ವಿಷಯಕ್ಕೆ ಹೋಗು

ರಾಸ್ಪುಟಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಸ್ಪುಟಿನ್ (1871-1916) ಒಬ್ಬ ರಷ್ಯನ್ ಪಾದ್ರಿ. 1871ರಲ್ಲಿ ಪಶ್ಚಿಮ ಸೈಬೀರಿಯದ ನ್ಟಿಯುಮೆನ್ ಬಳಿಯಲ್ಲಿನ ಪೊಕ್ರೋವಸ್ಕೋಯ್ ಎಂಬ ಹಳ್ಳಿಯಲ್ಲಿ ಜನಿಸಿದ. ಚಕ್ರವರ್ತಿ ನಿಕೋಲಸ್‍ನ ಆಸ್ಥಾನದಲ್ಲಿ ಪ್ರಬಲ ವ್ಯಕ್ತಿಯೂ ಚಕ್ರವರ್ತಿಯ ಆಪ್ತನೂ ಆಗಿದ್ದ. ನೋವಿಖ್ ಎನ್ನುವುದು ಇವನ ಮೂಲ ಕುಟುಂಬನಾಮ. ಈತ ಸಾಂಪ್ರದಾಯಕ ಶಿಕ್ಷಣ ಪಡೆಯದಿದ್ದರೂ ಚುರುಕು ಬುದ್ಧಿಯವನೂ ಸಾಮಯಿಕ ಚಾಣಾಕ್ಷತೆಯುಳ್ಳ ವ್ಯಕ್ತಿಯೂ ಆಗಿದ್ದ. 1904ರ ವರೆಗೆ ಈತ ತನ್ನ ಹುಟ್ಟೂರಿನಲ್ಲಿಯೇ ವಾಸಿಸಿದ್ದ. ಅನಂತರ ತನ್ನ ಕುಟುಂಬವನ್ನು ತೊರೆದು ಮತಪ್ರಚಾರಕನಾದ.

ಬಾಲ್ಯದಲ್ಲಿ ಖಿಲಿಸ್ವೀ (ಫಾಜಿಲ್ಲೆಂಟ್ಸ್) ಎಂಬ ಪಂಥದ ಪ್ರಭಾವಕ್ಕೆ ಒಳಗಾಗಿದ್ದ. ತಾನು ದೈವ ಪ್ರೇರಿತನೆಂದೂ ಅದ್ಭುತ ಪವಾಡಗಳನ್ನು ಮಾಡಬಲ್ಲವನೆಂದೂ ಘೋಷಿಸಿಕೊಂಡು ಪಾಷಂಡವಾದವನ್ನು ಪ್ರಚುರ ಪಡಿಸಿದ. ಈ ಕಾರಣಕ್ಕಾಗಿ ಈತ ಜನರ ದೂಷಣೆಗೆ ಗುರಿಯಾದ; ರಾಸ್ಪುಟೀನ್ ಎಂಬ ಹೆಸರು ಪಡೆದ.

ತಾನೊಬ್ಬ ಪುಣ್ಯಾತ್ಮನೆಂದೇ ದೃಢವಾಗಿ ನಂಬಿದ್ದ ಈತ ಯಾತ್ರೆ ಹೊರಟು 1903ರಲ್ಲಿ ಸೇಂಟ್‍ಪೀಟರ್ಸ್‍ಬರ್ಗ್ ತಲುಪಿದ. ಅಲ್ಲಿನ ಧರ್ಮಾಧ್ಯಕ್ಷರೊಂದಿಗೆ ಸ್ನೇಹ ಸಂಪಾದಿಸಿ ಶ್ರೀಮಂತ ಪ್ರಭುತ್ವದ ಸಮಾಜದಲ್ಲಿ ಪ್ರವೇಶ ಪಡೆದ; ತನ್ನ ಆಧ್ಯಾತ್ಮಯೋಗವನ್ನು ಪ್ರಚುರ ಪಡಿಸಿದ. ಹೀಗಾಗಿ ಈತ ಬಹುಬೇಗ ಮಹಿಳಾ ಭಕ್ತವೃಂದದ ಕೇಂದ್ರಬಿಂದುವಾದ. 1905ರ ನವೆಂಬರ್‌ನಲ್ಲಿ ಇವನನ್ನು ಗ್ರೇಟ್ ಬ್ರಿಟನ್ನಿನ ರಾಜದಂಪತಿಗಳಿಗೆ ಪರಿಚಯಿಸಲಾಯಿತು. ಹೀಮೊಫಿಲಿಯ ರೋಗದಿಂದ ಬಳಲುತ್ತಿದ್ದ ರಷ್ಯನ್ ಚಕ್ರವರ್ತಿಯ ಮಗ ಅಲೆಕ್ಸಿಸ್ ಮತ್ತು ಚಕ್ರವರ್ತಿನಿ ಅಲೆಕ್ಸಾಂಡ್ರಾ ಅವರ ಮೇಲೆ ಇವನ ಆಧ್ಯಾತ್ಮಿಕ ಬೋಧೆ ಶಮನಕಾರಕ ಪ್ರಭಾವವನ್ನು ಬೀರಿತು. ಸಾಮ್ರಾಜ್ಯ ರಕ್ಷಣೆಗಾಗಿ ದೇವರೇ ಕಳುಹಿಸಿದ ಸಂತನೆಂದು ಈತನನ್ನು ಚಕ್ರವರ್ತಿ ಬಳಗ ಭಾವಿಸಿತು. ಚಕ್ರವರ್ತಿ ನಿಕೋಲಸ್ ಮೇಲೆ ಈತ ಹೆಚ್ಚಿನ ಪ್ರಭಾವ ಬೀರಲಾಗಲಿಲ್ಲ, ಆದರೆ ಚಕ್ರವರ್ತಿನಿಯ ಒತ್ತಾಯಕ್ಕೆ ಆತ ಮಣಿಯಬೇಕಾಯಿತು. ದೃಢವಾದ ನಿರಂಕುಶ ಪ್ರಭುತ್ವವಿರಬೇಕೆಂದು ರಾಸ್‍ಪುಟೀನ್ ಚಕ್ರವರ್ತಿಯನ್ನೇ ಒತ್ತಾಯಿಸಿದ.

ದೈವದತ್ತ ಶಾರೀರ, ಅಸ್ಖಲಿತವಾಣಿಯಿಂದ ಈತ ಬಹು ಬೇಗ ಖ್ಯಾತನಾದ. ಪಾಪ ಕಾರ್ಯಗಳಿಗೆ ಪ್ರಾಯಶ್ಚಿತ್ತವಿದೆ; ಆದ್ದರಿಂದ ಪಾಪ ಮಾಡಿದರೆ ಏನೂ ತಪ್ಪಿಲ್ಲ ಎಂಬ ಸಿದ್ಧಾಂತವನ್ನು ಎತ್ತಿ ಹಿಡಿದ ಈತ ತನ್ನ ಪ್ರಭಾವದಿಂದಾಗಿ ರಾಜಾಸ್ಥಾನ ಹಾಗೂ ಮಠಗಳನ್ನು ದುರ್ಮಾರ್ಗಕ್ಕೆಳೆದ.

1914ರಲ್ಲಿ ಈತನನ್ನು ಕೊಲೆ ಮಾಡಲು ವಿಫಲ ಯತ್ನ ನಡೆಯಿತು. 1915ರ ಸೆಪ್ಟೆಂಬರ್‍ನಲ್ಲಿ ಚಕ್ರವರ್ತಿ ನಿಕೋಲಸ್ ಒಂದನೆಯ ಮಹಾಯುದ್ಧದ ಯುದ್ಧರಂಗದಲ್ಲಿದ್ದಾಗ ಚಕ್ರವರ್ತಿನಿಯು ರಾಸ್‍ಪುಟೀನನೊಡನೆ ಗೃಹಾಡಳಿತ ಕೈಗೊಂಡಳು. ನೇಮಕಾತಿಗಳಲ್ಲಿ ಈತನ ಅಭಿಪ್ರಾಯಗಳಿಗೆ ಆದ್ಯತೆ ದೊರೆಯಿತು. ಸಮರ್ಥರೂ ಪ್ರಾಮಾಣಿಕರೂ ಆಗಿದ್ದ ಅನೇಕ ಸಚಿವರನ್ನೂ ಅಧಿಕಾರಿಗಳನ್ನೂ ಈತ ವಜಾ ಮಾಡಿದ. ಈತನ ಹಸ್ತಕ್ಷೇಪದಿಂದಾಗಿ ಸಾಮಾನ್ಯ ಆಡಳಿತ ವ್ಯವಸ್ಥೆಯೂ ಕುಸಿದುಬಿತ್ತು. ಇದರಿಂದಾಗಿ ಆಸ್ಥಾನ ಹಾಗೂ ಸಾರ್ವಜನಿಕರ ನಡುವೆ ಅಗಾಧ ಕಂದರ ನಿರ್ಮಾಣಗೊಂಡಿತು. ಇವನ ದುಷ್ಕಾರ್ಯಗಳಿಂದ ಬೇಸತ್ತ ಸಂಪ್ರದಾಯ ಪಾಲಕ ಜನವರ್ಗ ವಿ.ಎಂ. ಪುರಿಶ್‍ಕೆವಿಟ್ ಎಂಬವನ ನೇತೃತ್ವದಲ್ಲಿ ರಷ್ಯದ ದೊರೆ ಡಿಮಿಟ್ರಿ ಪಾವೆಲೊವಿಚ್ ಹಾಗೂ ಅನುಯಾಯಿಗಳೊಂದಿಗೆ ಸಾಮ್ರಾಜ್ಯ ರಕ್ಷಣೆಗಾಗಿ 1916 ಡಿಸೆಂಬರ್ 31ರ ರಾತ್ರಿ ಇವನನ್ನು ಗುಂಡಿಟ್ಟು ಕೊಂದಿತು. ಈ ಕೊಲೆ ಸ್ವಾಯತ್ತಾಧಿಪತ್ಯದ ತತ್ತ್ವಗಳನ್ನು ಎತ್ತಿ ಹಿಡಿಯಬೇಕೆಂಬ ಅಲೆಕ್ಸಾಂಡ್ರಾಳ ಸಂಕಲ್ಪವನ್ನು ಬಲಪಡಿಸಿತು. ಆದರೆ ಕೆಲವೇ ದಿನಗಳಲ್ಲಿ ಕ್ರಾಂತಿ ನಡೆದು ಸಮಗ್ರ ಚಕ್ರಾಧಿಪತ್ಯ ಅವಸಾನಗೊಂಡಿತು.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: