ಲೈಫೈ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಲೈಫೈ ಪರಿಸರ

ಲೈಫೈ (Li-Fi ಅಥವಾ ಲೈಟ್ ಫಿಡೆಲಿಟಿ) ಎಂಬುದು ಒಂದು ಬಗೆಯ ನಿಸ್ತಂತು ಸಂವಹನ ತಂತ್ರಜ್ಞಾನ (Wireless communication technology). ಎರಡೂ ದಿಕ್ಕುಗಳಲ್ಲಿ, ತೀವ್ರ ಗತಿಯಲ್ಲಿ ಸಂವಹನ ಸಾಧಿಸಲು ಅನುಕೂಲಕರ. ಜನಪ್ರಿಯ ನಿಸ್ತಂತು ಸಂವಹನ ತಂತ್ರಜ್ಞಾನವಾದ (Wi-Fi) ಎಂಬ ತಂತ್ರಜ್ಞಾನವನ್ನು ಇದು ಹೋಲುತ್ತದೆ. ಪ್ರೊ| ಹರಾಲ್ಡ್ ಹಾಸ್ (Harald Haas) ಎಂಬುವರು ಲೈಫೈ ತಂತ್ರಜ್ಞಾನದ ಅಧ್ವರ್ಯು. ಲೈಫೈ ತಂತ್ರಜ್ಞಾನವನ್ನು ದ್ಯುತಿ ಸಂವಹನ ತಂತ್ರಜ್ಞಾನದ (Optical communication) ಭಾಗವೆಂದು ಪರಿಗಣಿಸಲಾಗುತ್ತದೆ; ರೇಡಿಯೋ ಕಂಪನಾಂಕ ಸಂವಹನವನ್ನು ಬಳಸುವ ವೈಫೈ ತಂತ್ರಜ್ಞಾನಕ್ಕೆ ಲೈಫೈ ಒಂದು ಸೋದರ ತಂತ್ರಜ್ಞಾನ.

ತಂತ್ರಜ್ಞಾನದ ವಿವರಗಳು[ಬದಲಾಯಿಸಿ]

ಒಂದು ಬೆಳಗುವ ಬಲ್ಬನ್ನು ಹತ್ತಿಸಿ-ಆರಿಸಿ ಸಂಕೇತಗಳನ್ನು ಕಳಿಸಬಹುದು. ಲೈಫೈ(Li-Fi) ತಂತ್ರಜ್ಞಾನದಲ್ಲಿ ಬೆಳಕು ಬೀರುವ ಸಾಧನವನ್ನು ಸೆಕೆಂಡಿಗೆ ಹಲವು ನೂರು ಕೋಟಿ ಸಲ ಹತ್ತಿಸಿ-ಆರಿಸಬೇಕು. ಹೀಗಾಗಿ ಬಲ್ಬ್ ಹತ್ತಿತು/ಆರಿತು ಎಂಬುದು ಮನುಷ್ಯರ ಕಣ್ಣಿಗೆ ಗೋಚರಿಸುವುದಿಲ್ಲ. ಆದ್ದರಿಂದ ನಮ್ಮ ಕಣ್ಣಿಗೆ ಗೋಚರಿಸದ ಮಟ್ಟಕ್ಕೆ ಬೆಳಕನ್ನು ಮಂಕುಗೊಳಿಸಿದರೂ ಈ ತಂತ್ರಜ್ಞಾನದಲ್ಲಿ ಬಾಧಕವಿಲ್ಲ. ಬೆಳಕಿನ ಸ್ರೋತ ಮತ್ತು ಬೆಳಕಿನ ರಿಸೀವರ್‍ಗಳು ಒಂದು ನೇರವಾದ ಗೆರೆಯ ಎರಡು ತುದಿಗಳಲ್ಲಿ ಇರಬೇಕೆಂದೇನೂ ಇಲ್ಲ – ಬೆಳಕು ಗೋಡೆಗಳಿಂದ ಪ್ರತಿಫಲಿತವಾಗಿಯೂ ಮುಟ್ಟಬಹುದು. ಇಷ್ಟಾದರೂ ಪ್ರತಿ ಸೆಕೆಂಡಿಗೆ 7 ಕೋಟಿ ಬಿಟ್ಸ್ ವೇಗದಲ್ಲಿ ಸಂವಹನ ಸಾಧ್ಯ. ವೈಫೈ ತಂತ್ರಜ್ಞಾನಕ್ಕೆ ಹೋಲಿಸಿದರೆ ಲೈಫೈ ಸಂವಹನವು ಗೋಡೆಗಳನ್ನು ಹಾದುಹೋಗಲಾರದು. ಆದರೆ ಇದೇ ಕಾರಣಕ್ಕಾಗಿ ಲೈಫೈ ತಂತ್ರಜ್ಞಾನವು “ಹ್ಯಾಕರ್”ಗಳಿಂದ ಸುರಕ್ಷಿತ. ಲೈಫೈ ತಂತ್ರಜ್ಞಾನದಲ್ಲಿ ಬಳಸಲಾಗುವ ಬೆಳಕು ಇವುಗಳಲ್ಲಿ ಯಾವುದೇ ಒಂದಾಗಿರಬಹುದು.

 1. ಕಣ್ಣಿಗೆ ಕಾಣುವ ಬೆಳಕು (Visible LIGHT)
 2. ಕಣ್ಣಿಗೆ ಕಾಣದ ಅವಗೆಂಪು ಬೆಳಕು (infrared light)
 3. ಕಣ್ಣಿಗೆ ಕಾಣದ ಅತಿನೇರಳೆ ಬೆಳಕು (ultraviolet light).

ಬೆಳಕು ಬೀರುವ ಡಯೋಡ್(Diode) ಅಥವಾ ಎಲ್‍ಇಡಿ(LED) ಎಂಬ ಸಾಧನಗಳು ಈ ತಂತ್ರಜ್ಞಾನದಲ್ಲಿ ಉಪಯುಕ್ತವಾಗುತ್ತವೆ. ವಿಮಾನ, ಆಸ್ಪತ್ರೆ, ಅಣುಸ್ಥಾವರ ಮೊದಲಾದ ಕಡೆಗಳಲ್ಲಿ ವಿದ್ಯುತ್-ಕಾಂತೀಯ ಅಲೆಗಳ ಸಂವಹನದಿಂದ ಅಪಾಯ ಉಂಟಾಗಬಹುದು. ಇಂಥ ಕಡೆಗಳಲ್ಲಿ ಲೈಫೈ ತಂತ್ರಜ್ಞಾನವು ಸಂವಹನದ ಕೊರತೆಯನ್ನು ತುಂಬಿಕೊಡಬಲ್ಲದು. ಬೆಲೆಯನ್ನು ಹೋಲಿಸಿದರೆ ಲೈಫೈ ತಂತ್ರಜ್ಞಾನವು ವೈಫೈಗಿಂತ ಹತ್ತು ಪಟ್ಟು ಅಗ್ಗ. ಲೈಫೈ ತಂತ್ರಜ್ಞಾನದ ಮಿತಿಗಳೆಂದರೆ:

 1. ಅಪಾರದರ್ಶಕ ವಸ್ತುಗಳನ್ನು ಬೆಳಕು ದಾಟಲಾರದ ಕಾರಣ ಹೆಚ್ಚು ಅಂತರದ ದೂರಸಂವಹನ ಸಾಧ್ಯವಿಲ್ಲ
 2. ವೈಫೈನಷ್ಟು ಈ ಸಂವಹನ ವಿಶ್ವಸನೀಯವಲ್ಲ
 3. ಪ್ರತಿಷ್ಠಾಪನೆಯ ಬೆಲೆ ಹೆಚ್ಚು

ಲೈಫೈ ತಂತ್ರಜ್ಞಾನದ ಉಪಯೋಗವು ೨೦೧೩ರಿಂದ ೨೦೧೮ರ ವರೆಗೆ ಪ್ರತಿವರ್ಷವೂ ೮೨% ಬೆಳೆದು ೬೦೦ ಕೋಟಿ ಡಾಲರ್ ಮೌಲ್ಯವನ್ನು ಮುಟ್ಟುವ ನಿರೀಕ್ಷೆಯಿದೆ. ಪ್ಯೂರ್ ಲೈಫೈ [೧] ಎಂಬ ಕಂಪನಿ ೨೦೧೪ರಲ್ಲಿ ಈ ತಂತ್ರಜ್ಞಾನವನ್ನು ವ್ಯಾಪಾರ ಮಾಡಲು ಪ್ರಾರಂಭಿಸಿದ ಮೊದಲ ಸಂಸ್ಥೆ.

ಇತಿಹಾಸ[ಬದಲಾಯಿಸಿ]

ಎಡಿನ್ ಬರ್ಗ್ ವಿಶ್ವವಿದ್ಯಾಲಯದ ಪ್ರೊ| ಹೆರಾಲ್ಡ್ ಹಾಸ್ ಅವರನ್ನು ಲೈಫೈ ತಂತ್ರಜ್ಞಾನದ ಮೂಲಪುರುಷ ಎಂದು ಪರಿಗಣಿಸಲಾಗುತ್ತದೆ. ಅವರೇ ಈ ತಂತ್ರಜ್ಞಾನಕ್ಕೆ ಲೈಫೈ ಎಂದು ನಾಮಕರಣ ಮಾಡಿದವರು. ಪ್ಯೂರ್ ಲೈಫೈ ಎಂಬ ಕಂಪನಿಯನ್ನು ಹುಟ್ಟುಹಾಕಿದವರೂ ಅವರೇ. ಅವರು 2011ರಲ್ಲಿ ಟೆಡ್ ಗ್ಲೋಬಲ್‍ (TED GLOBAL) ಸಂಸ್ಥೆಯ ಮೂಲಕ ನೀಡಿದ ಉಪನ್ಯಾಸ ಜನಪ್ರಿಯವಾಯಿತು[೨]. 2011ರ ಅಕ್ಟೋಬರ್ ತಿಂಗಳಲ್ಲಿ "ಲೈಫೈ ಕನ್ಸಾರ್ಷಿಯಮ್" ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು[೩]; ಅನೇಕ ಕಂಪನಿಗಳು ಈ ಸಂಸ್ಥೆಯ ಸದಸ್ಯತ್ವ ಪಡೆದುಕೊಂಡವು. 2013ರ ಆಗಸ್ಟ್ ತಿಂಗಳಲ್ಲಿ ಒಂದೇ ಬಣ್ಣದ ಎಲ್‍ಇಡಿ (LED) ಲೈಫೈ ಸಂವಹನಬಳಸಿ ಸೆಕೆಂಡಿಗೆ 160 ಕೋಟಿ ಬಿಟ‍್‍ಗಳ ವೇಗದ ಸಂವಹನ ಸಾಧಿಸಲಾಯಿತು. ಚೈನಾ ದೇಶದ ಕೆಲವು ಕಂಪನಿಗಳು ಲೈಫೈ ಸಂಬಂಧಿ “ಕಿಟ್” ಗಳನ್ನು ತಯಾರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡವು[೪]. ಏಪ್ರಿಲ್ 2014ರಲ್ಲಿ ಸ್ಟಿನ್ಸ್ ಕೋಮನ್ ಎಂಬ ರಷ್ಯಾ ದೇಶದ ಒಂದು ಕಂಪನಿ ಕೂಡಾ ಲೈಫೈ ತಂತ್ರಜ್ಞಾನ ಬೆಳೆಸುವುದರಲ್ಲಿ ಆಸಕ್ತಿ ತೋರಿತು. ಮೆಕ್ಸಿಕೋ ದೇಶದ ಸೈಸಾಫ್ಟ್ ಎಂಬ ಕಂಪನಿ ಕೂಡಾ ಅದೇ ವರ್ಷ ಲೈಫೈ ತಂತ್ರಜ್ಞಾನದಲ್ಲಿ ಸಾಧನೆ ಪ್ರಕಟಿಸಿತು[೫].

ಮಾನದಂಡಗಳು[ಬದಲಾಯಿಸಿ]

ಲೈಫೈ ಸಂವಹನದಲ್ಲಿ IEEE 802.11 ನಿಯಮಗಳನ್ನು ಅನುಸರಿಸಲಾಗುತ್ತದೆ. ಕಣ್ಣಿಗೆ ಗೋಚರಿಸುವ ಬೆಳಕನ್ನು ಸಂವಹನದಲ್ಲಿ ಬಳಸಲಾಗುತ್ತದೆ ಎಂಬ ಕಾರಣದಿಂದ IEEE ಸಂಸ್ಥೆಯ 802 ಕಾರ್ಯಕಾರಿ ಸಮಿತಿಯು 802.15.7 ಎಂಬ ನಿಯಮಾವಳಿ ರೂಪಿಸಿತು. ಇದಕ್ಕೆ ವಿಸಿಬಲ್ ಲೈಟ್ ಕಮ್ಯೂನಿಕೇಶನ್(VLC) ಎನ್ನುತ್ತಾರೆ. ಈ ಬಗೆಯ ಸಂವಹನ ಬಳಸಿ 2014ರ ಜನವರಿಯಲ್ಲಿ ಪ್ರಥಮ ಬಾರಿಗೆ ಒಂದು ಸ್ಮಾರ್ಟ್ ಫೋನ್ ಪ್ರದರ್ಶಿಸಲಾಯಿತು ([೬]). ಈ ಬಗೆಯ ಸ್ಮಾರ್ಟ್ ಫೋನುಗಳಲ್ಲಿ ಬೆಳಕನ್ನು ವಿದ್ಯುತ್ ಚೈತನ್ಯವಾಗಿ ಪರಿವರ್ತಿಸುವ ತಂತ್ರಜ್ಞಾನ ಅಳವಡಿಸಲಾಗಿದೆ[೭]. ಇದರಿಂದ ಫೋನುಗಳ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಫಿಲಿಪ್ಸ್ ಲೈಟಿಂಗ್ ಕಂಪನಿ ವಿಎಲ್‍ಸಿ (VLC) ತಂತ್ರಜ್ಞಾನ ಬಳಸಿ ಅಂಗಡಿಗಳಲ್ಲಿ ಗ್ರಾಹಕರು ಬಳಸಬಹುದಾದ ವ್ಯವಸ್ಥೆಯನ್ನು ರೂಪಿಸಿದೆ[೮]. ಇದಕ್ಕಾಗಿ ಗ್ರಾಹಕರು ತಮ್ಮ ಫೋನಿಗೆ ಒಂದು ಆಪ್‍ ಇಳಿಸಿಕೊಳ್ಳಬೇಕು. ಈ ಆಪ್ ಅಂಗಡಿಯಲ್ಲಿ ಪ್ರತಿಷ್ಠಾಪಿಸಿದ ಎಲ್‍ಇಡಿಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಗ್ರಾಹಕರಿಗೆ ಅವರು ನಿಂತಿದ್ದ ಕಡೆಗೇ ಆಯಾ ಸಾಲಿನಲ್ಲಿ ಮಾರಾಟಕ್ಕಿಟ್ಟಿರುವ ಪದಾರ್ಥಗಳಿಗೆ “ಡಿಸ್ಕೌಂಟ್ ಕೂಪನ್”ಗಳನ್ನು ತಲುಪಿಸುವುದು ಈ ವ್ಯವಸ್ಥೆಯ ಉದ್ದೇಶ.

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ಪ್ಯೂರ್ ಲೈಫೈ
 2. ಟೆಡ್ ಡಾಟ್ ಕಾಮ್ ಸಂಸ್ಥೆಯಲ್ಲಿ ಹೆರಾಲ್ಡ್ ಹಾಸ್ ಅವರ ಭಾಷಣ
 3. ಲೈಫೈ ಕನ್ಸಾರ್ಷಿಯಮ್
 4. ಚೈನಾ ದೇಶದ ಕಂಪನಿಗಳಿಂದ ಲೈಫೈ ಕಿಟ್ ತಯಾರಿ
 5. ಸೈಸಾಫ್ಟ್, ಮೆಕ್ಸಿಕೋ
 6. ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ, ಲಾಸ್ ವೇಗಸ್, ಅಮೆರಿಕಾ ಸಂಯುಕ್ತ ಸಂಸ್ಥಾನ
 7. ಸ್ಮಾರ್ಟ್ ಫೋನಿನಲ್ಲಿ ಲೈಫೈ ಬಳಕೆ
 8. ಲೈಫೈ ಬಳಸಿ ಫಿಲಿಪ್ಸ್ ಕಂಪನಿಯ ಪ್ರಯೋಗ
"https://kn.wikipedia.org/w/index.php?title=ಲೈಫೈ&oldid=1050367" ಇಂದ ಪಡೆಯಲ್ಪಟ್ಟಿದೆ