ರಾಬರ್ಟ್ ಹಚಿನ್ಸ್ ಗಾಡರ್ಡ್
ರಾಬರ್ಟ್ ಹಚಿನ್ಸ್ ಗಾಡರ್ಡ್, 1882-1945. ಅಮೆರಿಕದ ಭೌತವಿಜ್ಞಾನಿ.ಆ ರಾಷ್ಟ್ರದಲ್ಲಿ ಆಕಾಶಯಾನದ ಆದ್ಯ ಪ್ರವರ್ತಕ, ಪ್ರಪಂಚದ ಆದ್ಯ ಪ್ರವರ್ತಕರಲ್ಲಿ ಒಬ್ಬ (ಇನ್ನೊಬ್ಬ ರಷ್ಯ ದೇಶದ ಟ್ಸಿಯೋಲ್ಕಾವ್ಸ್ಕಿ).
ಬದುಕು
[ಬದಲಾಯಿಸಿ]ಮೆಸಾಚುಸೆಟ್ಸ್ನ ವಾರ್ಸೆಸ್ಟರಿನಲ್ಲಿ 1882ರ ಅಕ್ಟೋಬರ್ 5 ರಂದು ಜನನ. ಕಾಯಿಲಸ್ಥನಾದ ಈತ ಹೆಚ್ಚಾಗಿ ಅಂತರ್ಮುಖಿಯಾಗಿಯೇ ಇದ್ದ. ಆಕಾಶಯಾನದ ಬಗ್ಗೆ ಇವನಿಗೆ ಅಪಾರಾಸಕ್ತಿ. ವಾರ್ಸೆಸ್ಟರ್ ಔದ್ಯೋಗಿಕ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಸಿಸಿ ಪದವೀಧರನಾದ(1908). ಮುಂದಿನ ವಿದ್ಯಾಭ್ಯಾಸ ಕ್ಲಾರ್ಕ್ ವಿಶ್ವವಿದ್ಯಾಲಯದಲ್ಲಿ. 1915-19ವರೆಗೂ ಇದೇ ವಿಶ್ವವಿದ್ಯಾಲಯ ದಲ್ಲಿ ಉಪಪ್ರಾಧ್ಯಾಪಕನಾಗಿಯೂ ಅನಂತರ 1919-43ರ ವರೆಗೆ ಇಲ್ಲಿಯೇ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ.
1945ರ ಆಗಸ್ಟ್ 10ರಂದು ಗಾಡರ್ಡ್ ಅಸುನೀಗಿದ.
ವಿಜ್ಞಾನ ರಂಗದಲ್ಲಿ ಸಾಧನೆ
[ಬದಲಾಯಿಸಿ]ರಾಕೆಟ್ ಸಂಶೋಧನೆಯ ಕೆಲವೇ ಅಗ್ರಗಾಮಿಗಳಲ್ಲಿ ಈತನೂ ಒಬ್ಬ. ದ್ರವೇಂಧನ ಚಾಲಿತ ರಾಕೆಟನ್ನು ಮೊಟ್ಟಮೊದಲು ಉಡಾಯಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ.
ಪದವೀಧರನಾದ ಕೇವಲ ಒಂದು ವರ್ಷದಲ್ಲಿಯೇ ಗಾಡರ್ಡ್ ತನ್ನ ಟಿಪ್ಪಣಿ ಪುಸ್ತಕಗಳಲ್ಲಿ ರಾಕೆಟ್ ವಿಜ್ಞಾನ ಕ್ಷೇತ್ರದಲ್ಲಿ ಸುಮಾರು 70 ವರ್ಷಗಳ ಅನಂತರ ಸಾಧಿಸಬಹುದಾದ ಸಿದ್ಧಿಗಳ ಬಗ್ಗೆ ಪ್ರಸ್ತಾವಿಸಿದ್ದ. ಹಂತ ಹಂತವಾಗಿ ರಾಕೆಟುಗಳ ಉಡಾವಣೆ, ಘನ ಮತ್ತು ದ್ರವ ಇಂಧನವುಳ್ಳ ರಾಕೆಟುಗಳ ಉಡಾವಣೆ, ಮನುಷ್ಯ ಸಹಿತ ರಾಕೆಟುಗಳು ಗ್ರಹಗಳನ್ನು ತಲಪಿ ಮತ್ತೆ ಭೂಮಿಗೆ ಹಿಂತಿರುಗುವ ಸಾಧ್ಯತೆ, ಅತಿವೇಗದ ಆಕಾಶಯಾನಗಳಲ್ಲಿ ರಾಕೆಟುಗಳಲ್ಲಿರುವ ಮನುಷ್ಯರ ಜೀವರಕ್ಷಣೆ, ಚಂದ್ರಯಾನ, ಚಂದ್ರನಲ್ಲಿ ರಾಕೆಟನ್ನು ಉಡಾಯಿಸುವ ನೆಲೆಯನ್ನು ಸ್ಥಾಪಿಸುವ ಸಾಧ್ಯತೆ- ಇವೇ ಮುಂತಾದವುಗಳ ಬಗ್ಗೆ ಈತ ಆಗಲೇ ಚರ್ಚಿಸಿದ್ದ. ಆದರೆ ಆತ ಈ ಯಾವ ಅಭಿಪ್ರಾಯಗಳನ್ನೂ ಕ್ಲಾರ್ಕ್ ವಿಶ್ವವಿದ್ಯಾಲಯದ ವ್ಯಾಸಂಗ ಕ್ಷೇತ್ರವನ್ನು ಸೇರಿ ಪ್ರಯೋಗಗಳನ್ನು ಪ್ರಾರಂಭಿಸುವ ವರೆಗೂ ಪ್ರಚುರ ಪಡಿಸಲಿಲ್ಲ. 1941ರಲ್ಲಿ ಗಾಡರ್ಡ್ ಅಮೆರಿಕ ಸಂಯುಕ್ತಸಂಸ್ಥಾನದ ಎರಡು ಸನ್ನದುಗಳನ್ನು ಪಡೆದ: ಮೊದಲನೆಯದು ದ್ರವೇಂಧನಗಳನ್ನು ಉಪಯೋಗಿಸಿ ರಾಕೆಟುಗಳನ್ನು ಉಡಾಯಿಸುವ ಬಗ್ಗೆ ಪ್ರಯೋಗ ಗಳನ್ನು ಮಾಡಲು; ಮತ್ತು ಎರಡನೆಯದು ಹಂತ ಹಂತವಾಗಿ ರಾಕೆಟುಗಳನ್ನು ಉಡಾಯಿಸುವ ಅಂದರೆ ಸಣ್ಣ ರಾಕೆಟನ್ನು ಹೊತ್ತ ದೊಡ್ಡ ರಾಕೆಟುಗಳನ್ನು ಉಡಾಯಿಸುವ ಬಗ್ಗೆ ಪ್ರಯೋಗ ಮಾಡಲು. 1914-16ರವರೆಗೆ ಈತ ರಾಕೆಟ್ ಉಡಾವಣೆಯ ಮೂಲತತ್ತ್ವದ ಬಗ್ಗೆ ಆಳವಾದ ಸಂಶೋಧನೆ ನಡೆಸಿದ. ಅನಂತರ ಘನೇಂಧನಚಾಲಿತ ರಾಕೆಟುಗಳ ಉಡಾವಣೆಯ ಬಗ್ಗೆ ಅನೇಕ ಪ್ರಯೋಗಗಳನ್ನು ನಡೆಸಿ ಪ್ರಯೋಗದಿಂದ ಪ್ರಯೋಗಕ್ಕೆ ರಾಕೆಟ್ ಹೆಚ್ಚು ಎತ್ತರ ಹಾರುವ ಹಾಗೆ ಮಾಡಿದ. ರಾಕೆಟುಗಳು ನಿರ್ವಾತ ಪ್ರದೇಶದಲ್ಲಿ ಕೂಡ ಕೆಲಸಮಾಡಬಲ್ಲವು ಎಂದು ತೋರಿಸಲು ಸಾಧನವೊಂದನ್ನು ಉಪಜ್ಞಿಸಿ ಅದನ್ನು ಪ್ರದರ್ಶಿಸಿದ. ಅಲ್ಲದೇ ಚಂದ್ರನಿಗೆ ರಾಕೆಟ್ ಕಳುಹಿಸುವ ಸಾಧ್ಯತೆಯ ಬಗ್ಗೆ ಪ್ರಯೋಗಗಳನ್ನು ಮಾಡಿದ.
ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಪ್ರಯೋಗಗಳನ್ನು ನಡೆಸಿ ವಿಧವಿಧವಾದ ಪ್ರವರ್ತಕಗಳು (ಪ್ರೊಪೆಲ್ಲೆಂಟ್ಸ್) ಉಡಾವಣೆಯ ಸಮಯದಲ್ಲಿ ಉಂಟುಮಾಡುವ ನೂಕುಬಲ (ಥ್ರಸ್ಟ್) ಪರಿಮಾಣಗಳನ್ನು ಅಳೆದ. ಇವನ್ನು ಗಮನಿಸಿದ ಸ್ವಿತ್ಸೋನಿಯನ್ ಸಂಸ್ಥೆ ಗಾಡರ್ಡ್ನಿಗೆ ಹೆಚ್ಚಿನ ಧನಸಹಾಯ ಮಾಡಿತು. 1926ರ ವರೆಗೂ ಈತ ಅಮೆರಿಕನ್ ರಾಕೆಟ್ ಸೊಸೈಟಿಯ ಮೆಂಬರುಗಳ ಲ್ಲೊಬ್ಬನಾಗಿ ಡ್ಯಾನಿಯಲ್ ಮತ್ತು ಫ್ಲಾರನ್ಸ ಗಗೆನ್ ಹ್ಯಾಮ್ ಪ್ರತಿಷ್ಠಾನದ ಸಹಾಯದಿಂದ ದ್ರವೆಂಧನಚಾಲಿತ ರಾಕೆಟುಗಳ ಉಡಾವಣೆಯ ಬಗ್ಗೆ ಸತತ ಪ್ರಯೋಗಗಳನ್ನು ನಡೆಸಿದ. 1926ರ ಮಾರ್ಚ್ 16ರಂದು ಮಸಾಚುಸೆಟ್ಸನ ಆಬರ್ನ್ ಪಟ್ಟಣದ ಹತ್ತಿರದ ಕೃಷಿ ಕ್ಷೇತ್ರವೊಂದರಿಂದ ಪ್ರಪಂಚದ ಮೊಟ್ಟಮೊದಲನೆಯ ಇಂಥ ಒಂದು ರಾಕೆಟನ್ನು ಈತ ಉಡಾಯಿಸಿದ. ಇದಕ್ಕೆ ಸಂಬಂಧಪಟ್ಟ ಗಾಡರ್ಡ್ನ ವರದಿಯ ಪ್ರಕಾರ ಈ ರಾಕೆಟು 2.5 ಸೆಕೆಂಡುಗಳಲ್ಲಿ ಸು. 56.25 ಮೀಟರ್ಗಳಷ್ಟು ಎತ್ತರಕ್ಕೆ ಹಾರಿತ್ತು. ಈ ಸಂಶೋಧನೆ ಆಧುನಿಕ ರಾಕೆಟ್ ಉಡಾವಣೆಗೆ ಬಲವಾದ ಬುನಾದಿ ಹಾಕಿತು ಎಂದು ಹೇಳಬಹುದು. ಈ ವೇಳೆಗೆ ರಾಕೆಟ್ಯುಗ ಭದ್ರವಾಗಿ ನೆಲೆಯೂರಿತ್ತು. ಜರ್ಮನಿಯಲ್ಲಿ ಒಂದು ಸಂಸ್ಥೆ ಮತ್ತು ಅಮೆರಿಕದಲ್ಲಿ ಒಂದು ಸಂಸ್ಥೆ ಈ ಪ್ರಯೋಗಗಳನ್ನು ಇನ್ನಷ್ಟು ಪರಿಷ್ಕರಿಸಲು ಪ್ರಯತ್ನವನ್ನು ನಡೆಸುತ್ತ ಮುಂದುವರಿದುವು. ಅಮೆರಿಕನ್ ರಾಕೆಟ್ ಸಂಸ್ಥೆಯ ಇತರ ಸದಸ್ಯರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿದರೂ ಅದರ ಒಬ್ಬ ಸದಸ್ಯ ಗಾಡರ್ಡ್ ಮಾತ್ರ ಸತತವಾಗಿ ಪ್ರಯೋಗಗಳನ್ನು ಮುಂದುವರಿಸುತ್ತಲೇ ಹೋದ. 1935ರ ವೇಳೆಗೆ 2287.5 ಮೀಟರ್ಗಳಷ್ಟು ಎತ್ತರಕ್ಕೆ ದ್ರವೇಂಧನಚಾಲಿತ ರಾಕೆಟೊಂದನ್ನು ಹಾರಿಸುವುದರಲ್ಲಿ ಈತ ಜಯಶೀಲನಾದ. ಎರಡನೆಯ ಮಹಾಯುದ್ಧ ಕಾಲದಲ್ಲಿ ಗಾಡರ್ಡನನ್ನು ಅಮೆರಿಕದ ನೌಕಾ ಇಲಾಖೆಯ ಬ್ಯೂರೊ ಆಫ್ ಆಸ್ಟ್ರೊನಾಟಿಕ್ಸ್ ನಿರ್ದೇಶಕನನ್ನಾಗಿ ನೇಮಿಸಿದರು. ನೌಕಾಯಾನದಲ್ಲಿ ದ್ರವೇಂಧನಚಾಲಿತ ರಾಕೆಟುಗಳ ಉಪಯೋಗದ ಬಗ್ಗೆ ಈತ ಈ ಕಾಲದಲ್ಲಿ ಸಂಶೋಧನೆ ನಡೆಸಿದ.
ಅಮೆರಿಕವನ್ನು ಆಕಾಶಯುಗಕ್ಕೆ ಆವಾಹಿಸುವಲ್ಲಿ ಗಾಡರ್ಡ್ನ ಕೊಡುಗೆ ಅಪಾರ. ಅಮೆರಿಕದ ಮೇರಿಲೆಂಡಿನ ಗ್ರೀನ್ಬೆಲ್ಟಿನಲ್ಲಿ ಗಾಡರ್ಡ್ ಆಕಾಶಯಾನ ಕೇಂದ್ರವನ್ನು ನಾಸಾ ಸಂಸ್ಥೆ ಸ್ಥಾಪಿಸಿ ಈತನ ಹೆಸರನ್ನು ಚಿರಸ್ಥಾಯಿಗೊಳಿಸಿದೆ.