ವಿಷಯಕ್ಕೆ ಹೋಗು

ವಿಶ್ವ ಹಾಸ್ಪಿಸ್ ಆರೈಕೆ ಮತ್ತು ಉಪಶಮನ ಆರೈಕೆ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ ಮರಣಶಯ್ಯೆ ಆರೈಕೆ (ಹಾಸ್ಪೈಸ್ ಕೇರ್) ಮತ್ತು ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ದಿನಾಚರಣೆ

[ಬದಲಾಯಿಸಿ]

ಮರಣಶಯ್ಯೆ ಆರೈಕೆ (ಹಾಸ್ಪೈಸ್ ಕೇರ್) ಮತ್ತು ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ಎರಡನ್ನೂ ಸಹ ಒಂದೇ ದಿನದಂದು ವಿಶ್ವಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ. ವಿಶ್ವ ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ದಿನವನ್ನಾಗಿ ಆಚರಿಸುವಂತೆ ೨೦೦೩ರ ಅಕ್ಟೋಬರ್ ೮ರಂದು ನಿರ್ಧರಿಸಲಾಗಿದೆ. ವಿಶ್ವಾದ್ಯಂತ ರೋಗ ಉಪಶಮನವನ್ನು ಬೆಂಬಲಿಸುವ ಪ್ರತಿಯೊಬ್ಬರಿಗಾಗಿ ಈ ದಿನಾಚರಣೆಯು ಮೀಸಲಾಗಿದೆ. ಜೀವನದ ಅಂತಿಮ ಘಟ್ಟದಲ್ಲಿ ಜೀವನ್ಮರಣ ಹೋರಾಟವನ್ನು ನಡೆಸುತ್ತಿರುವವರಿಗೆ ಬೆಂಬಲ ನೀಡಿ, ಅವರಿಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮರಣಶಯ್ಯೆಯ ಬೆಂಬಲ ಮತ್ತು ರೋಗಉಪಶಮನ ಆರೈಕೆ ಮಹತ್ವವನ್ನು ವಿಶ್ವಾದ್ಯಂತ ಇರುವ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ.

ವಿಶ್ವ ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ದಿನ ೨೦೧೫ರ ಘೋಷವಾಕ್ಯ :

[ಬದಲಾಯಿಸಿ]

ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ಇವುಗಳನ್ನು ಬೆಂಬಲಿಸಲು, ಈ ಬಾರಿ, ವಿಶ್ವ ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ೨೦೧೫ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಇದೇ ಅಕ್ಟೋಬರ್ ೧೦ರಂದು ಆಚರಿಸಲು ಉದ್ದೇಶಿಸಲಾಗಿದೆ. “ಮುಚ್ಚುಮರೆ ಜೀವಗಳು : ಗುಪ್ತ ರೋಗಿಗಳು” (ಹಿಡನ್ ಲೈವ್ಸ್ ಅಂಡ್ ಹಿಡನ್ ಪೇಷಂಟ್ಸ್) ಎಂಬುದು ಈ ಬಾರಿಯ ದಿನಾಚರಣೆಯ ಧ್ಯೇಯವಾಕ್ಯವಾಗಿದೆ. ಉಪಶಮನ ಆರೈಕೆಗಾಗಿ ಪ್ರಯಾಸಪಡುತ್ತಿರುವ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಶೀರ್ಷಿಕೆಯನ್ನು ಆಯ್ದುಕೊಳ್ಳಲಾಗಿದೆ. ಇದರಲ್ಲಿ, ಮಕ್ಕಳು ಸ್ಥಳೀಯ ಸಮುದಾಯ, ಖೈದಿಗಳು, ಯೋಧರು, ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಜನತೆ ಎಲ್ಲರಿಗೂ ಇದು ಅನ್ವಯವಾಗುತ್ತದೆ.

ಮರಣಶಯ್ಯೆಯ ಆರೈಕೆ (ಹಾಸ್ಪಿಸ್ ಕೇರ್) ಎಂದರೆ ಏನು?

[ಬದಲಾಯಿಸಿ]

ಹಲವು ರೋಗಗಳಿಂದ ಬಳಲುತ್ತಿರುವ ರೋಗಿಗಳು, ಆಸ್ಪತ್ರೆಯಂಥಹ ದಿವ್ಯಪರಿಸರದಲ್ಲಿದ್ದುಕೊಂಡು ತಮ್ಮ ಜೀವನದ ಅಂತಿಮ ದಿನಗಳಲ್ಲಿ ಮತ್ತಷ್ಟು ಘನತೆಯಿಂದ, ಆರಾಮದಾಯಕವಾಗಿ ಬದುಕು ಮುಗಿಸುವ ಒಂದು ಪರ್ಯಾಯ ವ್ಯವಸ್ಥೆಯನ್ನು ಒದಗಿಸುವುದನ್ನೇ ಮರಣಶಯ್ಯೆಯ ಆರೈಕೆ ಎನ್ನಲಾಗಿದೆ.

ಉಪಶಾಮಕ ಔಷಧಿಯು ತನ್ನ ನೋವವನ್ನು ನಿಭಾಯಿಸುವಲ್ಲಿ ರೋಗಿಗೆ ಸಹಾಯಕವಾದರೆ, ಮರಣಶಯ್ಯೆಯ ಆರೈಕೆ ಮತ್ತು ರೋಗ ಉಪಶಮನ ಆರೈಕೆಯಿಂದಾಗಿ ರೋಗಿಗೆ ಮತ್ತು ಆತನ ಕುಟುಂಬಕ್ಕೆ ಸೂಕ್ತ ನೆಮ್ಮದಿ ಮತ್ತು ವಿಶೇಷ ರಕ್ಷಣೆಗಳನ್ನು ಒದಗಿಸುತ್ತದೆ. ಮರಣಶಯ್ಯೆಯ ಆರೈಕೆ ಎಂದರೆ ರೋಗವನ್ನು ಗುಣಪಡಿಸುವ ಪ್ರಯತ್ನವಲ್ಲ ಅಥವಾ ಮರಣವನ್ನು ಆದಷ್ಟುಬೇಗ ಆಹ್ವಾನಿಸುವ ಪ್ರಯತ್ನವಲ್ಲ. ಬದಲಾಗಿ, ಜೀವನದ ಕೊನೆಯ ಹಂತದಲ್ಲಿರುವ ರೋಗಿಗೆ ಅತ್ಯಂತ ಸೂಕ್ತವಾದ, ಹಿತವಾದ ಆರೈಕೆಯನ್ನು ನೀಡುವುದಾಗಿದೆ. ಜೀವನದ ಅಂತ್ಯದಲ್ಲಿರುವ ಜನರಿಗೆ ಈ ಮರಣಶಯ್ಯೆ ಆರೈಕೆಯನ್ನು ನೀಡಲಾಗುತ್ತದೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ಅನಾರೋಗ್ಯಕ್ಕೆ ಒಳಗಾಗಿ ಅಂತಿಮಘಟ್ಟದಲ್ಲಿರುವ ರೋಗಿಗೆ ಮತ್ತಷ್ಟು ಆರಾಮವನ್ನು ಉಂಟುಮಾಡುವಲ್ಲಿ ಆರೋಗ್ಯ ವೃತ್ತಿಪರರ ತಂಡವು ಪರಿಶ್ರಮಿಸುತ್ತದೆ. ಮರಣಶಯ್ಯೆ ಆರೈಕೆಯು ರೋಗಿಯ ಕುಟುಂಬಕ್ಕೆ ಆಪ್ತಸಲಹೆ ನೀಡುತ್ತದೆ ಮತ್ತು ಬಳಲಿಕೆಯಿಂದ ಬಿಡುಗಡೆ ಪಡೆಯಲು ಪ್ರತ್ಯಕ್ಷವಾಗಿ ನೆರವು ನೀಡುತ್ತದೆ. ಮರಣಶಯ್ಯೆಯ ಆರೈಕೆ ಎಂದರೆ ಮೂಲ ಕಾಯಿಲೆಯನ್ನು ಗುಣಪಡಿಸುವ ಪ್ರಯತ್ನವಲ್ಲ. ಬದಲಾಗಿ, ಇದು ಇತರ ವೈದ್ಯಕೀಯ ನೆರವುಗಳಿಗೆ ಭಿನ್ನವಾದ ಉದ್ದೇಶವನ್ನು ಹೊಂದಿದೆ. ರೋಗಿಯ ಉಳಿದ ಜೀವನಕಾಲದ ಗುಣಮಟ್ಟವನ್ನು ಹೆಚ್ಚಿಸುವ ಸರ್ವಪ್ರಯತ್ನವನ್ನು ಮಾಡುವುದು ಮತ್ತು ಅದಕ್ಕಾಗಿ ಎಲ್ಲ ರೀತಿಯ ಬೆಂಬಲವನ್ನು ನೀಡುವುದೇ ಮರಣಶಯ್ಯೆ ಆರೈಕೆಯ ಉದ್ದೇಶವಾಗಿದೆ.

ಉಪಶಮನ ಆರೈಕೆ ಎಂದರೇನು?

[ಬದಲಾಯಿಸಿ]

ಜೀವಭಯವನ್ನು ಉಂಟುಮಾಡುವ ಕ್ಯಾನ್ಸರ್, ಏಡ್ಸ್, ನರಸಂಬಂಧೀ ಅಸ್ವಸ್ಥತೆಗಳು ಇತ್ಯಾದಿಗಳು ಉಲ್ಬಣಗೊಂಡು, ಕೊನೆಯ ಹಂತದಲ್ಲಿರುವ ಹೃದಯ ರೋಗಿಗಳು, ಮೂತ್ರಪಿಂಡಗಳ ವೈಫಲ್ಯ ಉಳ್ಳ ವಯೋವೃದ್ಧರು, ಜೀವನದ ಅಂತಿಮ ಹಂತದಲ್ಲಿ ಇರುವ ಮತ್ತಿತರೆ ರೋಗಿಗಳು ಮತ್ತು ಅವರ ಕುಟುಂಬದ ಜೀವನಸ್ಥಿತಿಗತಿಗಳನ್ನು ಉತ್ತಮಪಡಿಸಲು ಆರೈಕೆ ಮತ್ತು ಮಾರ್ಗದರ್ಶನವನ್ನು ನೀಡುವುದು ಉಪಶಮನ ಆರೈಕೆ ಎಂದು ಕರೆಯಲಾಗುತ್ತದೆ.

ಉಪಶಮನ ಆರೈಕೆಯ ಉದ್ದೇಶವೇನು? : ಉಪಶಮನ ಆರೈಕೆಯ ಉದ್ದೇಶವೇನೆಂದರೆ, ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀಡಿ ರೋಗಿಯನ್ನು ಯಾತನೆಯಿಂದ ಬಿಡುಗಡೆಗೊಳಿಸುವ ಪ್ರಯತ್ನ. ಅಲ್ಲದೆ, ರೋಗಿಯು ನೋವುರಹಿತ ಶಾಂತಿಯುತ ಜೀವನ ಹೊಂದಲು ನೆರವು ನೀಡುವುದು.

ಉಪಶಮನ ಆರೈಕೆಯನ್ನು ಎಲ್ಲಿ ನೀಡಬಹುದು?

[ಬದಲಾಯಿಸಿ]

ರೋಗ ಉಪಶಮನ ಆರೈಕೆಯನ್ನು ಆಸ್ಪತ್ರೆ, ಮನೆ, ವಿಶ್ರಾಂತಿಧಾಮ ಮತ್ತು ಇನ್ನಿತರ ಸಂಬಂಧಪಟ್ಟ ಸಂಸ್ಥೆಗಳಲ್ಲಿ ನೀಡಲಾಗುವುದು.

ಉಪಶಮನ ಆರೈಕೆಯನ್ನು ಯಾರಿಗೆ ನೀಡಬಹುದು?

[ಬದಲಾಯಿಸಿ]

ಉಪಶಮನ ಆರೈಕೆಯನ್ನು ರೋಗಿಯು ಆಸ್ಪತ್ರೆಗೆ ದಾಖಲಾಗಿ ರೋಗ ಪತ್ತೆಯಾದ ದಿನದಿಂದ ಮೊದಲುಗೊಂಡು ರೋಗಿಯ ಸಾವಿನ ನಂತರವೂ ಸಹ ರೋಗಿಯ ಕುಟುಂಬಕ್ಕೆ ಎದುರಾಗಬಹುದಾದ ವಿಯೋಗಾವಸ್ಥೆಯಿಂದ ಹೊರಬರುವಂತೆ ಆಧ್ಯಾತ್ಮಿಕವಾಗಿ, ಮಾನಸಿಕವಾಗಿ ದೃಢಗೊಳಿಸಿ ಅವರು ಸಾಮಾನ್ಯ ಜೀವನ ನಡೆಸುವಂತೆ ಅಣಿಗೊಳಿಸುವ ಉದ್ದೇಶದಿಂದ ನೀಡಲಾಗುವುದು. ರೋಗಪತ್ತೆಯಾದ ದುಸ್ಥಿತಿಯನ್ನು ರೋಗಿಗೆ ಸೂಕ್ತರೀತಿಯಲ್ಲಿ ತಿಳಿಯಪಡಿಸುವುದು; ಪ್ರಸ್ತುತ ಎದುರಾಗಿರುವ ಮತ್ತು ಮುಂಬರಬಹುದಾದ ಸಂಕಷ್ಟ ಸಂದರ್ಭಗಳನ್ನು ಸಮಚಿತ್ತದಿಂದ ಎದುರಿಸುವಂತೆ ಮನಸ್ಥೈರ್ಯವನ್ನು ತುಂಬುವುದು; ಮುಂಬರುವ ಚಿಕಿತ್ಸಾ ದಿನಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ರೋಗಿಗೆ ಮತ್ತು ಅವರ ಕುಟುಂಬದವರಿಗೆ ಆಪ್ತಸಲಹೆಗಳನ್ನು ನೀಡುವುದು; ಇವೆಲ್ಲವುಗಳ ಮೂಲಕ ರೋಗಿಯನ್ನು ಸಿದ್ಧಗೊಳಿಸುವುದೇ ಉಪಶಮನ ಆರೈಕೆಯ ಉದ್ದೇಶ. ಚಿಕಿತ್ಸಾ ದಿನಗಳಲ್ಲಿ ರೋಗಿಗೆ ಹಲವಾರು ರೀತಿಯ ನೆರವು ಅಗತ್ಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಸೂಕ್ತ ನಿಧಾರ, ಅಗತ್ಯವಿರುವ ಆರ್ಥಿಕ ನೆರವು, ಚಿಕಿತ್ಸೆಯ ಅಡ್ಡಪರಿಣಾಮದಿಂದ ಚಿಕಿತ್ಸೆಯನ್ನು ಮೊಟಕುಗೊಳಿಸುವುದು, ರೋಗ ಮರುಕಳಿಸುವ ಸಂದರ್ಭದಲ್ಲಿ ರೋಗಿಗೆ ಆಗುವ ನಿರಾಸೆ ಇಂತಹ ಸಮಯಗಳಲ್ಲಿ ರೋಗಿಗೆ ಸಲಹೆ, ನೆರವು ಅತ್ಯಗತ್ಯವಾಗಿರುತ್ತದೆ. ರೋಗ ಉಲ್ಬಣಗೊಳ್ಳುತ್ತಿದ್ದಂತೆ, ರೋಗದ ಯಾತನೆ, ನೋವು, ವಾಕರಿಕೆ, ಮಲಬದ್ಧತೆ, ಉಸಿರಾಟದ ತೊಂದರೆ, ಬಳಲಿಕೆ, ಆಯಾಸಗೊಳ್ಳುವಿಕೆ, ಹಸಿವಾಗದೆ ಇರುವುದು, ನಿದ್ರಾಭಂಗ ಮುಂತಾದವು ರೋಗಿಗಳಿಗೆ ಆಗುವ ದುಷ್ಪರಿಣಾಮಗಳು. ಇಂತಹ ಸಮಯದಲ್ಲಿ ಬಹುಮುಖ್ಯವಾಗಿ ಬೇಕಾಗಿರುವುದು ರೋಗ ಉಪಶಮನ ಆರೈಕೆ. ರೋಗ ಉಪಶಮನ ಆರೈಕೆಯ ತಂಡವು ಭಾವನಾತ್ಮಕವಾಗಿ ಸಮಸ್ಯೆಯನ್ನು ಅರ್ಥಮಾಡಿಕೊಂಡು, ರೋಗಲಕ್ಷಣಗಳ ಜೊತೆಗೆ ಸ್ಪಂದಿಸುವ ಮೂಲಕ ಈ ಸಮಸ್ಯೆಯಿಂದ ರೋಗಿಯು ಮುಕ್ತವಾಗಲು ಸಹಕರಿಸಬೇಕಾಗುತ್ತದೆ.

ಉಪಶಮನ ಆರೈಕೆಯನ್ನು ಮಾಡುವವರು ಯಾರು?

[ಬದಲಾಯಿಸಿ]

ಸಮಗ್ರ ದೃಷ್ಟಿಕೋನದಿಂದ ರೋಗಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಂಡ ನುರಿತ, ಅನುಭವವುಳ್ಳ ವೃತ್ತಿಪರ ಆರೋಗ್ಯತಂಡದಿಂದ ಈ ಆರೈಕೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ತಂಡವು ಪ್ರಮುಖವಾಗಿ ವೈದ್ಯರು, ಶುಷ್ರೂಷಕಿಯರು, ಮನಃಶ್ಶಾಸ್ತ್ರಜ್ಞರು, ಸಮಾಜ ಸೇವಕರು, ಸ್ವಯಂಸೇವಕರು, ಆಧ್ಯಾತ್ಮಿಕ ವ್ಯಕ್ತಿಗಳು, ಸಲಹೆಗಾರರು, ಭೌತಚಿಕಿತ್ಸಾ ತಜ್ಞರು (ಫಿಜಿಯೋಥೆರಪಿಸ್ಟ್) ಮುಂತಾದವರನ್ನು ಒಳಗೊಂಡಿರುತ್ತದೆ. ಇವರಲ್ಲಿ ವೈದ್ಯರು ಮತ್ತು ಶುಷ್ರೂಷಕಿಯರು ಮುಖ್ಯವಾಗಿ ರೋಗಲಕ್ಷಣ ನಿಯಂತ್ರಣ ಮತ್ತು ಶುಷ್ರೂಷೆಗೆ ಸಂಬಂಧಪಟ್ಟವರಾಗಿರುತ್ತಾರೆ. ವೈದ್ಯರು ಸಾಮಾನ್ಯವಾಗಿ ಒಟ್ಟಾರೆ ಆರೈಕೆಯನ್ನು ಮಾಡುವವರಾಗಿರುತ್ತಾರೆ.

ಉಪಶಮನ ಆರೈಕೆಯಲ್ಲಿ ಔಷಧಿಕಾರರ (ಫಾರ್ಮಾಸಿಸ್ಟರ) ಪಾತ್ರ

[ಬದಲಾಯಿಸಿ]

ಉಪಶಮನ ಆರೈಕೆಯಲ್ಲಿ ಇವರ ಪಾತ್ರವು ಬಹಳ ಮುಖ್ಯವಾಗಿರುತ್ತದೆ. ಇವರು ರೋಗಿಗೆ ಅತ್ಯಗತ್ಯವಾಗಿ ಬೇಕಾಗಿರುವ ಔಷಧಿಗಳ ಬಗ್ಗೆ ಮತ್ತು ಅವುಗಳ ಉಪಯೋಗದಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಕೂಲಂಕಶವಾಗಿ ಸಲಹೆ ನೀಡುವವರಾಗಿರುತ್ತಾರೆ.

ಉಪಶಮನ ಆರೈಕೆಯಲ್ಲಿ ಮನಃಶ್ಶಾಸ್ತ್ರಜ್ಞರ ಪಾತ್ರ

[ಬದಲಾಯಿಸಿ]

ಮನಃಶ್ಶಾಸ್ತ್ರಜ್ಞರು ರೋಗಿಗಳಲ್ಲಿ ಕಂಡುಬರುವಂತಹ ರೋಗದ ಲಕ್ಷಣಗಳ ಜೊತೆಗೆ ನೋವೂ ಸಹ ಸೇರಿಕೊಂಡಿರುತ್ತದೆ. ಇದರಿಂದ ರೋಗಿಗಳು ಚಿಂತಾಕ್ರಾಂತರಾಗಿ ರೋಗವು ಉಲ್ಬಣವಾಗುವುದಕ್ಕೆ ಕಾರಣವಾಗುತ್ತದೆ. ಇದರಿಂದ, ನೋವಿನ ತೀವ್ರತೆಯು ಮೇಲ್ಗೈ ಆಗುತ್ತದೆ. ಇಂತಹ ಸಮಯದಲ್ಲಿ ಇವೆಲ್ಲದರ ಬಗ್ಗೆ ಅರಿವು ಮೂಡಿಸಿ ನರಳುವಿಕೆಯನ್ನು ಉಪಶಮನ ಮಾಡುವುದೇ ಈ ಮನಃಶ್ಶಾಸ್ತ್ರಜ್ಞರ ಕರ್ತವ್ಯವಾಗಿರುತ್ತದೆ.

ಉಪಶಮನ ಆರೈಕೆಯಲ್ಲಿ ಸಲಹೆಗಾರರ ಪಾತ್ರ

[ಬದಲಾಯಿಸಿ]

ಇಂತಹ ಸಂದರ್ಭದಲ್ಲಿ ರೋಗಿಯ ಮನಸ್ಸಿನ ದ್ವಂದ್ವವನ್ನು ಆಳವಾಗಿ ಅರ್ಥೈಸಿ, ಸಲಹೆ ನೀಡಿ, ರೋಗದ ತೀವ್ರತೆಯನ್ನು ಉಪಶಮನಗೊಳಿಸಬಹುದಾಗಿದೆ. ಇಂತಹ ಕೆಲಸಗಳನ್ನು ಸಲಹೆಗಾರರು ನಿರ್ವಹಿಸುತ್ತಾರೆ. ಇತರೆ ಮನೋವ್ಯಾಕುಲತೆಗಳಿಂದ ರೋಗಿಯಲ್ಲಿ ಆಗುವ ಭಯ, ತಳಮಳ, ವ್ಯಾಕುಲತೆ, ಆತಂಕ ದುಃಖ, ಖಿನ್ನತೆ, ನಷ್ಟ, ತಪ್ಪಿತಸ್ಥ ಭಾವನೆ ಇವುಗಳಿಂದ ರೋಗಿಗೆ ಆತ್ಮಹತ್ಯಾ ಪ್ರಚೋದನೆ ಆಗಬಹುದು. ಸಾಮಾಜಿಕ ಅಪವಾದಗಳು, ಆರ್ಥಿಕ ತೊಂದರೆ, ಆಸ್ಪತ್ರೆಗೆ ಬಂದುಹೋಗಲು ದೂರಪ್ರಯಾಣ, ಊಟೋಪಚಾರದ ವ್ಯವಸ್ಥೆಯಲ್ಲಿ ಅಡಚಣೆಗಳು, ಮನೆಯಲ್ಲಿ ಸ್ಥಳದ ಕೊರತೆ, ಕುಟುಂಬದ ಸದಸ್ಯರು ರೋಗಿಗೆ ಸ್ಥಳ ನೀಡಲು ತಾವು ಮನೆಬಿಟ್ಟು ದೂರವಿರುವುದು, ಒಂಟಿತನ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗದಿರುವುದು, ಕಾಯಿಲೆಯ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡಿರುವುದು - ಇಂತಹ ಸಂದರ್ಭಗಳಲ್ಲಿ ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರು ತಮ್ಮ ಸಹಾಯಹಸ್ತವನ್ನು ಚಾಚಿ, ಅವರ ತೊಂದರೆಗಳನ್ನು ಸರಳಗೊಳಿಸುತ್ತಾರೆ. ಅಲ್ಲದೆ, ಇವರು ಅಗತ್ಯಬಿದ್ದಾಗಲೆಲ್ಲಾ ತತ್ಕಾಲಕ್ಕೆ ಅಗತ್ಯವಿರುವ ನೋವುನಿವಾರಣಾ ನೆರವು ನೀಡುತ್ತಾರೆ. ಆಗಾಗ್ಗೆ , ರೋಗಿಯು ನೋವು ಮತ್ತು ನಷ್ಟಗಳ ಕುರಿತು, ಇದು ನನಗೇ ಏಕೆ ಬಂದಿದೆ? ಎಂಬ ಆಧ್ಯಾತ್ಮಿಕ ಪ್ರಶ್ನೆಗಳು ಕಾಡುತ್ತದೆ. ಈ ಆಲೋಚನೆಗಳಿಂದಾಗಿ ರೋಗಿಯು ನಿದ್ರೆಯಿಂದ ವಂಚಿತನಾಗುತ್ತಾನೆ. ದೇವರು ತಮಗೇ ಏಕೆ ಇಂತಹ ಶಿಕ್ಷೆಯನ್ನು ನೀಡಿದ್ದಾನೆ ಎಂದು ಅವರು ಪರಿತಪಿಸುತ್ತಾರೆ. ಅವರು ತಮ್ಮ ಜೀವನದಲ್ಲಿ ಮಾಡಿರುವ ತಪ್ಪುಒಪ್ಪುಗಳನ್ನು ನೆನಪಿಸಿಕೊಳ್ಳುತ್ತಾರೆ. ಇದುವರೆವಿಗೂ ತಾವು ಮಾಡಿರುವ ಕರ್ಮಗಳ ಕುರಿತು, ಹಿಂದಿನ ಜನ್ಮಗಳಲ್ಲಿ ಪಾಪಕರ್ಮಗಳನ್ನು ಮಾಡಿರಬಹುದು ಎಂಬ ಅಪರಾಧಿ ಭಾವನೆಯು ಬಂದು ಪಶ್ಚಾತ್ತಾಪ ಪಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ಗುರುಗಳು, ಆಧ್ಯಾತ್ಮಿಕ ಮುಖಂಡರು ರೋಗಿಗಳಿಗೆ ಸಾಂತ್ವನದ ನುಡಿಗಳನ್ನು ಹೇಳುತ್ತಾರೆ. ಹಾಗೂ, ಇಂತಹ ಯೋಚನೆಗಳಿಂದ ಅವರನ್ನು ಹೊರತಂದು ಶಾಂತಸ್ಥಿತಿಗೆ ಮರಳುವಂತೆ ಮಾಡುತ್ತಾರೆ.

ಅಗತ್ಯವಿರುವ ತಾತ್ಕಾಲಿಕ ಆರೈಕೆ (ರೆಸ್ಪೈಟ್ ಕೇರ್) ಎಂದರೇನು? : ರೆಸ್ಪೈಟ್ ಕೇರ್ ಎಂಬುದು ಶಾಂತಿಧಾಮದಲ್ಲಿ ಮರಣಶಯ್ಯೆ ಆರೈಕೆಯಲ್ಲಿರುವ ಒಳರೋಗಿಯ ಕುಟುಂಬಕ್ಕೆ ಸತತ ಸೇವೆಯ ಬಳಲಿಕೆಯಿಂದ ತಾತ್ಕಾಲಿಕ ಬಿಡುವು ನೀಡುತ್ತದೆ. ಇದರಿಂದ ಕುಟುಂಬವು ತಾತ್ಕಾಲಿಕವಾಗಿ ನಿರಾಳವಾಗುತ್ತದೆ.

ಅಗಲಿಕೆಯ ನೋವು ಭರಿಸುವಲ್ಲಿ ಬೆಂಬಲ (ಬೆರೇವ್‌ಮೆಂಟ್ ಸಪೋರ್ಟ್)

[ಬದಲಾಯಿಸಿ]

ಮರಣಶಯ್ಯೆ ಆರೈಕೆಯ ತಂಡವು (ಹಾಸ್ಪಿಸ್ ಕೇರ್ ಟೀಂ) ರೋಗಿಯನ್ನು ಅಗಲಿದ ಕುಟುಂಬದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ತರಬೇತಿ ಪಡೆದ ಸ್ವಯಂಸೇವಕರು ಹಾಗೂ ಆಪ್ತಸಲಹೆಗಾರರು ಆಗಾಗ ಅವರ ಮನೆಗಳಿಗೆ ಭೇಟಿ ನೀಡುವುದಲ್ಲದೆ, ದುಃಖತಪ್ತ ಕುಟುಂಬಕ್ಕೆ ದೂರವಾಣಿ ಕರೆ ಮಾಡುವ ಮೂಲಕ, ಪತ್ರ ಬರೆಯುವ ಮೂಲಕ, ಬೆಂಬಲನೀಡುವ ತಂಡಗಳ ಮೂಲಕ ಸಹಾಯಹಸ್ತವನ್ನು ನೀಡುತ್ತಾರೆ. ಅಗಲಿಕೆಯ ನೋವಿನಿಂದ ಬಳಲಿ ಉಂಟಾಗಿರಬಹುದಾದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ವೃತ್ತಿಪರ ಆರೈಕೆಯ ಅಗತ್ಯವಿದ್ದರೆ, ಅದನ್ನು ಒದಗಿಸುವ ಕ್ರಮಗಳನ್ನು ಕೈಗೊಳ್ಳುವುದು.  

ಉಲ್ಲೇಖಗಳು

[ಬದಲಾಯಿಸಿ]

http://www.thewhpca.org/world-hospice-and-palliative-care-day/about https://en.wikipedia.org/wiki/End-of-life_care