ವಿಷಯಕ್ಕೆ ಹೋಗು

ವಿಕ್ರಮ (ವಾರಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕ್ರಮ (ವಾರಪತ್ರಿಕೆ)
ಪ್ರಕಟಣೆ: ಬೆಂಗಳೂರು
ಈಗಿನ ಸಂಪಾದಕರು: ವೃಷಾಂಕ ಭಟ್
ಜಾಲತಾಣ: http://www.vikramaweekly.in/
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು
ವಿಕ್ರಮ

ವಿಕ್ರಮ ವಾರಪತ್ರಿಕೆಯು ಕನ್ನಡದ ಹಳೆಯ ವಾರಪತ್ರಿಕೆಗಳಲ್ಲಿ ಒಂದು. ರಾಷ್ಟ್ರೀಯ ವಿಚಾರಗಳನ್ನೊಳಗೊಂಡ ಸದಭಿರುಚಿಯ ಲೇಖನಗಳಿಂದ ಕೂಡಿದ ವಾರಪತ್ರಿಕೆ.

ಇತಿಹಾಸ ಮತ್ತು ಬೆಳವಣಿಗೆ

[ಬದಲಾಯಿಸಿ]

ವಿಕ್ರಮ ವಾರಪತ್ರಿಕೆಯು ರಾಷ್ಟ್ರೀಯ ಸ್ವಯಂಸೇವಕದ ವಿಚಾರಧಾರೆಗಳನ್ನು ಜನತೆಯ ಮುಂದಿಡುವ ಉದ್ದೇಶದಿಂದ ಆರಂಭವಾಯಿತು. ಸಂಘ 1925ರಲ್ಲಿ ಪ್ರಾರಂಭವಾದರೂ ಸಂಘ ಪರಿವಾರದ ವಿವಿಧ ಸಂಘಟನೆಗಳು ಆರಂಭವಾಗಿದ್ದು 1947ರ ಬಳಿಕ. ರಾಷ್ಟ್ರೀಯ ವಿಚಾರ, ಹಿಂದುತ್ವವನ್ನು ಪ್ರತಿಪಾದಿಸುವ ಪತ್ರಿಕೆಗಳು ಆಗ ತೀರಾ ವಿರಳವಾಗಿದ್ದವು. ಇಂತಹ ಸಂದರ್ಭದಲ್ಲಿ ಪತ್ರಿಕೆಗಳನ್ನು ಪ್ರಾರಂಭಿಸಬೇಕೆಂಬ ಸಂಘದ ಅಖಿಲ ಭಾರತೀಯ ನಿರ್ಣಯಕ್ಕೆ ಅನುಸಾರವಾಗಿ ದೆಹಲಿಯಲ್ಲಿ ‘ಆರ್ಗನೈಸರ್’ (ಇಂಗ್ಲಿಷ್), ಪಾಂಚಜನ್ಯ (ಹಿಂದಿ) ವಾರ ಪತ್ರಿಕೆಗಳು ಆರಂಭಗೊಂಡವು.

ಡಾ.ಕೇಶವ್ ಬಲಿರಾಮ್ ಹೆಡಗೇವಾರ್ ಅವರ ಮೂಲ ಚಿಂತನೆಗಳಲ್ಲಿ ಮೂರು ಪ್ರಮುಖವಾದವುಗಳು.

1) ಹಿಂದು ಸಂಘಟನೆ 2) ವೈಚಾರಿಕ ಜಾಗೃತಿ 3) ವ್ಯಕ್ತಿತ್ವ ನಿರ್ಮಾಣ

ಹಿಂದು ಸಂಘಟನೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕೆಲಸವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ವೈಚಾರಿಕ ಜಾಗೃತಿಯ ಜವಾಬ್ದಾರಿ ಇರುವುದು ಪತ್ರಿಕೆಗಳು ಮತ್ತು ಕೃತಿಗಳ ಹೆಗಲ ಮೇಲೆ. ಈ ಉದ್ದೇಶದಿಂದಲೇ 1948ರಲ್ಲಿ ವಿಕ್ರಮ ವಾರಪತ್ರಿಕೆ ಸ್ಥಾಪನೆಯಾಯಿತು. ಆದರೆ ಪತ್ರಿಕೆಯನ್ನು ಮುನ್ನಡೆಸಲು ಆಗಿನ ದಿನಗಳಲ್ಲಿ ಹಣದ ತೀವ್ರ ಕೊರತೆ. ತುಂಬಾ ಕಷ್ಟದ ದಿನಗಳು ಅವು. ಪತ್ರಿಕೆಯನ್ನು ಮುನ್ನಡೆಸುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ಸಂಘದ ಹಿರಿಯರು ತಲುಪಿದ್ದರು. ಪತ್ರಿಕೆಯನ್ನು ನಿಲ್ಲಿಸಿಬಿಡಬೇಕು ಎಂಬ ತೀರ್ಮಾನಕ್ಕೂ ಬಂದಾಗಿತ್ತು. ಆಗ ಪ್ರಾಂತದ ನಿಧಿ ಪ್ರಮುಖ್ ಆಗಿದ್ದ ಗದಗದ ಮಾಮಾ ಖರೆ ಎನ್ನುವವರು, ‘ನನಗೊಬ್ಬ ವ್ಯಕ್ತಿಯ ಪರಿಚಯವಿದೆ. ಅವರನ್ನು ಕರೆತಂದರೆ ಪತ್ರಿಕೆಯನ್ನು ಮುನ್ನಡೆಸಬಹುದೆಂಬ ವಿಶ್ವಾಸವಿದೆ. ಒಂದು ಅವಕಾಶ ಕೊಡಿ’ ಎಂದು ಕೋರಿದರು. ಸಂಘ ಸಮ್ಮತಿಸಿತು. ಮಾಮಾ ಖರೆ ನೇರವಾಗಿ ಗದಗ್ ಗೆ ಹೋಗಿ, ಅಲ್ಲಿ ಬ್ಯಾಂಕ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಕಳದ ಶ್ರೀ ಬೆ.ಸು.ನಾರಾಯಣ ಮಲ್ಯ ಅವರನ್ನು ಭೇಟಿ ಮಾಡಿ, ವಿಕ್ರಮ ಪತ್ರಿಕೆಯ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಕೇಳಿದರು.ಮಲ್ಯರಿಗೆ ಬ್ಯಾಂಕ್ ನಲ್ಲಿ ಆಗ ಪದೋನ್ನತಿ ಸಿಗುವುದರಲ್ಲಿತ್ತು. ಬ್ಯಾಂಕ್ ಅಧಿಕಾರಿಯಾಗಿ ಕೈತುಂಬಾ ಸಂಬಳ ಪಡೆಯುವ ಕ್ಷಣವದು. ಆದರೆ ಮಾಮಾ ಖರೆ ಅವರ ಕಳಕಳಿಯ ಕೋರಿಕೆ ಮಲ್ಯರ ಮೇಲೆ ಗಾಢ ಪ್ರಭಾವ ಬೀರಿತು. ಹಿಂದೆಮುಂದೆ ಯೋಚಿಸದೆ ಅವರು ಕೈತುಂಬಾ ಸಂಬಳ ತರುವ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ, ವಿಕ್ರಮ ಪತ್ರಿಕೆಯನ್ನು ಕಟ್ಟಿ ಬೆಳೆಸಲು ಬೆಂಗಳೂರಿಗೆ ಬಂದರು.

ಬೆ.ಸು.ನಾ.ಮಲ್ಯ

ಅದು 50ರ ದಶಕ. ರಾಷ್ಟ್ರೀಯ ವಿಚಾರಗಳನ್ನು ಪ್ರಖರವಾಗಿ ಪ್ರತಿಪಾದಿಸುವ ವಾರಪತ್ರಿಕೆ ವಿಕ್ರಮ ಆರ್ಥಿಕ ಮುಗ್ಗಟ್ಟಿನಿಂದ ಉಸಿರುಕಟ್ಟಿ, ನಿಂತೇ ಹೋಗುವ ದುಃಸ್ಥಿತಿ ತಲುಪಿತ್ತು. ಬೆಂಗಳೂರಿಗೆ ಬಂದಿಳಿದ ಮಲ್ಯರಿಗೆ ವಿಕ್ರಮ ಕಛೇರಿಯಲ್ಲಿ ಕಂಡಿದ್ದು – ಅಂಚೆಗೆ ಹೋಗದ ಹಿಂದಿನ ವಾರದ ರಾಶಿ ರಾಶಿ ವಿಕ್ರಮ ಪತ್ರಿಕೆಯ ಬಂಡಲ್ ಗಳು. ಮೊದಲು ಅವುಗಳನ್ನು ತಮ್ಮದೇ ಹಣ ಖರ್ಚು ಮಾಡಿ ಅಂಚೆ ಮೂಲಕ ಓದುಗರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಪತ್ರಿಕೆಯ ಮುದ್ರಣಕ್ಕೆ ಅಗತ್ಯವಿರುವ ಮುದ್ರಣ ಕಾಗದವನ್ನು ಸೈಕಲ್ ಮೇಲೆ ಹೇರಿಕೊಂಡು ಹೋಗುವ ಕೆಲಸದಿಂದ ಹಿಡಿದು ಕಛೇರಿ ಗುಡಿಸುವ ಕೆಲಸ, ಸುದ್ದಿ ಲೇಖನಗಳನ್ನು ಬರೆದು ಸಂಪಾದಿಸುವ ಕೆಲಸ, ಜಾಹೀರಾತು ಸಂಗ್ರಹ, ಲೆಕ್ಕಪತ್ರ ನಿರ್ವಹಣೆ, ಏಜೆಂಟರ ನಿಯುಕ್ತಿ… ಹೀಗೆ ಎಲ್ಲಾ ಕೆಲಸಗಳನ್ನು ಒಬ್ಬರೇ ನಿರ್ವಹಿಸುತ್ತಾ ಪತ್ರಿಕೆಯನ್ನು ಬೆಳೆಸಿದರು. ಊರೂರು ಅಲೆದು ಪರಿಚಯಸ್ಥರನ್ನು ಕಾಡಿಬೇಡಿ ಜಾಹೀರಾತು ಸಂಗ್ರಹಿಸಿ, ವಿಶೇಷಾಂಕ ಪ್ರಕಟಿಸಿ ವಿಕ್ರಮಕ್ಕೆ ಜೀವ ತುಂಬಿದರು. ಕ್ರಮೇಣ ಕೇಸರಿ ಪ್ರೆಸ್ ಖರೀದಿಸಿ ಚಾಮರಾಜ ಪೇಟೆಯ 5ನೇ ಮುಖ್ಯರಸ್ತೆಯಲ್ಲಿ ಒಂದು ಕಟ್ಟಡವನ್ನು 45,000 ರೂ. ಮೊತ್ತಕ್ಕೆ ಖರೀದಿಸಿ ವಿಕ್ರಮಕ್ಕೊಂದು ಸ್ವಂತಿಕೆ, ಸ್ವಾವಲಂಬನೆ ತಂದುಕೊಟ್ಟರು. ಹೀಗೆ ಮಲ್ಯರು ಪತ್ರಿಕೆಯ ಜವಾಬ್ದಾರಿ ಕೈಗೆ ತೆಗೆದುಕೊಂಡ ಬಳಿಕ 43 ವರ್ಷಗಳ ಕಾಲ ಹಿಂತಿರುಗಿ ನೋಡದೆ ಸೇವೆ ಸಲ್ಲಿಸುತ್ತಾ ಪತ್ರಿಕೆಯನ್ನು ಕಟ್ಟಿಬೆಳೆಸಿದ್ದು ಈಗ ಇತಿಹಾಸ. ತನ್ನ 26ರ ಹರೆಯದಲ್ಲಿ ಪತ್ರಿಕಾ ಸಂಪಾದಕರಾಗಿ ನಿರಂತರ 43 ವರ್ಷ ಆ ಜವಾಬ್ದಾರಿ ನಿರ್ವಹಿಸಿದ್ದು ಮಲ್ಯರ ಹೆಗ್ಗಳಿಕೆ.

ವಿಕ್ರಮ ಸಂಘ ಪರಿವಾರದ ಪತ್ರಿಕೆಯಾಗಿದ್ದರೂ ತನ್ನ ಸ್ನೇಹಶೀಲ ವ್ಯಕ್ತಿತ್ವದಿಂದ ಮಲ್ಯರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್, ಗುಂಡೂರಾವ್, ರಾಮಕೃಷ್ಣ ಹೆಗಡೆ, ದೇವರಾಜ್ ಅರಸು ಹಾಗೂ ಇನ್ನಿತರ ಗಣ್ಯರ ಜೊತೆ ಘನಿಷ್ಠ ಸಂಬಂಧವಿರಿಸಿಕೊಂಡಿದ್ದರು. ಜೊತೆಗೆ ಪತ್ರಿಕಾ ಅಕಾಡೆಮಿ ಸದಸ್ಯತ್ವ, ಪತ್ರಿಕಾ ಮಾನ್ಯತಾ ಸಮಿತಿಯ ಸದಸ್ಯರು, ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರೂ ಆಗಿದ್ದ ಮಲ್ಯರು ಆಗಿನ ಕಾಲದಲ್ಲಿ ಅತ್ಯಂತ ಪ್ರಭಾವೀ ಪತ್ರಕರ್ತರೇ ಆಗಿದ್ದರು. ಆದರೆ ಅವರು ತಮಗಿರುವ ಪ್ರಭಾವವನ್ನು ಸ್ವಾರ್ಥಕ್ಕೆ ಎಂದಿಗೂ ಬಳಸಿಕೊಳ್ಳಲಿಲ್ಲವೆನ್ನುವುದು ಮಹತ್ವದ ಸಂಗತಿ. ಕೊನೆಯವರೆಗೂ ಪ್ರಾಮಾಣಿಕ ಸರಳ ಬದುಕು ನಡೆಸಿ, ವಿಕ್ರಮ ಪತ್ರಿಕೆಯ ಬೆಳವಣಿಗೆಗಾಗಿ ತಪಸ್ವಿಯಂತೆ ದುಡಿದರು. ವಿಕ್ರಮ ಪತ್ರಿಕೆಯನ್ನು ನಾಡಿನ ಗಣ್ಯರು, ರಾಜಕಾರಣಿಗಳು, ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರವಂತರು… ಹೀಗೆ ಎಲ್ಲರೂ ಗಂಭೀರವಾಗಿ ಗಮನಿಸುವಂತೆ ಮಾಡಿದ್ದು ಮಲ್ಯರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ವಿಕ್ರಮದ ಮೊದಲ ಸಂಚಿಕೆ

ಹೊರಕೊಂಡಿಗಳು

[ಬದಲಾಯಿಸಿ]
  1. https://samvada.org/2013/others/vikrama-a-review/ Archived 2020-07-25 ವೇಬ್ಯಾಕ್ ಮೆಷಿನ್ ನಲ್ಲಿ.
  2. https://samvada.org/2013/articles/dgl-vikrama/ Archived 2020-07-25 ವೇಬ್ಯಾಕ್ ಮೆಷಿನ್ ನಲ್ಲಿ.