ವಿಮಲನಾಥ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ ಬಸದಿ ಹಳದೀಪುರ
ಶ್ರೀ ವಿಮಲನಾಥ ಸ್ವಾಮಿ, ಶ್ರೀ ಶಾಂತಿನಾಥ ಸ್ವಾಮಿ ಬಸದಿ ಹಳದೀಪುರ
ಇತಿಹಾಸ
[ಬದಲಾಯಿಸಿ]ಈ ಬಸದಿಯ ಹಿನ್ನೆಲೆಯ ಬಗ್ಗೆ ಕೆಲವಾರು ವಿಚಾರಗಳು ತಿಳಿದುಬರುತ್ತವೆ. ಇದನ್ನು ಇಲ್ಲಿಯ ಇಂದ್ರರು ಬಹಳ ಅಭಿಮಾನದಿಂದ ಹೇಳುತ್ತಾರೆ. ಮೊದಲಿಗೆ ಕದಂಬ ಅರಸರಿಗೆ ಈ ಪ್ರದೇಶವು ಸೇರಿದ್ದು ಕಾಲಾಂತರದಲ್ಲಿ ಭೈರರಸರು ಇಲ್ಲಿ ಅಧಿಕಾರ ನಡೆಸಿದ್ದಾರೆ. ಆ ಎಲ್ಲಾ ಕಾಲಗಳಲ್ಲಿಯೂ ಈ ಬಸದಿಯು ಬಹಳ ಉತ್ತಮ ಸ್ಥಿತಿಯಲ್ಲಿದ್ದು ಸರ್ವ ಜನಮನ್ನಣೆಗೆ ಪಾತ್ರವಾಗಿತ್ತು. ಜೈನರು ಮಾತ್ರವಲ್ಲದೆ ಇತರ ಮತಸ್ಥರೂ ಇಲ್ಲಿಯ ಸಾನ್ನಿಧ್ಯಗಳಿಗೆ ನಡೆದುಕೊಳ್ಳುತ್ತಾರೆ. ಕದಂಬ ಅರಸರ ಕಾಲದಲ್ಲಿ ಇಲ್ಲಿಯ ಇಂದ್ರರ ಮನೆತನಕ್ಕೆ ರಾಜಕೀಯ ಅಧಿಕಾರವೂ ಇತ್ತು. ಇವರನ್ನು ಸಾಮಂತ ಮೂಲಕಾರ ಅರಸುಮನೆತನವೆಂದು ಕರೆಯುತ್ತಿದ್ದರು. ಇವರ ಅಧಿಕಾರವಿದ್ದ ಪ್ರಾಂತ್ಯವನ್ನು ವರಪುರ ಎಂದು ಕರೆಯುತ್ತಿದ್ದರು.
ಸ್ಥಳ
[ಬದಲಾಯಿಸಿ]ಹೊನ್ನಾವರ ತಾಲೂಕಿನ ಹಳದೀಪುರದಲ್ಲಿರುವ ಬಸದಿಯನ್ನು ಮೂಲಕಾರ ಬಸದಿಯೆಂದೂ ಕರೆಯುತ್ತಾರೆ. ಇಲ್ಲಿ ಭಗವಾನ್ ಶ್ರೀ ವಿಮಲನಾಥ ಸ್ವಾಮಿ ಮತ್ತು ಶ್ರೀ ಶಾಂತಿನಾಥ ಸ್ವಾಮಿ ಪೂಜಿಸಲ್ಪಡುತ್ತಾರೆ. ಇದು ಹೊನ್ನಾವರ ತಾಲೂಕು ಕೇಂದ್ರದಿಂದ 7 ಕಿಲೋ ಮೀಟರ್ ದೂರದಲ್ಲಿ ಕುಮಟಾಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಸಿಗುವ ಸಾಲಿಕೇರಿಯ ಬಳಿಯಲ್ಲಿದೆ. ಬಸದಿಯವರೆಗೂ ಮಣ್ಣಿನ ಮಾರ್ಗವಿದೆ. ಬಸದಿಯ ಬಳಿಯಲ್ಲಿ ಪಂಚಕ್ಷೇತ್ರಪಾಲ, ಜೈನ ಮಹಾಸತಿ, ಕೆಂಡದ ಮಹಾಸತಿ ಮತ್ತು ಚೌಡೇಶ್ವರಿಯ ಸಾನ್ನಿಧ್ಯಗಳಿವೆ. ಹಾಗೂ ಒಂದು ನಾಗಬನ, ಬಲಿಪೀಠ ಮತ್ತು ಒಂದು ಪ್ರಾಚೀನ ಶಿಲಾಶಾಸನವಿದೆ.[೧]
ಪೂಜಾ ವಿಧಾನ
[ಬದಲಾಯಿಸಿ]ಬಸದಿಯಲ್ಲಿ ಪ್ರಾತಃಕಾಲ ಅಭಿಷೇಕ ಮತ್ತು ಪೂಜೆ ಇರುತ್ತದೆ. ಆದರೆ ನಂದಾದೀಪವು ಸದಾಕಾಲ ಬೆಳಗಿಕೊಂಡಿರುತ್ತದೆ. ನವರಾತ್ರಿ ಉತ್ಸವ ನಡೆಯುತ್ತದೆ. ಇದರ ನಿರ್ವಹಣೆಯ ಜವಾಬ್ದಾರಿಯನ್ನು ಕೆಲವು ಮನೆತನದವರು ವಹಿಸಿ ಕೊಳ್ಳುತ್ತಾರೆ. ಕಾರ್ತಿಕ ದೀಪೋತ್ಸವವನ್ನು ನಡೆಸಲಾಗುತ್ತದೆ. ಬಂಡಿ ಹಬ್ಬ (ಕೆಂಡದ ಉತ್ಸವ) ನಡೆಯುತ್ತದೆ. ಚಂದ್ರಶಾಲೆ ದಾಟಿದ ಮೇಲೆ ಪ್ರಾಂಗಣದ ಈಶಾನ್ಯ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಆತನನ್ನು ಪಂಚಕ್ಷೇತ್ರಪಾಲ ಎಂದು ಕರೆಯುತ್ತಾರೆ. ಇಲ್ಲಿ ಪೂಜೆ ಆದ ಬಳಿಕ ಇತರ ಪೂಜೆಗಳು ಆರಂಭವಾಗುತ್ತವೆ.
ವಿದಿವಿಧಾನ
[ಬದಲಾಯಿಸಿ]ಸರ್ವಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದುದರಿಂದ ಇಲ್ಲಿ ವಿಭಿನ್ನ ನಂಬಿಕೆ ನಡವಳಿಕೆಗಳು ಆಚರಿಸಲ್ಪಡುತ್ತಿದ್ದವು. ಗೋಳಿ ಬೀರಪ್ಪ, ಹೊಸ ಬಡೇವ, ಹಂದಿಕಂಡ, ಸಂಕೊಳ್ಳಿ, ಗೋಳಿ ಬೀರ, ಮಾಚಿಕಲ್ಲಮ್ಮ ಶಾಂತಿಕಾ ಪರಮೇಶ್ವರಿ, ಹಳ್ಳಗಿರಿ ಮುಳ್ಳಗಿರಿ ಮಾರಿಕಾಂಬಾ, ಹೊಸಬಯ್ಯ ಮತ್ತು ಭಂಡಾರದೇವಿ ಮುಂತಾದವರನ್ನು ಆರಾಧಿಸಲಾಗುತ್ತದೆ. ವಾದ್ಯ ಚಾಮರ, ಛತ್ರ, ಪತಾಕೆ, ದೀವಟಿಗೆ ಪಂಚವಾದ್ಯ ಸಹಿತ ಈ ದೇವತಾ ಶಕ್ತಿಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಮುದ್ರೆಯನ್ನು ಹಿಡಿದುಕೊಂಡು ಹೋಗಲಾಗುತ್ತದೆ. ಕೊನೆಯಲ್ಲಿ ಬಂಡಿ ಹಬ್ಬವನ್ನು ನಡೆಸಲಾಗುತ್ತದೆ. ಎಲ್ಲಾ ಸಮಾಜದ ಜನರು ಸೇರಿ ಪ್ರಾರ್ಥನೆ ಮಾಡುತ್ತಾರೆ. ಆಗ ಈ ದೈವಶಕ್ತಿಗಳ ಆವೇಶ ಬರುತ್ತದೆ. ಮುಂದೆ ಕೆಂಡ ಸೇವೆ ಆಗುತ್ತದೆ. ಅನಂತರ ಚೋಮದವರು, ಬಳಿಕ ಕಟಿಗೆದಾರರು ಈ ಕೆಂಡ ಸೇವೆ ಮಾಡುತ್ತಾರೆ. ಹೀಗೆ ಈ ಉತ್ಸವಗಳು ಅಕ್ಷಯ ತದಿಗೆಯಿಂದ ಮುಂದಿನ ಹುಣ್ಣಿಮೆಯವರೆಗೆ ನಡೆಯುತ್ತವೆ. ಬಹಳ ಶಿಸ್ತುಬದ್ಧವಾಗಿ ಪೂರ್ವ ಪರಂಪರೆಯ ಅನುಸಾರ ನಡೆಯುವ ಈ ಉತ್ಸವಕ್ಕೆ ಭಕ್ತಾದಿಗಳು ಬಹಳ ಸಂಖ್ಯೆಯಲ್ಲಿ ಸೇರುತ್ತಾರೆ. ಹಿಂದೆ ಬಸದಿಯಲ್ಲಿ ಪಲ್ಲಕಿ ಉತ್ಸವವು ನಡೆಯುತ್ತಿತ್ತು.
ವಿನ್ಯಾಸ
[ಬದಲಾಯಿಸಿ]ಬಸದಿಯ ಗರ್ಭಗೃಹದಲ್ಲಿ ಮೂಲನಾಯಕ ಶ್ರೀ ಶಾಂತಿನಾಥ ಸ್ವಾಮಿ ಹಾಗೂ ಶ್ರೀ ವಿಮಲನಾಥ ಸ್ವಾಮಿಯ ಪದ್ಮಾಸನಸ್ಥ ಅಮೃತ ಶಿಲಾ ಬಿಂಬಗಳಲ್ಲದೆ, ಭಗವಾನ್ ಶ್ರೀ ಚಂದ್ರಪ್ರಭ, ಶಂಭವನಾಥ, ನೇಮಿನಾಥ ಪಾಶ್ರ್ವನಾಥ ಹಾಗೂ ಪಂಚಪರಮೇಷ್ಠಿಗಳ ವಿಗ್ರಹ ಮತ್ತು ತಾಮ್ರದ ಯಂತ್ರಗಳು ಇವೆ. ಇಲ್ಲಿ ಶ್ರೀ ಪದ್ಮಾವತಿ ದೇವಿಯ ಮೂರ್ತಿ ಉತ್ಸವ ಮೂರ್ತಿಯಾಗಿದೆ. ಸುತ್ತಲೂ ಅಷ್ಟದಿಕಾಲಕರ ಕಲ್ಲುಗಳಿವೆ. ಇನ್ನೊಂದು ಶ್ರೀ ಪದ್ಮಾವತಿ ಅಮ್ಮನವರ ಶಿಲಾ ಮೂರ್ತಿ ಇದೆ. ಬಸದಿಯ ಎದುರುಗಡೆ ಚಂದ್ರಶಾಲೆ ಇತ್ತು. ಆದರೆ ತುಂಬಾ ಜೀರ್ಣಗೊಂಡಿದೆ. ಅದರ ಆಚೆಗೆ ದೊಡ್ಡದಾದ ಬಲಿಪೀಠವಿದೆ. ಚಂದ್ರಶಾಲೆಗೆ ತಾಗಿಕೊಂಡು ಮುನಿವಾಸದ ಕಟ್ಟಡವಿಲ್ಲ. ಬಸದಿಯ ಹೊರಗಡೆ ಈಗ 5 ಪಾರಿಜಾತ ಹೂವಿನ ಗಿಡಗಳಿವೆ ಒಂದು ಲಕ್ಕಿಮರವಿದೆ. ಬಸದಿಯ ಗೋಡೆಗಳ ಮೇಲೆ ದ್ವಾರಪಾಲಕರ ಚಿತ್ರಗಳಾಗಲೀ, ಶಿಲ್ಪಕಲಾಕೃತಿಗಳಾಗಲೀ ಇಲ್ಲದೆ ತುಂಬಾ ಸರಳವಾಗಿವೆ. ಬಸದಿ ಪ್ರವೇಶಿಸಿದೊಡನೆ ಸಿಗುವ ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ ಹಾಗೂ ಜಾಗಟೆಗಳನ್ನು ತೂಗಿ ಹಾಕಲಾಗಿದೆ.
ಒಳ ವಿನ್ಯಾಸ
[ಬದಲಾಯಿಸಿ]ಗರ್ಭಗೃಹದಲ್ಲಿ ವಿಶೇಷವಾಗಿ ಶ್ರೀ ಪದ್ಮಾವತಿ ಅಮ್ಮನವರ ಉತ್ತರಕ್ಕೆ ಮುಖಮಾಡಿಕೊಂಡಿರುವ ಮೂರ್ತಿ ಇದೆ. ಮುಖಕ್ಕೆ ತೊಡಿಸುವ ಕವಚವಿದ್ದು, ಸೀರೆ ಉಡಿಸಿ, ಬಳೆ, ಆಭರಣಗಳನ್ನು ಹಾಕಿ ಅಲಂಕಾರಗೊಳಿಸಿ ಪೂಜಿಸಲಾಗುತ್ತದೆ. ಪ್ರಸಾದ ನೋಡುವ ಕ್ರಮವಿದೆ. ಕೆಳಗಡೆ ಕುಕ್ಕುಟ ಸರ್ಪವಿದೆ. ಅಮ್ಮನವರಿಗೆ ಹರಕೆ ಹೇಳಿದರೆ ನಾಗದೋಷ ನಿವಾರಣೆಯಾಗುತ್ತದೆ. ಹುಚ್ಚು ಮತ್ತಿತರ ಮಾನಸಿಕ ರೋಗಗಳು, ವೈಯಕ್ತಿಕ ಸಮಸ್ಯೆಗಳು ಬಗೆಹರಿಯುತ್ತವೆ. ಈ ಜಿನಾಲಯಕ್ಕೆ ನಡೆದುಕೊಂಡು ಬರುವ ಕುಟುಂಬಗಳ ನಾನಾ ವಿಧದ ಕಷ್ಟಕೋಟಲೆಗಳು ಪರಿಹಾರವಾಗುತ್ತವೆ ಎಂಬ ಬಲವಾದ ನಂಬಿಕೆ ಇದೆ.
ಹೊರಾಂಗಣ ವಿನ್ಯಾಸ
[ಬದಲಾಯಿಸಿ]ಬಸದಿಯ ಸುತ್ತಲೂ ಕೆಂಪುಕಲ್ಲಿನಿಂದ ನಿರ್ಮಿಸಿದ ಸಾಮಾನ್ಯವಾದ ಪ್ರಾಕಾರ ಗೋಡೆ ಇದೆ. ಬಸದಿಗೆ ತನ್ನದೇ ಆದ ಆಫೀಸು ಅಥವಾ ಕಲಾಭವನ, ಸಭಾಭವನ ಇತ್ಯಾದಿಗಳು ಇಲ್ಲ. ಆದರೂ ಇಲ್ಲಿ ವಿರಾಜಮಾನರಾಗಿರುವ ಭಗವಾನ್ ಶಾಂತಿನಾಥ ಸ್ವಾಮಿ ಹಾಗೂ ಭಗವಾನ್ ವಿಮಲನಾಥ ಸ್ವಾಮಿಯವರಿಂದಾಗಿ ಇದೊಂದು ಶಾಂತಿಧಾಮವಾಗಿ ಕಂಗೊಳಿಸುತ್ತಿದೆ. ಉನ್ನತ ಇತಿಹಾಸ ಪರಂಪರೆಗಳಿದ್ದು, ಸರ್ವಜನ ಮಾನ್ಯವಾಗಿದೆ, ಸಂದರ್ಶನೀಯವಾಗಿದೆ.
ಉಲ್ಲೇಖ
[ಬದಲಾಯಿಸಿ]- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೨.