ವಿಷಯಕ್ಕೆ ಹೋಗು

ವಿದ್ಯಾರ್ಥಿ ಭವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿದ್ಯಾರ್ಥಿ ಭವನ್ ಇಂದ ಪುನರ್ನಿರ್ದೇಶಿತ)
ವಿದ್ಯಾರ್ಥಿ ಭವನದ ಮುಂಭಾಗ ೧೨°೫೬′೪೩″N ೭೭°೩೪′೧೭″E

ವಿದ್ಯಾರ್ಥಿ ಭವನ, ಇದೊಂದು ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ, ೭೦ ವರ್ಷಕ್ಕಿಂತ ಹಳೆಯದಾದ, ಆದರೆ ಅಂದಿನಿಂದಲೂ ತನ್ನ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಹಾಗೇ ಉಳಿಸಿಕೊಂಡು ಬಂದಿರುವ ಜನಪ್ರಿಯ ಉಡುಪಿ ಖಾದ್ಯಮಂದಿರ. ಇದೊಂದು ಸಸ್ಯಹಾರಿ ಖಾದ್ಯಮಂದಿರ. ಇದು ಶುರುವಾದಾಗ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿತ್ತು. ದಿನ ಕಳೆದಂತೆ ಎಲ್ಲರೂ ಹೋಗುವಂತಾಯಿತು. ಎಲ್ಲಾ ಉಡುಪಿ ಹೋಟೇಲುಗಳಂತೆ, ಇಲ್ಲಿಯೂ ಶುಚಿ-ರುಚಿಯಾದ ತಿಂಡಿ ತಿನಿಸುಗಳು ದೊರೆಯುತ್ತವೆ. ಇಲ್ಲಿನ ಪ್ರಮುಖ ಆಕರ್ಷಣೆ ಮಸಾಲೆ ದೋಸೆ. ಜನಗಳು ಈ ಚಿಕ್ಕಹೋಟೆಲಿನ ಹೊರಗಡೆಯೇ ಸಾಲಿನಲ್ಲಿ ನಿಂತು, ಕಾದು, ಒಳಗೆ ಬಂದು ದೋಸೆಯನ್ನು ಆಸ್ವಾದಿಸುವುದು ಸರ್ವೇಸಾಮಾನ್ಯವಾದ ಸಂಗತಿ.

ವಿದ್ಯಾರ್ಥಿಭವನದ ಖ್ಯಾತಿಯನ್ನು ಹೆಚ್ಚಿಸುವಲ್ಲಿ ಕನ್ನಡದ ಕೆಲವು ಪತ್ರಿಕೆಗಳ, ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳ ಪಾಲೂ ಇದೆ. ಜಾಗದ ಅಭಾವ, ತಕ್ಷಣ ಪರಿವಾರದವರೆಲ್ಲಾ ಒಟ್ಟಿಗೆ ಕೂತು, ದೋಸೆ ಸವಿಯುವುದು ಕಷ್ಟವೆನ್ನಿಸಿದರೂ ಜನರು ಎಲ್ಲಕ್ಕೂ ಹೊಂದಿಕೊಳ್ಳುತ್ತಾರೆ.

ಇತಿಹಾಸ

[ಬದಲಾಯಿಸಿ]

ವಿದ್ಯಾರ್ಥಿ ಭವನ ಶುರುವಾಗಿದ್ದು ೧೯೪೩ರಲ್ಲಿ. ಉಡುಪಿ ಜಿಲ್ಲೆಯ ಸಾಲಿಗ್ರಾಮ ಮೂಲದ ವೆಂಕಟರಾಮ ಉರಾಳರು ಈ ಖಾದ್ಯಮಂದಿರದ ಸ್ಥಾಪಕರು. ಇನ್ನೊಂದು ಮೂಲದ ಪ್ರಕಾರ ಯಡಿಯೂರು ಮಧ್ಯಸ್ಥ ಎಂಬವರಿಂದ ವೆಂಕಟರಮಣರು ಪಡೆದು ನಡೆಸುತ್ತಿದ್ದರು[]. ಆರಂಭವಾದ ಮೊದಲಿಗೆ, ಹತ್ತಿರದ ನ್ಯಾಶನಲ್ ಕಾಲೇಜು ಮತ್ತು ಹತ್ತಿರದ ಶಾಲೆಗಳ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭಿಸಲಾಗಿತ್ತು. ಅಲ್ಲದೆ, ಉರಾಳರ ಸ್ನೇಹಿತರೊಬ್ಬರ ಸಲಹೆಯಂತೆ ಈ ಹೋಟೇಲಿಗೆ ವಿದ್ಯಾರ್ಥಿ ಭವನ ಎಂದು ಹೆಸರು ಇಡಲಾಯಿತು[]. ಕಾಲ ಕಳೆದಂತೆ, ಹೋಟೇಲಿನ ಖಾದ್ಯಗಳ ರುಚಿ ಇತರ ಗ್ರಾಹಕರನ್ನು ಸೆಳೆಯಲಾರಂಭಿಸಿತು. ವಿದ್ಯಾರ್ಥಿಗಳಲ್ಲದೆ, ಖ್ಯಾತ ಸಾಹಿತಿಗಳು, ಸಿನೆಮಾ ನಟರು, ರಾಜಕೀಯ ಧುರೀಣರು ಸಹ ಈ ಹೋಟೆಲಿಗೆ ಭೇಟಿ‌ ನೀಡಲು ಆರಂಭಿಸಿದರು.

ವೆಂಕಟರಮಣ ಉರಾಳರ ನಂತರ ಅವರ ಸೋದರ ಪರಮೇಶ್ವರ ಉರಾಳರು ವಿದ್ಯಾರ್ಥಿ ಭವನವನ್ನು ನಡೆಸಿಕೊಂಡು ಬಂದರು.

೧೯೭೦ರಲ್ಲಿ ಕುಂದಾಪುರದ ಹತ್ತಿರದ ಶಂಕರನಾರಾಯಣ ಮೂಲದ ರಾಮಕೃಷ್ಣ ಅಡಿಗರು ವಿದ್ಯಾರ್ಥಿ ಭವನದ ನಿರ್ವಹಣೆಯನ್ನು ವಹಿಸಿಕೊಂಡರೂ ಸಹ ಈ‌ ಹಿಂದೆ ಇದ್ದ ನೌಕರವರ್ಗವನ್ನು ಹಾಗೇ ಉಳಿಸಿಕೊಂಡರು.[]

ಒಂದು ಹಂತದಲ್ಲಿ ಅಡಿಗರು, ವಯೋಸಹಜ ಕಾರಣದಿಂದ ಹೋಟೆಲ್ ವ್ಯವಹಾರವನ್ನು ಮುಂದುವರಿಸದಿರಲು ನಿರ್ಧರಿಸಿದ್ದರು. ಹಳೆಯ ಕಟ್ಟಡವನ್ನು ನೆಲಸಮ ಮಾಡಿ ಅಲ್ಲೊಂದು ವಾಣಿಜ್ಯ ಸಂಕೀರ್ಣವನ್ನು ಕಟ್ಟಿಸಲು ನಿರ್ಧರಿಸಿದ್ದರು. ತಮ್ಗ ನಿರ್ಧಾರದ ಬಗ್ಗೆ ಮಕ್ಕಳಲ್ಲಿ ಹೇಳಿಕೊಂಡಾಗ ಅವರೂ ಸಹ ಗೊಂದಲಕ್ಕೆ ಬಿದ್ದರು. ಯಾಕೆಂದರೆ ಇಬ್ಬರು ಮಕ್ಕಳಲ್ಲಿ ಒಬ್ಬ(ಅರುಣ್ ಅಡಿಗ) ಟೆಲಿಕಾಂ ಇಂಜಿನಿಯರಿಂಗ್ ಅಭ್ಯಸಿಸಿ ಖಾಸಗಿ ಕಂಪೆನಿಯಲ್ಲಿ ಉತ್ತಮ ವೇತನ ಬರುವ ಉದ್ದೋಗದಲ್ಲಿ ಇದ್ದ. ಇನ್ನೊಬ್ಬ ಮಗ ಇಂಜಿನಿಯರಿಂಗ್ ಕಲಿತು ವಿದೇಶದಲ್ಲಿ ಆಗಲೇ ನೆಲೆಯೂರಿದ್ದ. ಈ ಮಧ್ಯೆ, ಇನ್ಫೋಸಿಸ್ ಸಂಸ್ಥೆ ನಾರಾಯಣಮೂರ್ತಿ ಅವರು ಹೋಟೇಲ್ ಉದ್ಯಮವನ್ನು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಕೊನೆಗೆ ಧೃಡ ನಿರ್ಧಾರ ಮಾಡಿದ ಅರುಣ್ ಅಡಿಗ, ತಮ್ಮ ಉದ್ದೋಗಕ್ಕೆ ರಾಜೀನಾಮೆ ಕೊಟ್ಟು ತಂದೆಯ ವ್ಯವಹಾರದಲ್ಲಿ ಕೈಜೋಡಿಸಿದರು.[]

ಪ್ರಸ್ತುತ, ತಂದೆ-ಮಗ ಇಬ್ಬರೂ ವಿದ್ಯಾರ್ಥಿ ಭವನವನ್ನು ಮುನ್ನಡೆಸುತ್ತಿದ್ದಾರೆ.

ತಿಂಡಿ ತಿನಿಸುಗಳು

[ಬದಲಾಯಿಸಿ]

ವಿದ್ಯಾರ್ಥಿ ಭವನದ ಪ್ರಮುಖ ಆಕರ್ಷಣೆ ಮಸಾಲೆ ದೋಸೆ. ದಶಕದ ಹಿಂದೆ, ಬೆಣ್ಣೆ ಹಾಕಿ ತಯಾರಿಸಿದ ಮಸಾಲೆ ದೋಸೆಯ ಪರಿಮಳ ಕೈ ತೊಳೆದ ಮೇಲೂ ಹೋಗುತ್ತಿರಲಿಲ್ಲ ಎಂಬುದು ಹಳೆಯ ಗ್ರಾಹಕರ ಅಭಿಪ್ರಾಯ.[]

ಇನ್ನುಳಿದಂತೆ ರವೆ ವಡೆ, ಇಡ್ಲಿ, ಖಾರಾ ಬಾತ್, ಕೇಸರಿ ಬಾತ್, ಪೂರಿ ಸಾಗು, ಕಾಫಿ ಚಹ ಇಲ್ಲಿ ಸಿಗುವ ತಿನಿಸುಗಳಾಗಿವೆ.

ಖ್ಯಾತನಾಮರ ಆಡುಂಬೋಲ

[ಬದಲಾಯಿಸಿ]

ವಿದ್ಯಾರ್ಥಿ ಭವನ ಕೇವಲ ಒಂದು ಸಾಮಾನ್ಯವಾದ ಹೋಟೇಲ್ ಅಲ್ಲ. ಅದು ಸಾಹಿತಿ, ರಾಜಕಾರಣಿ, ಸಿನೆಮಾ ನಟರ ಅಚ್ಚುಮೆಚ್ಚಿನ ತಾಣವೂ ಸಹ ಆಗಿತ್ತು. ಕನ್ನಡದ ನಟ ಡಾ. ರಾಜ್‌ಕುಮಾರ್ ದಂಪತಿಗಳು ನಿಯಮಿತವಾಗಿ ಇಲ್ಲಿಗೆ ಬಂದ ಮಸಾಲೆ ದೋಸೆ ತಿಂದು ಹೋಗುತ್ತಿದ್ದರು.

ವಿದ್ಯಾರ್ಥಿ ಭವನದ ಎದುರಿಗೆ ಸರ್ಕಲ್ ರೆಸ್ಟೋರೆಂಟ್ ಹೆಸರಿನ ಕಟ್ಟಡ ಇತ್ತು. ಅಲ್ಲಿನ ಮಹಡಿಯ ಮೇಲೆ ಸಾಹಿತಿ, ಕವಿಗಳು ಒಟ್ಟು ಸೇರಿ ಹರಟೆ, ಚರ್ಚೆಗಳು ನಡೆಯುತ್ತಿತ್ತು. ವಿದ್ಯಾರ್ಥಿ ಭವನದ ಅಭಿಮಾನಿಗಳಾದ ಅವರುಗಳು ಎದುರಿನ ರೆಸ್ಟೋರೆಂಟಿನಲ್ಲಿ ಸೇರಲು ಕಾರಣ ವಿದ್ಯಾರ್ಥಿ ಭವನದಲ್ಲಿ ಇದ್ದ ಸ್ಥಳಾವಕಾಶದ ಕೊರತೆ. ಇಲ್ಲಿ ಆರಂಭವಾದ ಪರಿಚಯ ಸ್ನೇಹ ಎದುರಿನ ಹೋಟೆಲಿಗೆ ಸ್ಥಳಾಂತರವಾಗಿ ಮುಂದುವರೆಯುತ್ತಿತ್ತು.

ವಿದ್ಯಾರ್ಥಿ ಭವನವನ್ನು ನಾನು ಹೋಟೆಲ್ ಎಂದು ಭಾವಿಸುವುದಿಲ್ಲ. ಅದೊಂದು ಸಾಂಸ್ಕೃತಿಕ ತಾಣ ಎಂಬುದು ಪ್ರೊ. ಜಿ ವೆಂಕಟಸುಬ್ಬಯ್ಯ ಅವರ ಅಭಿಪ್ರಾಯವಾಗಿತ್ತು. ಖ್ಯಾತ ಪತ್ರಕರ್ತ ವೈಎನ್ಕೆ ಎಲ್ಲಿ ಸಿಗದಿದ್ದರೂ ವಿದ್ಯಾರ್ಥಿಭವನದಲ್ಲಿ ಸಿಕ್ಕೇ ಸಿಗುತ್ತಾರೆ ಎಂಬುದು ಅವರ ಆಪ್ತರ ನಂಬಿಕೆಯಾಗಿತ್ತು.

ನಾನು ಇಲ್ಲಿಗೆ ಬಿಎಗೆ ಸೇರಲು ಬಂದಾಗ ನನ್ನ ಹಳೆಯ ಗೆಳೆಯ ಟಿ.ಜಿ.ಶ್ರೀನಿವಾಸ ರಾವ್‌ ಇಲ್ಲಿ ವಾಯುಸೇನೆಯಲ್ಲಿ ಟೈಪಿಸ್ಟ್‌ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಇವನೇ ನನಗೆ ವಿದ್ಯಾರ್ಥಿ ಭವನವನ್ನು ಮೊದಲು ಪರಿಚಯಿಸಿದವನು. ಆತ ಪ್ರತಿ ಭಾನುವಾರ ನಮ್ಮ ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿ ಭವನ್‌ಗೆ ಕರೆದುಕೊಂಡು ಹೋಗಿ ಗುಲಾಬ್‌ ಜಾಮೂನು ಮತ್ತು ಮಸಾಲೆ ದೋಸೆ ಕೊಡಿಸುತ್ತಿದ್ದ. ಮಸಾಲೆ ದೋಸೆಯ ಮೊದಲ ರುಚಿ ಕಂಡದ್ದು ಅಲ್ಲಿ. ಪ್ರತಿ ಭಾನುವಾರವೂ ಎರಡು ಮಸಾಲೆ ದೋಸೆ ತಿನ್ನುವುದು ಆಗೆಲ್ಲ ರೂಢಿಯಾಗಿತ್ತು - ಇದು ಸಾಹಿತಿ ಬಿ ಆರ್ ಲಕ್ಷ್ಮಣರಾವ್ ಅವರ ಮಾತು.

ಸೋಮವಾರದಿಂದ ಗುರುವಾರದವರೆಗೂ ಬೆಳಿಗ್ಗೆ ೬.೩೦ ರಿಂದ ೧೧.೩೦ ರವರೆಗೂ, ಮಧ್ಯಾಹ್ನ ೨ ರಿಂದ ರಾತ್ರಿ ೮ ಗಂಟೆ ವರೆಗೂ ತೆರೆದಿಡಲಾಗುತ್ತದೆ. ವಾರದ ರಜಾದಿನ ಶುಕ್ರವಾರ. ಇನ್ನು ವಾರಾಂತ್ಯದ ದಿನಗಳಾದ ಶನಿವಾರ ಹಾಗೂ ಭಾನುವಾರದ ಸಮಯದಲ್ಲಿ ಬದಲಾವಣೆಗಳಿದ್ದು, ಬೆಳಿಗ್ಗೆ ೬.೩೦ ರಿಂದ ಮಧ್ಯಾಹ್ನ ೧೨ರವರೆಗೆ, ಹಾಗೂ ಮಧ್ಯಾಹ್ನ ೧.೩೦ರಿಂದ ರಾತ್ರಿ ೮ ಗಂಟೆಯವರೆಗೆ ತೆರೆದಿಡಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "ವಿದ್ಯಾರ್ಥಿ ಭವನಕ್ಕೆ ೭೫ರ ಸಂಭ್ರಮ". Prajavani.net. ಪ್ರಜಾವಾಣಿ. Retrieved 15 August 2021.
  2. "ವಿದ್ಯಾರ್ಥಿ ಭವನಕ್ಕೆ ೭೫ರ ಸಂಭ್ರಮ". Prajavani.net. ಪ್ರಜಾವಾಣಿ. Retrieved 15 August 2021.
  3. "ವಿದ್ಯಾರ್ಥಿ ಭವನದ ಅಧಿಕೃತ ಜಾಲತಾಣ". ವಿದ್ಯಾರ್ಥಿ ಭವನ. Retrieved 15 August 2021.
  4. "75ರ ಸಂಭ್ರಮದಲ್ಲಿ ಗಾಂಧಿ ಬಜಾರ್ ವಿದ್ಯಾರ್ಥಿ ಭವನ". kannadaprabha.com. ಕನ್ನಡಪ್ರಭ. Retrieved 15 August 2021.
  5. "ಪರಂಪರೆಯ ರುಚಿಗೆ ೭೫". vijaykarnataka.com. ವಿಜಯ ಕರ್ನಾಟಕ ಆನ್‌ಲೈನ್. Retrieved 15 August 2021.