ವಾರಿಜಾಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಧಿಯಲ್ಲಿ ವಾರಿಜಾಶ್ರೀ ಅವರ ಸಂಗೀತದ ನಂಟು ಬೆಸೆದುಕೊಂಡರೂ ಅದರ ಸಾಂಪ್ರದಾಯಿಕತೆಯ ಆಚೆ ಹೊಸ ಪ್ರಯೋಗಗಳ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಮನಸ್ಸು ಅವರದಾಗಿತ್ತು . ಅದಕ್ಕೆ ಒಂದು ಬಗೆಯ ಪ್ರೇರಣೆ ನೀಡಿದ್ದು ವಿಶ್ವ ಸಂಗೀತ. ಸಂಗೀತದ ನಿಯಮಗಳನ್ನು ಮೀರಿ, ಸಂಗೀತಗಾರ ತನ್ನ ಪ್ರತಿಭೆ, ಸಾಮಥ್ರ್ಯವನ್ನು ಪ್ರಯೋಗಾತ್ಮಕವಾಗಿ ಮತ್ತು ತನ್ನೊಳಗಿನ ಹೊಸ ಚಿಂತನೆಗಳನ್ನು ಪಾರದರ್ಶಕವಾಗಿ ಪ್ರೇಕ್ಷಕರಿಗೆ ತಲುಪಿಸುವ ವೇದಿಕೆ ವಿಶ್ವ ಸಂಗೀತದ್ದು. ಕೊಲೊನಿಯಲ್ ಕಸಿನ್ಸ್ ಖ್ಯಾತಿಯ ಹರಿಹರನ್ ಮತ್ತು ಲೆಸ್ಲೆ ಲೂಯಿಸ್, ಸ್ಟೀಫನ್ ಡೆವಸಿ, ಗಿನೊ ಬ್ಯಾಂಗ್‍ರಂಥ ಖ್ಯಾತನಾಮರ ಜೊತೆ ವಿಶ್ವಸಂಗೀತದಲ್ಲಿ ದನಿಗೂಡಿಸುವ ಅಪೂರ್ವ ಅವಕಾಶ ಪಡೆದಿದ್ದರು. ಲಘು ಸಂಗೀತ, ಗಜಲ್, ಸಿನಿಮಾ, ರಾಕ್, ಜಾಸ್ ಹೀಗೆ ಇವರನ್ನು ಆಕರ್ಷಿಸದ ಸಂಗೀತ ಪ್ರಕಾರವಿಲ್ಲ.

ಬಾಲ್ಯ ಜೀವನ[ಬದಲಾಯಿಸಿ]

ಇವರು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ತಂದೆತಾಯಿ ಇಬ್ಬರೂ ಸಂಗೀತಗಾರರು. ತಂದೆ ಎಚ್.ಎಸ್. ವೇಣುಗೋಪಾಲ್ ಬ್ಯಾಂಕ್ ಉದ್ಯೋಗಿ. ಕೊಳಲು ವಿದ್ವಾಂಸರು. ತಾಯಿ ಹಾಡುಗಾರ್ತಿ. ಹೀಗಾಗಿ ಸಂಗೀತವೇ ಮನೆ ಮನವಾಗಿದ್ದ ವಾತಾವರಣ.ಒಂದೂವರೆ ವರ್ಷ ಇರುವಾಗಲೇ ತಂದೆಯಿಂದ ಸಂಗೀತದ ಪಾಠ ಆರಂಭವಾಯಿತು. ತಂದೆ ಜೊತೆ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ನಾಲ್ಕನೇ ವಯಸ್ಸಿಗೆ ವಿದುಷಿ ಎಚ್. ಗೀತಾ ಅವರ ಬಳಿ ಸಂಗೀತ ಕಲಿಕೆ ಪ್ರಾರಂಭವಾಯಿತು. ಆಗಲೇ ಸುಮಾರು ಇನ್ನೂರು ರಾಗಗಳನ್ನು ಗುರುತಿಸುವ ಸಾಮಥ್ರ್ಯ ಬೆಳೆದಿತ್ತು. ಮುಂದೆ ವಸಂತಾ ಶ್ರೀನಿವಾಸನ್, ಡಿ.ಎಸ್. ಶ್ರೀವತ್ಸ, ಸೇಲಂ ಸುಂದರೇಶನ್ ಮುಂತಾದ ಗುರುಗಳ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಸಾಗಿತು. ಮೊದಲ ಬಾರಿಗೆ ಸಮಾರಂಭದಲ್ಲಿ ಇವರು ಹಾಡಿದ್ದು ಏಳು ವರ್ಷದವರಿದ್ದಾಗ ಬೆಂಗಳೂರಿನ ಗಾಯನ ಸಮಾಜದಲ್ಲಿ.

ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಹಾದಿ[ಬದಲಾಯಿಸಿ]

ಶಾಸ್ತ್ರೀಯ ಸಂಗೀತದಲ್ಲಿ ಮುಳುಗಿದ್ದವರನ್ನು ಲಘು ಸಂಗೀತ ಸೆಳೆದದ್ದು ಆರೇಳು ವರ್ಷದೀಚೆಗೆ. ಅದು ಕೇಳುತ್ತಾ ಒಲಿದದ್ದೇ ಹೊರತು ಕಲಿತದ್ದಲ್ಲ. ಚಿಕ್ಕಂದಿನಿಂದಲೂ ಗಜಲ್ ಹುಚ್ಚು. ಅದರಲ್ಲೂ ಹರಿಹರನ್, ಮೆಹ್ದಿ ಹಸನ್‍ರ ದೊಡ್ಡ ಅಭಿಮಾನಿ. ಫಯಾಜ್ ಖಾನ್ ಜೊತೆ ಒಮ್ಮೆ ಗಜಲ್‍ಗೆ ದನಿಗೂಡಿಸಿದರು . ಇದರ ನಡುವೆಯೇ `ಹೆಳವನಕಟ್ಟೆ ಗಿರಿಯಮ್ಮ' ಧಾರಾವಾಹಿಯಲ್ಲಿ ದಾಸರ ಪದಗಳನ್ನು ಹಾಡುವ ಅವಕಾಶ ದಕ್ಕಿತು. ಹಾಡಿದ ಸುಮಾರು ಮುನ್ನೂರು ದಾಸರ ಪದಗಳಿಗೆ ಗಜಲ್ ಶೈಲಿಯ ರೂಪ ನೀಡಿ ಆಲ್ಬಂ ಹೊರತಂದರು . ಸಿನಿಮಾ ಗಾಯಕಿಯಾಗಿ ಇವರನ್ನು ಪರಿಚಯಿಸಿದ್ದು ಸಂಗೀತ ನಿರ್ದೇಶಕ ವಿ. ಮನೋಹರ್. ಪಾಗಲ್ ಚಿತ್ರದ ಮೂಲಕ ಸಿನಿ ಸಂಗೀತದ ಹೆಜ್ಜೆ ಇಟ್ಟರು. ನಂತರ ದಿನಗಳಲ್ಲಿ ವಿನಯ್‍ಚಂದ್ರ ಸಂಗೀತದ `ಜಟಾಯು' ಚಿತ್ರದಲ್ಲಿ ಸಾಹಿತ್ಯಕ್ಕೆ ದನಿಯಾದರು . ಕಸ್ತೂರಿ ವಾಹಿನಿಯ ರಿಯಾಲಿಟಿ ಷೋ ಒಂದರಲ್ಲಿ ನಿರೂಪಕಿಯಾಗಿದ್ದಾಗ ಅದರಲ್ಲಿ ತೀರ್ಪುಗಾರರಾಗಿದ್ದ ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಮತ್ತೆ ಸಿನಿಮಾ ಸಾಹಿತ್ಯಕ್ಕೆ ಹಾಡಿಸಿದರು. ಅದು ಅನೂಪ್ ಸೀಳಿನ್ ಸಂಗೀತ ನೀಡಿದ `ಮದರಂಗಿ' ಚಿತ್ರದ `ಡಾಲಿರ್ಂಗ್ ಡಾಲಿರ್ಂಗ್....' ಹಾಡು. ವೃತ್ತಿಯ ಹಾದಿ ಮಾತ್ರವಲ್ಲದೇ ವಾರಿಜಾಶ್ರೀ ಅವರ ಓದು ಕೂಡ ಸಂಗೀತವೇ ಆಗಿತ್ತು . ಬಾಲ್ಯದ ಆಟ-ಪಾಠದ ಜೊತೆಯಲ್ಲಿ ಸಂಗೀತ ಬೆಸೆದುಕೊಂಡಿತ್ತು. ಸಂಗೀತ ರಾಗಗಳನ್ನು ಕಲಿತು ಪ್ರದರ್ಶಿಸುವುದು ಮಾತ್ರವಲ್ಲ, ಸಂಗೀತದ ಕುರಿತ ಪ್ರಶ್ನೆಗಳಿಗೆ ವಿಶ್ಲೇಷಣಾತ್ಮಕವಾಗಿ ವಿವರಿಸಬಲ್ಲ ಜ್ಞಾನವೂ ಅಗತ್ಯ. ಸಂಗೀತ ಕುರಿತು ಪುಸ್ತಕಗಳಿದ್ದರೂ ಅದನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡುವುದೇ ಸೂಕ್ತ ಎನಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪೂರೈಸಿದರು. ಗಾಯನದ ಜೊತೆಗೆ ತಂದೆಯಿಂದ ಕೊಳಲು ವಾದನದ ಕಲೆಯೂ ಬಳುವಳಿಯಾಗಿ ಒಲಿದಿದೆ. ಬಾಲ್ಯದಲ್ಲಿ ಗಾಯನದತ್ತ ಹೆಚ್ಚು ಗಮನ ಹರಿಸಿದ್ದವರಿಗೆ ಕೊಳಲು ಕಲಿಯಬೇಕೆಂಬ ಹಂಬಲ ಮೂಡಿದ್ದು ಕೆಲವು ವರ್ಷಗಳ ಹಿಂದೆ. ಅನೇಕ ಕಾರ್ಯಕ್ರಮಗಳಲ್ಲಿ ತಂದೆ ಜೊತೆ ಕೊಳಲು ನುಡಿಸಿದ್ದರು . ಹಾಡುತ್ತಾ ಕೊಳಲು ನುಡಿಸುವ ಅನುಭವ ವರ್ಣನಾತೀತ. ಹೀಗೆ ಹಾಡು ಮತ್ತು ಕೊಳಲು ಎರಡರ ಸಂಗಮದ ಆಲ್ಬಂ `ಬಿದಿರು' ಇತ್ತೀಚೆಗೆ ಹೊರಬಂದಿದೆ. ಅದು ದಾಸ ಸಾಹಿತ್ಯವನ್ನು ಆಧುನಿಕ ಸಂಗೀತಕ್ಕೆ ಅಳವಡಿಸುವ ಪ್ರಯತ್ನವಾಗಿದ್ದು. `ಅರ್ಪಣ', `ಉಪಾಸನಾ', `ಮೇಳ ರಾಗ ಮಾಲಿಕಾ', `ಕಾಯೋ ಎನ್ನ ಗೋಪಾಲ' ನನ್ನ ಸಂಗೀತ ಶ್ರಮ ಹುದುಗಿರುವ ಆಲ್ಬಂಗಳು. ವಿದ್ವಾನ್ ಶತಾವಧಾನಿ ಆರ್. ಗಣೇಶ್ ನಿರ್ದೇಶಿಸಿದ `ಅಷ್ಟಾವಧಾನ' ಸಾಕ್ಷ್ಯಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಹಾಗೆಯೇ ದೇಶದ ವಿವಿಧೆಡೆಯಲ್ಲದೆ ಶ್ರೀಲಂಕಾ ಮತ್ತು ಕುವೈತ್‍ಗಳಲ್ಲಿಯೂ ಹಾಡಿದ್ದಾರೆ. ಇವರಿಗೆ `ಕೆಂಪೇಗೌಡ ಪ್ರಶಸ್ತಿ', `ವಿದ್ಯಾರತನ್ ರಾಷ್ಟ್ರೀಯ ಪ್ರಶಸ್ತಿ', ಪ್ರವೀಣ್ ಡಿ ರಾವ್ ಸಂಗೀತ ನೀಡಿದ ಈ ಆಲ್ಬಂಗೆ `ಕೀಮಾ'ದ ಸಿನಿಮೇತರ ಸಂಗೀತ ವಿಭಾಗದ ಪ್ರಶಸ್ತಿ ಬಂದಿದೆ. `ಪರ್ಲ್ ಆಫ್ ಬೆಂಗಳೂರು', ಮದ್ರಾಸ್ ತೆಲುಗು ಅಕಾಡೆಮಿಯ `ಉಗಾದಿ ಪುರಸ್ಕಾರ' `ಅನನ್ಯ ನಾಡಜ್ಯೋತಿ ಯುವ ಪುರಸ್ಕಾರ' ದೊರೆತಿವೆ . ಶ್ರೀಲಂಕಾದ ಕೊಲಂಬೊದಲ್ಲಿ ಶಾರದಾ ಆಶ್ರಮದಿಂದ `ಗಾನವಿನೋದಿನಿ' ಬಿರುದು ಮುಡಿಗೇರಿದ ಹೆಮ್ಮೆ ಇವರದ್ದು.

ಉಲ್ಲೇಖ[ಬದಲಾಯಿಸಿ]

www.sallapa.com