ರಿಚರ್ಡ್ ಷೆನಿವೆ ಟ್ರೆಂಚ್
ರಿಚರ್ಡ್ ಷೆನಿವೆ ಟ್ರೆಂಚ್ (1807-83) : ಐರಿಷ್ ಕವಿ, ತತ್ತ್ವಶಾಸ್ತ್ರ ಲೇಖಕ.
ಬದುಕು
[ಬದಲಾಯಿಸಿ]ಹುಟ್ಟಿದ್ದು ಡಬ್ಲಿನ್‍ನಲ್ಲಿ. ಕೇಂಬ್ರಿಜ್‍ನಲ್ಲಿ ಶಿಕ್ಷಣ ಪಡೆದು ಈತ ಸ್ಪೇನಿಗೆ ತೆರಳಿ ಅಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ. ಕೆಲವು ಕಾಲ ವಿಂಚೆಸ್ಟರ್‍ನಲ್ಲಿ ಬಿಷಪ್ಪನಾಗಿದ್ದು, 1847ರಲ್ಲಿ ಲಂಡನಿನ ಕಿಂಗ್ಸ್ ಕಾಲೇಜಿನಲ್ಲಿ ದೇವಶಾಸ್ತ್ರದ ಪ್ರಾಧ್ಯಾಪಕನಾದ. 1856ರಲ್ಲಿ ವೆಸ್ಟ್‍ಮಿನ್‍ಸ್ಟರ್‍ನಲ್ಲಿ ಡೀನ್ ಆಗಿ ಕೆಲಸಮಾಡಿ 1864ರಲ್ಲಿ ಡಬ್ಲಿನ್ನಿನಲ್ಲಿ ಆರ್ಚ್‍ಬಿಷಪ್ ಹುದ್ದೆಗೇರಿ 20 ವರ್ಷಗಳ ಕಾಲ ಆ ಪದವಿಯಲ್ಲಿದ್ದ.
ಬರಹ
[ಬದಲಾಯಿಸಿ]ಈತ ರಚಿಸಿದ ಹಲವು ಕವನಗಳಲ್ಲಿ ಹೆಚ್ಚಿನ ಪ್ರತಿಭೆಯಿಲ್ಲದಿದ್ದರೂ ನವುರಾದ ಸಂವೇದನೆ, ಕಾವ್ಯದ ಹೊಳಪುಗಳಿವೆ. ಈತನ ತಾತ್ವಿಕ ಲೇಖನಗಳು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೂಡಿವೆ. ಈತನ ಬರೆಹಗಳಲ್ಲಿ ಯಾವೊಂದು ಸ್ವಂತಿಕೆಯಾಗಲಿ, ಗಾಢ ಒಳನೋಟವಾಗಲಿ ಇಲ್ಲವೆನ್ನುತ್ತಾರೆ. ನೋಟ್ಸ್ ಆನ್ ದಿ ಮಿರಕಲ್ಸ್ (1846), ಸೇಕ್ರಡ್ ಲ್ಯಾಟಿನ್ ಪೊಯೆಟ್ರಿ (1849), ದಿ ಸ್ಟಡಿ ಆಫ್ ವಡ್ರ್ಸ್ (1851), ಇಂಗ್ಲಿಷ್ ಪಾಸ್ಟ್ ಅಂಡ್ ಪ್ರೆಸೆಂಟ್ (1855), ಎಸ್ಸೆ ಆನ್ ದಿ ಲೈಫ್ ಅಂಡ್ ಜೀನಿಯಸ್ ಆಫ್ ಕಾಲ್ಡೆರಾನ್ (1856)-ಇವು ಈತನ ಜನಪ್ರಿಯ ಗ್ರಂಥಗಳಲ್ಲಿ ಗಮನಿಸಬಹುದಾದವು.