ವಿಷಯಕ್ಕೆ ಹೋಗು

ವಿಲಿಯಮ್ ಡನ್ಬಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲಿಯಂ ಡನ್ಬಾರ್ ನ ಮೂರ್ತಿ

ವಿಲಿಯಮ್ ಡನ್ಬಾರ್ (1465?-1530). ಸ್ಕಾಟ್‍ಲೆಂಡಿನ ಕವಿ.

ಸೇಂಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯದಲ್ಲಿ ಎಂ. ಎ. ಪದವಿಯನ್ನು ಪಡೆದು ಸ್ವಲ್ಪಕಾಲ ಸಂತ ಫ್ರಾನ್ಸಿಸ್ ಪಂಥಕ್ಕೆ ಸೇರಿದ ಭಿಕ್ಷುವಾಗಿದ್ದ. ನಾಲ್ಕನೆಯ ಜೇಮ್ಸ್‍ನ ಆಸ್ಥಾನ ಕವಿಯೂ ರಾಜಭಾರಿಯೂ ಆಗಿದ್ದು 1530ರಲ್ಲಿ ನಿವೃತ್ತಿಹೊಂದಿದ.

ಪ್ರಮುಖ ಕವಿತೆಗಳು[ಬದಲಾಯಿಸಿ]

  • ದಿ ತಿಸ್ಲ್ ಅಂಡ್ ದಿ ರೋಸ್ ಎಂಬುದು ಈತ ಬರೆದ (1503) ಮೊದಲ ಉತ್ತಮ ಕವನ, ಅನಂತರ ಕ್ರಮವಾಗಿ ದಿ ಡ್ಯಾನ್ಸ್ ಆಫ್ ದಿ ಸೆವೆನ್ ಡೆಡ್ಲಿ ಸಿನ್ಸ್ (1503-1508), ದಿ ಗೋಲ್ಡನ್ ಟಾರ್ಜ್, ಲ್ಯಾಮೆಂಟ್ ಫಾರ್ ದಿ ಮೇಕರ್ಸ್ (ಇಲ್ಲಿ ಮೇಕರ್ಸ್ ಎಂದರೆ ಕವಿಗಳು ಎಂದು ಅರ್ಥ) ದಿ ಟು ಮ್ಯಾರೀಡ್ ವಿಮೆನ್ ಅಂಡ್ ದಿ ವಿಡೊ (1508) ಹಾಗೂ ಇನ್ನೂ ಅನೇಕ ಸಣ್ಣಕವನಗಳು ಇವನಿಂದ ರಚಿತವಾದುವು.
  • ಮಾರ್ಗರೆಟ್ ಟ್ಯೂಡರಳ ವಿವಾಹದ ಮಾತುಕತೆ ಸಂದರ್ಭದಲ್ಲಿ ಇತರ ರಾಯಭಾರಿಗಳ ಜೊತೆಗೆ ಏಳನೆಯ ಹೆನ್ರಿಯ ಆಸ್ಥಾನಕ್ಕೆ ಕೊಟ್ಟ ಭೇಟೆಯಿಂದ ಸ್ಫೂರ್ತಿಗೊಂಡು ಇನ್ ಆನರ್ ಆಫ್ ದಿ ಸಿಟಿ ಆಫ್ ಲಂಡನ್ ಎಂಬ ಕವಿತೆಯನ್ನು ಡನ್ಬಾರ್ ರಚಿಸಿದ. ಅನಂತರ ಬರೆದ ದಿ ಕ್ವೀನ್ಸ್ ಪ್ರೋಗ್ರೆಸ್ ಅಟ್ ಅ್ಯಬರ್‍ಡೀನ್ ಎಂಬ ಕವನದಲ್ಲಿ ರಾಣಿ ಮಾರ್ಗರೇಟ್ ಉತ್ತರ ಸ್ಕಾಟ್‍ಲೆಂಡಿಗೆ ನೀಡಿದ ಭೇಟಿಯ ವರ್ಣನೆ ಇದೆ.
  • ದಿ ತಿಸ್ಲ್ ಅಂಡ್ ದಿ ರೋಸ್ ಒಂದು ರಾಜಕೀಯ ರೂಪಕ ಕವಿತೆ. ರೈಮ್ ರಾಯಲ್ ಎಂಬ ಒಂದು ವಿಶಿಷ್ಟ ಅಂತ್ಯಪ್ರಾಸದ ಪಾದಗಳಲ್ಲಿದೆ. ಇದರಲ್ಲಿ ನಾಲ್ಕನೆಯ ಜೇಮ್ಸ್‍ನನ್ನು ಮದುವೆಯಾದ ಮಾರ್ಗರೆಟ್ ರೋಸ್ ಎಂದೂ (ರೋಸ್ ಸ್ಕಾಟ್ಲೆಂಡಿನ ಲಾಂಛನ) ನಾಲ್ಕನೆಯ ಜೇಮ್ಸ್ ತಿಸ್ಲ್ ಎಂದೂ ಸಾಂಕೇತಿಕ ಅರ್ಥ.
  • ದಿ ಟೂ ಮ್ಯಾರಿಡ್ ವಿಮೆನ್ ಅಂಡ್ ದಿ ವಿಡೊ ಎಂಬುದು ಒಂದು ಸಂವಾದ ರೂಪದ ಕವಿತೆ. ಇದರಲ್ಲಿ ಮೂರು ಸಂವಾದಕರು ಮದುವೆಯ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತಾರೆ. ಈ ಕವನ ಅನೇಕ ಅಂಶಗಳಲ್ಲಿ ಚಾಸರ್ನ ವೈಫ್ ಆಫ್ ಬಾತ್ ಪ್ರಕರಣವನ್ನು ಜ್ಞಾಪಕಕ್ಕೆ ತರುತ್ತದೆ. ಇದು ಹೆಂಗಸರನ್ನು ಕುರಿತ ವಿಡಂಬನೆ.
  • ದಿ ಗೋಲ್ಡನ್ ಟಾರ್ಚ್ ಎಂಬ ಇನ್ನೊಂದು ಕವನವೂ ರೂಪಕವೇ. ಇದರಲ್ಲಿ ಕವಿ ಕನಸಿನಲ್ಲಿ ಪ್ರೇಮದೇವತೆ ವೀನಸಳ ಆಸ್ಥಾನಕ್ಕೆ ತೆರಳುತ್ತಾನೆ. ಅಲ್ಲಿ ಆ ದೇವತೆಯ ಮುಂದೆ ನಿಂತಾಗ ವಿವೇಕವೆಂಬ ಗುರಾಣಿಯ ರಕ್ಷಣೆ ಇದ್ದರೂ ಸೌಂದರ್ಯದ ಬಾಣಗಳು ಬಂದು ತಾಕಿ ಇವನನ್ನು ಘಾಸಿಗೊಳಿಸುತ್ತವೆ.
  • ದಿ ಡಾನ್ಸ್ ಆಫ್ ಸೆವೆನ್ ಡೆಡ್ಲಿ ಸಿನ್ಸ್ ಎಂಬ ಕವನದಲ್ಲಿ ಕವಿ ತನ್ನ ಸಮಾಧಿಸ್ಥಿತಿಯಲ್ಲಿ ಕಂಡ ಒಂದು ಅಪೂರ್ವ ದೃಶ್ಯವನ್ನು ವರ್ಣಿಸುತ್ತಾನೆ. ಕ್ಷಮಾಯಾಚನೆಯ ಮೂಲಕ ಪಾಪವಿಮೋಚನೆ ಪಡೆಯದ ಬಹಿಷ್ಕøತರ ಚಿತ್ರಗಳು ಕವಿತೆಯಲ್ಲಿ ಚೆನ್ನಾಗಿ ಮೂಡಿಬಂದಿವೆ. ಇವುಗಳಲ್ಲಿ ಏಳು ಮಹಾಪಾತಕಗಳ ಸಾಂಕೇತಿಕ ನಿರೂಪಣೆಯಿದೆ.
  • ಲ್ಯಾಮೆಂಟ್ ಫಾರ್ ದಿ ಮೇಕರ್ಸ್ ಎಂಬುದು ಹೃದಯಸ್ಪರ್ಶಿಯಾದ ಶೋಕಗೀತೆ. ಪ್ರಪಂಚದಲ್ಲಿ ಸಕಲ ವಸ್ತುಗಳೂ ನಶ್ವರವೆಂದು ಮನಗಂಡು ಕವಿ ಮರುಗುತ್ತಾನೆ. ಚಾಸರ್ ಕವಿಯಿಂದ ಮೊದಲು ಮಾಡಿ ತನ್ನ ಕಾಲದವರೆಗೂ ಆಗಿಹೋದ ಕವಿಗಳನ್ನು ನೆನೆದು ದುಃಖಿಸುತ್ತಾನೆ.

ಒಟ್ಟಿನಲ್ಲಿ ಹಾಸ್ಯ, ವಿಡಂಬನೆ ಹಾಗೂ ಸ್ವಚ್ಛಂದ ಕಲ್ಪನಾಶಕ್ತಿ ಡನ್ಬಾರ್‍ನ ಕೃತಿಗಳ ಮುಖ್ಯ ಲಕ್ಷಣಗಳು. ಡನ್ಬಾರ್ ಕವಿ ರಾಬರ್ಟ್ ಬರ್ನ್ಸ್‍ಗಿಂತ ದೊಡ್ಡವ. ಸ್ಕಾಟ್ಲೆಂಡಿನ ಕವಿಗಳಲ್ಲೇ ಅತಿ ಶ್ರೇಷ್ಠನಾದವ ಎಂದು ಕೆಲವು ವಿಮರ್ಶಕರ ಅಭಿಪ್ರಾಯ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: