ಲಲಿತಾ ಶ್ರೀನಿವಾಸನ್
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಲಲಿತಾ ಶ್ರೀನಿವಾಸನ್ | |
---|---|
ಜನನ | ಮಾರ್ಚ್ ೨೪, ೧೯೪೩ ಶಿವನಸಮುದ್ರ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಭರತನಾಟ್ಯ ಕಲಾವಿದೆ |
ಪ್ರಿಯದರ್ಶಿನಿ ಲಲಿತಾ ಶ್ರೀನಿವಾಸನ್ ( ಮಾರ್ಚ್ ೨೪, ೧೯೪೩) ಭರತನಾಟ್ಯ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ.
ಜೀವನ
[ಬದಲಾಯಿಸಿ]ಲಲಿತಾ ಶ್ರೀನಿವಾಸನ್ ಅವರು ಮಾರ್ಚ್ ೨೪, ೧೯೪೩ರಂದು ಶಿವನಸಮುದ್ರದಲ್ಲಿ ಜನಿಸಿದರು. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಸಂಸ್ಕೃತದಲ್ಲಿ ಕೋವಿದ, ವಿದ್ವತ್ ಪರೀಕ್ಷೆಯಲ್ಲಿನ ಸಾಧನೆಗಳು ಮತ್ತು ಭರತನಾಟದಲ್ಲಿ ಶ್ರೇಷ್ಠ ಶ್ರೇಣಿಯ ಸಾಧನೆ ಮುಂತಾದವು ಅವರ ಶೈಕ್ಷಣಿಕ ಸಾಧನೆಗಳು.
ಆರಂಭದಲ್ಲಿ ಗುರು ಕೇಶವಮೂರ್ತಿ ಅವರ ಬಳಿ ಗೆಜ್ಜೆ ಕಟ್ಟಿದ ಅವರು ನಂತರ ಡಾ. ವೆಂಕಟಲಕ್ಷ್ಮಮ್ಮ ಅವರ ಅಭಿನಯದ ಗರಡಿಯಲ್ಲಿ ಪಳಗಿದರು. ಮೂಗೂರು ನೃತ್ಯ ಶೈಲಿಯನ್ನು ಜೇಜಮ್ಮ ಅವರಲ್ಲಿ ಕಲಿತರು. ಜೇಜಮ್ಮ ಅವರಿಗೆ ಕಣ್ಣು ಕಾಣದಿದ್ದರೂ ಹೆಜ್ಜೆಯಿಂದಲೇ ತಪ್ಪು ಗುರುತಿಸಿ ತಿದ್ದುತ್ತಿದ್ದರು.
ಮುಂದೆ ಅವರು ಅಮೆರಿಕಾದ ವೆಸ್ಲಿಯನ್ ವಿಶ್ವವಿದ್ಯಾಲಯದ್ಲ್ಲಲೂ ನೃತ್ಯ ಕಲಿಕೆ ಮುಂದುವರಿಸಿದರು. ಸಕಲ ಕಲೆಗಳಲ್ಲೂ ಆಸಕ್ತಿ ಉಳ್ಳ ಲಲಿತಾ ಅವರು ಶಿಲ್ಪಕಲೆ. ಚಿತ್ರ ಕಲೆ. ಒಳಾಗಂಣ ವಿನ್ಯಾಸ, ಮೇಕಪ್ ಕಲೆ. ಕೇಶ ವಿನ್ಯಾಸ, ಹೊಲಿಗೆ ಮುಂತಾದ ಹಲವಾರು ಕಲೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಕಾಸ್ಮೆಟಿಕ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ ಅನುಭವವೂ ಅವರೊಡನೆ ಇದೆ. ಲಲಿತಾ ಅವರ ಪ್ರಕಾರ ಇವೆಲ್ಲಾ ನೃತ್ಯ ದ ಭಾಗವೇ ಆಗಿದೆ. ಕ್ರಿಯಾಶೀಲ ನೃತ್ಯವನ್ನು ಕಟ್ಟಿಕೊಡುವಲ್ಲಿ ಇವು ಅಭಿನಯದ ವಿವಿಧ ಅಂಗಗಳು ಎನ್ನುತ್ತಾರೆ ಲಲಿತ.
ಲಲಿತಾ ಅವರಿಗೆ ನೃತ್ಯವೆಂದರೆ ಕೇವಲ ನೃತ್ಯವಲ್ಲ, ಅದೇ ಬದುಕು. 1956ರಲ್ಲಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಮೊದಲಿಗೆ ಭೂಮಿಕೆ (ರಂಗಪ್ರವೇಶ) ಏರಿದಂದಿನಿಂದ ಅವರ ಹೆಜ್ಜೆ ಗುರುತುಗಳು ನಿತ್ಯ ನಿರಂತರವಾಗಿವೆ.
ಭರತನಾಟ್ಯದಲ್ಲಿ ಲಾಲಿತ್ಯ
[ಬದಲಾಯಿಸಿ]ಲಲಿತಾ ಶ್ರೀನಿವಾಸನ್ ಅವರ ಕಲಾಜೀವನದಲ್ಲಿ ಕನ್ನಡದ ಮಣ್ಣಿನಲ್ಲಿ ಅರಳಿದ ಮೈಸೂರು ಶೈಲಿ ಭರತನಾಟ್ಯದಲ್ಲಿ ಲಾಲಿತ್ಯದ ಕಂಪಿದೆ. ಲಲಿತಾ ಅವರ ಕಲಾಭಿವ್ಯಕ್ತಿಯಲ್ಲಿ ನೃತ್ಯದ ಜೊತೆಗೆ, ಸಂಗೀತ, ಸಾಹಿತ್ಯ, ಅಭಿನಯ, ಶಿಲ್ಪಕಲೆ, ವಿನ್ಯಾಸ, ವಸ್ತ್ರ, ಬೆಳಕು, ಬಣ್ಣ, ಆಭರಣಗಳ ಸಮ್ಮೇಳವಿದೆ. ಅವರ ಹೆಜ್ಜೆಗಳಲ್ಲಿ ಸಾಹಿತ್ಯಾಸ್ವಾದ ಎದ್ದು ಕಾಣುತ್ತದೆ. ಅವರ ನೃತ್ಯನಾಟಕಗಳಲ್ಲಿ ಭಾವನೆಗಳ ಅಲೆ ಉಮ್ಮಳಿಸುತ್ತದೆ. ಅವರು ಬಾಲಕೃಷ್ಣನ ತುಂಟಾಟಗಳ ಮುಗ್ಧತೆ ತುಂಬಿದ್ದಾರೆ, ರಾಧೆ-ಕೃಷ್ಣರ ಪ್ರೇಮ ಸಲ್ಲಾಪಕ್ಕೆ ಉನ್ಮಾದ ತುಂಬಿದ್ದಾರೆ, ರಾಮ-ಲಕ್ಷ್ಮಣ ಸಂಬಂಧಕ್ಕೆ ಭ್ರಾತೃತ್ವ ತುಂಬಿದ್ದಾರೆ, ರಾಕ್ಷಸಿಯ ಚಂಡಿಯವತಾರಕ್ಕೆ ರೋಷ ತಂದಿದ್ದಾರೆ. ಇಷ್ಟೇ ಅಲ್ಲದೆ ರಂಗದ ಮೇಲೆ ವಿಜಯನಗರ ಸಾಮ್ರಾಜ್ಯವನ್ನು ಸೃಷ್ಟಿಸಿದ್ದಾರೆ. ಬೇಲೂರು ಶಿಲಾಬಾಲಿಕೆಯರನ್ನು ಕಡೆದು ನಿಲ್ಲಿಸಿದ್ದಾರೆ. ಮೇಲುಕೋಟೆಯ ಚೆಲುವನನ್ನು ಚಿತ್ರಿಸಿದ್ದಾರೆ.
ಸಂಶೋಧಕಿ
[ಬದಲಾಯಿಸಿ]ಭರತನಾಟ್ಯವೆಂದರೆ ತಂಜಾವೂರು ಶೈಲಿ ಎನ್ನುವ ಕಾಲಕ್ಕೆ ಲಲಿತಾ ಶ್ರೀನಿವಾಸನ್ ಮೈಸೂರು ಶೈಲಿಗೆ ರಾಯಭಾರಿಯಾಗಿ ನಿಂತವರು. ಸಾಂಪ್ರದಾಯಿಕ ಭರತನಾಟ್ಯಕ್ಕೆ ಎಲ್ಲೂ ಅಪಚಾರವಾಗದಂತೆ ನರ್ತನವನ್ನು ಪ್ರಸ್ತುತಗೊಳಿಸಿರುವ ಅವರು ಪ್ರಬುದ್ಧ ಸಂಶೋಧಕಿ. ಅವರ ಭರತನಾಟ್ಯದಲ್ಲಿ ವರದಕ್ಷಿಣೆ ವಿರುದ್ಧ ಹೋರಾಟವಿದೆ, ಸಬಲ ಹೆಣ್ಣಿನ ಛಲವಿದೆ.
ಮೈಸೂರು ಶೈಲಿ ಭರತನಾಟ್ಯದಲ್ಲಿ ಅವರು ಕೈಗೊಂಡಿರುವ ಸಂಶೋಧನೆಗಳು ನಾಟ್ಯವನ್ನು ವಿಶ್ವವ್ಯಾಪಿಗೊಳಿಸಿವೆ. ನೃತ್ಯ ಸಂಯೋಜಕಿಯಾಗಿ ಸಾವಿರಾರು ನೃತ್ಯ ನಾಟಕಗಳನ್ನು ವಿನ್ಯಾಸ ಮಾಡಿದ್ದಾರೆ.
ನೂಪುರ ಭರತನಾಟ್ಯ ಶಾಲೆ
[ಬದಲಾಯಿಸಿ]ಭರತನಾಟ್ಯದ ಬಗ್ಗೆ ಕರಾರುವಕ್ಕಾಗಿ ಮಾತನಾಡುವ ಲಲಿತಾ ಅವರು ನೂರಾರು ವಿಚಾರ ಸಂಕಿರಣ, ಕಮ್ಮಟಗಳಲ್ಲಿ ಉಪನ್ಯಾಸ ಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಕಾಗಿ ಅವರೊಬ್ಬ ಅದ್ಭುತ ನೃತ್ಯ ಗುರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮೂರು ದಶಕಗಳ ಹಿಂದೆ ಕಟ್ಟಿದ ‘’ನೂಪುರ ಭರತನಾಟ್ಯ ಶಾಲೆ’’ ವಿಶ್ವ ವಿಖ್ಯಾತಿ ಗಳಿಸಿದೆ. `ನೂಪುರ ಭರತನಾಟ್ಯ ವಿದ್ಯಾಲಯ’ ದಲ್ಲಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಗೆಜ್ಜೆ ಕಟ್ಟಿಸಿದ್ದಾರೆ. ಶಿಷ್ಯಂದಿರನ್ನು ವಿಶ್ವ ಪ್ರಸಿದ್ಧರಾಗಿ ಬೆಳೆಸಿದ್ದಾರೆ. ನೂಪುರ ಸಂಸ್ಥೆ ಆಯೋಜಿಸಿದ್ದ `ನಿತ್ಯ-ನೃತ್ಯ’ ರಾಷ್ಟ್ರೀಯ ನೃತ್ಯೋತ್ಸವ ಬೆಂಗಳೂರಿನಲ್ಲಿ ನಡೆದ ಪ್ರಥಮ ನೃತ್ಯ ಹಬ್ಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕನ್ನಡ ಸಾಹಿತ್ಯಕ್ಕೆ ನೃತ್ಯವೈಭವದ ಮೆರುಗು
[ಬದಲಾಯಿಸಿ]ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿರುವ ಭರತನಾಟ್ಯವನ್ನು ಕನ್ನಡೀಕರಿಸಿದ ಪ್ರಥಮ ಕಲಾವಿದೆ ಲಲಿತಾ ಶ್ರೀನಿವಾಸನ್. ಅತ್ಯಂತ ಸರಳ ಕನ್ನಡವನ್ನು ಭರತನಾಟ್ಯಕ್ಕೆ ಅಳವಡಿಸಿಕೊಂಡ ಅವರು ಕನ್ನಡಿಗರ ಹೃದಯಕ್ಕೆ ಹತ್ತಿರವಾದವರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಅಪಾರ ಪ್ರೀತಿ ಹೊಂದಿರುವ ಲಲಿತಾ ಅವರು, ರಾಷ್ಟ್ರಕವಿ ಕುವೆಂಪು ಅವರ `ಚಿತ್ರಾಂಗದ’ ಕಾವ್ಯವನ್ನು ಹೆಜ್ಜೆಗಿಳಿಸಿದ್ದಾರೆ. ಅರ್ಜುನ, ಚಿತ್ರಾಂಗದೆಯರ ಪ್ರಣಯ ಪ್ರಸಂಗ, ಬಬ್ರುವಾಹನ ಮತ್ತು ಅರ್ಜುನ ನಡುವಿನ ಯುದ್ಧ ಎಲ್ಲವೂ ಲಲಿತಾ ಅವರ ಹೆಜ್ಜೆ-ಗೆಜ್ಜೆಯಲ್ಲಿ ಹೊಸ ಲೋಕ ಸೃಷ್ಟಿಸಿವೆ.
ಕನ್ನಡ ನಾಡಿನ ಜನಪದವೂ ಲಲಿತಾರ ನೃತ್ಯದಲ್ಲಿದೆ ಎನ್ನುವುದಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ `ಗೌಡರ ಮಲ್ಲಿ’ ಕವಿತೆಯನ್ನು ನೃತ್ಯಕ್ಕಿಳಿಸಿರುವುದೇ ಸಾಕ್ಷಿ. ಈ ಕವಿತೆಗೆ ಲಲಿತಾ ಜನಪದ ಸ್ಪರ್ಶ ಕೊಟ್ಟಿದ್ದಾರೆ. ಸುಗ್ಗಿ ಕುಣಿತ, ಪೂಜಾಕುಣಿತ ಶೈಲಿಯ ನೃತ್ಯ ಸಂಯೋಜನೆ ನೋಡುಗರ ಮನದಾಳದಲ್ಲಿ ಅಳಿಯದೆ ಉಳಿಯುತ್ತದೆ. ಡಿ.ವಿ. ಗುಂಡಪ್ಪ ಅವರ ಅಂತಃಪುರ ಗೀತೆಗಳ 'ಲಾಸ್ಯೋತ್ಸವ’ ನೃತ್ಯ ನಾಟಕದಲ್ಲಿ ಸೌಂದರ್ಯ ವರ್ಣನೆ ಕಣ್ಣಿಗೆ ಕಟ್ಟುತ್ತದೆ. ಬೇಲೂರು ಶಿಲಾಬಾಲಿಕೆಯರೊಂದಿಗೆ ನರ್ತಿಸುವ ಚೆನ್ನಕೇಶವನ ನೃತ್ಯ, ಭಾವನೆಗಳನ್ನು ಇಮ್ಮಡಿಗೊಳಿಸುತ್ತದೆ.
ವಿ.ಕೃ. ಗೋಕಾಕರ ಭಾರತ ಸಿಂಧುರಶ್ಮಿ, ಸಮುದ್ರಗೀತೆಗಳನ್ನು ಲಲಿತಾ ಭೂಮಿಕೆಗೆ ತಂದಿದ್ದಾರೆ. ಜಿ.ಪಿ. ರಾಜರತ್ನಂ ಕನ್ನಡೀಕರಿಸಿರುವ `ದೇವಕನ್ನಿಕಾ’ (ಮೂಲ: ಆಂಡಾಳ್ ಕವಿಯ ತಿರುಪ್ಪಾವೈ) ಕಾವ್ಯವನ್ನು ರಂಗವೇರಿಸಿದ್ದಾರೆ.
ಕರ್ನಾಟಕ ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲುವ `ಕರ್ನಾಟಕ ನೃತ್ಯ ವಾಹಿನಿ’ ಲಲಿತಾ ಅವರ ಮತ್ತೊಂದು ಪ್ರಸಿದ್ಧ ಸಂಯೋಜನೆಯಾಗಿದೆ. ವಿಜಯನಗರ, ಮೈಸೂರು ಒಡೆಯರು, ಹೊಯ್ಸಳ ರಾಜರು ಇಲ್ಲಿ ಮೇಳೈಸುತ್ತಾರೆ. ಕನ್ನಡ ನಾಡಿನ ಸಂಸ್ಕೃತಿ, ಸಂಗೀತ, ಶಿಲ್ಪಕಲೆ ಕುರಿತು ವಿನ್ಯಾಸಗೊಳಿಸಿರುವ ಈ ನೃತ್ಯ ಸಂಯೋಜನೆ ಇಡೀ ಕರ್ನಾಟಕವನ್ನು ಒಟ್ಟಿಗೆ ಕಟ್ಟುತ್ತದೆ.
ರಾಧೆ-ಸತ್ಯಭಾಮೆಯ ಜಗಳವನ್ನು ವರ್ಣಿಸುವ `ಶ್ರೀಕೃಷ್ಣ ಪಾರಿಜಾತ’ ಲಲಿತಾ ಅವರ ಇನ್ನೊಂದು ಪ್ರಸಿದ್ಧ ಕನ್ನಡ ನೃತ್ಯ ನಾಟಕ. ಜಯದೇವನ ಗೀತ ಗೋವಿಂದ, ಸಿದ್ಧಯ್ಯ ಪುರಾಣಿಕರ ಕವಿತೆಗಳ ಮೇಲೂ ಲಲಿತಾ ನೃತ್ಯ ವಿನ್ಯಾಸ ಮಾಡಿದ್ದಾರೆ.
ಲಲಿತಾ ಶ್ರೀನಿವಾಸನ್ ಸಂಶೋಧಕಿಯಾಗಿ ಮೈಸೂರು ಶೈಲಿ ಭರತನಾಟ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಪುರಂದರದಾಸರ `ಸೂಳಾದಿ ಪ್ರಬಂಧವನ್ನು `ಸುಲಲಿತ ನೃತ್ಯ’ ಎಂದು ಕನ್ನಡೀಕರಿಸಿ ನೃತ್ಯ ನಾಟಕವಾಗಿ ವಿನ್ಯಾಸಿಸಿ ಪುರಂದರ ದಾಸರ ಜನ್ಮ ಶತಮಾನೋತ್ಸವದಲ್ಲಿ ಭೂಮಿಕೆಗೆ ತಂದಿದ್ದಾರೆ. ವರ್ಣ ಮತ್ತು ತಿಲ್ಲಾನಗಳನ್ನು ರಚಿಸಿ ವಿನ್ಯಾಸ ಮಾಡಿದ್ದಾರೆ. ಮೀರಾ ಭಜನೆಗಳಿಗೂ ಹೆಜ್ಜೆಗೂಡಿಸಿದ್ದಾರೆ.
ಸಾಹಿತ್ಯ ಸೃಷ್ಟಿ
[ಬದಲಾಯಿಸಿ]ಲಲಿತಾ ಅವರ ಎರಡು ಕೃತಿಗಳನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಿಸಿದೆ. ಕರ್ನಾಟಕ ನೃತ್ಯರಂಗ ಮತ್ತು ನೃತ್ಯ ಶಿಲ್ಪಗಳು ಹಾಗೂ ನೃತ್ಯ ಗುರು ಡಾ. ವೆಂಕಟಲಕ್ಷ್ಮಮ್ಮ ಅವರ ಜೀವನ ಚರಿತ್ರೆ ಕೃತಿಗಳು ಲೋಕಾರ್ಪಣೆಗೊಂಡಿವೆ.
ಸಾಂಕೃತಿಕ ರಾಯಭಾರಿ
[ಬದಲಾಯಿಸಿ]ಲಲಿತಾ ಅವರ ಸಂಶೋಧನೆ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಚಾರ ಸಂಕಿರಣ, ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆಗಳಲ್ಲೂ ಅವರು ಭಾಗಿ. ಲಂಡನ್‌ನಲ್ಲಿರುವ ಭಾರತೀಯ ವಿದ್ಯಾಭವನ, ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳು, ಆರ್ಟ್ ಫೋರಂಗಳಲ್ಲಿ ಮೈಸೂರು ಶೈಲಿ ಭರತನಾಟ್ಯದ ಬಗ್ಗೆ ಕಾರ್ಯಾಗಾರ ನಡೆಸಿದ್ದಾರೆ. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಗಾನಕಲಾ ಪರಿಷತ್, ಅಮೆರಿಕಾದ ವೆಸ್ಲಿಯನ್ ವಿವಿಗಳಲ್ಲಿ ಭರತನಾಟ್ಯದ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಅವರ ನೃತ್ಯಕಾರ್ಯಕ್ಕೆ ನೂರಾರು ಬಿರುದು, ಪ್ರಶಸ್ತಿಗಳು ಸಂದಿವೆ. ಕಳೆದ ವರ್ಷ ಅವರಿಗೆ ಶಾಂತಲಾ ನಾಟ್ಯರಾಣಿ ಪ್ರಶಸ್ತಿ ಸಂದಿದೆ.
ಮಾಹಿತಿ ಕೃಪೆ
[ಬದಲಾಯಿಸಿ]ಪ್ರಜಾವಾಣಿಯಲ್ಲಿ ಯೋಗೇಶ ಮಾರೇನಹಳ್ಳಿ ಅವರ ಲೇಖನ
ಅಂತರಜಾಲಪುಟ www.noopurabhramari.com ಚಿತ್ರಕೃಪೆ: ನೂಪುರಭ್ರಮರಿ
- Articles with too few wikilinks from ಡಿಸೆಂಬರ್ ೨೦೧೫
- Articles with invalid date parameter in template
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Orphaned articles from ಡಿಸೆಂಬರ್ ೨೦೧೫
- All orphaned articles
- Pages using infobox person with unknown parameters
- Articles with hCards
- ಭರತನಾಟ್ಯ ಕಲಾವಿದರು