ಲುಡ್ವಿಗ್ ಟೀಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲುಡ್ವಿಗ್ ಟೀಕ್ (1773-1853. ಜರ್ಮನ್ ಕವಿ, ಕಾದಂಬರಿಕಾರ. ರೊಮ್ಯಾಂಟಿಕ್ ಯುಗದ ಸಾಹಿತಿಗಳಲ್ಲಿ ಅತ್ಯಂತ ಕಿರಿಯ.

ಹುಟಿದ್ದು ಬರ್ಲಿನ್‍ನಲ್ಲಿ. ಚಿಕ್ಕವನಿರುವಾಗಲೆ ಗಯಟೆಯ ವರ್ದರ್ (ಕಾದಂಬರಿ) ಮತ್ತು ಗಾಟ್ಸ್ (ನಾಟಕ)-ಮುಂತಾದ ಕೃತಿಗಳು ಈತನ ಮೇಲೆ ಪ್ರಭಾವ ಬೀರಿದ್ದವು. ಚಿಕ್ಕಂದಿನಿಂದಲೂ ಈತನಿಗೆ ತಾನೊಬ್ಬ ನಟನಾಗಬೇಕೆಂಬ ಮಹದಾಭಿಲಾಷೆಯಿತ್ತು. ಈತ ಬರೆಯುತ್ತಿದ್ದ ಕಿನ್ನರ ಕಥೆಗಳನ್ನು ನಿಕೊಲೈ ಎಂಬಾತ ಸ್ಟ್ರಾಸ್ ಫೆಡ್ಡರ್ನ್ ಎಂಬ ಕಥಾಸಂಗ್ರಹದಲ್ಲಿ ಪ್ರಕಟಿಸಿದ್ದ.

ಸಾಹಿತ್ಯ[ಬದಲಾಯಿಸಿ]

ಈತ ಬರೆದ ವಿಲಿಯಮ್‍ಲೊವೆಲ್ (ಮೂರು ಸಂಪುಟಗಳು-1795-96) ಎಂಬ ಪತ್ರರೂಪದ ಕಾದಂಬರಿ ಈತನ ಮುಖ್ಯ ಕೃತಿಗಳಲ್ಲೊಂದು. ಈ ಕಾದಂಬರಿಯ ಕಾವ್ಯಾತ್ಮಕ ಗದ್ಯಶೈಲಿ ಹಾಗೂ ಅತಿರಂಜಕವಸ್ತು ರೊಮ್ಯಾಂಟಿಕ್ ಪ್ರವೃತ್ತಿಯನ್ನು ಮೆರೆಯಿಸುವಂತಿದೆ. ವಿಕೃತ ಮಾನಸಿಕ ಸ್ಥಿತಿಯನ್ನು ಈ ಕಥೆ ಚೆನ್ನಾಗಿ ಚಿತ್ರಿಸುತ್ತದೆ. 1797ರಲ್ಲಿ ಬರೆದ ಈತನ ಕ್ಯಾಟರ್ ಅಥವಾ ಇಗ್ ಬೂಟ್ಸ್ ಎಂಬ ಕಿನ್ನರ ಕಥಾವಸ್ತುವನ್ನುಳ್ಳ ವಿಡಂಬನಾತ್ಮಕ ನಾಟಕ ಜನಪ್ರಿಯವಾಯಿತು. ಇದರಲ್ಲಿ ಟೀಕ್ ತನ್ನ ಕಾಲದ ನೀತಿ ಪ್ರಧಾನ ವಿನೋದ ನಾಟಕಗಳನ್ನು ಗೇಲಿಮಾಡಿದ್ದಾನೆ. ತನ್ನ ಸಮಕಾಲೀನ ವ್ಯಾಕೆನ್ ರೊಡರ್‍ನ ಜೊತೆ ಸೇರಿ ಈತ ರೊಮ್ಯಾಂಟಿಕ್ ಸಾಹಿತ್ಯಕ್ಕೆ ಅಗತ್ಯವಾಗಿದ್ದ ಶೈಲಿ, ವಸ್ತುಗಳನ್ನು ಒದಗಿಸುವ ಪ್ರಯತ್ನಮಾಡಿದ. ಇವರಿಬ್ಬರು ಸೇರಿ ರಚಿಸಿದ ರಮ್ಯ ಪ್ರಬಂಧಗಳು, ಚಿತ್ರಣಗಳು ರೊಮ್ಯಾಂಟಿಕ್ ಯುಗದ ಸೌಂದರ್ಯಮೀಮಾಂಸೆಗೆ ಬುನಾದಿ ಹಾಕಿಕೊಟ್ಟವು. ಇವರು ಬರೆದ ಫ್ರಾನ್ಸ್ ಸ್ಟರ್ನ್‍ಬಾಲ್ಡ್ಸ್ (1798) ಎಂಬ ಅಲೆಮಾರಿ ಕಲಾವಿದನ ಪ್ರವಾಸಕಥನದಲ್ಲಿ ಗಯುಟೆಯ ವಿಲ್‍ಹೆಲ್ಮ್ ಕಾದಂಬರಿಯ ಪ್ರಭಾವ ನಿಚ್ಚಳವಾಗಿದೆ. ಈತನ ಮಹತ್ ಸಾಧನೆಯೆಂದರೆ ಈತ ಜರ್ಮನಿಯ ಜಾನಪದ ಸಾಹಿತ್ಯಸಂಪತ್ತನ್ನು ಸಂಗ್ರಹಿಸಿ ಸಂರಕ್ಷಿಸಲು ಮಾಡಿದ ಪ್ರಯತ್ನ. ಅದರ ಫಲವಾಗಿ ಹೊರಬಂದ ಜಾನಪದ ಕಥೆಗಳು ನೀಳ್ಗತೆಗಳು (ಮೂರು ಸಂಪುಟಗಳು) ಜರ್ಮನ್ ರೊಮ್ಯಾಂಟಿಕ್ ಯುಗದ ಶ್ರೇಷ್ಟ ಕೃತಿಗಳೆನಿಸಿಕೊಂಡವು. ಈತ 1799-1804ರ ಅವಧಿಯಲ್ಲಿ ಬರೆದ ಜಿನೋವಿವ ಮತ್ತು ಕೈಸರ್ ಆಕ್ಟೆವಿಯಾನಸ್ ಎಂಬ ಎರಡು ನಾಟಕಗಳಲ್ಲಿ ತಾನು ಷೇಕ್ಸ್‍ಪಿಯರ್, ಕಾಲ್ಡೆರಾನ್ ಮುಂತಾದವರ ಕೃತಿಗಳಿಂದ, ಮಧ್ಯಯುಗದ ಕಲೆ ಹಾಗೂ ಸಾಹಿತ್ಯ ಕೃತಿಗಳಿಂದ ಗ್ರಹಿಸಿದ ವಿಚಾರಗಳನ್ನು ಭಟ್ಟಿ ಇಳಿಸಿದ್ದಾನೆ. 1799ರಲ್ಲಿ ಈತ ಡಾನ್ ಕ್ವಿಕ್ಸಟ್ ಕಾದಂಬರಿಯ ಅನುವಾದವನ್ನು ಪ್ರಾರಂಭಿಸಿ ಹಲವು ಕಾಲ ಆ ಕೆಲಸದಲ್ಲಿ ತೊಡಗಿದ್ದು ಮುಗಿಸಿದ. ತಾನು ಆ ವರೆಗೆ ಬರೆದಿದ್ದ ಅದ್ಬುತ ಕಿನ್ನರ ಕಥೆಗಳೆಲ್ಲವನ್ನೂ ಫ್ಯಾಂಟಸಸ್ (1812-16) ಎಂಬ ಹೆಸರಿನಲ್ಲಿ ಸಂಗ್ರಹಿಸಿದ. 1799ರಷ್ಟು ಹಿಂದೆಯೇ ಈತ ಷ್ಲೆಗಲ್ ಸಾಹಿತಿಗಳ ಕೂಟ ಸೇರಿ ಅವರ ಸಾಹಿತ್ಯ ತತ್ತ್ವಗಳನ್ನು ಕಾರ್ಯಗತಗೊಳಿಸುವುದರಲ್ಲಿ ನೆರವಾದ. ಷ್ಲೆಗಲ್ ಪೂರ್ಣಗೊಳಿಸದೆ ಬಿಟ್ಟಿದ್ದ ಷೇಕ್ಸ್‍ಪಿಯರ್ ಭಾಷಾಂತರಗಳನ್ನು ಮುಗಿಸಲು ವ್ಯವಸ್ಥೆ ಮಾಡಿದ. 1829ರಿಂದ1842ರ ವರೆಗೆ ಡ್ರೆಸ್ ಡೆನ್‍ನಲ್ಲಿ ರಂಗಭೂಮಿಯ ಸಲಹೆಗಾರನಾಗಿದ್ದ. 1853ರಲ್ಲಿ ಬರ್ಲಿನ್‍ನಲ್ಲಿ ಕಾಲವಾದ. ಟೀಕ್ ಹಲವು ಹತ್ತು ವಿಚಾರಗಳಲ್ಲಿ ಪಾಂಡಿತ್ಯ, ಪ್ರತಿಭೆ ಪಡೆದಿದ್ದರೂ ಬೆಲೆಬಾಳುವ ಯಾವ ಒಂದು ವಿಶಿಷ್ಟ ಕೃತಿಯನ್ನೂ ಬರೆಯಲಿಲ್ಲ ಎನ್ನುವುದು ವಿಮರ್ಶಕರ ಅಭಿಮತ. ಆದರೆ ಗಯಟೆ ಪ್ರಾರಂಭಿಸಿ ಬಿಟ್ಟು ಹೋಗಿದ್ದ ನೋವೆಲ ಎಂಬ ರಮ್ಯ ನೀಳ್ಗತೆಯ ಪ್ರಕಾರವನ್ನು ದಷ್ಟಪುಷ್ಟವಾಗಿ ಬೆಳೆಸಿದ ಶಾಶ್ವತ ಕೀರ್ತಿ ಈತನದು.ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: