ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಜೂರಾ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ದೂರದ ಮಧ್ಯಪ್ರದೇಶದ ಮೈಹಾರ್ ರೈಲ್ವೆ ನಿಲ್ದಾಣದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಜೂರ ಎಂಬ ಹಳ್ಳಿಗೂ, ಕನ್ನಡ ನಾಡಿಗೂ, ಕನ್ನಡ ನಾಡನ್ನು ಆಳಿದ ಹತ್ತನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನಿಗೂ ಎಲ್ಲಿಗೆಲ್ಲಿಯ ಸಂಬಂಧ! ಹೌದು ಅಂತಹ ಒಂದು ಪ್ರತ್ಯಕ್ಷ ಸಾಕ್ಷಿ ನಮ್ಮ ಕಣ್ಣ ಮುಂದಿದೆ. ೧೯೨೧ರಲ್ಲೇ ಶ್ರೀ ಆರ್.ಡಿ.ಬ್ಯಾನರ್ಜಿ ಎನ್ನುವವರು ಆ ಸಾಕ್ಷಿಯನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ.
ಮೂರನೇ ಕೃಷ್ಣ (ಎಲ್ಲೋರದ ಕೈಲಾಸನಾಥ ದೇವಾಲಯದ ನಿರ್ಮಾಣಕ್ಕೆ ಈತನ ಕೊಡುಗೆ ಅಪಾರ) ಉತ್ತರ ಭಾರತಾದ್ಯಂತ ತನ್ನ ರಾಜ್ಯವನ್ನು ವಿಸ್ತರಿಸಿದ್ದ ಕಥೆ ಇತಿಹಾಸದಲ್ಲಿ ದಾಖಲಾಗಿದೆ. ಆತನ ಯುದ್ಧಾಳುಗಳು ಹಾಗೂ ಕುದುರೆಗಳು ಗಂಗಾ-ಯಮುನ ನದಿಗಳ ನೀರನ್ನು ಕುಡಿದವು ಎಂಬ ವರ್ಣನೆಯೇ ಆತ ಅಲ್ಲಿಯವರೆಗೆ ರಾಜ್ಯವನ್ನು ವಿಸ್ತರಿಸಿದ್ದ ಎಂಬುದನ್ನು ಸೂಚಿಸುತ್ತದೆ. ಆದರೆ ಅಲ್ಲಿಗೆಲ್ಲಾ ಹೋಗಿದ್ದ ಒಬ್ಬ ಕನ್ನಡಿಗ ದೊರೆ ಆತನ ಪ್ರಭಾವ ಎಂಥಹದ್ದು ಎಂದು ತಿಳಿಯುವುದು ಹೇಗೆ? ಜೂರ ಗ್ರಾಮದ ಮನೆಯೊಂದರಲ್ಲಿ ಕಿಟಕಿಗೆ ಚೆಜ್ಜವಾಗಿ ಹಾಕಲಾಗಿದ್ದ ಕಲ್ಲಿನ ಮೇಲೆ ಕೆತ್ತಿದ್ದ ಕನ್ನಡ ಶಾಸನವೊಂದು ಇದಕ್ಕೆ ಸಾಕ್ಷಿಯಾಗಿ ಇನ್ನೂ ಅಲ್ಲೇ ನಿಂತಿದೆ ಸುಮಾರು ೧೦೫೦ ವರ್ಷಗಳಿಂದ!
ಹೌದು. ಆ ಶಾಸನದಲ್ಲಿ ಏನಿದೆ? ಮೂರನೇ ಕೃಷ್ಣನ ಹಲವಾರು ಬಿರುದುಗಳು. ಆತನ ದಿಗ್ವಿಜಯ. ಆತನ ಸಾಧನೆ. ಇಷ್ಟೇ ಆಗಿದ್ದರೆ ಸಾವಿರಾರು ಶಾಸನಗಳಂತೆ ಅದೂ ಒಂದು ಶಾಸನವಾಗಿ ಮಾತ್ರ ದಾಖಲಾಗಿರುತ್ತಿತ್ತು. ಆದರೆ ಅದು ಆತನ ಶೌಚಗುಣವನ್ನು ಪರನಾರೀ ಗೌರವವನ್ನು ವಿಶೇಷವಾಗಿ ಪ್ರಸ್ತಾಪಿಸುತ್ತದೆ. ಭಾರತ ಅಷ್ಟೇ ಏಕೆ? ಪ್ರಪಂಚ ಯಾವುದೇ ರಾಜನ ಬಗ್ಗೆ ಇಂತಹುದೊಂದು ಶಾಸನ ಸಿಕ್ಕಿದ್ದರೆ ಅದು ಇದೊಂದೆ!
ಪರಾಂಗನಾ ಪುತ್ರ ಎಂಬುದು ಆತನಿಗಿದ್ದ ವಿಶೇಷವಾದ ಬಿರುದು. ಅವನು ಅನ್ಯವನಿತೆಯರನ್ನು ನೋಡುತ್ತಿರಲಿಲ್ಲ. ಮಾತನಾಡಿಸುತ್ತಿರಲಿಲ್ಲ. ಮನಸ್ಸಿನಲ್ಲೂ ಕಾಮಿಸುತ್ತಿರಲಿಲ್ಲ. ಈ ಆಶಯದ ಒಂದು ಪದ್ಯ :

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ

ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋತುದ್ದಿಲ್ಲವಂತೆ!
ಇನ್ನೊಂದು ಪದ್ಯದಲ್ಲಿ -

ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ

ರಾಜನಾದ ಅವನಿಗೆ ಪರಸ್ತ್ರೀಯನ್ನು ನೋಡಿದರೆ ಏನನ್ನಿಸುತ್ತಿತ್ತು? ತಾನು ಮಗುವಾಗಿದ್ದಾಗ ಮೊಲೆಹಾಲನ್ನೂಡಿಸಿದ ತಾಯಿ, ಸರದಿಯಲ್ಲಿ ತನ್ನನ್ನು ಎತ್ತಿ ಆಡಿಸಿದ ತಾಯಿಯ ತೋಳುಗಳು, ಆ ತಾಯಿಯ ಬಸಿರಲ್ಲಿ ತಾನು ಮಗುವಾಗಿರುವಂತಹ ಭಾವ ಆತನಲ್ಲಿ ಸ್ಫುರಿಸುತ್ತಿತ್ತಂತೆ!
ಉಬ್ಬಿಕಾಮೈಸೆಟ್ಟಿಯ ತಮ್ಮ ತುಯ್ಯಲ ಚನ್ದಯ್ಯನು ಈ ಪ್ರಶಸ್ತಿ ಶಾಸನವನ್ನು ಬರೆಸಿದನೆಂದು, ಏಚಿಮಯ್ಯ ಎಂಬುವವನು ಬರೆದಿದ್ದಾನೆಂದು ತಿಳಿದು ಬರುತ್ತದೆ.

ಶಾಸನದ ಪೂರ್ಣಪಾಠ:
೧ ಸ್ವಸ್ತಿ|| ಪರಮಭಟ್ಟಾರ
೨ ಕ ಪರಮೇಶ್ವರ ಶ್ರೀ ಪ್ರಿ
೩ ಥ್ವೀವಲ್ಲಭ ಮಹಾರಾಜಾಧಿ
೪ ರಾಜನೆಲ್ಲರ ಮರುಳನಾ
೫ ನೆವೆಡೆಂಗಂ ಚಲಕೆನಲ್ಲಾ
೬ ತಂ ವೈರಿವಿಳಾಸಂ ಮದಗ
೭ ಜಮಲ್ಲಂ ಪರಾಂಗನಾಪು
೮ ತ್ರಂ ಗಣ್ಡಮಾರ್ತ್ತಣ್ಡನ್ ಅಕಾಳವ
೯ ರಿಷಂ ನೃಪತುಂಗಂ ಕಚ್ಚೆಗಂ ಶ್ರೀ
೧೦ ಮತ್ಕನ್ನರದೇವಂ ||ಕನ್ದ||
೧೧ . . . . . . ವನಿತೆಯರ್ಕ್ಕ
೧೨ . . . . . . ಗಳುಂ ಬಮ
೧೩ . . . . . . ಕಣ್ಡುಂ ನೋಡ
೧೪ ದು ಕಣ್ಣುಡಿಯದು ಬಾಯ್ಕೂ
೧೫ ಡದು ಚಿತ್ತಂ ಪರಾಂಗನಾ
೧೬ ಪುತ್ರಕನ ||೧|| ಭಾರತ
೧೭ ದೊಳಿಱದನಿ ನ್ದ್ರನೊಳೋರಾ
೧೮ ಸನ ಜಾಣನೆನಿಪ ಪಾ
೧೯ ಣ್ಡ್ಯನ ಕುಲಮಂ ಬೇರಿನ್ದೆ
೨೦ ಕಿೞ್ತ ಚೋೞನ ಬೇರಂ
೨೧ ಬೇರಿನ್ದ ಕಿೞ್ತನಾನೆವೆ
೨೨ ಡಙ್ಗಂ ||೨|| ಸೋಲದೆ ಪರವ
೨೩ ನಿತೆಗೆ ಕಣ್ಸೋಲದು ಮೊ
೨೪ ಲೆವಾಲನೂಡಿ ನಡಪಿದ
೨೫ ತಾಯಿಂ ಮೇಲೆನೆ ಬಗೆಗುಂ
೨೬ ನೋಡಿರೆ ಸೋಲದು ಚಿತ್ತಂ
೨೭ ಪರಾಂಗನಾಪುತ್ರಕನ ||೩||
೨೮ ನೋಡಿರೆ ಪರವಧುಗೆ
೨೯ ಮನಂ ಕೂಡದು ಸೂೞ್ಸೂ
೩೦ ೞೊಳೆತ್ತಿ ನಡಪಿದ
೩೧ ತೋಳುಣ್ಡಾಡಿದ ಮೊಲೆ ಬ
೩೨ ಸಿಱೊಳಗಿೞಡಿದ ಚಿತ್ತಂ
೩೩ ಪರಾಂಗನಾ ಪುತ್ರಕನ ||೪||
೩೪ ಸ್ವಸ್ತಿ || ಉಬ್ಬಿಕಾಮೈಸೆಟ್ಟಿಯ
೩೫ ತಮ್ಮಂ ತುಯ್ಯಲ ಚನ್ದ
೩೬ ಯ್ಯಂ ಪ್ರಸಸ್ತಿಯಂ ಬರೆಯಿಸಿ
೩೭ ದಂ|| ಬರೆದನೆ ಚಿಮ್ಮಯ್ಯಂ ||

ಆಧಾರ: EI Vol. XIX, p287 & ಶಾಸನ ಸರಸ್ವತಿ (ಲೇ: ಡಾ.ಕೆ.ಆರ್.ಗಣೇಶ) ಪು34-37