ವಾಮನ ಬೇಂದ್ರೆ

ವಿಕಿಪೀಡಿಯ ಇಂದ
Jump to navigation Jump to search
ವಾಮನ ದತ್ತಾತ್ರೆಯ ಬೇಂದ್ರೆ
ಜನನಜುಲೈ ೨೮, ೧೯೩೫
ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು
ವೃತ್ತಿಪ್ರಾಧ್ಯಾಪಕರು, ಸಾಹಿತಿಗಳು
ವಿಷಯಕನ್ನಡ ಸಾಹಿತ್ಯ

ದತ್ತಾತ್ರೆಯ ವಾಮನ ಬೇಂದ್ರೆ (ಜುಲೈ ೨೮, ೧೯೩೫ - ಸೆಪ್ಟೆಂಬರ್ ೨೮, ೨೦೧೬) ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಲೋಕದಲ್ಲಿ ಗಣ್ಯರಾಗಿದ್ದಾರೆ. ಇವರು ವರಕವಿ ದ. ರಾ. ಬೇಂದ್ರೆಯವರ ಪುತ್ರ.

ಜೀವನ[ಬದಲಾಯಿಸಿ]

ಅತ್ಯುತ್ತಮ ಪ್ರಾಧ್ಯಾಪಕರೂ, ಸಾಹಿತಿಗಳೂ ಆದ ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ ಜುಲೈ ೨೮, ೧೯೩೫ರ ವರ್ಷದಲ್ಲಿ ಜನಿಸಿದರು. ತಂದೆ ವರಕವಿ ದ.ರಾ.ಬೇಂದ್ರೆ ಅವರು, ತಾಯಿ ಲಕ್ಷ್ಮೀಬಾಯಿಯವರು. ಅವರ ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿ ಪಡೆದ ವಾಮನ ಬೇಂದ್ರೆಯವರು, ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.

ವಾಮನ ಬೇಂದ್ರೆಯವರು ಉದ್ಯೋಗ ಪ್ರಾರಂಭಿಸಿದ್ದು ಸಾಂಗ್ಲಿಯ ವೆಲ್ಲಿಂಗ್‌ಡನ್ ಕಾಲೇಜಿನಲ್ಲಿ. ನಂತರ ಧಾರವಾಡದ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.

ಸಾಹಿತ್ಯ ಕೃಷಿ[ಬದಲಾಯಿಸಿ]

ವಾಮನ ಬೇಂದ್ರೆಯವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಶಾಲೆಯಲ್ಲಿದ್ದಾಗಲೇ ಅವರ ಬರವಣಿಗೆ ಪ್ರಾರಂಭಗೊಂಡಿತು. ಇಂಟರ್ ಮೀಡಿಯೆಟ್ ಓದುತ್ತಿದ್ದಾಗಲೇ ಪ್ರಬಂಧ, ನಾಟಕ ರಚನೆಯಲ್ಲಿ ಸಮರ್ಥರಾಗಿದ್ದ ಅವರು, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲಣ ಪ್ರಭುತ್ವ ಸಾಧಿಸಿದ್ದರಲ್ಲದೆ, ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹಾ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.

ವಾಮನ ಬೇಂದ್ರೆಯವರ ಮೊದಲ ಕವನ ಮೊದಲ ತೊದಲು. ನಂತರ ಅನಂತಧಾರೆ, ಸ್ಪಂದನ ಪ್ರಕಟಗೊಂಡವು. ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದರು. ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ಬೇಂದ್ರೆ ಕಾವ್ಯಲೋಕ, ಬೇಂದ್ರೆ ಬೆಳಕು, ಕವಿಚೂತವನ ಚೈತ್ರ ಲಕ್ಷ್ಮೀಶ, ದ.ರಾ.ಬೇಂದ್ರೆ ಜೀವನ ಪರಿಚಯ ಮುಂತಾದವು ವಾಮನ ಬೇಂದ್ರೆಯವರ ಹಲವು ಕಥನಗಳು. ಇದಲ್ಲದೆ ಕುಣಿಯೋಣ ಬಾರ, ಅಂಬಿಕಾತನಯ ಹಾಡs ಬೆಳದಿಂಗಳ ನೋಡs, ನೋಡ್ಯಾನs ದಶಾವತಾರ, ಅಂಬಿಕಾತನಯ ಹಾಡ್ಯಾನs, ಕನ್ನಡಕ್ಕೆ ಕಿಟೆಲ್ ಕೊಡುಗೆ, ನಾಳಿನ ಕನಸು, ಚೈತನ್ಯದ ಪೂಜೆ, ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ, ಬೇಂದ್ರೆ ಋತುದರ್ಶನ, ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಬೇಂದ್ರೆಯವರ ಜೀವನ ಮಹಾಕಾವ್ಯ ‘ಔದುಂಬರ ಗಾಥೆ’ ಮುಂತಾದ ಕೃತಿಗಳನ್ನು ವಾಮನ ಬೇಂದ್ರೆಯವರು ಸಂಪಾದಿಸಿದರು. ಅವರ ಭಾಷಾಂತರಗಳೆಂದರೆ ಗುರುಗೋವಿಂದ ಸಿಂಗ, ಭಾರತೀಯ ಸಾಹಿತ್ಯ ಸಂಕಲನ, ಕಾಲಾಯ ತಸ್ಮೈನಮಃ, ಜಾನಪದ ಸಾಹಿತ್ಯ, ಸಮರ್ಥ ರಾಮದಾಸ ಹಾಗೂ ಸ್ವಾಮಿ ವಿವೇಕಾನಂದ ಮುಂತಾದವು. ಇದಲ್ಲದೆ ಅವರು ಬೇಂದ್ರೆಯವರ ಕವನಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಾರೆ.

ಬೇಂದ್ರೆ ಇನ್ನಿಲ್ಲ ಅನ್ನಬ್ಯಾಡಿರಿ[ಬದಲಾಯಿಸಿ]

ವಾಮನ ಬೇಂದ್ರೆಯವರ ‘ಅನಂತಧಾರೆ’ ಕವನ ಸಂಕಲನಕ್ಕೆ ಮುನ್ನುಡಿಯಲ್ಲಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೀಗೆ ಗುರುತಿಸುತ್ತಾರೆ: “ಸಾಧನಕೇರಿಯ ‘ಶ್ರೀಮಾತಾ’ದಲ್ಲಿ ದ ರಾ ಬೇಂದ್ರೆಯವರು ಈಗ ಇಲ್ಲ; ಈಗ ಅವರು ‘ಸಾವಿರದ ಮನಗಳಲ್ಲಿ’ ಮನೆ ಮಾಡಿಕೊಂಡಿದ್ದಾರೆ. ಆದರೂ ಧಾರವಾಡದ ಮನೆ ಅವರ ಕರ್ಮಕ್ಷೇತ್ರವೇ.” ಈ ಸಂಕಲನದ ಕವಿತೆಯೊಂದರಲ್ಲಿ ವಾಮನರು ಹೇಳುತ್ತಾರೆ –

 • ಬರ್ರಿ ಬರ್ರಿ ನೀವು ಒಳಗೆ ಬನ್ನಿರಿ
ಬೇಂದ್ರೆ ಇನ್ನಿಲ್ಲಾ ಅನ್ನಬ್ಯಾಡರಿ
ಬಟ್ಟಲ ಸಕ್ಕರ್ಯಾಗಿ ಸಿಹಿ ಹಂಚತಾನ
ಮನಸ್ಸಿದ್ದರೆ ಕೈ ಹಾಕರಿ.”

ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

 • ಮೊದಲ ತೊದಲು
 • ಅನಂತಧಾರೆ

ವಿಮರ್ಶೆ[ಬದಲಾಯಿಸಿ]

 • ಬೇಂದ್ರೆ ಕಾವ್ಯ ಲೋಲಕ.
 • ಶ್ರಾವಣ ಪ್ರತಿಭೆ

ಜೀವನ ಪರಿಚಯ[ಬದಲಾಯಿಸಿ]

 • ದ.ರಾ.ಬೇಂದ್ರೆ ಜೀವನ ಪರಿಚಯ

ಮಕ್ಕಳ ನಾಟಕ[ಬದಲಾಯಿಸಿ]

 • ಸೊಂಡೀ ಗಣಪ್ಪ ಬಂದಾ

ಅನುವಾದ[ಬದಲಾಯಿಸಿ]

 • ಗುರು ಗೋವಿಂದ ಸಿಂಗ
 • ಕಾಲಾಯ ತಸ್ಮೈ ನಮಃ
 • ನಟ ಸಾಮ್ರಾಟ
 • ಮಹಾರಾಷ್ಟ್ರದ ಜಾನಪದ ಸಾಹಿತ್ಯ
 • ಕೋಸಲಾ
 • ಭಾರತೀಯ ಸಾಹಿತ್ಯ ಸಂಕಲನ

ಸಂಪಾದನೆ[ಬದಲಾಯಿಸಿ]

 • ಕನ್ನಡಕ್ಕೆ ಕಿಟ್ಟೆಲ್ಲರ ಕೊಡುಗೆ
 • ಅಭಿನವ ಪಂಪನ ರಾವಣ ದರ್ಶನ

ಮಹಾಪ್ರಬಂಧ(ಪಿ.ಎಚ್.ಡಿ.ಗಾಗಿ)[ಬದಲಾಯಿಸಿ]

 • ಲಕ್ಷ್ಮೀಶನ ಜೈಮಿನಿಭಾರತ-ಒಂದು ಅಧ್ಯಯನ

ಪ್ರಶಸ್ತಿ ಗೌರವಗಳು[ಬದಲಾಯಿಸಿ]

 • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
 • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ,
 • ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ,
 • ಪರಶುರಾಮ ಪ್ರಶಸ್ತಿ,
 • ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ,
 • ರಾಜ್ಯ ಸಾಹಿತ್ಯ ಅಕಾಡೆಮಿಯ ಸೃಜನೇತರ ಅನುವಾದ ಬಹುಮಾನ
 • ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು

ನಿಧನ[ಬದಲಾಯಿಸಿ]

ಡಾ. ವಾಮನದತ್ತಾತ್ರೇಯ ಬೇಂದ್ರೆ ೨೮ಸೆಪ್ಟೆಂಬರ್೨೦೧೬ ಬುಧವಾರದಂದು ಹುಬ್ಬಳ್ಳಿಯಲ್ಲಿ ನಿಧನರಾದರು. ಅವರಿಗೆ ೮೧ ವರ್ಷವಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಮನ ಬೇಂದ್ರೆಯವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ ಲೈಫ್ ಲೈನ್ ನಲ್ಲಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.[೧]

ಹೊರಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ವರಕವಿ ದ.ರಾ.ಬೇಂದ್ರೆ ಪುತ್ರ ಡಾ.ವಾಮನ ಬೇಂದ್ರೆ ನಿಧನ, ಪ್ರಜಾವಾಣಿ ವಾರ್ತೆ, 29 Sep, 2016