ವಿಷಯಕ್ಕೆ ಹೋಗು

ರತ್ನಗಂಬಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರತ್ನಗಂಬಳಿ

ರತ್ನಗಂಬಳಿಯು ಉಣ್ಣೆ, ಬೆಲೆಬಾಳುವ ರೇಷ್ಮೆ, ವಜ್ರ-ವೈಡೂರ್ಯ, ಮುತ್ತು, ರತ್ನ, ಪಚ್ಚೆ ಹವಳ, ಚಿನ್ನ ಮತ್ತು ಬೆಳ್ಳಿ ದಾರಗಳನ್ನು, ವಿನ್ಯಾಸದ ಜೋಡಣೆಯಲ್ಲಿ ಬಳಸಿಕೊಂಡು ತಯಾರಿಸಿದ ನೆಲಹಾಸು (ಕಾರ್ಪೆಟ್). ಹತ್ತಿ ನೂಲುಗಳಿಂದ ನೆಲದ ಮೇಲೆ ಹಾಸಲು ಚಾಪೆಯಂತೆ ಬಳಸುವ ದಪ್ಪನೆಯ ಹಾಸನ್ನು ಜಮಖಾನೆ ಎಂದು ಕರೆಯಲಾಗುತ್ತದೆ. ಜಮಖಾನಕ್ಕೆ ಹೋಲಿಸಿದರೆ ರತ್ನಗಂಬಳಿ ಆಡಂಬರದ, ಶ್ರೀಮಂತಿಕೆಯ ವೈಭವದ ತೋರಿಕೆಯನ್ನು ಪ್ರಧಾನವಾಗುಳ್ಳ ಒಂದು ಅಲಂಕರಣ ಸಾಮಗ್ರಿ ಎನ್ನಬಹುದು. ರತ್ನಗಂಬಳಿಯನ್ನು ನೆಲ, ಗೋಡೆ ಮತ್ತು ಒಳಾಂಗಣದ ಅಲಂಕರಣಕ್ಕೆ ಬಳಸಲಾಗುತ್ತದೆ. ಕೈಮಗ್ಗದಿಂದ ತಯಾರಿಸುವ ರತ್ನಗಂಬಳಿಯ ತಾಂತ್ರಿಕತೆ, ಕುಶಲತೆ ಮತ್ತು ಕರಕುಶಲಕರ್ಮಿಗಳ ನೈಪುಣ್ಯ, ವಿವಿಧ ದೇಶಗಳಲ್ಲಿನ ರತ್ನಗಂಬಳಿಗಳ ತಯಾರಿಕೆ ಕುರಿತಂತೆ ಈ ಮುಂದೆ ಸಮೀಕ್ಷಿಸಿದೆ.

ಕರಕುಶಲಕರ್ಮಿಗಳು ತಮ್ಮ ಅನುಭವ ಹಾಗೂ ಜಾಣ್ಮೆಯಿಂದ ತಮಗೆ ಬೇಕಾದ ವಿನ್ಯಾಸವನ್ನು ಯಾವ ನೆರವೂ ಇಲ್ಲದೆ ಬಣ್ಣದ ಉಣ್ಣೆಯನ್ನು ಅಳವಡಿಸಿಕೊಂಡು ರಚಿಸುವರು. ಹೀಗೆ ನೇಯ್ಗೆ ಮಾಡುವವರು ವಿನ್ಯಾಸದ ಮಾದರಿಯನ್ನು ದಪ್ಪ ಹಾಳೆಯಲ್ಲಿ ಬರೆದುಕೊಂಡು ಇದರ ಆಧಾರದಿಂದ ನೇಯ್ಗೆ ಮಾಡುತ್ತಾರೆ. ರತ್ನಗಂಬಳಿಯ ಮಗ್ಗ ತುಂಬ ಸರಳವಾದದ್ದು. ಪ್ರಾರಂಭದಲ್ಲಿ ಹಾಸುದಾರವನ್ನು ಮಗ್ಗಕ್ಕೆ ಸುತ್ತಿಕೊಂಡು ಉಣ್ಣೆಯನ್ನು ಪ್ರತಿಯೊಂದು ಹಾಸುದಾರಕ್ಕೆ ಗಂಟಾಗಿಸಿಕ್ಕಿಸಿ ಕೊನೆಯಲ್ಲಿ ಹಾಸುದಾರದಿಂದ ಬಿಗಿ ಮಾಡಲಾಗುವುದು. ಬಿಗಿ ಮಾಡಲು ಮರದ ಬಾಚಣಿಗೆಯಂತಹ ಸಾಧನದಿಂದ ಬಡಿದು ಉಣ್ಣೆಯ ದಾರವನ್ನು ಸೇರಿಸಲಾಗುತ್ತದೆ. ಜಟಿಲ ವಿನ್ಯಾಸವನ್ನು ರೂಢಿಸಿ ರತ್ನಗಂಬಳಿ ನೇಯುವಲ್ಲಿ ಕಲಾವಿದನ ಪ್ರತಿಭೆ ಕೌಶಲ್ಯವನ್ನೂ ಜಾಣ್ಮೆಯನ್ನೂ ಕಾಣಬಹುದು. ಈ ಬಗೆಯ ವಿನ್ಯಾಸವನ್ನು ಇತ್ತೀಚಿಗೆ ಯಂತ್ರದ ಸಹಾಯದಿಂದಲೂ ಪಡೆಯಬಹುದಾಗಿದೆ.

ಕಚ್ಚಾವಸ್ತು ಮತ್ತು ತಾಂತ್ರಿಕತೆ[ಬದಲಾಯಿಸಿ]

ಕುರಿಯ ಉಣ್ಣೆಗೆ ಬಹಳ ಚೆನ್ನಾಗಿ ಬಣ್ಣ ಹೀರುವ ಗುಣವಿರುವುದರಿಂದ ರಂಗು ಕಟ್ಟಿ ನೇಯ್ಗೆಯಲ್ಲಿ ಬಳಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಒಂಟೆ, ಮೇಕೆ ಅಥವಾ ವಿಶೇಷ ಬಗೆಯ ನಾಯಿಯ ಕೂದಲನ್ನು ಈ ಉದ್ಯಮದಲ್ಲಿ ಬಳಸುವುದುಂಟು. ಉಣ್ಣೆಯ ಉಪಯೋಗಕ್ಕಾಗಿಯೇ ಉತ್ತಮ ತಳಿಯ ಕುರಿಗಳನ್ನು ಸಾಕಲಾಗುತ್ತದೆ.

ರತ್ನಗಂಬಳಿಯ ನೇಯ್ಗೆಯಲ್ಲಿ ಅದರ ಅಳತೆಗೆ ಸರಿಹೊಂದುವ ವಿನ್ಯಾಸವನ್ನು ಅಳವಡಿಸಿ ಸಿದ್ಧಪಡಿಸಲಾಗುತ್ತದೆ. ಹೆಚ್ಚಾಗಿ ಎಲ್ಲರೂ ಬಯಸುವುದು ಪರ್ಷಿಯನ್ ಪೂರ್ವಿಕರು ಬಳಸುತ್ತಿದ್ದ ವಿನ್ಯಾಸವನ್ನೇ. ದಕ್ಷಿಣಪೂರ್ವದ ಬಾಗ್‍ದಾದ್ ಪಟ್ಟಣದ ಸಸನೀರ್ ಅರಮನೆಯ ಒಳಾಂಗಣದಲ್ಲಿ ಬಳಸಲಾದ ರತ್ನಗಂಬಳಿಯನ್ನು ಕೊಸರೂ ಎಂದು ಕರೆಯಲಾಗುತ್ತದೆ. ಆಸ್ಥಾನದ ಈ ರತ್ನಗಂಬಳಿ ಆರನೆಯ ಶತಮಾನದ್ದೆಂದು ಊಹಿಸಲಾಗಿದೆ. ಇದರ ವಿಸ್ತಾರ 84 ಚದರ ಅಡಿ. ಪ್ರಕೃತಿಯ ಸುಂದರ ವಿನ್ಯಾಸದ ಈ ರತ್ನಗಂಬಳಿಯನ್ನು ದರ್ಬಾರಿನ ಅಂಗಳಕ್ಕೆ ನೆಲಹಾಸಾಗಿ ಬಳಸಲಾಗುತ್ತಿತ್ತು.

ಬಣ್ಣಗಾರಿಕೆ[ಬದಲಾಯಿಸಿ]

ಹದಿನೆಂಟನೆಯ ಶತಮಾನದವರೆಗೂ ಪ್ರಕೃತಿಯಲ್ಲಿ ದೊರೆವ ನೈಸರ್ಗಿಕ ಬಣ್ಣಗಳನ್ನೇ ರತ್ನಗಂಬಳಿಯ ನೇಯ್ಗೆಯಲ್ಲಿ ಬಳಸಲಾಗುತ್ತಿತ್ತು. ಸಸ್ಯಗಳ ನೆರವಿನಿಂದ ನಸುಹಳದಿ, ಹಳದಿ, ನೀಲಿ, ತಿಳಿನೀಲಿ ಮತ್ತು ಕೆಂಪು-ಹೀಗೆ ವರ್ಣಮಯ ಬಣ್ಣವನ್ನು ಪಡೆಯಲಾಗುತ್ತದೆ. ಕೆಲವು ಬಣ್ಣಗಳನ್ನು ಖನಿಜ, ಮತ್ತೆ ಕೆಲವನ್ನು ಕ್ರೀಮಿಕೀಟಗಳ ಹಾಗೂ ಪ್ರಾಣಿಗಳ ನೆರವಿನಿಂದಲೂ ಪಡೆಯುತ್ತಿದ್ದರು. ಕಪ್ಪೆಚಿಪ್ಪು (ಬಸವನಹುಳು, ಸಿಂಪಿ) ಕಟ್ಲ್‍ಮೀನಿನಿಂದಲೂ ಬಣ್ಣಗಳನ್ನು ಪಡೆಯಲಾಗುತ್ತಿತ್ತು. ಹೀಗೆ ಪ್ರಕೃತಿಯಿಂದ ಪಡೆದ ಬಣ್ಣಗಳ ಗುಣಮಟ್ಟ ಸುಧಾರಿಸಲು ಸ್ಫಟಿಕವನ್ನು ಬಳಸುತ್ತಿದ್ದುದುಂಟು. ಹತ್ತೊಂಬತ್ತನೆಯ ಶತಮಾನದ ಅನಂತರ ಉತ್ತಮ ದರ್ಜೆಯ ಕೃತಕಬಣ್ಣಗಳು ಮಾರುಕಟ್ಟೆಗೆ ಬಂದ ಬಳಿಕ ರತ್ನಗಂಬಳಿ ಉದ್ಯಮ ಉಚ್ಛ್ರಾಯಸ್ಥಿತಿಗೇರಲು ಸಾಧ್ಯವಾಯಿತು.

ರತ್ನಗಂಬಳಿಗಳ ಬಳಕೆ[ಬದಲಾಯಿಸಿ]

ಮುಸ್ಲಿಂ ರಾಜಮನೆತನದವರು, ಶ್ರೀಮಂತರು ತಮ್ಮ ವೈಭವವನ್ನು ಪ್ರದರ್ಶಿಸಲು ರತ್ನಗಂಬಳಿಗಳನ್ನು ಆಸ್ಥಾನದಲ್ಲಿ ಹಾಗೂ ಅತಿಥಿಗೃಹಗಳಲ್ಲಿ ನೆಲಹಾಸುಗಳಾಗಿ ಉಪಯೋಗಿಸುತ್ತಿದ್ದರು. ಅಂದಿನ ಮುಸ್ಲಿಂ ಸುಲ್ತಾನರಿಗೆ ರತ್ನಗಂಬಳಿಗಳ ಬಗ್ಗೆ ಇದ್ದ ಪ್ರೀತಿ ಅವರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ. ಸಾಧಾರಣವಾಗಿ ರತ್ನಗಂಬಳಿಯ ಉಪಯೋಗ ಅವುಗಳ ವಿನ್ಯಾಸವನ್ನೇ ಅವಲಂಬಿಸಿದೆ. ಮುಸ್ಲಿಮರಲ್ಲಿ ಪ್ರಾರ್ಥನಾ ಮಂದಿರದ ಹಾಸುವಿಗೆ ನಮಾeóïಲಿಕ್ ಎನ್ನುವರು. ಕೆಲವು ಪ್ರಾರ್ಥನಾ ಮಂದಿರಗಳಿಗೆ ಸುಂದರ ವಿನ್ಯಾಸದ ಚಿಕ್ಕಗಾತ್ರದ ರತ್ನಗಂಬಳಿಯನ್ನು ಪ್ರಾರ್ಥನಾ ವೇಳೆಯಲ್ಲಿ ಉಪಯೋಗಿಸುತ್ತಿದ್ದರು. ಇಂತಹ ರತ್ನಗಂಬಳಿಗೆ ಮಿಹ್ವೆರಾ ಎನ್ನಲಾಗುತ್ತದೆ.

ರತ್ನಗಂಬಳಿಗಳನ್ನು ಹದಿನೇಳನೆಯ ಶತಮಾನದ ಮಧ್ಯ ಭಾಗದಲ್ಲಿ ಪರ್ಷಿಯದಿಂದ ಏಷ್ಯ ಮತ್ತು ಐರೋಪ್ಯ ರಾಷ್ಟ್ರಗಳಿಗೆ ರಪ್ತು ಮಾಡಲಾಗುತ್ತಿತ್ತು. ಯುರೋಪಿನ ಕ್ರೈಸ್ತರು ರತ್ನಗಂಬಳಿಯನ್ನು ಅತ್ಯಮೂಲ್ಯ ವಸ್ತುವಾಗಿ ಚರ್ಚಿನ ಒಳಾಂಗಣದಲ್ಲಿ ಪ್ರಾರ್ಥನಾ ದಿನಗಳಲ್ಲಿ ನೆಲದ ಹಾಸುಗಳಾಗಿ ಉಪಯೋಗಿಸುತ್ತಿದ್ದರು. ಬೇರೆ ದಿನಗಳಲ್ಲಿ ಗೋಡೆ ಅಥವಾ ಮೇಜಿನ ಮೇಲೆ ಹೊದಿಸಲಾಗುತ್ತಿತ್ತು. ಇಟಲಿಯಲ್ಲಿ ರತ್ನಗಂಬಳಿಯನ್ನು ಉಪ್ಪರಿಗೆಯ ಮೊಗಸಾಲೆಯ ಮೇಲೆ ನೇತು ಹಾಕುತ್ತಿದ್ದರು. ಯುರೋಪಿಯನ್ನರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸಗಳಲ್ಲಿ ತಯಾರಿಸಿ ಹೆಚ್ಚು ಬೇಡಿಕೆ ಬರುವ ಮಾರ್ಗದಲ್ಲಿ ಈಜಿಪ್ಟಿನವರು ರಪ್ತುಮಾಡುತ್ತಿದ್ದರು. ಚದುರಾಕೃತಿ, ಗುಂಡಾಕೃತಿ, ಶಿಲುಬೆಯಾಕೃತಿಯ ವಿನ್ಯಾಸವನ್ನು ಮೇಜಿನ ಮೇಲೆ ಹೊದಿಕೆಯಾಗಿ ಉಪಯೋಗಿಸುತ್ತಿದ್ದುದುಂಟು. ಹದಿನೇಳನೆಯ ಶತಮಾನದಲ್ಲಿ ಹೆಚ್ಚಾಗಿ ನೆಲದ ಹಾಸುಗಳಾಗಿ ಉಪಯೋಗಿಸುತ್ತಿದ್ದ ಹಾಸುಗಂಬಳಿ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಗೋಡೆಗಳನ್ನು ಅಲಂಕರಿಸುವ ವಸ್ತುವಾಯಿತು. ಕೈಗಾರಿಕಾಕ್ರಾಂತಿಯ ಬಳಿಕ ವ್ಯಾಪಕವಾಗಿ ಯಂತ್ರಗಳನ್ನು ಬಳಸಿ ರತ್ನಗಂಬಳಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಕೈಮಗ್ಗದ ದುಬಾರಿ ಬೆಲೆಯ ರತ್ನಗಂಬಳಿಗಳಿಗೆ ಬೇಡಿಕೆ ಕುಸಿಯಿತು.

ಮೆಡಿಟರೇನಿಯನ್ನರು, ಯುರೋಪಿನ್ನರು ಎಲ್ಲರಂತೆ ನೆಲಹಾಸಾಗಿ, ದ್ವಾರದ ತೆರೆಗಳಾಗಿ ರತ್ನಗಂಬಳಿ ಬಳಸುತ್ತಿದ್ದರು. ರಾಜರಿಗೆ ಕಪ್ಪಕೊಡುವ ಸಂದರ್ಭದಲ್ಲಿ ಕೆಲವೊಮ್ಮೆ ರತ್ನಗಂಬಳಿಯನ್ನು ಕೊಡುವ ಪದ್ಧತಿ ಮುಸ್ಲಿಮರ ಕಾಲದಲ್ಲಿತ್ತು. ತಮ್ಮ ನೆರೆ ರಾಜ್ಯಗಳ ಸ್ನೇಹ ಸಂಪಾದಿಸಲು ನವಾಬರು ರತ್ನಗಂಬಳಿಗಳನ್ನು ಕಾಣಿಕೆಯನ್ನಾಗಿ ನೀಡುತ್ತಿದುದ್ದುಂಟು. ಇಂಥ ಕೊಡುಗೆ ಸ್ನೇಹ ಬಾಂಧವ್ಯದ ಸಂಕೇತವಾಗಿತ್ತು. ಮುಸ್ಲಿಂ ಸುಲ್ತಾನರು ಪ್ರಯಾಣದ ಬಿಡಾರಗಳಲ್ಲಿ ಡೇರೆಗಾಗಿ, ಗೋರಿಯ ಹೊದಿಕೆಗಾಗಿ, ಕುದುರೆ ಸವಾರಿಯಲ್ಲಿ ಆಸನದ ಪೀಠಕ್ಕೂ ರತ್ನಗಂಬಳಿಗಳನ್ನು ಬಳಸುತ್ತಿದ್ದರು.

ಪೌರಸ್ತ್ಯ ರತ್ನಗಂಬಳಿಗಳು[ಬದಲಾಯಿಸಿ]

ರತ್ನಗಂಬಳಿಯನ್ನು ಪಶ್ಚಿಮ ಮತ್ತು ಮಧ್ಯ ಏಷ್ಯ, ಉತ್ತರ ಆಫ್ರಿಕ ಮತ್ತು ಕಾಕಸಸ್ ಕ್ಷೇತ್ರದ ಯುರೋಪಿನಲ್ಲಿ ತಯಾರಿಸುತ್ತಿದ್ದರು. ಪಶ್ಚಿಮ ಏಷ್ಯದಲ್ಲಿ ಕ್ರಿಸ್ತಪೂರ್ವ ಒಂದು ಸಾವಿರ ವರ್ಷಗಳ ಹಿಂದೆಯೇ ಉಣ್ಣೆ ಮತ್ತು ಮೃದುಹುಲ್ಲಿನ ನೆರವಿನಿಂದ ರತ್ನಗಂಬಳಿಗಳನ್ನು ನೇಯ್ಗೆಮಾಡಿ ಬಳಸಲಾಗುತ್ತಿತ್ತು.

ದಕ್ಷಿಣ ಸೈಬೀರಿಯದ ಅಲ್ಚೀ ಬೆಟ್ಟದ ಭೂ ಸಂಶೋಧನೆಯಲ್ಲಿ ರಾಜಮನೆತನದ ಗೋರಿಯಲ್ಲಿ ದೊರೆತ ರತ್ನಗಂಬಳಿಯ ಹೊದಿಕೆ ಬಹಳ ಪುರಾತನವಾದದ್ದು. ಈ ಗೋರಿಯಲ್ಲಿ ದೊರೆತ ಪೆಲ್ಟ್ ಮತ್ತು ವುಲನ್ ಬಳಕೆಯ ರತ್ನಗಂಬಳಿ ತುರ್ಕಿ ದೇಶದ್ದು. ಇವು ಪರ್ಷಿಯನ್ ಮೂಲದವಾಗಿರಬಹುದು ಎಂದು ಊಹಿಸಲಾಗಿದೆ. ಈ ಗೋರಿಯ ರತ್ನಗಂಬಳಿಯ ಮಧ್ಯಭಾಗದಲ್ಲಿ ಹೂವಿನಾಕಾರದ ನಕ್ಷತ್ರದ ವಿನ್ಯಾಸವಿದೆ.

ಗ್ರೀಕರು ಮತ್ತು ಅರಬರು ಬೆಲೆಬಾಳುವ ಸುಂದರ ವಿನ್ಯಾಸದ ರತ್ನಗಂಬಳಿಗಳನ್ನು ಚಿನ್ನದ ಎಳೆಗಳಿಂದ ನೇಯ್ದು, ಕಸೂತಿಮಾಡಿ ಗೋಡೆಗಳಿಗೆ ಅಲಂಕಾರಿಕ ಫಲಕವಾಗಿಯೂ ನೆಲಹಾಸಾಗಿಯೂ ಉಪಯೋಗಿಸುತ್ತಿದ್ದರು. ಬೃಹತ್‍ಗಾತ್ರದ ರತ್ನಗಂಬಳಿಯನ್ನು ಆರನೆಯ ಶತಮಾನದಲ್ಲೇ ಸಸನೀರ್ ಅರಮನೆಯಲ್ಲಿ ಉಪಯೋಗಿಸುತ್ತಿದ್ದರು. ಸುಂದರ ವಿನ್ಯಾಸವುಳ್ಳ ರತ್ನಗಂಬಳಿಯನ್ನು 8 ಮತ್ತು 13ನೆಯ ಶತಮಾನದಲ್ಲಿ ಬೆಲೆಬಾಳುವ ಅಲಂಕರಣವಸ್ತುಗಳನ್ನು ಬಳಸಿ ನೇಯಲಾಗುತ್ತಿತ್ತು. 13, 14, 15ನೆಯ ಶತಮಾನದಲ್ಲಿ ಏಷ್ಯ ಮತ್ತು ಕಾಕಸಸ್ ಜನರು ತಯಾರಿಸಿದ ವಿವಿಧ ಬಗೆಯ ರತ್ನಗಂಬಳಿಗಳು ಆಕರ್ಷಕ ಬಣ್ಣಗಳಿಂದಲೂ ನಕ್ಷತ್ರಗಳಿಂದಲೂ ತುಂಬಿರುತ್ತಿದ್ದವು. ಪ್ರಾಣಿಗಳ ಚಿತ್ರಗಳು, ಪ್ರಕೃತಿಯ ವಿನ್ಯಾಸದ ಜೋಡಣೆ ನೇಯ್ಗೆಯ ಚಮತ್ಕಾರ ನುರಿತ ಕುಶಲಕರ್ಮಿಗಳಿಂದ ಮಾತ್ರ ಸಾಧ್ಯ. ಬಹಳ ಪುರಾತನವಾದ ಡ್ರ್ಯಾಗನ್ ಮತ್ತು ಫೀನಿಕ್ಸ್ ಪಕ್ಷಿಯ ವಿನ್ಯಾಸದ ವಿಶೇಷ ರತ್ನಗಂಬಳಿಗಳು ಸಾಂಪ್ರದಾಯಕ ರೀತಿಯಲ್ಲಿರುವುದನ್ನು ಕಾಣಬಹುದಾಗಿದೆ.

ಪರ್ಷಿಯ[ಬದಲಾಯಿಸಿ]

ರತ್ನಗಂಬಳಿಯ ಕರಕುಶಲಕರ್ಮಿಗಳು ಕಲಾತ್ಮಕ ಕಲೆಗಾರಿಕೆಯ ನೇಯ್ಗೆ 15ನೆಯ ಶತಮಾನದಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ಏರಿತ್ತು. 13ನೆಯ ಶತಮಾನದಲ್ಲಿ ಮಂಗೋಲರು, ಪರ್ಷಿಯಕ್ಕೆ ಧಾಳಿ ಇಟ್ಟಾಗ, ನೇಕಾರರಿಗೆ ಉತ್ತೇಜನ ಲಭ್ಯವಾಗದೆ ಈ ಉದ್ಯಮ ಇಳಿಮುಖವಾಯಿತು. ತೈಮೂರ್‍ಲಂಗನ ಆಳ್ವಿಕೆಯಲ್ಲಿ ಅರಮನೆಯಲ್ಲಿ ರತ್ನಗಂಬಳಿ ನೇಯುವವರಿಗೆ ಪ್ರೋತ್ಸಾಹ ನೀಡಿದುದರಿಂದ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿತು.

ತೈಮೂರನ ಅನಂತರ ಬಂದ ಷರೋಕ್‍ನ ಪ್ರೋತ್ಸಾಹದಿಂದ ಈ ಕಲೆ ಮತ್ತೆ ಜೀವಪಡೆದು ಹೆಚ್ಚು ಪ್ರಾಬಲ್ಯಕ್ಕೆ ಬರಲು ಸಾಧ್ಯವಾಯಿತು.

ತುರ್ಕಿ[ಬದಲಾಯಿಸಿ]

16ನೆಯ ಶತಮಾನದ ಅನಂತರ ತುರ್ಕಿಯನ್ನರು, ಈಜಿಪ್ಟ್ ಹಾಗೂ ಪರ್ಷಿಯನ್ನರ ವಿನ್ಯಾಸದ ಮಾದರಿಯನ್ನೇ ಅಳವಡಿಸಿಕೊಂಡು ನೇಯ್ಗೆ ಮಾಡುತ್ತಿದ್ದರು. ನೇಯ್ಗೆಯಲ್ಲಿ ಅವರು ಬಳಸುತ್ತಿದ್ದುದು ಹಸುರು ಮತ್ತು ನೀಲಿ ಬಣ್ಣಗಳನ್ನು.

17ನೆಯ ಶತಮಾನದಲ್ಲಿ ತುರ್ಕಿಯನ್ನರು ತಮ್ಮ ಆಳವಾದ ಅನುಭವದಿಂದ ಒಂದು ಹೊಸಮಾದರಿಯ ರತ್ನಗಂಬಳಿಯನ್ನು ನೇಯ್ಗೆಮಾಡತೊಡಗಿದರು. ಟ್ರಾನ್ಸಿಲ್‍ವಾನಿಯನ್ ಎಂದು ಕರೆಯಲಾಗುವ ಈ ರತ್ನಗಂಬಳಿ ಪ್ರಾರ್ಥನಾ ಮಂದಿರಗಳಿಗೆ ಮೀಸಲಾಗಿತ್ತು. ಸುಂದರವಿನ್ಯಾಸದಿಂದ ಕೂಡಿರುವ ಈ ರತ್ನಗಂಬಳಿಗಳಿಗೆ ಕೆಂಪುಬಣ್ಣವನ್ನೇ ಬಳಸುತ್ತಿದ್ದರು. ಪಕ್ಷಿಯ ವಿನ್ಯಾಸವನ್ನೇ ಬಳಸಿಕೊಂಡು ಬಿಳಿಬಣ್ಣದ ರತ್ನಗಂಬಳಿಯನ್ನು ಕೂಡ ತಯಾರಿಸುತ್ತಿದ್ದರು. ಇದಕ್ಕೆ ಟರ್ಕಿಬರ್ಡ್ ಎಂದೇ ಹೆಸರು.

18 ಮತ್ತು 19ನೆಯ ಶತಮಾನದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಜನರಲ್ಲಿ ರತ್ನಗಂಬಳಿಯ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗಿ ದಿನನಿತ್ಯದ ಬಳಕೆಯಲ್ಲಿ ಎಲ್ಲರೂ ಉಪಯೋಗಿಸುವ ಸುಂದರ ವಿನ್ಯಾಸದ ರತ್ನಗಂಬಳಿಗಳನ್ನು ತುರ್ಕಿಯಿಂದ ಆಮದು ಮಾಡಿಕೊಳ್ಳುತ್ತಿದ್ದರು.

ಕಾಕಸಸ್[ಬದಲಾಯಿಸಿ]

ಇವರ ರತ್ನಗಂಬಳಿಯ ವಿನ್ಯಾಸ ಭಿನ್ನವಾಗಿತ್ತು. ಇವರಲ್ಲಿ ಭಾವನಾರೂಪದ ವಿನ್ಯಾಸಕ್ಕೆ ಹೆಚ್ಚು ಬೇಡಿಕೆ ಇತ್ತು. ಈ ವಿನ್ಯಾಸದಲ್ಲಿ ಪ್ರಮುಖವಾಗಿದ್ದುದು ಡ್ರ್ಯಾಗನ್. ಇದರವರ್ಣ ಸಂಯೋಜನೆಯೂ ಆಕರ್ಷಕವಾಗಿತ್ತು.

ಈಜಿಪ್ಟ್[ಬದಲಾಯಿಸಿ]

ಈಜಿಪ್ಟ್‍ನವರು ತಯಾರಿಸುತ್ತಿದ್ದ ರತ್ನಗಂಬಳಿಯನ್ನು ಹಿಂದೆ ಡಮಾಸ್ಕಸ್ ಎಂದು ಕರೆಯಲಾಗುತ್ತಿತ್ತು. ಮುಸ್ಲಿಮರ ಆಡಳಿತದ ಕಾಲದಲ್ಲಿ ಇಲ್ಲಿಯ ರತ್ನಗಂಬಳಿಗಳನ್ನು ಮ್ಯಾಮ್‍ಲುಕ್ ಎಂದೂ ಕರೆಯುತ್ತಿದ್ದರು. ಇವರು ಬಳಸುತ್ತಿದ್ದ ಬಣ್ಣಗಳು ಕೆಂಪು, ಹಳದಿ, ಹಸುರು ಮತ್ತು ತಿಳಿನೀಲಿ.

ಚೀನ[ಬದಲಾಯಿಸಿ]

ಚೀನೀಯರು ರತ್ನಗಂಬಳಿಯ ನೇಯ್ಗೆಯ ವಿಧಾನವನ್ನು ಬಳಕೆಗೆ ತಂದು ತಮ್ಮದೇ ಆದ ವಿಶಿಷ್ಟ ವಿನ್ಯಾಸವನ್ನು ರೂಪಿಸಿಕೊಂಡಿದ್ದರು. ಹಾಸು ದಾರಗಳಿಗೆ ಇವರು ಬಳಸುತ್ತಿದ್ದುದು ಹತ್ತಿಯ ದಾರವನ್ನು. ಇವರು ರತ್ನಗಂಬಳಿಯನ್ನು ನೇಯ್ದಮೇಲೆ ಕತ್ತರಿಯ ನೆರವಿನಿಂದ ಪ್ರತಿಯೊಂದು ಹೂ, ಗಿಡ, ಮರ, ಪ್ರಾಣಿಗಳ ವಿನ್ಯಾಸವನ್ನು ಉಬ್ಬುಚಿತ್ರದ ರೀತಿಯಲ್ಲಿ ಕತ್ತರಿಸಿ ಶೃಂಗರಿಸುತ್ತಿದ್ದರು. ಹೆಚ್ಚಾಗಿ ಬಳಸುತ್ತಿದ್ದುದು ತೆಳುಬಣ್ಣವನ್ನು. ಬಣ್ಣಗಳಲ್ಲಿ ಹಳದಿ, ಕೇಸರಿ, ಕೆಂಪು, ಕಿತ್ತಳೆ, ನೀಲಿ ಮತ್ತು ಬಿಳಿ ಸರ್ವೇಸಾಧಾರಣ. ಆದರೆ ಕೆಂಪು, ಕಂದು ಮತ್ತು ಹಸುರು ಬಣ್ಣವನ್ನೂ ವಿರಳವಾಗಿ ಉಪಯೋಗಿಸುತ್ತಿದ್ದರು. ಅರಮನೆಯ ಕಂಬಗಳ ಹೊದಿಕೆಯಾಗಿಯೂ ರತ್ನಗಂಬಳಿಯನ್ನು ನೇಯ್ಗೆಮಾಡುತ್ತಿದ್ದುದು ಚೀನೀಯರ ಇನ್ನೊಂದು ವಿಶೇಷ. ವಿನ್ಯಾಸಕ್ಕೆ ಬಳಸಲಾದ ಡ್ರ್ಯಾಗನ್ ಪ್ರಾಣಿಗಳು ಕಂಬಕ್ಕೆ ಸುತ್ತುವರಿದಾಗ ಒಂದಕ್ಕೊಂದು ಸೇರುವಂತೆ ನೇಯ್ಗೆ ಮಾಡುತ್ತಿದ್ದುದುರಲ್ಲಿ ಇವರ ಜಾಣ್ಮೆಯನ್ನು ಕಾಣಬಹುದು. ಈ ಬಗೆಯ ನೇಯ್ಗೆ ವಿಧಾನ ಅಪಾರ ಮೆಚ್ಚುಗೆಗಳಿಸಿತು.

ಪಾಶ್ಚಾತ್ಯ ಸಾಮ್ರಾಜ್ಯದ ರತ್ನಗಂಬಳಿಗಳು[ಬದಲಾಯಿಸಿ]

ಸ್ಪೇನ್[ಬದಲಾಯಿಸಿ]

ಸ್ಪೇನ್‍ನಲ್ಲಿಯೂ ರತ್ನಗಂಬಳಿಯ ನೇಯ್ಗೆಯಿತ್ತು. ಇವರು ಸಮೀಪದ ಇಸ್ಲಾಂ ದೇಶದವರ ಗಂಟುಕಟ್ಟಿನ ಮಾದರಿಯ ರತ್ನಗಂಬಳಿ ತಯಾರಿಸುತ್ತಿದ್ದರು. ಇವರು ತಯಾರಿಸಿದ ರತ್ನಗಂಬಳಿಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದುದು ಕ್ರೈಸ್ತಧರ್ಮದ ಸಂಕೇತ ವಿನ್ಯಾಸವನ್ನೇ. 18ನೆಯ ಶತಮಾನದಲ್ಲಿ ರತ್ನಗಂಬಳಿಯ ರೂಪರಚನೆ ಬದಲಾಯಿತು. ಪೂರ್ವಿಕರು ಬಳಸುತ್ತಿದ್ದ ಗಂಟಿನ ಬಳಕೆಯ ಬದಲಿಗೆ ಸಾಧಾರಣ ನೇಯ್ಗೆ ಜನಪ್ರಿಯವಾಗಿತ್ತು.

ಫ್ರಾನ್ಸ್[ಬದಲಾಯಿಸಿ]

ಫ್ರಾನ್ಸಿನಲ್ಲಿ ರತ್ನಗಂಬಳಿಯ ನೇಯ್ಗೆಯನ್ನು ಹಳೆಯ ಮಾದರಿಯ ಗಂಟಿನ ನೆರವಿನಿಂದಲೇ ಮಾಡುತ್ತಿದ್ದರು. ರೂಢಿಯಲ್ಲಿದ್ದ ಸ್ಥಳೀಯ ವಿನ್ಯಾಸಗಳನ್ನೇ ಬಳಸುತ್ತಿದ್ದರು. ಇದರಿಂದ ಸ್ಥಳೀಯ ಶ್ರೀಮಂತರ ಬೇಡಿಕೆ ಹೆಚ್ಚುತ್ತಲೇ ಇತ್ತು. 17ನೆಯ ಶತಮಾನದಲ್ಲಿ ಈ ಉದ್ದಿಮೆ ಲಾಭದಾಯಕವೆಂದು ಅರಿತ ಬಳಿಕ ಸ್ಯಾವೊನೀರಿಕ್ ಎಂಬ ಹೆಸರಿನ ರತ್ನಗಂಬಳಿ ತಯಾರಿಕಾ ಕಾರ್ಖಾನೆಗಳು ಪ್ರಾರಂಭವಾದವು. ಇಲ್ಲಿಯ ಸುಂದರ, ಬಾಳಿಕೆ ಬರುವ, ಉನ್ನತಮಟ್ಟದ ರತ್ನಗಂಬಳಿಗಳಿಗೆ ಬೇಡಿಕೆ ಹೆಚ್ಚುತ್ತಲೇ ಇತ್ತು. 17ನೆಯ ಶತಮಾನದಲ್ಲಿ 14ನೆಯ ಲೂಯಿಯ ಕಾಲದಲ್ಲಿ ಗೋಬೆಲಿಯನ್ ಎಂಬ ಕಾರ್ಖಾನೆ ಸ್ಥಾಪನೆಯಾಗಿ ರತ್ನಗಂಬಳಿಯ ಬೇಡಿಕೆಯನ್ನು ಪೂರೈಸಿತು. ಈ ಕಾರ್ಖಾನೆ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಅಭುಸನ್ ರತ್ನಗಂಬಳಿ ತುಂಬ ಜನಪ್ರಿಯವಾಗಿತ್ತು.

ಬ್ರಿಟಿಷ್ ಸಾಮ್ರಾಜ್ಯ ಮತ್ತು ಐರ್ಲೆಂಡ್[ಬದಲಾಯಿಸಿ]

ಇಲ್ಲಿಯ ಕರಕುಶಲ ಕರ್ಮಿಗಳು ತುರ್ಕಿಯ ರತ್ನಗಂಬಳಿಗೆ ಮಾರುಹೋದರು. 16 ಮತ್ತು 17ನೆಯ ಶತಮಾನಗಳಲ್ಲಿ ಕೆಲವು ಕಾರ್ಖಾನೆಗಳು ಪ್ರಾರಂಭವಾಗಿ ರತ್ನಗಂಬಳಿಯ ತಯಾರಿಕೆಯಲ್ಲಿ ಉತ್ತಮ ದರ್ಜೆಯ ವಿನ್ಯಾಸವನ್ನೂ ದೃಶ್ಯಕ್ಕೆ ತಕ್ಕ ಬಣ್ಣಗಳನ್ನೂ ಬಳಸಿ ರತ್ನಗಂಬಳಿಯನ್ನು ತಯಾರಿಸುವ ಮಗ್ಗಗಳು ರೂಢಿಗೆ ಬಂದ ಬಳಿಕ ಕೈಮಗ್ಗದಿಂದ ತಯಾರಿಸುತ್ತಿದ್ದ ರತ್ನಗಂಬಳಿ ಕೈಗಾರಿಕೆ ಅವನತಿಯ ಹಾದಿ ಹಿಡಿಯಿತು. 20ನೆಯ ಶತಮಾನದಲ್ಲಿ ಹಳೆಯ ಮಾದರಿಯ ಗಂಟಿನ ರತ್ನಗಂಬಳಿಯ ನೇಕಾರರ ಸಂಘ ಸ್ಥಾಪಿತವಾಗಿ ಈಗಲೂ ಕೆಲಸ ಮಾಡುತ್ತಿದೆ.

ಸ್ಕಾಂಡಿನೇವಿಯ[ಬದಲಾಯಿಸಿ]

ಇಲ್ಲಿಯ ರತ್ನಗಂಬಳಿ ತಯಾರಿಕಾ ವಿಧಾನದಲ್ಲಿ ಬಣ್ಣದ ಬಳಕೆಯನ್ನು ಬಿಟ್ಟರೆ ಅಂತಹ ವಿಶೇಷತೆಯಿರಲಿಲ್ಲ. ಕೈಮಗ್ಗದಿಂದ ತಯಾರಿಸಿದ ಕಲಾತ್ಮಕ ರತ್ನಗಂಬಳಿಯನ್ನು ಹೆಚ್ಚಾಗಿ ನೆಲಕ್ಕೆ ಹಾಸುವುದಕ್ಕೂ ಸುಂದರ ರeóÁಯಿಯಾಗಿಯೂ ಮೇಲಿನ ಹೊದಿಕೆಯಾಗಿಯೂ ಪೀಠೋಪಕರಣಗಳನ್ನು ಅಲಂಕರಿಸಲೂ ಉಪಯೋಗಿಸುತ್ತಿದ್ದರು. ತಯಾರಿಕಾ ವಿಧಾನದಲ್ಲಿ ಬಳಸುತ್ತಿದ್ದುದು ತುರ್ಕಿಯ ವಿನ್ಯಾಸ ಹಾಗೂ ತಾಂತ್ರಿಕತೆಯನ್ನೇ. ಸ್ವೀಡಿಷ್ ಮತ್ತು ಐರಿಷ್ ರತ್ನಗಂಬಳಿಯನ್ನು ರಯ ಎಂದು ಕರೆಯುತ್ತಿದ್ದರು. ಮಂದವಾದ ದಾರಗಳಿಂದ ಹೆಣೆದು ಗಂಟಿನ ಮಾದರಿಯಲ್ಲಿ, ಜ್ಯಾಮಿತೀಯ ವಿನ್ಯಾಸಗಳನ್ನು, ಸ್ಥಳೀಯ ಕ್ರೈಸ್ತರಿಗೆ ಸರಿಹೊಂದುವ ರೀತಿಯಲ್ಲಿ ನೇಯ್ದು ಮದುವೆ ಮತ್ತು ಮಂಗಳಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದರು.

ಪೂರ್ವ ಯುರೋಪ್[ಬದಲಾಯಿಸಿ]

ಪೂರ್ವಯುರೋಪಿನ ನೇಕಾರರು ಕೂಡ ತಯಾರಿಕಾ ವಿಧಾನದಲ್ಲಿ ಪರ್ಷಿಯ ವಿಧಾನವನ್ನೇ ಅನುಸರಿಸುತ್ತಿದ್ದರು. ಇಲ್ಲಿ ತಯಾರಾದ ರತ್ನಗಂಬಳಿಗಳನ್ನು ಮಸೂವಿಯನ್ ಎಂದು ಕರೆಯಲಾಗುತ್ತಿತ್ತು. ದಕ್ಷಿಣ ಪೋಲೆಂಡ್, ಉಕ್ರೇನ್ ಮತ್ತು ದಕ್ಷಿಣ ರಷ್ಯದಲ್ಲಿ ಅಲ್ಲಿಯ ಜನಪದ ವಿನ್ಯಾಸದ ರತ್ನಗಂಬಳಿಯನ್ನು ಸಾಧಾರಣ ನೇಯ್ಗೆಯಿಂದ ಬಣ್ಣಗಳ ಹೊಂದಾಣಿಕೆಯಿಂದ ಆಕರ್ಷಕವಾಗಿಸುತ್ತಿದ್ದರು. ಇಲ್ಲಿಯ ಕುಶಲಕರ್ಮಿಗಳಾದ ಬಾಲ್ಕನ್ನರು ಈ ಕೈಗಾರಿಕೆಯನ್ನು ಮುಂದುವರಿಸಿದರು. 20ನೆಯ ಶತಮಾನದಲ್ಲಿ ರೊಮೇನಿಯ ಸರ್ಕಾರದ ಉತ್ತೇಜನದಿಂದ ಜನಪದ ವಿನ್ಯಾಸದ ರತ್ನಗಂಬಳಿಗಳು ತಯಾರಾಗುತ್ತಿದ್ದುವು.

ಯುರೋಪಿನ ಜನಪದ ರತ್ನಗಂಬಳಿ[ಬದಲಾಯಿಸಿ]

ಯುರೋಪಿನಲ್ಲಿ ಜನಪದ ವಿನ್ಯಾಸದ ರತ್ನಗಂಬಳಿ ಜನಪ್ರಿಯವಾಗಿತ್ತು. ಇಲ್ಲಿಯ ಈ ಕೈಗಾರಿಕೆ ಬಹಳ ದಿನಗಳವರೆಗೂ ಮುಂದುವರಿದಿತ್ತು. ಇವರು ತಯಾರಿಸಿದ ರತ್ನಗಂಬಳಿಯನ್ನು ನೆಲದ ಮೇಲೆ ಹಾಸುವುದಕ್ಕೂ ಪೆಟ್ಟಿಗೆಗಳ ಕವಚವಾಗಿಯೂ ಹಾಸಿಗೆ ಹೊದಿಕೆಯಾಗಿಯೂ ಉಡುಪಿನ ರಚನೆಯಲ್ಲೂ ಹೆಚ್ಚಾಗಿ ಬಳಸುತ್ತಿದ್ದರು. ಬಣ್ಣಗಳ ಸಂಯೋಜನೆ ಹಿತಮಿತವಾಗಿತ್ತು. ನೇಯ್ಗೆಗೆ ಅಗತ್ಯವಾದ ಕಚ್ಚಾಸಾಮಗ್ರಿಗಳನ್ನು ಮನೆಯಲ್ಲೇ ಸಿದ್ಧಪಡಿಸಿಕೊಳ್ಳುತ್ತಿದ್ದರು. 19ನೆಯ ಶತಮಾನದಲ್ಲಿ ಸ್ವಯಂಚಾಲಿತ ಯಂತ್ರಗಳು ಬಳಕೆಗೆ ಬಂದಮೇಲೆ ಈ ಗ್ರಾಮೀಣ ಕೈಗಾರಿಕೆ ಕ್ಷೀಣದೆಸೆಗೆ ಬಂತು. ಆದರೆ ಸುಂದರವಿನ್ಯಾಸಗಳ ಜನಪದಶೈಲಿಯ ರತ್ನಗಂಬಳಿಯ ಕೈಗಾರಿಕೆ ಪುನಃ 20ನೆಯ ಶತಮಾನದಲ್ಲಿ ಚೇತರಿಸಿಕೊಂಡಿತು.

ಉತ್ತರ ಅಮೆರಿಕ[ಬದಲಾಯಿಸಿ]

ಉತ್ತರ ಅಮೆರಿಕ ಬುಡಕಟ್ಟು ಜನರು (ಅಮೆರಿಕನ್ ಇಂಡಿಯನ್ನರು) ತಮ್ಮದೇ ಆದ ಜನಪದಶೈಲಿಯ ವಿನ್ಯಾಸವನ್ನೇ ಕರಕುಶಲ ನೈಪುಣ್ಯದಿಂದ ಸಿದ್ಧಪಡಿಸುತ್ತಿದ್ದರು. ರತ್ನಗಂಬಳಿಯನ್ನು ನೆಲಕ್ಕೆ ಹಾಸುವುದಕ್ಕೂ ಹೊದಿಕೆಯಾಗಿಯೂ ಬಹಳ ಹಿಂದಿನಿಂದಲೂ ಉಪಯೋಗಿಸುತ್ತಿದ್ದರು. 16ನೆಯ ಶತಮಾನದಲ್ಲಿ ಕುರಿಯ ಉಣ್ಣೆಯನ್ನು ನೇಯ್ಗೆಯಲ್ಲಿ ಬಳಸಲು ಅರಿವಾದ ಮೇಲೆ, ಇವರಲ್ಲಿ ಈ ಕೈಗಾರಿಕೆ ಪ್ರಬಲವಾಯಿತು. ಈ ಕೈಗಾರಿಕೆಯಲ್ಲಿ ಮುಖ್ಯವಾಗಿ ಹತ್ತಿಯ ಜೊತೆ ಅನೇಕ ಬಗೆಯ ನಾರನ್ನು ಉಪಯೋಗಿಸುತ್ತಿದ್ದರು. ರತ್ನಗಂಬಳಿಯನ್ನು ಸ್ಥಳೀಯ ಜನರು ವಿವಿಧ ವಿನ್ಯಾಸಗಳಲ್ಲಿ ತಯಾರಿಸುತ್ತಿದ್ದರು. ಇವರುಗಳ ಕಲೆಗಾರಿಕೆಯಲ್ಲಿ ನೇಯ್ಗೆಯ ಜೊತೆಗೆ ಹೆಣಿಗೆ, ನಿಟ್ಟಿಂಗ್, ಕ್ರೋಷ ಕೆಲಸದೊಡನೆ ತಯಾರಿಸಿದ ಚದುರಾಕಾರದ ತುಂಡುಗಳನ್ನು ಒಟ್ಟುಗೂಡಿಸಿ ಹೊಲಿದು, ಕಸೂತಿಯ ಕೆಲಸಗಳಿಂದ ಶೃಂಗರಿಸುತ್ತಿದ್ದರು. 18ನೆಯ ಶತಮಾನದಲ್ಲಿ ಬುಡಕಟ್ಟಿನ ಜನರಿಂದ ಸಿದ್ಧಗೊಂಡ ಈ ರತ್ನಗಂಬಳಿಗಳು ಜನಪ್ರಿಯವಾದುವು. ರತ್ನಗಂಬಳಿಯ ನೇಯ್ಗೆಯಲ್ಲಿ ಹೂಗುಚ್ಚ, ಜ್ಯಾಮಿತೀಯ ವಿನ್ಯಾಸ, ಪ್ರಾಣಿಗಳ ಚಲನೆಯವಿನ್ಯಾಸ ಬಲು ವರ್ಣರಂಜಿತವಾಗಿದ್ದುವು. 18ನೆಯ ಶತಮಾನದವರೆಗೆ ಗಂಟಿನ ರತ್ನಗಂಬಳಿಯ ವಿನ್ಯಾಸವನ್ನೇ ಅಳವಡಿಸಿಕೊಂಡು ನೇಯ್ಗೆ ಮಾಡುತ್ತಿದ್ದರು. ಯಂತ್ರಗಳಿಂದ ಸರಳವಾಗಿ ತಯಾರಿಸುವ ಕಾರ್ಖಾನೆಗಳು ಮಿಲ್‍ವಾಕೀಯಲ್ಲಿ ಪ್ರಾರಂಭವಾದವು. ಸ್ವಯಂಚಾಲಿತ ಮಗ್ಗಗಳಿಂದ ರತ್ನಗಂಬಳಿಗಳು ತಯಾರಾದ ಬಳಿಕ 1700ರ ಕೊನೆಯಲ್ಲಿ ಕೈಮಗ್ಗಗಳಿಂದ ತಯಾರಾಗುತ್ತಿದ್ದ ನೇಯ್ಗೆ ಕೊನೆಕೊಂಡಿತು.

ಭಾರತ[ಬದಲಾಯಿಸಿ]

13ನೆಯ ಶತಮಾನದವರೆಗೂ ಭಾರತದಲ್ಲಿ ರತ್ನಗಂಬಳಿಯ ನೇಯ್ಗೆಯ ವಿಚಾರ ತಿಳಿದಿರಲಿಲ್ಲ. ಮೊಗಲರು ಭಾರತಕ್ಕೆ ಬಂದ ಬಳಿಕವೇ ರತ್ನಗಂಬಳಿಯ ಉಪಯೋಗವನ್ನು ಅರಿತುಕೊಂಡರು. ಮುಸ್ಲಿಮರ ಆಳ್ವಿಕೆಯಲ್ಲಿ ಪರ್ಷಿಯ ಮತ್ತು ತುರ್ಕಿಯಲ್ಲಿ ನೆಲೆಯಾಗಿದ್ದ ಈ ಸುಂದರ ಕರಕುಶಲ ಕಲೆ ಭಾರತಕ್ಕೆ ಪದಾರ್ಪಣ ಮಾಡಿತು.

ಸುಂದರ ವಿನ್ಯಾಸಗಳ, ನಯ ನಾಜೂಕಿನ ರತ್ನಗಂಬಳಿ ಕಲೆ ಮೊಗಲರ ಆಳ್ವಿಕೆಯಲ್ಲಿ ಅದರಲ್ಲಿಯೂ ಚಕ್ರವರ್ತಿ ಅಕ್ಬರನ ಆಳ್ವಿಕೆಯಲ್ಲಿ ಉನ್ನತಮಟ್ಟಕ್ಕೆ ಬಂತು. ಹುಮಾಯೂನ್ ಪರ್ಷಿಯದಲ್ಲಿದ್ದಾಗ ಅಲ್ಲಿಯ ರಾಜರ ಆಸ್ಥಾನ ಮತ್ತು ಶ್ರೀಮಂತ ಮುಸ್ಲಿಮರ ಗೃಹಾಲಂಕರಣದಲ್ಲಿ ರತ್ನಗಂಬಳಿಯನ್ನು ವಿವಿಧ ಬಗೆಯಲ್ಲಿ ಉಪಯೋಗಿಸುವುದು ರೂಢಿಯಲ್ಲಿತ್ತು. ರತ್ನಗಂಬಳಿಯ ಹೊಸ ಗೃಹ ಕೈಗಾರಿಕೆಯನ್ನು ಭಾರತದಲ್ಲಿ ಪ್ರಚಾರಪಡಿಸಲು ಪರ್ಷಿಯದಿಂದ ಕಲಾವಿದರನ್ನು ಮತ್ತು ಕುಶಲಕರ್ಮಿಗಳನ್ನು ಭಾರತಕ್ಕೆ ತರಲಾಯಿತು. ಅಕ್ಬರ್ ದೊರೆ ಇವರನ್ನು ಆಸ್ಥಾನ ಕಲಾವಿದರೆಂದು ಗೌರವಿಸಿದ. ಈತ ಅರಮನೆಯಲ್ಲೇ ಇವರ ಕಾರ್ಯಾಗಾರವನ್ನು ಏರ್ಪಡಿಸಿದ್ದ. ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿ ಭಾರತದಲ್ಲೇ ಇವರು ನೆಲೆಸುವಂತೆ ವಸತಿ, ವೇತನಗಳ ಏರ್ಪಾಟು ಮಾಡಲಾಯಿತು. 1630ರಲ್ಲಿ ಲಾಹೋರಿನಲ್ಲೂ ರತ್ನಗಂಬಳಿಯ ನೇಯ್ಗೆಯವರು ಇದ್ದರು. ಮೊಗಲರ ಕಾಲದಲ್ಲಿ ಅರಮನೆಯ ಅಲಂಕಾರ ವಸ್ತುವಾಗಿ ಉಪಯೋಗಿಸುತ್ತಿದ್ದ ಈ ರತ್ನಗಂಬಳಿಗೆ ಮಾರುಹೋದ ಜಯಪುರ, ಹೈದರಾಬಾದ್, ಮಲಬಾರ್ ಮತ್ತು ಗ್ವಾಲಿಯರ್‍ನ ಹೆಸರಾಂತ ಮಹಾರಾಜರು ತಮ್ಮ ಪ್ರಾಂತ್ಯಗಳಿಗೂ ಈ ಕಲೆಯನ್ನು ಬರಮಾಡಿಕೊಂಡರು. ಇದರಿಂದ ರತ್ನಗಂಬಳಿಯ ನೇಯ್ಗೆಯನ್ನು ಆಯಾ ಪ್ರಾಂತ್ಯಗಳಲ್ಲಿ ಅವರಿಗೆ ಬೇಕಾದ ವಿನ್ಯಾಸಕ್ಕೆ ಅಳವಡಿಸಿಕೊಂಡು ತಯಾರಿಸುತ್ತಿದ್ದರು. ಭಾರತದ ಕುಶಲಕರ್ಮಿಗಳಿಂದ ತಯಾರಾದ ಉನ್ನತಮಟ್ಟದ ರತ್ನಗಂಬಳಿಗಳಿಗೆ ಬೇಡಿಕೆ ಹೆಚ್ಚಾಯಿತು; ಇದರಿಂದ ತಯಾರಿಕೆ ಉನ್ನತ ಮಟ್ಟಕ್ಕೇರಿತು.

ಕಾಲಕ್ರಮೇಣ ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕೆ ಬಂದವರು, ಇಲ್ಲಿಯೇ ನೆಲಸಿದ ಮೇಲೆ, ರತ್ನಗಂಬಳಿಯ ಬೇಡಿಕೆ ಕುಗ್ಗುತ್ತ ಹೋಯಿತು. 1851ರಲ್ಲಿ ಲಂಡನ್ ವಸ್ತುಪ್ರದರ್ಶನದಲ್ಲಿ ಭಾರತದ ಸುಂದರವಿನ್ಯಾಸದ ರತ್ನಗಂಬಳಿಗಳ ಪ್ರದರ್ಶನ ಏರ್ಪಟ್ಟಿತ್ತು. ಪರದೇಶದ ರಾಜರುಗಳಿಂದ ಮತ್ತು ಶ್ರೀಮಂತ ವರ್ಗದವರಿಂದ ಮೆಚ್ಚುಗೆ ಗಳಿಸಿದ ರತ್ನಗಂಬಳಿಗೆ ಬೇಡಿಕೆ ಮತ್ತೆ ಬಂತು. ಹಾಗಾಗಿ 18ನೆಯ ಶತಮಾನದಲ್ಲಿ ಭಾರತದ ಈ ಗೃಹಕೈಗಾರಿಕೆ ಉನ್ನತಿ ಸಾಧಿಸಲು ಸಾಧ್ಯವಾಯಿತು. 19ನೆಯ ಶತಮಾನದಲ್ಲಿ ರತ್ನಗಂಬಳಿಯ ಗೃಹಕೈಗಾರಿಕೆ ಇನ್ನೂ ಹೆಚ್ಚು ಪ್ರಾಬಲ್ಯಕ್ಕೆ ಬಂತು. ಬೇಡಿಕೆ ಹೆಚ್ಚಾದಂತೆಲ್ಲ ಉತ್ಪಾದನೆಯ ಕೇಂದ್ರಗಳು ಸ್ಥಾಪಿತವಾದುವು. ಶ್ರೀನಗರ, ಗ್ವಾಲಿಯರ್, ಅಮೃತಸರ, ಹೈದರಾಬಾದ್ ಮತ್ತು ಉತ್ತರ ಪ್ರದೇಶಗಳಲ್ಲಿ ನೇಯ್ಗೆಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಉತ್ತಮಮಟ್ಟದ ಕಚ್ಚಾಪದಾರ್ಥಗಳು, ನವ್ಯರೀತಿಯ ವಿನ್ಯಾಸ, ಉತ್ತಮ ದರ್ಜೆಯ ಬಣ್ಣಗಳ ಬಳಕೆಯಿಂದ ತಯಾರಾಗುವ ಭಾರತದ ರತ್ನಗಂಬಳಿಗೆ ಹೊರ ದೇಶಗಳಲ್ಲಿ ಅಪಾರ ಬೇಡಿಕೆಯಿದೆ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Walker, Daniel (1997). Flowers underfoot : Indian carpets of the Mughal era. New York: The Metropolitan Museum of Art.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: