬೇಡಿಕೆಗಳನ್ನು ಇಡಲು ಅಂದಿನ ಮಂದಗಾಮಿಗಳು ಒಂದು ಸಮಿತಿ ರಚಿಸಿಕೊಂಡು ಅವರನ್ನು ಭೇಟಿ ಮಾಡಲ ಹೋಗಿದ್ದರು. ಆ ಸಮಿತಿಯಲ್ಲಿ ಶಾಸ್ತ್ರಿಗಳು ಸಕ್ರೀಯರಾಗಿ ಭಾಗವಹಿಸಿದ್ದರು. 2ನೇ ವಿಶ್ವಯುದ್ಧದ ನಂತರ ಸ್ಥಾಪಿತಗೊಂಡಿದ್ದ ಲೀಗ್ ಆಫ್ ನೇಷನ್ಸ್ 1921 ರಲ್ಲಿ ಜಿನೀವಾದಲ್ಲಿ 2ನೇ ಇಂಪಿರಿಯಲ್ ಸಮ್ಮೇಳನವನ್ನು ನಡೆಸಿತು. ಅಲ್ಲಿ ಶಾಸ್ತ್ರಿಗಳು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಭಾಷಣ ಮಾಡಿ ಜಗತ್ತಿನ ಎಲ್ಲಾ ಪ್ರಮುಖ ನಾಯಕರ ಗಮನ ಸೆಳೆದಿದ್ದರು. ವೈಸ್ ಲೀಗ್ ಕೌನ್ಸಿಲ್ ನ ಸದಸ್ಯರಾಗಿದ್ದ ಶಾಸ್ತ್ರಿಗಳು ಬ್ರಿಟಿಷ್ ಸಮಿತಿಯ ಜೊತೆ ಸೇರಿ ವಾಷಿಂಗ್ಟನ್ ಕೌನ್ಸಿಲ್ ನ ಸಭೆಯಲ್ಲಿ ಭಾಗವಹಿಸಿದ್ದರು. 1922 ರಲ್ಲಿ ಭಾರತ ಸರ್ಕಾರ ಶಾಸ್ತ್ರಿಗಳನ್ನು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಕೆನಡಾ ದೇಶಗಳಲ್ಲಿ ವಾಸವಿರುವ ಭಾರತೀಯರ ಸ್ಥಿತಿಗತಿಗಳನ್ನು ತಿಳಿಸುವ ಬಗ್ಗೆ ವರದಿ ಮಾಡಲು ಕಳುಹಿಸಿತ್ತು. ಆಗ ಶಾಸ್ತ್ರಿಗಳು “ರಿಪೋರ್ಟ್ ಬೈ ರೈಟ್ ಆನರೆಬಲ್ ವಿ.ಎಸ್.ಶ್ರೀನಿವಾಸಶಾಸ್ತ್ರಿ ರಿಗಾರ್ಡಿಂಗ್ ಹಿಸ್ ಡೆಪ್ಯೂಟೇಷನ್ ಟು ದ ಡಾಮಿನಿಯೋಸ್ ಆಫ್ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್” ಎಂಬ ವರದಿಯನ್ನು ಸಲ್ಲಿಸಿದರು. 1919 ರಲ್ಲಿ ಬ್ರಿಟಿಷ್ ಚಕ್ರವರ್ತಿಯವರು ತಮ್ಮ ಪ್ರಿವಿ ಕೌನ್ಸಿಲರ್ ಹುದ್ದೆಯನ್ನು ಕೊಟ್ಟು ಗೌರವಿಸಿದರು. 1937 ರಲ್ಲಿ ಶಾಸ್ತ್ರಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಮಲೇಷಿಯಾ ದೇಶದಲ್ಲಿರುವ ಭಾರತೀಯ ಕಾರ್ಮಿಕರ ಸ್ಥಿತಿಗತಿಗಳನ್ನು ತಿಳಿಯಲು ಒಂದು ಸಮಿತಿಯನ್ನು ಕಳುಹಿಸಿಕೊಟ್ಟಿತ್ತು. ಈ ಸಮಿತಿಯು ಮಲೇಷಿಯಾದಿಂದ ಹಿಂತಿರುಗಿ ಬಂದು “ರಿಪೋರ್ಟ್ ಆನ್ ದ ಕಂಡೀಷನ್ಸ್ ಆಫ್ ಇಂಡಿಯನ್ ಲೇಬರರ್ಸ್ ಇನ್ ಮಲೈ”. ಎಂಬ ವರದಿ ಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಿದರು. 1930 ಮತ್ತು 1931 ರ ಪ್ರಥಮ ಮತ್ತು ದ್ವಿತೀಯ ದುಂಡುಮೇಜಿನ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 1927 ರಲ್ಲಿ ಮಹಾತ್ಮ ಗಾಂಧಿಯವರು ಸಾನಿಧ್ಯದಲ್ಲಿ ಭಾರತದ ಬ್ರಿಟಿಷ್ ಸರ್ಕಾರದ ವೈಸರಾಯ್ ಆಗಿದ್ದ ಲಾರ್ಡ್ ಇರ್ವಿನ್ ರವರು ವಿ.ಎಸ್.ಶ್ರೀನಿವಾಸ ಶಾಸ್ತ್ರಿಗಳನ್ನು ದಕ್ಷಿಣ ಆಫ್ರಿಕಾಕ್ಕೆ ಭಾರತದ ಪ್ರತಿನಿಧಿಯಾಗಿ ನೇಮಿಸಿದರು. ಅವರು ದಕ್ಷಿಣ ಆಫ್ರಿಕಾದಲ್ಲಿ 1929 ರವರೆಗೆ ಭಾರತದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿ, ಅಲ್ಲಿ ಭಾರತೀಯರ ಸಮಸ್ಯೆಗಳನ್ನು ಆಲಿಸಿ ಅಲ್ಲಿನ ಸರ್ಕಾರದವರ ಜೊತೆ ಚರ್ಚಿಸಿ ಸುಧಾರಣೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇವರ ಶ್ರಮದಿಂದ ಅಲ್ಲಿನ ನಟಾಲ್ ಪ್ರಾಂತ್ಯದಲ್ಲಿ ನೆಲೆಸಿದ್ದ ಭಾರತೀಯರಿಗೆ ಒಂದು ಶೈಕ್ಷಣಿಕ ಸಮಿತಿಯನ್ನು ನೇಮಿಸಲಾಯಿತು. ಕರಿಯರ ವಿರುದ್ದ ಬಿಳಿಯರು ನಡೆಸುತ್ತಿದ್ದ ದಬ್ಬಾಳಿಕೆಯನ್ನು ಇವರು ಕಟುವಾಗಿ ವಿರೋಧಿಸಿದರು. ಶಾಸ್ತ್ರಿಗಳು ತಮ್ಮ ಆಡಳಿತ ಚಾಕಚಕ್ಯತೆಯಿಂದ ದಕ್ಷಿಣ ಆಫ್ರಿಕಾ ಸರ್ಕಾರದ ಹಾಗೂ ಅಲ್ಲಿನ ಜನರ ವಿಶ್ವಾಸವನ್ನು ಗಳಿಸಿದರು. ಹೀಗೆ ಶಾಸ್ತ್ರಿಗಳು ಹೋದಕಡೆಯೆಲ್ಲಾ ಯಶಸ್ಸು ಅವರನ್ನು ಹಿಂಬಾಲಿಸಿಕೊಂಡು ಬರುತ್ತಿತ್ತು. ಇದರಲ್ಲಿ ಅವರ ಕಠಿಣ ಪರಿಶ್ರಮವು ಇತ್ತು. ಶಾಸ್ತ್ರಿಗಳ ಪ್ರಕಾಂಡ ಪಾಂಡಿತ್ಯ, ಶಾಸ್ತ್ರಿಗಳು ಉದ್ಧಾಮ ವಿದ್ವಾಂಸರು, ವಿದ್ವತ್ತಿನ ಜೊತೆಗೆ ವಿದ್ಯಾ ದದಾತಿ ವಿನಯಂ ಎಂಬಂತೆ ಅವರ ವಿದ್ವತ್ ಗೆ ಸರಿಸಮನಾಗಿ ನಯ, ವಿನಯ, ಸಹನೆ, ಸೌಜನ್ಯವು ಸಮಪಾಲಗಿತ್ತು. ಅವರು ಸಂಸ್ಕೃತವನ್ನು ಬಹಳ ಆಳವಾಗಿ ಅಭ್ಯಸಿಸಿದ್ದರು. ಅವರ ದಿನನಿತ್ಯದ ಜೀವನದಲ್ಲಿ ಸಂಸ್ಕೃತ ಹಾಸುಹೊಕ್ಕಾಗಿತ್ತು. ವಿದ್ಯಾರ್ಥಿ ದೆಸೆಯಿಂದಲೇ ಅವರಿಗೆ ಇಂಗ್ಲೀಷ್ ಭಾಷೆಯಲ್ಲಿ ಆಸಕ್ತಿಯಿತು. ಅವರು ಒಮ್ಮೆ ಇಂಗ್ಲೀಷ್ ನ ಪ್ರಸಿದ್ಧ ವೈಯ್ಯಾಕರಣ ನೆಸ್ ಫೀಲ್ಡ್ ನ ಮಾಡಿದ್ದ ಪ್ರಮಾದಗಳನ್ನು ಶಾಸ್ತ್ರಿಗಳು ತಮ್ಮ ವಿಮರ್ಶೆಯ ಮೂಲಕ ತೋರಿಸಿದ್ದರು!. ಅವರು ಮಾರ್ಕ್ ಹಂಟರ್ ಎಂಬ ಪ್ರಸಿದ್ಧ ಇಂಗ್ಲೀಷ್ ಸಾಹಿತ್ಯ ವಿದ್ವಾಂಸನಿಂದ ಇಂಗ್ಲೀಷ್ ಕಾವ್ಯವಾಚನವನ್ನು ಅಭ್ಯಸಿಸಿದ್ದರು. ಅವರು ಒಬ್ಬ ಮಹಾನ್ ಭಾಷಣಕಾರರಾಗಿದ್ದರು. ಬಹಳ ಓಜಸ್ವಿಯಾಗಿ ಇಂಗ್ಲೀಷ್ ಮಾತನಾಡುತ್ತಿದ್ದರು. ಶಾಸ್ತ್ರಿಗಳ ಇಂಗ್ಲೀಷ್ ಭಾಷೆಯ ಪ್ರೌಢಿಮೆಯನ್ನು ಕಂಡು ಆಂಗ್ಲ ವಿದ್ವಾಂಸರೇ ನಿಬ್ಬೆರಗಾಗಿ ಹೋಗಿದ್ದರು. ಇಂಗ್ಲೆಂಡಿನ ಮಾಜಿ ಪ್ರಧಾನಿ ಲಾರ್ಡ್ ಭಾಲ್ಫೋರ್ ಶಾಸ್ತ್ರಿಗಳನ್ನು ಅವರ ಕಾಲದ ಪ್ರಪಂಚದ ಐದು ಮಹಾನ್ ಭಾಷಣಕಾರರಲ್ಲಿ ಒಬ್ಬರೆಂದು ಪರಿಗಣಿಸಿದ್ದರು. ಇವರ ಭಾಷಣವನ್ನು ಕೇಳಿದ ನಂತರವೇ ಇಂಗ್ಲೀಷ್ ಭಾಷೆಯು ಇಷ್ಟು ಸೊಗಸಾಗಿದೆ ಎಂದು ತಿಳಿದದ್ದು ಎಂದು ಇಂಗ್ಲೆಂಡಿನ ಪ್ರಸಿದ್ಧ ಇತಿಹಾಸ ತಜ್ಞ ಅರ್ಥೂರ್ ಲೈನಲ್ ಸ್ಮಿತ್ ರವರು ಅಭಿಪ್ರಾಯ ಪಟ್ಟಿದ್ದಾರೆ. ಇಂಗ್ಲೆಂಡಿನ ಮತ್ತೊಬ್ಬ ಮಾಜಿ ಪ್ರಧಾನಿಗಳಾದ ರಾಮ್ಸೆ ಮೆಕ್ಡೋನಾಲ್ಡ್ ಶಾಸ್ತ್ರಿಯವರ ಭಾಷಣವನ್ನು ಕೇಳಿದ ನಂತರ ನನಗೆ ನನ್ನ ಮಾತೃಭಾಷೆಯಲ್ಲಿ ಮಾತನಾಡಲು ನಾಚಿಕೆ ಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಮಹಾನ್ ವಿದ್ವಾಂಸ ಥಾಮಸ್ ಸ್ಮಾರ್ಟ್ ರವರು ಶಾಸ್ತ್ರಿಗಳನ್ನು ಬೆಳ್ಳಿ ನಾಲಗೆಯ (Silver Tongue) ಭಾಷಣಕಾರರೆಂದು ಹೊಗಳಿದ್ದಾರೆ. ಭಾರತೀಯರನ್ನು ಬಹಳ ಕೀಳಾಗಿ ಕಾಣುತ್ತಿದ್ದ ಬ್ರಿಟಿಷರು ವಸಹಾತುಶಾಹಿ ಮನಸ್ಥಿತಿಯಲ್ಲಿ ಭಾರತೀಯರಾದ ಶಾಸ್ತ್ರಿಗಳನ್ನು ಹೊಗಳಿದ್ದು, ಬಹಳ ಆಶ್ಚರ್ಯದ ಸಂಗತಿಯಾಗಿರುತ್ತದೆ. ಏಕೆಂದರೆ ಬ್ರಿಟಿಷರು ತಮ್ಮ ಭಾಷೆಯ ವಿಚಾರದಲ್ಲಿ ಅಭಿಮಾನಿಗಳು ಮತ್ತು ಬಹಳ ದುರಭಿಮಾನಿಗಳು ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ವಿ.ಎಸ್.ಶ್ರೀನಿವಾಸಶಾಸ್ತ್ರಿಗಳು ಒಬ್ಬ ಸ್ನೇಹಜೀವಿ. ಅವರದ್ದು ಅಪೂರ್ವವಾದ ಸದ್ಗುಣ ಸಂಸ್ಕೃತಿ, ಅನುಕಂಪ, ಸ್ನೇಹಪರತೆ, ವಿದ್ವತ್ತಿನ ಜೀವನ. ಅವರು ಬಾಳಿದಷ್ಟು ದಿನವೂ ದೇಶವು ಎಲ್ಲಾ ಕಾರ್ಯಕ್ಷೇತ್ರದಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗಿಸಲು ಜನರನ್ನು ಒಗ್ಗೂಡಿಸಿ ಉತ್ತೇಜಿಸುತ್ತಿದ್ದರು. ಈ ಅಪರೂಪದ ಅಸಾಧಾರಣ ಮಹಾನ್ ಸಾಧಕ 1946 ಏಪ್ರಿಲ್ 17 ರಂದು ಇಹಲೋಕವನ್ನು ತ್ಯಜಿಸಿದರು. ಆಂಗ್ಲರಿಗೆ ಇಂಗ್ಲೀಷ್ ಭಾಷೆಯನ್ನು ಹೇಳಿಕೊಟ್ಟ ರೈಟ್ ಆನರಬಲ್ ,ಸಿಲ್ವರ್ ಟಂಗ್, ವಿ.ಎಸ್.ಶ್ರೀನಿವಾಸಶಾಸ್ತ್ರಿಗಳ ಜೀವನವೇ ಒಂದು ಮಹಾಕಾವ್ಯವಾಗಿ ಇಂದಿನ ಯುವಪೀಳಿಗೆಗೆ ಮಾರ್ಗದರ್ಶಿಯಾಗಿರುತ್ತದೆ.

ಟಿಪ್ಪಣಿಗಳು

[ಬದಲಾಯಿಸಿ]

1.) https://en.wikipedia.org/wiki/V._S._Srinivasa_Sastri 2.) http://www.britannica.com/EBchecked/topic/524796/Srinivasa-Sastri

ಉಲ್ಲೇಖಗಳು

[ಬದಲಾಯಿಸಿ]

1.) Gundappa, D. (1975). Jnaapaka chitra shaale part 6. Mysore: Kaavyaalaya prakaashana .