ರಾಬರ್ಟ್ ಓವೆನ್
ಓವೆನ್, ರಾಬರ್ಟ್: 1771-1858. ಬ್ರಿಟನ್ನಿನ ಸಮಾಜವಾದಿ, ಸುಧಾರಕ, 1771 ಮೇ 14ರಂದು ವೇಲ್ಸಿನ ಮಾಂಟ್ಗಮರಿಷೈರಿನ ನ್ಯೂಟೌನಿನಲ್ಲಿ ಹುಟ್ಟಿದ. ಒಂಬತ್ತನೆಯ ವರ್ಷದವರೆಗೆ ಇವನ ವಿದ್ಯಾಭ್ಯಾಸ ನಡೆದಿದ್ದು ಸ್ಥಳೀಯ ಶಾಲೆಗಳಲ್ಲೇ. ಹತ್ತೊಂಬತ್ತನೆಯ ವರ್ಷ ನಡೆಯುತ್ತಿದ್ದಾಗ ಓವೆನ್ ಮಾಂಚೆಸ್ಟರಿನ ಹತ್ತಿಗಿರಣಿಯೊಂದರ ವ್ಯವಸ್ಥಾಪಕನಾದ. ಶೀಘ್ರದಲ್ಲೇ ಅದು ಇಡೀ ಗ್ರೇಟ್ಬ್ರಿಟನ್ನಿನ ಅತ್ಯುತ್ತಮ ಸಂಸ್ಥೆಯಾಯಿತು. ಅಮೆರಿಕದಿಂದ ಸೀ-ಐಲೆಂಡ್ ಹತ್ತಿಯನ್ನು ತರಿಸಿ ಗಿರಣಿಯಲ್ಲಿ ಪ್ರಥಮವಾಗಿ ಬಳಸಿದವನೀತನೇ. ಈತ ಚಾರ್ಲ್ಟನ್ ಟ್ವಿಸ್ಟ್ ಕಂಪನಿಯ ವ್ಯವಸ್ಥಾಪಕನೂ ಪಾಲುದಾರನೂ ಆದಾಗ ಇವನ ಸಲಹೆಯ ಮೇರೆಗೆ ನ್ಯೂ ಲ್ಯಾನಾರ್ಕ್ ಗಿರಣಿಯನ್ನು ಆ ಸಂಸ್ಥೆ ಕೊಂಡುಕೊಂಡಿತು. ಆಗ ಉತ್ಪಾದನೆ ನಡೆಸುತ್ತಿದ್ದ ಇತರ ಗಿರಣಿಗಳಿಗಿಂತ ಉನ್ನತವಾದ ತತ್ತ್ವಗಳನ್ನು ತನ್ನ ಗಿರಣಿಯಲ್ಲಿ ಜಾರಿಗೆ ತರಲು ಓವೆನ್ ಪ್ರಯತ್ನಿಸಿ ಯಶಸ್ವಿಯಾದ.
ಓವೆನ್ನ ದೃಷ್ಟಿಯಲ್ಲಿ ಆ ಗಿರಣಿ ಕೇವಲ ಲಾಭಗಳಿಕೆಯ ಉದ್ಯಮವಾಗಿರಲಿಲ್ಲ: ಅದು ನ್ಯೂ ಲ್ಯಾನಾರ್ಕಿನ ಸರ್ಕಾರ. ಗಿರಣಿಯೊಂದಕ್ಕೆ ಕೇವಲ ವ್ಯವಸ್ಥಾಪಕನಾಗಿರಲು ಅವನಿಗೆ ಇಷ್ಟವಿರಲಿಲ್ಲ. ಜನನಿರ್ವಹಣೆಯ ತತ್ತ್ವಗಳನ್ನು ಪ್ರಯೋಗಿಸುವುದು ಅವನ ಉದ್ದೇಶವಾಗಿತ್ತು. ಶೀಲ ರೂಪಿಸಬೇಕೆಂಬುದು ಆತನ ಹಂಬಲ. ಗಿರಣಿಯಲ್ಲಿ ಕೆಲಸಕ್ಕಿದ್ದ 2,000 ಜನರ ಪೈಕಿ 500 ಮಂದಿ ಮಕ್ಕಳು; ಎಡಿನ್ಬರೊ ಮತ್ತು ಗ್ಲ್ಯಾಸ್ಗೊಗಳ ದರಿದ್ರ ಗೃಹಗಳಿಂದ ಬಂದಿದ್ದವರು. ಹಿಂದಿನ ಮಾಲೀಕರು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದರಾದರೂ ಒಟ್ಟಿನಲ್ಲಿ ಜನರ ಪರಿಸ್ಥಿತಿ ಶೋಚನೀಯವಾಗಿತ್ತು. ಅಜ್ಞಾನ, ಕಶ್ಮಲ, ವ್ಯಾಧಿ, ಅಪರಾಧ, ಹೀನವಸತಿ, ಕುಡಿತ-ಇವು ಸಾಮಾನ್ಯವಾಗಿದ್ದುವು. ಕಾರ್ಖಾನೆಯೇ ಈ ಕೆಟ್ಟ ಚಾಳಿಗಳಿಗೆ ಪಾಠಶಾಲೆ. ಇವನ್ನೆಲ್ಲ ತೊಲಗಿಸಲು ಓವೆನ್ ಶಪಥ ಮಾಡಿದ. ಅವರಿಗೆ ಒಳ್ಳೆಯ ಜೀವನ ಬೋಧಿಸಿದ. ವಸತಿ ಉತ್ತಮಗೊಂಡಿತು. ಶುದ್ಧ ಸರಕುಗಳ ಮಾರಾಟಕ್ಕಾಗಿ ಓವೆನ್ ದಿನಸಿ ಅಂಗಡಿ ತೆರೆಯಿಸಿದ. ಮದ್ಯದ ಮಾರಾಟಕ್ಕೆ ನಿರ್ಬಂಧ ವಿಧಿಸಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ಪ್ರಾರಂಭಿಸಿದ. ದೊಡ್ಡವರಿಗೂ ವಿದ್ಯೆ ಕಲಿಸಬೇಕೆಂಬುದು ಇವನ ಮತವಾಗಿತ್ತು.
ಮೊದಮೊದಲು ಓವೆನ್ನ ವಿಚಾರಗಳಲ್ಲಿ ಜನಕ್ಕೆ ನಂಬಿಕೆಯಿರಲಿಲ್ಲ. ಕ್ರಮೇಣ ಈತ ಅವರ ಅಭಿಮಾನಕ್ಕೆ ಪಾತ್ರನಾದ. ಆದರೆ ಇವನ ಅನೇಕ ಪ್ರಯೋಗಗಳು ಬಹಳ ದುಬಾರಿ ವೆಚ್ಚದವಾಗಿದ್ದುದರಿಂದ ಅವಕ್ಕೆ ಪಾಲುದಾರರ ಒಪ್ಪಿಗೆ ದೊರಕಿಸುವುದು ಅನೇಕ ಸಾರಿ ಕಷ್ಟವೇ ಆಗಿರುತ್ತಿತ್ತು. ಕೊನೆಗೆ ಓವೆನ್ ಬೇಸತ್ತು ಅವರಿಂದ ಬೇರ್ಪಟ್ಟು, ಬಂಡವಾಳದ ಮೇಲೆ ಶೇ. 5ರಷ್ಟು ಲಾಭ ಪಡೆದು ತೃಪ್ತರಾಗಿರುವಂಥವರೊಂದಿಗೆ ಸೇರಿ ಉದ್ಯಮ ಸ್ಥಾಪಿಸಿದ. ಜೆರೆಮಿ ಬೆಂಥಮ್ ಮುಂತಾದ ವಿಚಾರಶೀಲ ಉದಾರವಾದಿಗಳನೇಕರು ಪಾಲುದಾರರಾದರು. ಓವೆನ್ನ ಹೊಸದೃಷ್ಟಿಯನ್ನು ಕುರಿತ ಪ್ರಬಂಧಗಳು ಇವನ ಲೇಖನಿಯಿಂದ ಹೊರಬಿದ್ದುವು. ಒಬ್ಬನ ಲಾಭ, ಇನ್ನೊಬ್ಬನಿಗೆ ನಷ್ಟ ಎಂಬ ಸ್ಪರ್ಧಾವ್ಯವಸ್ಥೆಯ ಸೂತ್ರವನ್ನು ಈತ ನಿರಾಕರಿಸಿದ. ಸಹಕಾರ ತತ್ತ್ವದ ತಳಹದಿಯ ಮೇಲೆ ಹೊಸ ಸಮಾಜ ಕಟ್ಟುವುದು ಇವನ ಕನಸಾಗಿತ್ತು. ಮಾನವನ ಶೀಲಸಂವರ್ಧನಕ್ಕೆ ಆತನ ಪರಿಸರವೇ ಕಾರಣ. ಚಿಕ್ಕಂದಿನಿಂದಲೇ ಅವನನ್ನು ಸರಿಯಾಗಿ ಬೆಳೆಸಿದರೆ ಆತ ಆದರ್ಶ ಪ್ರಜೆಯಾಗುತ್ತಾನೆ-ಎಂಬುದು ಓವೆನ್ನ ನಂಬಿಕೆಯಾಗಿತ್ತು. ಇವನ ಹೊಸ ಗಿರಣಿಯಲ್ಲಿ ಈ ಪ್ರಯೋಗ ಯಶಸ್ವಿಯಾಯಿತು. ಇಡೀ ಬ್ರಿಟನ್ನಿನಲ್ಲಿ ಮಾತ್ರವಲ್ಲದೆ ಯುರೋಪಿನಲ್ಲೂ ಇದು ಪ್ರಸಿದ್ಧಿ ಗಳಿಸಿತು. ಆಗ ಸಮಾಜವಾದಿಗಳಿಗೆ ಓವೆನನ ಗಿರಣಿಯೊಂದು ಯಾತ್ರಾಸ್ಥಳ.
ಕಾರ್ಖಾನೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂಬುದು ಓವೆನ್ನ ಆಶಯವಾಗಿತ್ತು. ಆದರೆ ಇವನ ಚಳುವಳಿ ಫಲಿಸಲಿಲ್ಲ. ಅನೇಕರು ಇವನಿಗೆ ವಿರೋಧಿಗಳಾದರು. ಅವರ ಬೆಂಬಲ ಕುಸಿದುಬಿತ್ತು. ಯಂತ್ರದೊಂದಿಗೆ ಮಾನವನ ಸ್ಪರ್ಧೆಯೇ ನಿರಂತರ ಸಂಕಟಕ್ಕೆ ಕಾರಣ. ಆದ್ದರಿಂದ ಜನರೆಲ್ಲ ಸಂಘಟಿತರಾಗಬೇಕು, ಯಂತ್ರ ಅವರಿಗೆ ಅಧೀನವಾಗಬೇಕು ಎಂಬುದು ಇವನ ಸೂತ್ರ. ತಲಾ ಸು. 1,200 ಜನ ಒಟ್ಟಿಗೆ ವಾಸಿಸುವ ಸಾಮೂಹಿಕ ವ್ಯವಸ್ಥೆ ರಚಿಸಬೇಕೆಂಬುದಾಗಿ ಈತ ಸೂಚಿಸಿದ. ಇವನ ಭಾವನೆಗಳಿಂದಾಗಿ ಅಲ್ಲಿಯ ಚರ್ಚು ಇವನಿಗೆ ವಿರೋಧವಾಯಿತು. ಓವೆನ್ ಅದನ್ನೂ ಟೀಕಿಸಲಾರಂಭಿಸಿದ. ಬ್ರಿಟನ್ನಿನ ಸಾರ್ವಜನಿಕ ಅಭಿಪ್ರಾಯ ಇವನಿಗೆ ಅಷ್ಟೇನೂ ಬೆಂಬಲ ನೀಡುವುದಿಲ್ಲವೆಂಬುದು ವೇದ್ಯವಾದಾಗ ಓವೆನ್ ಅಮೇರಿಕಕ್ಕೆ 1824ಹೋದರಲ್ಲಿ. ಇಂಡಿಯಾನದಲ್ಲಿ ಜಮೀನು ಕೊಂಡು ಅಲ್ಲಿ ತನ್ನ ಸಾಮೂಹಿಕ ವಸತಿಯೋಜನೆಯನ್ನು ಕಾರ್ಯರೂಪಕ್ಕೆ ತಂದ. ನ್ಯೂ ಹಾರ್ಮೊನಿ ಎಂದೇ ಅದರ ಹೆಸರು. ಮೊದಮೊದಲು ಇದು ಬಲು ಯಶಸ್ಸುಗಳಿಸಿತು. ಆದರೆ ಕ್ರಮೇಣ ಅಲ್ಲೇ ಒಡಕು ಪ್ರಾರಂಭವಾಯಿತು. ಓವೆನ್ ನಿರಸನಗೊಂಡು ಹಿಂದೆ ಸರಿದ. ಆ ವೇಳೆಗೆ ಆತ ಗಳಿಸಿದ ಸಂಪತ್ತಿನಲ್ಲಿ ಐದನೆಯ ನಾಲ್ಕು ಭಾಗ ಕೈಬಿಟ್ಟುಹೋಗಿತ್ತು.
1829ರಲ್ಲಿ ಓವೆನ್ ಬ್ರಿಟನ್ನಿಗೆ ವಾಪಸ್ಸು ಬಂದ. ಶ್ರಮಾಧಾರಿತ ಮೌಲ್ಯಮಾಪನ, ಸಹಕಾರಿ ಉತ್ಪಾದನೆ ಇವನ್ನು ಕುರಿತ ಓವೆನನ ಭಾವನೆಗಳಿಗೆ ಬ್ರಿಟನ್ನಿನಲ್ಲಿ ಆಗ ಕಾರ್ಮಿಕರ ವಲಯಗಳಲ್ಲಿ ಪುರಸ್ಕಾರ ದೊರಕಿತ್ತು. ಅಲ್ಲಿನ ಕಾರ್ಮಿಕ ರಾಜಕಾರಣದಲ್ಲಿ ಓವೆನ್ ನಾಯಕನೆಂದು ಪರಿಗಣಿತನಾದ. ಗ್ರ್ಯಾಂಡ್ ನ್ಯಾಷನಲ್ ಕನ್ಸಾಲಿಡೇಟೆಡ್ ಯೂನಿಯನ್ ರೂಪುಗೊಂಡಿತು. 1834ರಲ್ಲಿ ಇದಕ್ಕೆ 5 ಲಕ್ಷಕ್ಕೂ ಹೆಚ್ಚು ಮಂದಿ ಸದಸ್ಯರಿದ್ದರು.
ಆದರೆ ಉದ್ಯಮಪತಿಗಳ ವಿರೋಧ, ಸರ್ಕಾರದ ತೀವ್ರ ಕ್ರಮ ಇವುಗಳಿಂದಾಗಿ ಈ ಚಳುವಳಿ ಕ್ಷೀಣಿಸಿತು. ಸಂಘದ ಸದಸ್ಯ ಸಂಖ್ಯೆ ಇಳಿಮುಖವಾಯಿತು. ಕಾರ್ಮಿಕರೇ ತಳಹದಿಗಾಗಿ, ಕಾರ್ಮಿಕ ವಿನಿಮಯ ವ್ಯವಸ್ಥೆಯೇ ಶಿಖರವಾಗಿ ಉಳ್ಳ ಉತ್ಪಾದಕ ವರ್ಗಗಳ ಭವ್ಯ ನೈತಿಕ ಸಂಘವೆಂಬ ಸಾಮಾಜಿಕ ಪಿರಮಿಡ್ ವ್ಯವಸ್ಥೆ ರಚಿಸಬೇಕೆಂಬ ಇವನ ಕನಸು ಕನಸಾಗಿಯೇ ಉಳಿಯಿತು.
1840ರ ದಶಕದಲ್ಲಿ ರಾಚ್ಡೇಲ್ ಪ್ರವರ್ತಕರ ನಾಯಕತ್ವದಲ್ಲಿ ಬೆಳೆವಣಿಗೆ ಹೊಂದಿದ ಕಾರ್ಮಿಕವರ್ಗದ ಸಹಕಾರ ಚಳವಳಿಗೆ ಓವೆನನ ಆದರ್ಶವೇ ಸ್ಫೂರ್ತಿಯ ನೆಲೆಯಾಗಿತ್ತು. ಆದರೂ ಓವೆನ್ ಕನಸುಗಾರ ಸಮಾಜವಾದಿ (ಯುಟೋಪಿಯನ್ ಸೋಷಿಯಲಿಸ್ಟ್) ಎಂದೇ ಅನೇಕರು ಭಾವಿಸಿದ್ದರು. ಈತ ಸಮಾಜವಾದಿಯೇ ಅಲ್ಲವೆಂದೂ ಕೆಲವರು ಸಾಧಿಸಿದ್ದುಂಟು. ಆದರೂ ಕೈಗಾರಿಕಾ ವ್ಯವಸ್ಥೆಯನ್ನು ಕ್ರಿಯಾತ್ಮಕವಾಗಿ ಟೀಕೆ ಮಾಡಿದವನೂ ಸಮಾಜವಾದದ ಪರಿಭಾಷೆಯನ್ನು ರೂಪಿಸಿದವನೂ ಕಾರ್ಮಿಕರನ್ನು ಸಂಘಟಿಸಿ ಕಾರ್ಯಪ್ರವೃತ್ತರಾಗುವಂತೆ ಪ್ರೇರಣೆ ನೀಡಿದವನೂ ರಾಬರ್ಟ್ ಓವೆನ್. 1858 ನವೆಂಬರ್ 17ರಂದು ಈತ ಕಾಲವಾದ.
ಉಲ್ಲೇಖನಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Robert Owen." Encyclopaedia Britannica. Encyclopaedia Britannica Online Academic Edition. Encyclopædia Britannica Inc., 2014. Web. 9 January 2014.