ವಿಮಲನಾಥ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮಲನಾಥ ಸ್ವಾಮಿಯು ಜೈನ ತೀರ್ಥಂಕರರಲ್ಲಿ ಒಬ್ಬರು.

ಜನನ[ಬದಲಾಯಿಸಿ]

ವಾಸುಪೂಜ್ಯ ಸ್ವಾಮಿಯು ಮುಕ್ತನಾದ ಮೂವತ್ತು ಸಾಗರ ವರ್ಷಗಳಾದ ಮೇಲೆ ವಿಮಲನಾಥ ಜಿನನ ಅವತಾರವಾಯಿತು. [೧]

ಅವತಾರಗಳು[ಬದಲಾಯಿಸಿ]

ಕಾಲಲಬ್ಧಿಯಾದ ಮೇಲೆ ಮೂರು ಸಲ ಜನ್ಮವೆತ್ತಿದ ಈ ಮಹಾನುಭಾವನು ಮೊದಲ ಜನ್ಮದಲ್ಲಿ ಧಾತಕೀಷಂಡದ ಪಶ್ಚಿಮ ಮಹಾಮೇರುವಿನ ಪಶ್ಚಿಮಕ್ಕಿರುವ ರಮ್ಯಕಾವತಿ ದೇಶದ ರಾಜಧಾನಿ ಮಹಾನಗರದಲ್ಲಿ ಪದ್ಮಸೇನನು ಮಹಾರಾಜನಾಗಿದ್ದನು. ವೈರಾಗ್ಯದಿಂದ ರಾಜ್ಯತ್ಯಾಗ ಮಾಡಿ ತಪಸ್ಸನ್ನು ಆಚರಿಸಿದನು. ಆ ಪುಣ್ಯದ ಫಲವಾಗಿ ಸಹಸ್ರಾರಕಲ್ಪದ ಇಂದ್ರನಾಗಿ, ಬಹುಕಾಲ ಸ್ವರ್ಗಸುಖವನ್ನು ಅನುಭವಿಸಿದನು. ಮರುಜನ್ಮದಲ್ಲಿ ಆತನು ಕಾಂಪಿಲ್ಯ ನಗರದಲ್ಲಿದ್ದ ಪುರುದೇವ ವಂಶಜನಾದ ಕೃತವರ್ಮ ಮತ್ತು ಜಯಶ್ಯಾಮಾದೇವಿ ಎಂಬ ರಾಜದಂಪತಿಗಳಲ್ಲಿ ಮಾಘ ಶುಕ್ಲ ಚತುರ್ದಶಿ ಶಿವಯೋಗದಲ್ಲಿ ಸುಪುತ್ರನಾಗಿ ಜನಿಸಿದನು. ದೇವೇಂದ್ರನು ಆತನಿಗೆ ಜನ್ಮಾಭಿಷೇಕವನ್ನು ಎಸಗಿ ವಿಮಲನಾಥನೆಂದು ನಾಮಕರಣ ಮಾಡಿದನು.

ವಿಮಲನಾಥನ ವೈರಾಗ್ಯ[ಬದಲಾಯಿಸಿ]

ಹೇಮವರ್ಣನಾಗಿ ಅರವತ್ತು ಬಿಲ್ಲುಗಳೆತ್ತರಕ್ಕೆ ಬೆಳೆದ ಈ ರಾಜಕುಮಾರನು ಬಹುಕಾಲ ರಾಜ್ಯವಾಳಿದ ಮೇಲೆ ವೈರಾಗ್ಯವನ್ನು ಹೊಂದಿದನು. ದೇವತೆಗಳು ಪರಿನಿಷ್ಕ್ರಮಣ ಕಲ್ಯಾಣವನ್ನು ಎಸಗಿದರು. ಮನೋಹರೋದ್ಯಾನದಲ್ಲಿ ಫಾಲ್ಗುಣ ಕೃಷ್ಣ ಚತುರ್ದಶಿಯ ವಿಶಾಖಾ ನಕ್ಷತ್ರದಲ್ಲಿ ಮರ್ನಪರ್ಯಯ ಜ್ಞಾನವನ್ನು ಹೊಂದಿದ ಈ ಸ್ವಾಮಿಯು ಜಯನಗರದ ನಂದನ ರಾಜನಿಂದ ಆಹಾರ ದಾನವನ್ನು ಪಡೆದು ಮೂರು ವರ್ಷ ತಪಸ್ಸು ಮಾಡಿದನು. ದೀಕ್ಷಾವನದಲ್ಲಿ ನೇರಳೆಯ ಮರದ ಕೆಳಗೆ ಆತನಿಗೆ ಕೇವಲ ಜ್ಞಾನವಾಯಿತು. ಭವ್ಯರೆಂಬ ಸಸ್ಯಗಳಿಗೆ ಧರ್ಮವರ್ಷಣಮಾಡುತ್ತಾ ಬಹುವರ್ಷಗಳಾದ ಮೇಲೆ ಆಷಾಢ ಕೃಷ್ಣ ಅಷ್ಟಮಿ ಉತ್ತರಾಷಾಢಾ ನಕ್ಷತ್ರದಲ್ಲಿ ಸಾಯಂಕಾಲ ಆತನು ಮುಕ್ತಿಯನ್ನು ಸೂರೆಗೊಂಡನು.

ಗಣಧರರು ಹಾಗೂ ಯಕ್ಷ-ಯಕ್ಷಿಯರು[ಬದಲಾಯಿಸಿ]

ಈತನು ಅರವತ್ತು ಲಕ್ಷ ವರ್ಷ ಜೀವಿಸಿದ್ದು, ಐವತ್ತೈದು ಜನ ಗಣಧರರನ್ನು ಹೊಂದಿದ್ದನು. ಈತನ ಲಾಂಛನ ವರಾಹ; ಯಕ್ಷ-ಯಕ್ಷಿಯರು ಷಣ್ಮುಖ-ವೈರೋಟಿ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್.