ಲಿಟ್ಟನ್ ಸ್ಟ್ರೇಚಿ
ಲಿಟ್ಟನ್ ಸ್ಟ್ರೇಚಿ | |
---|---|
ಜನನ | ಗೈಲ್ಸ್ ಲಿಟ್ಟನ್ ಸ್ಟ್ರೇಚಿ ೧ ಮಾರ್ಚ್ ೧೮೮೦ ಲಂಡನ್ |
ಮರಣ | 21 January 1932 Ham, Wiltshire | (aged 51)
ವೃತ್ತಿ | ಲೇಖಕ,ವಿಮರ್ಶಕ |
ಗೈಲ್ಸ್ ಲಿಟ್ಟನ್ ಸ್ಟ್ರೇಚಿ(೧ ಮಾರ್ಚ್ ೧೮೮೦ – ೨೧ ಜನವರಿ ೧೯೩೨) ಗೈಲ್ಸ್ ಲಿಟ್ಟನ್ ಸ್ಟ್ರೇಚಿ ಇಂಗ್ಲೆಂಡಿನ ಲೇಖಕ ಮತ್ತು ವಿಮರ್ಶಕ.
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಈತ ೧೮೮೦ರ ಮಾರ್ಚ್ ೧ರಂದು ಲಂಡನ್‍ನಲ್ಲಿ ಜನಿಸಿದ. ತಂದೆ ಲೆಫ್ಟನೆಂಟ್ ಜನರಲ್ ಸರ್ ರಿಚರ್ಡ್ ಸ್ಟ್ರೇಚಿ ಶ್ರೇಷ್ಠ ಯೋಧ ಮತ್ತು ಸಾರ್ವಜನಿಕ ಆಡಳಿತಗಾರ. ರಿಚರ್ಡ್ ಸ್ಟ್ರೇಚಿ ೩೦ ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ. ತಾಯಿ ಲೇಡಿ ಸ್ಟ್ರೇಚಿ ಭಾಷೆಗಳು ಮತ್ತು ಸಾಹಿತ್ಯದಲ್ಲಿ ಆಸಕ್ತಿವುಳ್ಳವಳಾಗಿದ್ದಳು. ಭಾರತದ ವೈಸರಾಯ್ ಆಗಿದ್ದ ಅರ್ಲ್ ಆಫ್ ಲಿಟ್ಟನ್, ರಿಚರ್ಡ್‍ನ ಸ್ನೇಹಿತ, ಅವನ ಹೆಸರನ್ನೆ ತನ್ನ ೫ನೆಯ ಮಗನಿಗೆ ಲಿಟ್ಟನ್ ಎಂದು ಇಟ್ಟ. ೧೮೮೭ರಿಂದಲೇ ಲಿಟ್ಟನ್ ಫ್ರೆಂಚ್ ಭಾಷೆಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ. ಈತ ಸಂಸ್ಕೃತಿಯನ್ನು ಬಹಳವಾಗಿ ಮೆಚ್ಚಿದ್ದ. ಈತ ಕೇಂಬ್ರಿಜ್ ಮತ್ತು ಲಿವರ್‍ಪೂಲ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ. ಈತ ಎಡಿನ್ ಬರೋ ರಿವ್ಯೂ, ನೇಷನ್ ಅಥೇನುಯೆಮ್, ಸ್ಪೆಕ್ಟೇಟರ್ ಮುಂತಾದ ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆಯಲು ಪ್ರಾರಂಭಿಸಿದ. ‘ಬ್ಲೂಮ್ಸ್‌ಬರಿ ಗುಂಪಿ’ನ ಪ್ರಮುಖ ಸದಸ್ಯನಾಗಿದ್ದ.
ಬರವಣಿಗೆ ಶೈಲಿ
[ಬದಲಾಯಿಸಿ]ಲಿಟ್ಟನ್ ಸ್ಟ್ರೇಚಿ ಜೀವನ ಚರಿತ್ರೆಗಳ ರಚನೆಯಲ್ಲಿ ನಾಯಕನ ಉದಾತ್ತ ಗುಣಗಳನ್ನು ಹಾಡಿ ಹೊಗಳುವ, ನಿಧನರಾದವರ ನೆನಪಿಗಾಗಿ ಸಂಪುಟಗಳನ್ನು ಪ್ರಕಟ ಮಾಡುವ ಸಂಪ್ರದಾಯಗಳನ್ನು ತಳ್ಳಿಹಾಕಿದ. ವ್ಯಂಗ, ಕಟಕಿ, ಹರಿತವಾದ ಶೈಲಿ ಇವು ಇವನ ಬರೆವಣಿಗೆಯ ವೈಶಿಷ್ಟ್ಯ. ಮನುಷ್ಯ ಸ್ವಭಾವದ ಜಟಿಲತೆ, ವೈಚಿತ್ರ್ಯಗಳಲ್ಲಿ ಈತನಿಗೆ ಆಸಕ್ತಿ. ನಿರ್ಲಿಪ್ತತೆ, ವಿವೇಚನೆ, ಕೃತ್ರಿಮವಿಲ್ಲದ ಮಾನವ ಬಾಂಧವ್ಯ ಇವುಗಳನ್ನು ಹೆಚ್ಚಾಗಿ ಮೆಚ್ಚುತ್ತಾನೆ. ಈತ ರಚಿಸಿದ ಜೀವನಚರಿತ್ರೆಗಳು ಕಾದಂಬರಿಗಳಂತೆ ಓದುಗರನ್ನು ಆಕರ್ಷಿಸುತ್ತವೆ. ಅನೇಕರು ಇವನನ್ನು ‘ಜೀವನ ಚರಿತ್ರೆಗಳ ಕಾದಂಬರಿಕಾರ’ ಎಂದೇ ಗುರುತಿಸುವರು. ಈತ ತನ್ನ ೫೧ನೆಯ ವಯಸ್ಸಿನಲ್ಲಿ (೧೯೩೨) ಹೊಟ್ಟೆಯ ಕ್ಯಾನ್ಸರ್ನಿಂದ ನಿಧನನಾದ.
ಸಾಹಿತ್ಯ
[ಬದಲಾಯಿಸಿ]ಈತನ ಲೈಫ್ ಅಂಡ್ ಲೆಟರ್ಸ್, ಲ್ಯಾಂಡ್ ಮಾರ್ಕ್ ಇನ್ ಫ್ರೆಂಚ್ ಲಿಟರೇಚರ್ (೧೯೧೨), ಎಮಿನೆಂಟ್ ವಿಕ್ಟೋರಿಯನ್ಸ್ (೧೯೧೮), ಕ್ವೀನ್ ವಿಕ್ಟೋರಿಯ (೧೯೨೧) ಎಂಬ ಕೃತಿಗಳು ಇವನಿಗೆ ಅಪಾರ ಯಶಸ್ಸನ್ನು ತಂದುಕೊಟ್ಟವು. ಜೀವನಚರಿತ್ರೆಯ ವಿಧಾನದಲ್ಲಿಯೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಬರೆಹಗಳೆಂದು ಇವು ಪ್ರಸಿದ್ಧವಾಗಿವೆ. ಬುಕ್ಸ್ ಅಂಡ್ ಕ್ಯಾರೆಕ್ಟರ್ಸ್ (೧೯೨೨), ಪೋಪ್ (೧೯೨೫), ಎಲಿಜಬೆತ್ ಅಂಡ್ ಎಸೆಕ್ಸ್ (೧೯೨೮), ಕ್ಯಾರೆಕ್ಟರ್ಸ್ ಅಂಡ್ ಕಾಮೆಂಟರೀಸ್ (೧೯೩೩) ಇವು ಈತನ ಮುಖ್ಯ ಕೃತಿಗಳು. ಇವನ ನಿಧನದ ಅನಂತರ ‘ಕ್ಯಾರೆಕ್ಟರ್ ಅಂಡ್ ಕಾಮೆಂಟರೀಸ್’ ಕೃತಿ ಪ್ರಕಟವಾಯಿತು. ಈತ ಬರೆದ ಹಾಲ್ರಾಮ್ಡ್‌ರ ಜೀವನಚರಿತ್ರೆ ಎರಡು ಸಂಪುಟಗಳಲ್ಲಿ ೧೯೬೭-೬೮ರಲ್ಲಿ ಪ್ರಕಟಗೊಂಡಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by Lytton Strachey at Project Gutenberg
- Works by ಲಿಟ್ಟನ್ ಸ್ಟ್ರೇಚಿ at LibriVox (public domain audiobooks)
- Lincoln Allison (Reader in Politics, University of Warwick) Colourful Eminence – Lytton Strachey's Eminent Victorians: a Retrospective Review Archived 2021-10-09 ವೇಬ್ಯಾಕ್ ಮೆಷಿನ್ ನಲ್ಲಿ. Social Affairs Unit Web Review, July 2005
- S. P. Rosenbaum, 'Strachey, (Giles) Lytton (1880–1932)’, Oxford Dictionary of National Biography, Oxford University Press, September 2004; online edn, May 2006
- Charleston Farmhouse