ವಿಕ್ರಂ ಸಂಪತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕ್ರಮ್ ಸಂಪತ್
ಜನನ
ವಿಕ್ರಮ್

ಬೆಂಗಳೂರು
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆ('ರಾಜಾಸ್ಥಾನದ ಬಿಟ್ಸ್ ಪಿಲಾನಿ'ಯಲ್ಲಿ)ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ, ಗಣಿತದಲ್ಲಿ ಸ್ನಾತಕೋತ್ತರ ಪದವಿ, ಎಂ.ಬಿ.ಎ ಪದವಿ(ಮುಂಬಯಿ)
ಹಳೆ ವಿದ್ಯಾರ್ಥಿ'ಶ್ರೀ ಅರಬಿಂದೋ ಶಾಲೆ' ಮತ್ತು 'ಬಿಷಪ್ ಕಾಟನ್ ಬಾಲಕರ ಶಾಲೆ'ಗಳಲ್ಲಿ ಶಿಕ್ಷಣ.
ಉದ್ಯೋಗಸಾಂಸ್ಕೃತಿಕ ಸಂಶೋಧನಾ ಬರಹಗಾರರು, ದೆಹಲಿಯಲ್ಲಿ ಜಿ.ಇ.ಮನಿ ಕಂಪೆನಿ,ಸಿಟಿ ಬ್ಯಾಂಕಿನ ಎಚ್‌.ಪಿ.(ಇಂಡಿಯಾ)ಸಂಸ್ಥೆಯಲ್ಲಿ ತಾಂತ್ರಿಕ ಕೂಟದ ಮುಂದಾಳು
ಇದಕ್ಕೆ ಖ್ಯಾತರು’’ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಒಡೆಯರ್ಸ್’’’, 'ಮೈ ನೇಮ್ ಈಸ್ ಗೌಹಾರ್ ಜಾನ್,' ದಿ ಲೈಫ್ ಆ್ಯಂಡ್ ಟೈಮ್ಸ ಆಫ್ ಎ ಮ್ಯುಸಿಷಿಯನ್'
ಜಾಲತಾಣwww.vikramsampath.com

ವಿಕ್ರಮ್ ಸಂಪತ್ (೧೯೭೯) ಇಂದಿನ ಯುವಪೀಳಿಗೆಯಲ್ಲಿನ ಅಪೂರ್ವ ಸಾಂಸ್ಕೃತಿಕ ಸಂಶೋಧನಾಸಕ್ತ ಬರಹಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅವರನ್ನು ಮೊದಲು ಹೆಚ್ಚಾಗಿ ಆಕರ್ಷಿಸಿದ್ದು, ಮೈಸೂರಿನ ರಾಜಮನೆತನದ ಸುದೀರ್ಘ ಇತಿಹಾಸ. ನಂತರ ಭಾರತೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ವ್ಯಕ್ತಿ ಚಿತ್ರಗಳು, ಇತ್ಯಾದಿ.

ಬಾಲ್ಯ ಮತ್ತು ವಿದ್ಯಾರ್ಜನೆ[ಬದಲಾಯಿಸಿ]

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಸಂಪತ್ ಅವರು ಶ್ರೀ ಅರಬಿಂದೋ ಶಾಲೆ ಮತ್ತು ಬಿಷಪ್ ಕಾಟನ್ ಬಾಲಕರ ಶಾಲೆಗಳಲ್ಲಿ ಶಿಕ್ಷಣ ಪಡೆದರು. ಕೇಂದ್ರೀಯ ಶಾಲೆಯಲ್ಲಿ ಅಧ್ಯಯನ ಮಾಡಿದ ವಿಕ್ರಮ್ ೧೨ನೇ ತರಗತಿಯಲ್ಲಿದ್ದಾಗ ಹಿಂದಿ ಭಾಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದು ಕೊಂಡಿದ್ದರು. ಹೀಗೆ ತಮ್ಮ ಬಾಲ್ಯದ ದಿನಗಳಲ್ಲೇ ಪ್ರತಿಭಾವಂತ ರಾಗಿದ್ದ ವಿಕ್ರಮ್ ಸಂಪತ್ ರಾಜಸ್ತಾನದ ಪಿಲಾನಿಯಲ್ಲಿನ ಪ್ರಸಿದ್ಧ ಬಿಐಟಿಎಸ್ (ಬಿಟ್ಸ್ ಪಿಲಾನಿ) ಶಿಕ್ಷಣ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಮತ್ತು ಗಣಿತದಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿ ಕೊಂಡರಲ್ಲದೆ, ಮುಂಬಯಿನಲ್ಲಿ ಹಣಕಾಸಿನ ವಿಷಯದಲ್ಲಿನ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಉದ್ಯೋಗ[ಬದಲಾಯಿಸಿ]

ದೆಹಲಿಯಲ್ಲಿ ಜಿ.ಇ.ಮನಿ ಕಂಪೆನಿಯಲ್ಲಿ ಔದ್ಯೋಗಿಕ ಬದುಕು ಪ್ರಾರಂಭಿಸಿದ ವಿಕ್ರಮ್ ಸಂಪತ್, ಕೆಲ ಕಾಲ ಸಿಟಿ ಬ್ಯಾಂಕಿನಲ್ಲಿ ಕೆಲಸ ಮಾಡಿದ ನಂತರ, ಪ್ರಸಕ್ತದಲ್ಲಿ ಎಚ್‌ಪಿ ಇಂಡಿಯಾ ಸಂಸ್ಥೆಯಲ್ಲಿ ತಾಂತ್ರಿಕ ಕೂಟದ ಮುಂದಾಳುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಗೀತ ಮತ್ತು ಸಂಸ್ಕೃತಿಗಳ ಬಗ್ಗೆ[ಬದಲಾಯಿಸಿ]

ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ, ಉತ್ತಮ ಉದ್ಯೋಗ ಸಂಪಾದನೆ ಮಾಡಿ ಐಷಾರಾಮಿ ಬದುಕೆಂಬುದು ಇಂದಿನ ಯುಗದವರ ಪ್ರಾಪಂಚಿಕ ಆಶಯ. ಇವೆಲ್ಲವನ್ನೂ ವಿಕ್ರಮ್ ಸಂಪತ್ ಸಾಧಿಸಿದ್ದಾರಾದರೂ ಅವರಿಗೆ ಅಷ್ಟಕ್ಕೇ ತೃಪ್ತಿ ಹುಟ್ಟಲಿಲ್ಲ. ತಮ್ಮ ತಾಂತ್ರಿಕ ಕೆಲಸಕ್ಕೆ ಅವಶ್ಯಕವಾದ ನಿಷ್ಠೆಯ ಕೊಡುಗೆ ಕೊಟ್ಟ ನಂತರದಲ್ಲಿ ವಿಕ್ರಮ್ ಸಂಪತ್ ಸಂಸ್ಕೃತಿ, ಸಂಗೀತಗಳನ್ನು ಅರಸುತ್ತ ಹೋಗುತ್ತಾರೆ. ಈ ಅರಸುವಿಕೆಯಲ್ಲಿ ಅವರಿಂದ ಈಗಾಗಲೇ ಮೂರು ಅಪರೂಪದ ಮತ್ತು ಮಹತ್ವದ ಕೃತಿಗಳು ಮೂಡಿ ಬಂದಿವೆ.

ಗೌಹಾರ್ ಜಾನ್[ಬದಲಾಯಿಸಿ]

 • ಒಮ್ಮೆ ವಿಕ್ರಮ್ ಸಂಪತ್ತರು ಮೈಸೂರಿನ ಗ್ರಂಥಾಲಯದಲ್ಲಿ ಮಾಹಿತಿಗಳ ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದದ್ದು 'ಗೌಹಾರ್ ಜಾನ್'[೧] ಎಂಬ ದುರಂತ ವ್ಯಕ್ತಿತ್ವದ ಕುರಿತ ಪುಟ್ಟ ಬರಹ. ಭಾರತದಲ್ಲಿ ಮೊದಲ ಬಾರಿಗೆ ಗ್ರಾಮಾಫೋನ್‌ಗೆ ಹಾಡಿದ ಗಾಯಕಿಯಾದ,'ಗೌಹಾರ್ ಜಾನ್' ಮೈಸೂರಿನಲ್ಲಿ ದುರಂತ ಅಂತ್ಯ ಕಂಡರು, ಎಂಬ ಸಂಗತಿ ವಿಕ್ರಮ್‌ರನ್ನು ಕಾಡಿಸಿತು.
 • 'ಗಾಯಕಿ ಗೌಹಾರ್ ಜಾನ್ ಜೀವನ ಚರಿತ್ರೆ'ಯನ್ನು ಶೋಧಿಸ ಹೊರಟ ವಿಕ್ರಮ್ ಸಂಪತ್ ತಮ್ಮ ಶ್ರಮಭರಿತ ಪರ್ಯಟನೆಯಲ್ಲಿ ಕಂಡುಕೊಂಡ ಅಪೂರ್ವ ಜಗತ್ತೇ ಅವರಿಂದ`ಮೈ ನೇಮ್ ಈಸ್ ಗೌಹಾರ್ ಜಾನ್! ದಿ ಲೈಫ್ ಆ್ಯಂಡ್ ಟೈಮ್ಸ ಆಫ್ ಎ ಮ್ಯುಸಿಷಿಯನ್' [೨] ಎಂಬ ಕೃತಿ ಕುಸುಮವಾಗಿ ಹೊರ ಹೊಮ್ಮಿಸಿದೆ.
 • ಗೌಹಾರ್ ಜಾನ್ ಹುಟ್ಟಿದ್ದು ಉತ್ತರ ಪ್ರದೇಶದ ಅಸಲ್‌ಘಾಟ್‌ ಎಂಬಲ್ಲಿ. ಮೂಲತಃ ಹಿಂದೂಸ್ತಾನಿ ಗಾಯಕಿಯಾದ ಆಕೆ ನವಾಬರ ಆಸ್ಥಾನದಲ್ಲಿ ಹಾಡುತ್ತಿದ್ದರು. ಈ ನಂಟು ಹುಡುಕಿ ಕೊಂಡು ಅಲ್ಲಿಗೆ ತೆರಳಿದ ವಿಕ್ರಮ್, ಅಲ್ಲಿನ ರಾಜಮನೆತನಕ್ಕೆ ಸೇರಿದ ಗ್ರಂಥಾಲಯಗಳಲ್ಲಿ ವಾರಗಟ್ಟಲೆ ಹುಡುಕಿದರೂ ಬೇಕಾದ ಮಾಹಿತಿ ಸಿಗಲಿಲ್ಲ. ಆಗ ಅಲ್ಲಿ ಚುನಾವಣೆಯ ಕಾವು ಬೇರೆ. ಸುಡುಬಿಸಿಲಿನಲ್ಲಿ ಗೌಹಾರ್ ಓಡಾಡಿದ ಜಾಗವನ್ನೆಲ್ಲಾ ಸುತ್ತಿದರು. ಗೌಹಾರ್ ಜೊತೆಯಲ್ಲಿದ್ದ ಕಲಾವಿದೆಯೊಬ್ಬರು ಇನ್ನೂ ಬದುಕಿದ್ದಾರೆ ಎಂಬ ಸಂಗತಿ ಕಿವಿಗೆ ಬಿದ್ದೊಡನೆ ಅವರಲ್ಲಿ ರೋಮಾಂಚನವಾಯಿತು.
 • ೧೧೦ ವರ್ಷದ ಅಜ್ಜಿಯ ಬಳಿ ಮಾಹಿತಿ ಕಲೆ ಹಾಕುವುದು ಸುಲಭದ ಮಾತಾಗಿರಲಿಲ್ಲ. ವಾರಗಟ್ಟಲೆ ಕಾಡಿ ಬೇಡಿದ ಬಳಿಕವಷ್ಟೇ ಅವರು ಗೌಹಾರ್ ಬಗ್ಗೆ ಒಂದಷ್ಟು ವಿವರ ನೀಡಲು ಒಪ್ಪಿಕೊಂಡರು. ಗೌಹಾರ್ ಮತ್ತು ನವಾಬನ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಗೌಹಾರ್ ಊರನ್ನು ತೊರೆದರೆಂದೂ, ನವಾಬ ಅವರ ಕುರಿತು ಇದ್ದ ದಾಖಲಾತಿಗಳನ್ನೆಲ್ಲಾ ನಾಶ ಪಡಿಸಿದನೆಂದೂ ಅಜ್ಜಿಯಿಂದ ತಿಳಿದಾಗ ನಿರಾಸೆ ಉಂಟಾದರೂ ಉತ್ಸಾಹ ಕುಂದಲಿಲ್ಲ.
 • ಗೌಹಾರ್‌ರ ಜಾಡು ಹಿಡಿದು ಅವರು ಉತ್ತರ ಭಾರತವನ್ನೆಲ್ಲ ಸುತ್ತಿದರು. ಬಂಗಾಳ, ಅಲಹಾಬಾದ್, ಮುಂಬಯಿ, ದೆಹಲಿ ಹೀಗೆ ಅವರ ಹೆಜ್ಜೆಗಳನ್ನು ಹಿಂಬಾಲಿಸಿದರು. ಅಲ್ಲಿನ ಭಾಷಿಗರ ಸಹಾಯದಿಂದ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಓದಿಸಿ ಬರೆದು ಕೊಂಡರು. ಅಮೆರಿಕದವರಾದ ಗೌಹಾರ್ ಜಾನ್‌ರ ಮೂಲ ಹೆಸರು ಈಲೀನ್ ಏಂಜಲೀನಾ ಯೂವಾರ್ಡ್. ಭಾರತಕ್ಕೆ ಬಂದ ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಆಕೆಯ ತಾಯಿ ಉರ್ದು ಕವಯತ್ರಿ.
 • ೧೯೦೨ ರಲ್ಲಿ ಜರ್ಮನಿಯ ಗ್ರಾಮಾಫೋನ್ ಕಂಪೆನಿಯೊಂದು ಭಾರತದಲ್ಲಿ ಗ್ರಾಮಾಫೋನಿಗಾಗಿ ಸಂಗೀತವನ್ನು ಮುದ್ರಿಸಿಕೊಳ್ಳಲು ಆಗಮಿಸಿತು. ಆಗ ಮೊದಲ ಬಾರಿಗೆ ಗ್ರಾಮಾಫೋನಿಗೆ ದನಿ ನೀಡಿದ್ದು ಗೌಹಾರ್ ಜಾನ್. ಆಕೆಯ ಜನಪ್ರಿಯತೆ ಎಷ್ಟಿತ್ತೆಂದರೆ ಆಸ್ಟ್ರಿಯಾದಲ್ಲಿ ಅವರ ಚಿತ್ರ ಹೊತ್ತ ಬೆಂಕಿಪೊಟ್ಟಣಗಳೂ ತಯಾರಾಗಿದ್ದುವಂತೆ. ತುಮ್ರಿ, ದಾದ್ರಾ, ಘಜಲ್ ಪ್ರಾಕಾರಗಳನ್ನು ಜನಪ್ರಿಯಗೊಳಿಸಿದ ಪ್ರಮುಖರಲ್ಲಿ ಗೌಹಾರ್ ಕೂಡ ಒಬ್ಬರು.
 • ಗೌಹಾರ್ ಕುರಿತ ಮಾಹಿತಿ ಕಲೆ ಹಾಕಲು ವಿಕ್ರಮ್ ಲಂಡನ್, ಜರ್ಮನಿಗಳಿಗೂ ತೆರಳಿದರು. ಭಾರತಕ್ಕಿಂತಲೂ ಅವರಿಗೆ ಮಹತ್ವದ ವಿಷಯಗಳು ಸಿಕ್ಕಿದ್ದು ವಿದೇಶಿ ನೆಲದಲ್ಲಿ. ಗೌಹಾರ್ ಹಾಡಿದ ಗ್ರಾಮಾಫೋನ್ ತಟ್ಟೆಗಳನ್ನು ಅರಸುವ ಕಾಯಕವನ್ನೂ ಜೊತೆಯಲ್ಲಿಯೇ ನಡೆಸಿದರು. ಹಳೆಕಾಲದ ಮನೆಗಳಲ್ಲಿ, ರದ್ದಿ ಅಂಗಡಿ, ಬಜಾರುಗಳಲ್ಲಿ ಹೀಗೆ ಗಲ್ಲಿ ಗಲ್ಲಿ ಅಲೆದ ವಿಕ್ರಮ್ ಶತಮಾನಗಳ ಹಿಂದಿನ ಗ್ರಾಮಾಫೋನ್ ಮುದ್ರಿಕೆಗಳನ್ನು ಸಂಪಾದಿಸುವಲ್ಲಿ ಯಶಸ್ವಿಯೂ ಆದರು.
 • ಆ ಕಾಲದಲ್ಲಿಯೇ ಒಂದು ಹಾಡಿಗೆ ಮೂರು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಗೌಹಾರ್ ಮೈಸೂರಿಗೆ ಬಂದು ಯಾತನಾಮಯ ಅಂತ್ಯ ಕಂಡದ್ದು ಯಾಕೆನ್ನುವುದು ನಿಗೂಢ ವಾಗಿಯೇ ಉಳಿಯಿತು. ಪ್ರತಿ ಹಾಡಿನ ಕೊನೆಯಲ್ಲಿಯೂ ಅವರು `ಮೈ ನೇಮ್ ಈಸ್ ಗೌಹಾರ್ ಜಾನ್' ಎಂದು ಪ್ರಕಟಿಸುತ್ತಿದ್ದರು. ಹೀಗಾಗಿ ವಿಕ್ರಮ್ ಅದನ್ನೇ ಪುಸ್ತಕದ ಶೀರ್ಷಿಕೆಗೆ ಬಳಸಿದರು.
 • ಶ್ಯಾಮ್ ಬೆನಗಲ್, ರಾಜಶ್ರೀ ಬಿರ್ಲಾ, ಪಂಡಿತ್ ಜಸ್‌ರಾಜ್, ಪಂಡಿತ್ ಉಸ್ತಾದ್ ಅಮ್ಜದ್ ಅಲಿಖಾನ್‌ರಂಥ ಗಣ್ಯರಿಂದ ವಿಕ್ರಮ್ ಬರಹಕ್ಕೆ ಪ್ರಶಂಸೆ ಸಂದಿತು. ಈ ಪುಸ್ತಕ ವಿಕ್ರಮ್ ಅವರಿಗೆ ಸಂಗೀತ ಕ್ಷೇತ್ರದ ಇತಿಹಾಸದ ಮಹತ್ವದ ಸಂಶೋಧನೆಗಾಗಿ ೨೦೧೧ ರಲ್ಲಿ ನ್ಯೂಯಾರ್ಕ್‌ನ ಎಆರ್‌ಎಸ್‌ಸಿ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ ತಂದುಕೊಟ್ಟರೆ, ೨೦೧೨ ರಲ್ಲಿ ಸಾಹಿತ್ಯ ಅಕಾಡೆಮಿಯ ಮೊದಲ ಯುವ ಪುರಸ್ಕಾರ ಪ್ರಶಸ್ತಿ ಒಲಿದು ಬಂತು.

ಮೈಸೂರು ಅರಸರ ವಂಶದ ಇತಿಹಾಸದ ಬಗ್ಗೆ ಒಲವು[ಬದಲಾಯಿಸಿ]

 • ದೂರದರ್ಶನದಲ್ಲಿ `ಸೋರ್ಡ್ ಆಫ್ ಟಿಪ್ಪು ಸುಲ್ತಾನ್' ಧಾರಾವಾಹಿ ಪ್ರಸಾರವಾಗುತ್ತಿದ್ದ ದಿನಗಳವು. ನಾವು ಓದಿದ, ಕೇಳಿದ ಮೈಸೂರು ರಾಜಮನೆತನದ ಇತಿಹಾಸ ಒಂದು ಬಗೆಯಾದರೆ, 'ಕಿರುತೆರೆಯ ಧಾರಾವಾಹಿ'ಯಲ್ಲಿ ತೋರಿಸುತ್ತಿದ್ದ ಒಡೆಯರ್ ಆಡಳಿತ ಚಿತ್ರಣವೇ ಬೇರೆಯಾಗಿತ್ತು. ಈ ಕುರಿತು ಅಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆ ದಿದ್ದವು. ಆಗಿನ್ನೂ ಏಳನೇ ತರಗತಿಯಲ್ಲಿದ್ದ ಬಾಲಕ 'ವಿಕ್ರಮ್ ಸಂಪತ್ತ'ರಲ್ಲಿ ಈ ಕುರಿತಾದ ಕುತೂಹಲ ಚಿಗುರೊಡೆದಿತ್ತು.
 • ಆಗ ಅವರ ಮನದಲ್ಲಿದ್ದದ್ದು ಕಿರು ತೆರೆಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ಲೇವಡಿಗೆ ತುತ್ತಾದ ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರ್, ಮತ್ತು ರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ಕಾಲಘಟ್ಟ. ಎಲ್ಲ ಪ್ರಸಿದ್ಧ ಗ್ರಂಥಾಲಯಗಳಲ್ಲಿದ್ದ ಭಂಡಾರವನ್ನೆಲ್ಲಾ ಜಾಲಾಡಿದರೂ, ಏನೋ ಹೇಳಲಾರದ ಅಪೂರ್ಣತೆ ಅವರ ಹೃದಯದಲ್ಲಿ ಬಾಧಿಸತೊಡಗಿತ್ತು. ಇದಕ್ಕಾಗಿ ಅವರು ಅರಮನೆ,ಗ್ರಂಥಾಲಯಗಳು, ವಸ್ತು-ಸಂಗ್ರಹಾಲಯಗಳು, ಹೀಗೆ ಎಲ್ಲಾ ಮಾಹಿತಿತಾಣಗಳನ್ನು ಜಾಲಾಡತೊಡಗಿದರು.
 • ಈ ಮಹಾನ್ ಅಧ್ಯಯನದಿಂದ ಮೈಸೂರು ರಾಜ ವಂಶಸ್ಥರ ಬಗ್ಗೆ ಇದುವರೆಗೆ ಓದಿರುವ ಪುಸ್ತಕಗಳಲ್ಲಿಲ್ಲದ ಅನೇಕ ಸಂಗತಿಗಳು ಕತ್ತಲಲ್ಲೇ ಉಳಿದಿವೆ ಎಂಬ ಸತ್ಯ ವಿಕ್ರಮ್ ಸಂಪತ್ತರ ಅರಿವಿಗೆ ಬಂತು. ಒಬ್ಬ ಮಹಾರಾಜರ ಕುರಿತು ಹೊತ್ತಿಕೊಂಡ ಆಸಕ್ತಿ ಇಡೀ ರಾಜ ಮನೆತನದತ್ತ ವ್ಯಾಪಿಸಿತು. ಒಂದೆರಡಲ್ಲ, ಹತ್ತಾರು ವರ್ಷ ಅಧ್ಯಯನ ಸಾಗಿತು. ಒಡೆಯರ್ ರಾಜ ಮನೆತನದ ಸಾಂಸ್ಕೃತಿಕ ಕೊಡುಗೆಗಳನ್ನು ಹೊತ್ತ ಕೃತಿಯೂ ರಚನೆಯಾಯಿತು. ‘’’ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಒಡೆಯರ್ಸ್ ’’’ ಮೈಸೂರು ಒಡೆಯರ್ ರಾಜ ಮನೆತನದ ಕಲೆ, ಸಾಹಿತ್ಯ, ಸಂಸ್ಕೃತಿ, ಆಡಳಿತ ಕೊಡುಗೆಗಳ ಕುರಿತ ಮಹತ್ವದ ವಿಚಾರಗಳನ್ನು ತೆರೆದಿಟ್ಟಿತು.

ವಿವಾದಗಳ ವೀಣಾ ವಿದ್ವಾಂಸರ ಆಂತರ್ಯದ ಧ್ವನಿ[ಬದಲಾಯಿಸಿ]

 • ಸಂಗೀತ ಕ್ಷೇತ್ರದ ದಿಗ್ಗಜರಲ್ಲೊಬ್ಬರಾದ ವೀಣಾ ಬಾಲಚಂದರ್ ಅವರು ತಮ್ಮ ಮಹಾನ್ ವಿದ್ವತ್ತಿಗಷ್ಟೇ ಅಲ್ಲದೆ ವಿವಾದಕ್ಕೂ ಹೆಸರಾದವರು. ಈ ವಿವಾದಿತ ವೀಣಾ ವಿದ್ವಾಂಸ ಎಸ್. ಬಾಲಚಂದರ್ ಅವರ ಆಂತರ್ಯದ ಧ್ವನಿಯನ್ನು ಮೀಟ ಹೊರಟ ವಿಕ್ರಮ್ ಸಂಪತ್ತರಿಂದ ಹೊರಬಂದ ನಾದವೇ `ವಾಯ್ಸ ಆಫ್ ವೀಣಾ: ಎಸ್. ಬಾಲಚಂದರ್, 'ಎ ಬಯಾಗ್ರಫಿ' ಎಂಬ ಅಪೂರ್ವ ಕೃತಿಯಾಗಿದೆ. [೩]
 • ಈ ಕೃತಿ ಮೂಡಿಬಂದ ಸಂದರ್ಭದಲ್ಲಿ ಚೆನ್ನೈನಲ್ಲಿ ಅವರ ವಿಕ್ರಮ್ ಸಂಪತ್ತರ ಕುರಿತು ಪ್ರತಿಭಟನೆಯೂ ನಡೆಯಿತು. "ಇತಿಹಾಸ ರಾಜಕೀಯ ವ್ಯವಸ್ಥೆಯ ಕಾರಣದಿಂದ ತಿರುಚಿ ಕೊಂಡಿದೆ. ಕೆಲವು ಸತ್ಯಗಳನ್ನು ಬರೆಯಲು ಸಾಧ್ಯವಾಗದ ಪರಿಸ್ಥಿತಿ ಈಗಿನದು. ಸಂಗೀತ ಕ್ಷೇತ್ರದ ಇತಿಹಾಸವೂ ಇದರಿಂದ ಹೊರತಲ್ಲ. ಅಧ್ಯಯನದಲ್ಲಿ ತಿಳಿದುಕೊಂಡ ಸತ್ಯವನ್ನು ಯಾವ ಮುಲಾಜಿಗೂ ಒಳಗಾಗದೆ ನೇರವಾಗಿ ಬರೆಯುತ್ತೇನೆ. ವಿರೋಧಗಳನ್ನು ಲೆಕ್ಕಿಸುವುದಿಲ್ಲ. ಏಕೆಂದರೆ ಇವು ನಮ್ಮ ಅಮೂಲ್ಯ ರಾಷ್ಟ್ರೀಯ ಸಂಪತ್ತು" ಎನ್ನುತ್ತಾರೆ ವಿಕ್ರಮ್ ಸಂಪತ್.

ಸಂಗೀತ ಸಾಧನೆ[ಬದಲಾಯಿಸಿ]

 • ವಿಕ್ರಮ್‌ ಸಂಪತ್ತರ ಆಸಕ್ತಿ ಅನುಭವಗಳು ಮೂರು ಪುಸ್ತಕಗಳಿಗೆ ಸೀಮಿತವಲ್ಲ. ಮೂವತ್ತಮೂರರ ಹರೆಯದಲ್ಲಿಯೇ ಅವರ ಹೆಜ್ಜೆಗಳು ಸಾಗಿದ ಹಾದಿ ಬೆರುಗು ಹುಟ್ಟಿಸುವಂಥದ್ದು. ಮನೆಯಲ್ಲಿ ವಿದ್ವಾಂಸರಿಲ್ಲದಿದ್ದರೂ ಸಂಗೀತದ ವಾತಾವರಣ ವ್ಯಾಪಿಸಿತ್ತು. ಅಜ್ಜಿ, ಅಪ್ಪ, ಅಮ್ಮ ಎಲ್ಲರಿಗೂ ಸಂಗೀತದಲ್ಲಿ ಇನ್ನಿಲ್ಲದ ಪ್ರೀತಿ. ಸಹಜವಾಗಿಯೇ ವಿಕ್ರಮ್ ಅವರನ್ನೂ ಆವರಿಸಿದ ಈ ಸೆಳೆತ ಕಲಿಕೆಗೂ ಆಹ್ವಾನಿಸಿತು. ಮಗನ ಆಸಕ್ತಿ ತಿಳಿದೊಡನೆ ತಂದೆ-ತಾಯಿ 'ವಿಜಯ ಸಂಗೀತ ಶಾಲೆ'ಗೆ ಅವರನ್ನು ಸೇರಿಸಿದರು.[೪]
 • ತಮ್ಮ ಒತ್ತಡದ ಕೆಲಸದ ನಡುವೆ, ಆಸಕ್ತಿಯನ್ನೂ ಕಾದುಕೊಳ್ಳಲು ಸಂಗೀತವೇ ಕಾರಣ ಎಂಬ ನಂಬಿಕೆ ವಿಕ್ರಮ್ ಸಂಪತ್ ಅವರದು. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಅವರಿಗೆ ಡಿ.ವಿ.ನಾಗರಾಜ್ ಮೊದಲ ಗುರು. ಬಾಂಬೆ ಜಯಶ್ರೀ ಅವರ ಶಿಷ್ಯತ್ವದಲ್ಲಿ ಕಲಿಕೆ ಮುಂದುವರೆಸಿದ ವಿಕ್ರಮ್ ಈಗ ಡಾ. ಜಯಂತಿ ಕುಮರೇಶ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ. ಕರ್ನಾಟಕ ಅವರು ಶಾಸ್ತ್ರೀಯ ಸಂಗೀತದ ಗಾಯಕರೂ ಹೌದು. ಐದಾರು ವರ್ಷ ಸಂಗೀತ ಕಾರ್ಯಕ್ರಮಗಳನ್ನೂ ಅವರು ನೀಡಿದ್ದಾರೆ. ಪಿಲಾನಿಯಲ್ಲಿದ್ದಾಗ ನಾಲ್ಕೈದು ವರ್ಷ ಹಿಂದೂಸ್ತಾನಿ ಸಂಗೀತವನ್ನೂ ಕಲಿತಿದ್ದಾರೆ.

ಅಪೂರ್ವ ಸಂಗೀತ ಸಂಗ್ರಹಕ್ಕೆ ನಾವೀನ್ಯತೆ[ಬದಲಾಯಿಸಿ]

 • ಗಾಯಕಿ ಗೌಹಾರ್ ಜಾನ್. ಬರವಣಿಗೆಗೆ ಪೂರಕವಾಗಲೆಂದು ಆ ಗಾಯಕಿಯ ಗ್ರಾಮಾಫೋನ್ ತಟ್ಟೆಗಳನ್ನು ಕಲೆಹಾಕತೊಡಗಿದ ವಿಕ್ರಮ್ ಸಂಪತ್ ಅಂಥ ನೂರಾರು ಕಲಾವಿದರ ಅಪರೂಪದ, ಅಮೂಲ್ಯ ಹಾಡುಗಳ ದನಿಮುದ್ರಿಕೆಗಳನ್ನು ಒಟ್ಟುಗೂಡಿಸಿದ್ದಾರೆ. ಈ ಹಂತದಲ್ಲಿ ವಿಕ್ರಮ್‌ ಸಂಪತ್ತರಲ್ಲಿ ಮಹತ್ವದ ಯೋಜನೆಯೊಂದು ರೂಪುಗೊಂಡಿತು. ಹೀಗಾಗಿ ಗ್ರಾಮಾಫೋನಿನಲ್ಲಿ ಓಡುತ್ತಾ ಹಾಡುತ್ತಿದ್ದ ತಟ್ಟೆಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಡಿಜಿಟೈಸ್ ರೂಪ ನೀಡತೊಡಗಿದರು.
 • ಮುಂದೆ, ನಮ್ಮ ಸಂಗೀತ ಸಮೃದ್ಧಿಯ ಕುರುಹುಗಳನ್ನು ಕಲೆಹಾಕಿ ಸಂರಕ್ಷಿಸಿದರಷ್ಟೆ ಸಾಲದು, ಅದನ್ನು ಜನರಿಗೂ ದಾಟಿಸಬೇಕು ಎಂಬ ಹಂಬಲ ಚಿಗುರಿತು. ಅದಕ್ಕೆ ನೀರೆರೆದ ವರು ಉದ್ಯಮಿ ಮೋಹನ್ ದಾಸ್ ಪೈ. ಅವರ ನೆರವಿನಿಂದ `ಆರ್ಖೈವ್ ಆಫ್ ಇಂಡಿಯನ್ ಮ್ಯೂಸಿಕ್' ಎಂಬ ಲಾಭಾಪೇಕ್ಷೆ ಇಲ್ಲದ ಟ್ರಸ್ಟ್ ಸಾಕಾರಗೊಂಡಿತು. ಅನೇಕ ಸ್ನೇಹಿತ ರು, ಸಾಹಿತ್ಯ, ಸಂಗೀತ ವಲಯದ ಆಸಕ್ತರೂ ಈ ನಿಟ್ಟಿನಲ್ಲಿ ಕೈಜೋಡಿಸಿದ್ದಾರೆ. ಹಳೆಯ ಗ್ರಾಮಾಫೋನ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಡಿಜಿಟೈಸ್ ಮಾಡುವ ಕಾರ್ಯದಲ್ಲಿ ವಿಕ್ರಮ್ ತೊಡಗಿದ್ದಾರೆ.
 • 'ಆರ್ಕೈವ್ಸ್ ಆಫ್ ಇಂಡಿಯನ್ ಮ್ಯೂಸಿಕ್ ವೆಬ್‌ಸೈಟ್‌' ನಲ್ಲಿ ಉಚಿತವಾಗಿ ಅಪರೂಪದ ಹಾಡುಗಳನ್ನು ಕೇಳಬಹುದು. ಈ ತಾಣವನ್ನು ಪ್ರವೇಶಿಸಿದರೆ ಅದ್ಭುತ ಸಂಗೀತ ಭಂಡಾರವೇ ತೆರೆದುಕೊಳ್ಳುತ್ತದೆ. ಬೆಂಗಳೂರು ನಾಗರತ್ನಮ್ಮ, ಕೊಡುಮುಡಿ ಬಾಲಾಂಬ ಸುಂದರಾಂಬಾಳ್, ಟಿ. ಚೌಡಯ್ಯ, ಉಸ್ತಾದ್ ಇಮ್ದಾದ್ ಖಾನ್, ಉಸ್ತಾದ್ ಅಬ್ದುಲ್ ಕರೀಮ್ ಖಾನ್, ಬಿಡಾರಂ ಕೃಷ್ಣಪ್ಪ, ಹೀಗೆ ಇತಿಹಾಸದ ಪುಟಕ್ಕೆ ಸೇರಿಹೋದ ಖ್ಯಾತನಾಮರ ಹಾಡುಗಳ ಖಜಾನೆ ಈ ವೆಬ್‌ಸೈಟ್.
 • ಭಾರತದಲ್ಲಿನ ಗ್ರಾಮಾಫೋನ್ ಧ್ವನಿಮುದ್ರಿಕೆಯ ಪ್ರಾರಂಭದ ದಿನಗಳ ಬಗ್ಗೆ ಅಧ್ಯಯನ ನಡೆಸಿದ ಬರ್ಲಿನ್‌ನಲ್ಲಿಯೇ, ವಿಕ್ರಮ್ ಸಂಪತ್ತರು ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್‌ನ ಫೆಲೋಶಿಪ್‌ಗೆ ಆಹ್ವಾನ ಪಡೆದರು.

ಸಾಹಿತ್ಯ ಹಬ್ಬದ ಜನಕ[ಬದಲಾಯಿಸಿ]

 • ವಿಕ್ರಮ್ ಸಂಪತ್ ಬೆಂಗಳೂರು ಸಾಹಿತ್ಯ ಹಬ್ಬದ ಜನಕರಾಗಿದ್ದಾರೆ. ೨೦೧೨ ರಲ್ಲಿ ದೇಶವಿದೇಶದ ಖ್ಯಾತ ಸಾಹಿತಿಗಳನ್ನು ಒಂದೇ ಸೂರಿನಡಿ ಸೇರಿಸುವ ಅವರ ಮೊದಲ ಪ್ರಯತ್ನ ಅದ್ಭುತ ಯಶಸ್ಸು ಕಂಡಿತ್ತು.
 • ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸಾಹಿತ್ಯ ಹಬ್ಬ ಆಯೋಜಿಸಲು ಉದ್ದೇಶಿಸಿರುವ ವಿಕ್ರಮ್ ದಕ್ಷಿಣ ಭಾರತದ ಸಾಹಿತ್ಯ ಮತ್ತು ಇಂಗ್ಲಿಷ್ ಸಾಹಿತ್ಯದ ಮುಖಾಮುಖಿ ಸಂವಾದಕ್ಕೆ ವೇದಿಕೆ ಕಲ್ಪಿಸುವ ಉತ್ಸಾಹದಲ್ಲಿದ್ದಾರೆ.

ವಿದೇಶದಲ್ಲಿ ಸಿಕ್ಕ ಚಾರಿತ್ರಿಕ ಕೃತಿಗಳು[ಬದಲಾಯಿಸಿ]

 • “ಭಾರತೀಯ ಇತಿಹಾಸದ ಬಗ್ಗೆ ನಮ್ಮವರಿಗೇ ಆಸಕ್ತಿ ಇಲ್ಲ. ಭಾರತದಲ್ಲಿ ಎಷ್ಟು ಹುಡುಕಿದರೂ ಸಿಗದ ಇಲ್ಲಿನ ಚರಿತ್ರೆಯ ಕೃತಿಗಳು ಜರ್ಮನಿಯಲ್ಲಿ ದೊರೆತವು" ಎನ್ನುತ್ತಾರೆ ವಿಕ್ರಮ್ ಸಂಪತ್. ಲಂಡನ್ನಿಲ್ಲಿ ಮೊಘಲರ ಆಡಳಿತ ಕುರಿತ ವಿಶೇಷ ಪ್ರದರ್ಶನ ನಡೆದದ್ದು ಅವರನ್ನು ಅಚ್ಚರಿಗೊಳಿಸಿತ್ತು.[೫]

ಜನಪ್ರಿಯತೆ ಅವರ ಧ್ಯೇಯವಲ್ಲ[ಬದಲಾಯಿಸಿ]

 • ಸಾಹಿತ್ಯ, ವಿಕ್ರಮ್ ಸಂಪತ್ತರ ನೆಚ್ಚಿನ ಪ್ರಕಾರವಾದರೂ, ಜನಪ್ರಿಯ ಬರಹಗಳನ್ನು ರಚಿಸುವುದೇ ಅವರ ಧ್ಯೇಯವಾಗಿರಲಿಲ್ಲ. ಹೆಸರು, ಹಣ ತಂದುಕೊಡುವ ಆ ಬಗೆಯ ಬರವಣಿಗೆಗಳಿಗಿಂತ, ದೇಶದ ಸಾಂಸ್ಕೃತಿಕ ಚರಿತ್ರೆಯಆಳ ಕೆದಕುತ್ತಾ ಬರೆಯುವ ಬರಹಗಳು, ಅವರಿಗೆ ಆತ್ಮತೃಪ್ತಿ ನೀಡುತ್ತಿವೆ.
 • ಜೊತೆಗೆ "ದೇಶ ತಾನು ಕಳೆದುಕೊಂಡ ಅಮೂಲ್ಯ ಸಂಪತ್ತುಗಳನ್ನು ನೆನಪಿಸುವ ಕಾಯಕವೇ ನನಗೆ ಇಷ್ಟ.. ಯಾರೂ ಬರೆಯದ, ಸವಾಲು ಎಂದುಕೊಳ್ಳುವ, ವಿವಾದ ವೆನಿಸಿದರೂ ಸತ್ಯ ಇತಿಹಾಸವನ್ನು ದಾಖಲಿಸುವ ಕಾಯಕವನ್ನು ಮುಂದುವರಿಸುತ್ತೇನೆ" ಎನ್ನುತ್ತಾರೆ ವಿಕ್ರಮ್ ಸಂಪತ್.[೬]

ವಿವಿಧ ಭಾಷಾ ಪ್ರಾವೀಣ್ಯತೆ[ಬದಲಾಯಿಸಿ]

 • ಆಂಗ್ಲ ಮಾಧ್ಯಮದಲ್ಲಿಯೇ ಓದಿರುವ ವಿಕ್ರಮ್ ಕನ್ನಡದಲ್ಲಿ ಅಸ್ಖಲಿತವಾಗಿ ಮಾತನಾಡಬಲ್ಲವರಾದರೂ ತಾವು ಇಂಗ್ಲಿಷ್‌ನಲ್ಲಿ ಬರೆದದ್ದನ್ನು ಕನ್ನಡೀಕರಿಸುವುದು ಅವರಿಗೆ ಸಾಧ್ಯವಾ ಗಿಲ್ಲ. ಸ್ವತಃ ಅವರೇ ಕನ್ನಡದ ಅನೇಕ ಪ್ರಕಾಶಕರನ್ನು ಅನುವಾದಕ್ಕಾಗಿ ಸಂಪರ್ಕಿಸಿದರೂ ಅವರಿಗೆ ಇನ್ನೂ ನಿರೀಕ್ಷಿತ್ರ ಪ್ರತಿಕ್ರಿಯೆ ದೊರೆತಿಲ್ಲ. ವಿಕ್ರಮ್ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಳಿ, ಮರಾಠಿ ಮತ್ತು ಜರ್ಮನ್ ಭಾಷೆಗಳನ್ನು ಮಾತನಾಡಬಲ್ಲರು.

ಸಾಂಸ್ಕೃತಿಕ ಉಪನ್ಯಾಸಕ[ಬದಲಾಯಿಸಿ]

ವಿಕ್ರಮ್ ಭಾರತೀಯ ಸಂಗೀತ ಮತ್ತು ಇತಿಹಾಸದ ಕುರಿತು ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರೂ ಹೌದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. 'ಸಂಸ್ಕೃತಿ ಸಲ್ಲಾಪ','ವಿಕ್ರಮ್ ಸಂಪತ್ತರ ಚಾರಿತ್ರಿಕ ವಿಕ್ರಮ' 30 ಆಗಸ್ಟ್ 2013, ಶುಕ್ರವಾರ
 2. 'ಗಣಿತಜ್ಞನ ಇತಿಹಾಸದ ಹಾದಿ ಚಾರಿತ್ರಿಕ ವಿಕ್ರಮ', ಪ್ರಜಾವಾಣಿ, Thu, 03/21/2013 ಅಮಿತ್,ಎಂ.ಎಸ್
 3. "Voice of the Veena - S Balachander". Archived from the original on 2017-03-30. Retrieved 2016-10-17. {{cite web}}: |archive-date= / |archive-url= timestamp mismatch (help)
 4. Past echoes March 8, 2013 Friday Review, History and Culture
 5. Early start to Lit Fest this year: Vikram Sampath talks about what’s new 06 Aug 2013
 6. 'Deccan Chronicle, January 01, 2014,-tale-vikram-sampath Keeper of the tale[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. 'Indians have no regard for history,' says historian Vikram Sampath, By : Mini P.Thomas,The week,January 20,2020
 2. 'Historian Vikram Sampath to pen three new books',TOI,Sep 11, 2020