ವಿಷಯಕ್ಕೆ ಹೋಗು

ಲೀ ಡೀ ಫಾರೆಸ್ಟ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೀ ಡೀ ಫಾರೆಸ್ಟ್‌ (1873-1961). ಅಮೆರಿಕದ ಉಪಜ್ಞಕಾರ. ರೇಡಿಯೊದ ಜನ್ಮದಾತ ಎಂದು ಪ್ರಸಿದ್ಧನಾಗಿದ್ದಾನೆ. ಈತ ಉಪಜ್ಞಿಸಿದ ಆಡಿಯಾನ್ ಎಂಬ ಹೆಸರಿನ ಟ್ರಯೋಡ್ ಕವಾಟವೇ ಇಂದಿನ ಸಾಂಪ್ರದಾಯಿಕ ರೇಡಿಯೊದ ಅಡಿಪಾಯ. ನಿಸ್ತಂತು ದೂರಲೇಖನಕ್ಕೆ (ವೈರ್‍ಲೆಸ್ ಟೆಲಿಗ್ರಫಿ) ಹೇಗೆ ಮಾರ್ಕೊನಿ ಶ್ರಮಿಸಿದನೋ ಹಾಗೆ ಡೀ ಫಾರೆಸ್ಟ್ ರೇಡಿಯೊ ಪ್ರೇಷಕ ಹಾಗೂ ಗ್ರಾಹಕಗಳ ತಯಾರಿಕೆ ಮತ್ತು ಅಭಿವೃದ್ಧಿಗಳಿಗೆ ಶ್ರಮಿಸಿದ.

ಬದುಕು

[ಬದಲಾಯಿಸಿ]

ಲೀ ಹುಟ್ಟಿದುದು ಅಮೆರಿಕದ ಸಂಯುಕ್ತಸಂಸ್ಥಾನದ ಅಯೋವ ರಾಜ್ಯದಲ್ಲಿರುವ ಕೌನ್ಸಿಲ್ ಬ್ಲಫ್ ಎಂಬ ಊರಿನಲ್ಲಿ (26-8-1873). ತಂದೆ ಹೆನ್ರಿ ಸ್ವಿಫ್ಟ್ ಡೀ ಫಾರೆಸ್ಟ್ ಅಲಬಾಮದಲ್ಲಿ ಒಬ್ಬ ಪ್ರಾಟೆಸ್ಟಂಟ್ ಧರ್ಮಪ್ರಚಾರಕನಾಗಿದ್ದ. ಇವನ ಪೂರ್ವಜರು ಫ್ರೆಂಚ್ ರಾಷ್ಟ್ರೀಯರು. ತಾಯಿ ಅನ್ನಾ ಮಾರ್ಗರೆಟ್ ರಾಬಿನ್ಸ್ ಕುಡ ಓರ್ವ ಧರ್ಮಪ್ರಚಾರಕನ ಮಗಳು. ತಂದೆ ನೀಗ್ರೋಗಳ ವಿದ್ಯಾಭ್ಯಾಸ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಲಿದ್ದ ಅಲಬಾಮದ ಟಲ್ಲದೇಗ ಕಾಲೇಜಿನ ಅಧ್ಯಕ್ಷ. ಅವನು ನೀಗ್ರೋಗಳ ಅಭಿಮಾನಿ ಆಗಿದ್ದುದರಿಂದ ಇತರ ಬಿಳಿಯ ಹುಡುಗರು ಮಗ ಲೀಯನ್ನು ದೂರವಾಗಿಟ್ಟರು. ಏಕಾಂಗಿಯಾದ ಲೀ ಕೆಲವು ಒರಟಾದ ಸಲಕರಣೆಗಳನ್ನು ಇಟ್ಟುಕೊಂಡು ವೈಜ್ಞಾನಿಕ ಉಪಕರಣಗಳನ್ನು ಸೃಜಿಸುವುದರಲ್ಲಿ ಮಗ್ನನಾದ. ಹೊಸತರಹೆಯ ಒಂದು ಉಬ್ಬಲು ಬಾಗಿಲನ್ನೂ (ಗೇಟ್) ಮರದಿಂದಲೇ ಮಾಡಿದ. ಒಂದು ರೈಲು ಎಂಜಿನ್ನನ್ನೂ ತನ್ನದೇ ಆದ ವಿದ್ಯುತ್ ಮೋಟಾರನ್ನೂ ತಯಾರಿಸಿದ . ಹದಿನೈದು ವರ್ಷ ವಯಸ್ಸಿನಲ್ಲೇ ನಿರಂತರ ಚಲನೆಯ ರಹಸ್ಯವನ್ನು ಕಂಡುಕೊಂಡೆನೆಂದು ಸಾರಿದ.

ಲೀಯ ತಂದೆಗೆ ತನ್ನಂತೆ ಮಗನೂ ಧರ್ಮಪ್ರಚಾರಕನಾಗಲೆಂದು ಆಸೆ. ಅದಕ್ಕಾಗಿ ಲ್ಯಾಟಿನ್-ಗ್ರೀಕ್ ಭಾಷೆಗಳನ್ನು ಕಲಿಯೆಂದು ಮಗನಿಗೆ ಹೇಳಿದ. ಮಗ ತನಗೆ ವಿಜ್ಞಾನ-ಎಂಜಿನಿಯರಿಂಗಿನಲ್ಲಿಯೇ ಆಸಕ್ತಿ, ಕೌಶಲಗಳು ಇವೆಯೆಂದು ಹೇಳಿ ಬೇರೆ ಹಾದಿಯನ್ನು ಹಿಡಿದ. ಯೇಲ್ ವಿಶ್ವವಿದ್ಯಾಲಯದ ಷೆಫೀಲ್ಡ್ ಸೈಂಟಿಫಿಕ್ ಸ್ಕೂಲನ್ನು ಸೇರಿ 1896ರಲ್ಲಿ ಪಿಎಚ್.ಡಿ. ಡಿಗ್ರಿಯನ್ನು ಪಡೆದ. ಸಮಾಂತರ ತಂತಿಗಳ ತುದಿಯಲ್ಲಿ ಹಟ್ರ್ಜಿಯನ್ ಅಲೆಗಳ ಪ್ರತಿಫಲನ ಎಂಬ ತನ್ನ ಮಹಾ ಪ್ರಬಂಧಕ್ಕಾಗಿ ಪಿಎಚ್.ಡಿ. ಡಿಗ್ರಿಯನ್ನು ಸಂಪಾದಿಸಿದ (1899).

ಲೀ ನಾಲ್ಕು ಸಲ ಮದುವೆ ಮಾಡಿಕೊಂಡ. 1906ರಲ್ಲಿ ಮಿಸ್ ಲೂಸಿಲ್ ಷಿಯರ್‍ಡೌನ್ ಎಂಬ ಹುಡುಗಿಯನ್ನು ಅವಳ ಮನೆಯಲ್ಲಿ ತಾನೇ ಇರಿಸಿದ ನಿಸ್ತಂತು ಉಪಕರಣದ ಮೂಲಕ ವಿವಾಹದ ಪ್ರಸ್ತಾಪವನ್ನು ಮಾಡಿ ಮದುವೆ ಮಾಡಿಕೊಂಡ. ಆದರೆ ಈ ಮದುವೆ ಒಂದೇ ವರ್ಷದಲ್ಲಿ ಮುರಿದು ಬಿತ್ತು.

ಅಸಂಖ್ಯಾತ ಸಂಘ ಸಂಸ್ಥೆಗಳು ಲೀಗೆ ಗೌರವವನ್ನು ಅರ್ಪಿಸಿವೆ. ಕೊನೆಯವರೆಗೂ ಅವನು ಕೆಲಸ ಮಾಡುತ್ತಲೇ ಇದ್ದ-ಎಂಬತ್ತ ನಾಲ್ಕನೆಯ ವಯಸ್ಸಿನಲ್ಲೂ ಒಂದು ಏಕಸ್ವವನ್ನು ಪಡೆದ. ತನ್ನ ಎಂಬತ್ತೈದು ವರ್ಷದ ಜೀವನದಲ್ಲಿ ಮುನ್ನೂರಕ್ಕೂ ಹೆಚ್ಚಿನ ಏಕಸ್ವಗಳನ್ನು ಸಂಪಾದಿಸಿದ್ದ. ಆತ್ಮಕಥೆಯನ್ನು ದಿ ಫಾದರ್ ಆಫ್ ರೇಡಿಯೊ (ರೇಡಿಯೊ ಜನ್ಮದಾತ) ಎಂಬ ಶೀರ್ಷಿಕೆಯಲ್ಲಿ 1950ರಲ್ಲಿ ಪ್ರಕಟಿಸಿದ. ಅವಿಶ್ರಾಂತ ದುಡಿಮೆಯ, ಹಲವು ಯಶಸ್ಸುಗಳ, ಹೇರಳವಾಗಿ ಐಶ್ವರ್ಯವನ್ನು ಗಳಿಸಿ, ಅಳಿಸಿದ- ಅವನಿಗೆ ಹಣಕಾಸಿನ ವ್ಯವಹಾರ ಕುಶಲತೆ ಇರಲಿಲ್ಲ. ಲೀ ಡೀಫಾರೆಸ್ಟನ ಜೀವನ 30-6-1961ರಲ್ಲಿ ಕೊನೆಗೊಂಡಿತು.

ಸಂಶೋಧನೆಗಳು

[ಬದಲಾಯಿಸಿ]

ನಿಸ್ತಂತು ದೂರಲೇಖನ

[ಬದಲಾಯಿಸಿ]

ಮಾರ್ಕೊನಿ ಕೆಲಸಮಾಡಿ ಯಶಸ್ವಿಯಾಗಿದ್ದ ಈ ಕ್ಷೇತ್ರಕ್ಕೆ ಲೀ ಕೂಡ ವಿಜಯಾಕಾಂಕ್ಷಿಯಾಗಿ ಕಾಲಿಟ್ಟ. 1901ರಲ್ಲಿಯೇ ಮಾರ್ಕೊನಿ ರೇಡಿಯೋ ಸ್ಪಂದನಗಳನ್ನು ಕಂಡುಹಿಡಿಯಲು ಸಂಸೂಚಕ (ಡಿಟೆಕ್ಟರ್) ಆಗಿ ಉಪಯೋಗಿಸುತ್ತಿದ್ದ ಕೋಹೆರರ್ ಎಂಬ ಸಾಧನಕ್ಕಿಂತ ಹೆಚ್ಚು ಯಶಸ್ವಿಯಾದ ಸ್ಪಾಂಡರ್ ಎಂಬ ಎಲೆಕ್ಟ್ರಾಲಿಟಕ್ ಸಂಸೂಚಕವನ್ನು ತಯಾರಿಸಿದ. ಅದನ್ನು ಮಾರಾಟಮಾಡಲು ಬೇಕಾದ ಹಣಕಾಸಿನ ಮತ್ತು ಸಂಸ್ಥೆಯ ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡ. ತನ್ನದೇ ಪ್ರೇಷಕಗಳನ್ನು (ಟ್ರಾನ್ಸ್‍ಮೀಟರ್ಸ್) ಸ್ಥಾಪಿಸಿಕೊಂಡ. 1903ರ ಅನಂತರ ಹಲವು ಬಾರಿ ಇಂಗ್ಲೆಂಡ್, ಯೂರೋಪ್ ಪ್ರಯಾಣಮಾಡಿ ತನ್ನ ನಿಸ್ತಂತು ಉಪಕರಣಗಳನ್ನು ಪ್ರದರ್ಶಿಸಿದ.

1904ರಲ್ಲಿ ಲೀ ರಷ್ಯ-ಜಪಾನ್ ಯುದ್ಧದ ವರದಿಗಳನ್ನು ನಿಸ್ತಂತು ಮುಖಾಂತರ ರವಾನಿಸಿದ.

ಎಡಿಸನ್ ಪರಿಣಾಮ

[ಬದಲಾಯಿಸಿ]

ಅಮೆರಿಕದ ಇನ್ನೊಬ್ಬ ಪ್ರಖ್ಯಾತ ಉಪಜ್ಞಕಾರ ಥಾಮಸ್ ಆಲ್ವ ಎಡಿಸನ್ 1880ರಲ್ಲಿ ನಿರ್ಮಿಸಿದ ವಿದ್ಯುದ್ದೀಪಗಳ ಒಳಭಾಗದಲ್ಲಿ ಕಾರ್ಬನ್ ಕಣಗಳು ಸೇರಿಕೊಂಡು ಕಪ್ಪಗಾಗಿ ಬೆಳಕಿನ ಪ್ರಕಾಶವನ್ನು ಕಡಿಮೆ ಮಾಡುತ್ತಿರುವುದನ್ನು ಗಮನಿಸಿದ. ಇದಕ್ಕೆ ಕಾರಣವನ್ನು ಹುಡುಕುತ್ತಿದ್ದಾಗ (1883) ದೀಪದಲ್ಲಿ ಕಾರ್ಬನ್ ತಂತುವಿಗೆ ಸ್ವಲ್ಪದೂರದಲ್ಲಿ ಇರಿಸಿದ ಇನೊಂದು ಎಲೆಕ್ಟ್ರೋಡಿನಿಂದ ಅದು ಧನಾತ್ಮಕ (+) ಆಗಿದ್ದಾಗ ಒಂದು ವಿದ್ಯುತ್ಪ್ರವಾಹ ಹರಿಯುತ್ತದೆ ಎಂದು ಶೋಧಿಸಿದ. ಈ ವಿಚಿತ್ರ ಘಟನೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು. ಏಕೆಂದರೆ ಯಾರೂ ಅದುವರೆಗೆ ನಿರ್ವಾತದಲ್ಲಿ ಪ್ರವಾಹವನ್ನು ಹರಿಸಿರಲಿಲ್ಲ. ಮುಂದೆ 1897ರಲ್ಲಿ ಬ್ರಿಟಿಷ್ ವಿe್ಞÁನಿ ಜೆ.ಜೆ.ತಾಮ್ಸನ್ ಇದಕ್ಕೆ ಕಾರಣ ನೀಡಿದ. ಬಿಸಿಯಾದ ತಂತುವಿನಿಂದ ಹೊರದೂಡಲ್ಪಟ್ಟ ಎಲೆಕ್ಟ್ರಾನುಗಳು ಧನಾತ್ಮಕವಾದ ಫಲಕದೆಡೆಗೆ ಆಕರ್ಷಿತವಾಗಿ ಹರಿಯುವುದರಿಂದ ಹೀಗಾಗುವುದೆಂದ.

ಡೀ ಫಾರೆಸ್ಟನ ಅನಿಲ ಸಂಸೂಚಕ

[ಬದಲಾಯಿಸಿ]

ಡೀ ಫಾರೆಸ್ಟ್ ಒಂದು ವಿಷಯವನ್ನು ಗಮನಿಸಿದ; ಅವನ ಪ್ರೇಷಕ ಕೆಲಸಮಾಡುತ್ತಿದ್ದಾಗಲೆಲ್ಲ ಅಲ್ಲಿದ್ದ ಒಂದು ಅನಿಲ ದೀಪದ ಮ್ಯಾಂಟಲ್ ಮಂಕಾಗಿ ಉರಿಯುತ್ತಿತ್ತು (ಎಡಿಸನ್ ಪರಿಣಾಮ). ಇದನ್ನು ನಿಸ್ತಂತು ಅಲೆಗಳ ಸಂಸೂಚನೆಗಾಗಿ (ಪತ್ತೆ) ಉಪಯೋಗಿಸಬಹುದೇ ಎಂದು ಆಲೋಚಿಸಿ ಬುನ್ಸೆನ್ ಬುಡ್ಡಿಯ ಜ್ವಾಲೆಯಲ್ಲಿ ಎರಡು ಪ್ಲಾಟಿನಮ್ ತಂತಿಗಳನ್ನು ಇರಿಸಿ ಒಂದು ಗ್ಯಾಲ್ವನಾಮಾಪಕದಲ್ಲಿ ತಂತಿಗಳ ನಡುವೆ ಹರಿಯುವ ಪ್ರವಾಹ ನಿಸ್ತಂತು ಅಲೆಗಳಿಂದ ವ್ಯತ್ಯಾಸ ಹೊಂದುತ್ತದೆಂದು ಕಂಡುಕೊಂಡ. ಮತ್ತೆ ಇದರಿಂದ ನಿಸ್ತಂತು ಸ್ಪಂದನಗಳನ್ನು ಒಂದು ಹೆಡ್‍ಪೋನಿನಲ್ಲಿ ಕೇಳಬಹುದೆಂದೂ ನೋಡಿದ.

ಡಯೋಡ್ ಸಂಸೂಚಕ

[ಬದಲಾಯಿಸಿ]

ಇದೇ ಪ್ರಯೋಗವನ್ನು ವಿದ್ಯುದ್ದೀಪದಲ್ಲಿ ತಂತು ಮತ್ತು ಎರಡನೆಯ ಇನ್ನೊಂದು ಎಲೆಕ್ಟ್ರೋಡಿನ ಮಧ್ಯೆ ಹರಿಯುವ ಪ್ರವಾಹದಲ್ಲಿಯೇ ಮಾಡಿದ. ಈ ಡಯೋಡ್ ಸಂಸೂಚಕದಲ್ಲಿ ಅಪವ್ಯಯವಾಗಿ ಹರಿಯುತ್ತಿದ್ದ ನಿಸ್ತಂತು ಪ್ರವಾಹವನ್ನು ಹೆಚ್ಚು ಯಶಸ್ವಿಯಾಗಿ ಉಪಯೋಗಿಸಲು ದೀಪದ ಸುತ್ತ ತೆಳುವಾದ ತಗಡನ್ನು ಸುತ್ತಿ ಅದನ್ನೂ ಮಂಡಲದಲ್ಲಿ ಜೋಡಿಸಿದಾಗ ಸಂಸೂಚಕ ಬಲು ಯಶಸ್ವಿಯಾಗಿ ಕೆಲಸಮಾಡಿತು. ಮಾರ್ಕೊನಿಯ ಸಲಹೆಗಾರನಾಗಿದ್ದ ಜೆ.ಎ.ಫ್ಲೆಮಿಂಗ್ ಡೀ ಫಾರೆಸ್ಟನ ಸಾಧನೆಗಳೆಲ್ಲವೂ ತಾನು ನಿರ್ಮಿಸಿದ ಫ್ಲೆಮಿಂಗ್ ಕವಾಟದ ಇನ್ನೊಂದು ರೂಪ ಮಾತ್ರ ಎಂದು ವಾದಹೂಡಿ ಮೊಕದ್ದಮೆ ಹೂಡಿದ. ಲೀ ತನ್ನ ಸಾಧನಗಳನ್ನು ತಾನೇ ಸ್ವತಂತ್ರವಾಗಿ ಮಾಡಿದ ಕೆಲಸದಿಂದ ಶೋಧಿಸಿದನೆಂದು ವಾದಿಸಿದನಾದರೂ ನ್ಯಾಯಾಲಯ ಮಾರ್ಕೊನಿ ಕಂಪನಿಯ ವಾದವನ್ನೇ ಎತ್ತಿಹಿಡಿಯಿತು.

ಆಡಿಯಾನ್

[ಬದಲಾಯಿಸಿ]

ಲೀ ತನ್ನ ಡಯೋಡಿಗೆ ಇನ್ನೊಂದು ಎಲೆಕ್ಟ್ರೋಡನ್ನು ಜೋಡಿಸಿ ತಯಾರಿಸಿದ ಸಂಸೂಚಕವನ್ನು ಆಡಿಯಾನ್ ಎಂದು ಕರೆದ. ಏಕೆಂದರೆ ಇದರ ಸಹಾಯದಿಂದ ನಿಸ್ತಂತು ಸ್ಪಂದಗಳನ್ನು ಕೇಳಬಹುದಾಯಿತು; ಅವನು ಟ್ರಯೋಡನ್ನು ಇನ್ನೂ ಉತ್ತಮಗೊಳಿಸಿದ. ಮೂರನೆಯ ಎಲೆಕ್ಟ್ರೋಡನ್ನು ಬಲ್ಬಿನ ಒಳಗೇ ಜೋಡಿಸಿದ. ನಿರ್ವಾತವನ್ನು ಹೆಚ್ಚಿಸಿದ. ಇದರಿಂದ ಆಡಿಯಾನಿನ ಸಾಮಥ್ರ್ಯ ಹೆಚ್ಚಿತು. ಅದು ದೂರದ ಪ್ರೇಷಕಗಳ ಸ್ಪಂದಗಳನ್ನೂ ಸ್ಪಷ್ಟವಾಗಿ ಗ್ರಹಿಸಲಾರಂಭಿಸಿತು. 1906ರ ವೇಳೆಗಾಗಲೇ ಅವನ ಪರಿಷ್ಕøತ ಆಡಿಯಾನ್ ಹಸ್ತಗತವಾಗಿತ್ತು.

ಆಡಿಯಾನ್ ಪ್ರೇಷಕ

[ಬದಲಾಯಿಸಿ]

1907ರಲ್ಲಿಯೇ ಲೀ ಆಡಿಯಾನ್ ಸಹಾಯದಿಂದ ಒಂದು ಇಂಗಾಲಚಾಪ ಪ್ರೇಷಕವನ್ನು ಉಪಯೋಗಿಸಿಕೊಂಡು ನ್ಯೂಯಾರ್ಕಿನಿಂದ ರೇಡಿಯೊ ಕಾರ್ಯಕ್ರಮಗಳನ್ನು ಬಿತ್ತರಿಸಿದ. ಹತ್ತಿರದಲ್ಲಿದ್ದ ಕ್ರಿಸ್ಟಲ್-ಬಿಕ್ಕಿನ ಮೀಸೆ (ಕ್ಯಾಟ್ಸ್ ವಿಸ್ಕರ್ಸ್) ರೇಡಿಯೊಗಳನ್ನು ಹೊಂದಿದ್ದ ರೇಡಿಯೊ ಹವ್ಯಾಸಿಗಳು ಇವನಿಂದ ಆಡಿಯಾನುಗಳನ್ನು ಬೇಡಲಾರಂಭಿಸಿದರು. ಆದರೆ ಬೆಲೆ ಎಂಟು ಡಾಲರುಗಳಷ್ಟಾಯಿತು. ಆದರೂ ಅದಕ್ಕೆ ಬಂದ ಬೇಡಿಕೆಗಳನ್ನು ಪೂರೈಸುವುದು ಕಷ್ಟವಾಯಿತು. 1910ರಲ್ಲಿ ನ್ಯೂಯಾರ್ಕಿನ ಮೆಟ್ರೊಪಾಲಿಟನ್ ಆಪೆರ ಹೌಸ್‍ನಿಂದ ಎನ್ರಿಕೋ ಕ್ಯಾರುಸೋ ಎಂಬಾತನ ಸಂಗೀತವನ್ನು ಲೀ ಬಿತ್ತರಿಸಿದ. ಅಲ್ಲಿಯವರೆಗೂ ರೇಡಿಯೊ ಕಾರ್ಯಕ್ರಮಗಳಲ್ಲಿ ಗ್ರಾಮಪೋನ್ ಸಂಗೀತವನ್ನು ಮಾತ್ರ ಹಾಕುತ್ತಿದ್ದರು. ಲೀ ಮೊದಲ ಬಾರಿಗೆ ಮೈಕ್ರೊಫೋನುಗಳನ್ನು ಉಪಯೋಗಿಸಿ ಸಜೀವ ಸಂಗೀತವನ್ನು ಬಿತ್ತರಿಸಿದ. 1916ರಲ್ಲಿ ಮೊದಲ ರೇಡಿಯೊ ಸ್ಟೇಷನನ್ನು ಸ್ಥಾಪಿಸಿದ. ಸಮಾಚಾರಗಳನ್ನು ಬಿತ್ತರಿಸಿದವನೂ ಅವನೇ. ಅಮೆರಿಕದ ಅಧ್ಯಕ್ಷ ಚುನಾವಣೆಯ ಫಲಿತಾಂಶಗಳನ್ನು ರೇಡಿಯೊದಿಂದ ಬಿತ್ತರಿಸಿದ. 1912ರ ವೇಳೆಗೆ ಆಡಿಯಾನ್ ಇನ್ನೂ ಸಾಮಥ್ರ್ಯಯುತವಾಯಿತು- ಆಗ ಚಾಲ್ತಿಯಲ್ಲಿದ್ದ ಅತಿ ಹೆಚ್ಚಿನ ನಿರ್ವಾತವನ್ನು ಬಳಸಿ, ಉತ್ತಮವಾದ ಟಂಗ್‍ಸ್ಟನ್ ಲೋಹದ ತಂತುಗಳನ್ನು ಉಪಯೋಗಿಸಲಾದುದರಿಂದ. ಇದೇ ಸಮಯದಲ್ಲಿ ಮರುಭರಣ (ಫೀಡ್‍ಬ್ಯಾಕ್) ತತ್ತ್ವವನ್ನು ಉಪಯೋಗಿಸಿ ಟ್ರಯೋಡ್ ಆಂದೋಲಕವನ್ನೂ (ಆಸಿಲೇಟರ್) ಲೀ ತಯಾರಿಸಿದ. ಇದರಿಂದ ಆಧುನಿಕ ರೇಡಿಯೊ ಪ್ರೇಷಕಗಳನ್ನು ನಿರ್ಮಿಸುವುದು ಸಾಧ್ಯವಾಯಿತು. ಆಡಿಯಾನ್ ಸಹಾಯದಿಂದ ಸಾಗರಾಂತರ ರೇಡಿಯೊ ದೂರವಾಣಿ ಸಂಪರ್ಕ ಸಾಧ್ಯವಾಯಿತು. 1915ರಲ್ಲಿ ವೆಸ್ಟರ್ನ್ ಎಲೆಕ್ಟ್ರಿಕ್ ಕಂಪನಿ ಅಮೆರಿಕದಿಂದ ಫ್ರಾನ್ಸಿಗೂ ಹವಾಯಿಗೂ ರೇಡಿಯೊ ಟೆಲಿಫೋನ್ ಸಂಪರ್ಕ ಕಲ್ಪಿಸಿತು. ಆಡಿಯಾನನ್ನು ಮಾರಿ ಲೀ 390,000 ಡಾಲರ್ ಸಂಪಾದಿಸಿದ. ಆಡಿಯಾನ್-ಟ್ರಯೋಡ್ ಕವಾಟ ಮಾನವನ ಸಂಪರ್ಕಸಾಧನಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿತು. ಯುದ್ಧದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ, ಎಲ್ಲೆಲ್ಲೂ ಅದು ಪ್ರವೇಶಿಸಿ ಅದು ಹೋಗದ ಕ್ಷೇತ್ರವೇ ಇಲ್ಲವೆಂದಾಯಿತು.

ರೇಡಿಯೊದಲ್ಲಿ ಆಸಕ್ತಿ ಕಳೆದುಕೊಂಡ ಲೀ ಮಾತನಾಡುವ ಚಲನಚಿತ್ರಗಳ ಕಡೆ ಗಮನ ಕೊಟ್ಟ. 1923ರಲ್ಲಿ ನ್ಯೂಯಾರ್ಕಿನ ರಿವೋಲಿ ಥಿಯೇಟರಿನಲ್ಲಿ ಫಿಲ್ಮ್ ಮೇಲೆ ರೆಕಾರ್ಡ್ ಮಾಡಿದ ಶಬ್ದಗಳನ್ನು ಒಳಗೊಂಡ ಟಾಕೀ ಚಲನಚಿತ್ರವನ್ನು ಮೊದಲು ಲೀ ಪ್ರದರ್ಶಿಸಿದ. 1927ರಲ್ಲಿ ವಾರ್ನರ್ ಬ್ರದರ್ಸ್ ಸಂಸ್ಥೆ ಅವನ ಉತ್ತಮಗೊಳಿಸಿದ ಶಬ್ದ ವ್ಯವಸ್ಥೆಯನ್ನು ತಮ್ಮ ಚಲನಚಿತ್ರಗಳಲ್ಲಿ ಅಳವಡಿಸಿಕೊಂಡರು.

ಇತರ ಉಪಕರಣಗಳು

[ಬದಲಾಯಿಸಿ]

ಮುಂದೆ ಲೀ ದೂರದರ್ಶಕದಲ್ಲಿ (ಟೆಲಿವಿಷನ್) ಆಸಕ್ತನಾದ. ಆಸ್ಪತ್ರೆಗಳಲ್ಲಿನ ಶಸ್ತ್ರ ಚಿಕಿತ್ಸಾಗಾರಗಳಲ್ಲಿ ಅತಿ ಉಪಯುಕ್ತವಾದ ಡಯಾಥರ್ಮಿ ಯಂತ್ರಗಳನ್ನು ತಯಾರಿಸಿ ಬಳಕೆಗೆ ತಂದ. ಆದರೆ ರೇಡಿಯೊವನ್ನು ದುಡ್ಡು ಮಾಡಲು ಉಪಯೋಗಿಸಿದ ಮಾರುಕಟ್ಟೆಯ ವಿಧಾನಗಳು ಅವನಿಗೆ ಜುಗುಪ್ಸೆಯನ್ನು ಉಂಟುಮಾಡಿದವು. ರೇಡಿಯೊವನ್ನು ಸಂಸ್ಕøತಿಯ ಮತ್ತು ವಿದ್ಯಾಭ್ಯಾಸದ ಪ್ರಸಾರಕ್ಕಾಗಿ ಉಪಯೋಗಿಸಬೇಕೆಂದು ಅವನ ಆಸೆಯಾಗಿತ್ತು. ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಪ್ರಸಾರಮಾಡುತ್ತಿದ್ದುದನ್ನು ಅವನ್ನು ಖಂಡಿಸಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: