ವಿಷಯಕ್ಕೆ ಹೋಗು

ರಣಜಿತ್ ಸಿನ್ಹಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಣಜಿತ್ ಸಿನ್ಹಜಿ (ರಣಜಿತ್ಸಿನ್ಹಜಿ)
Bornಸೆಪ್ಟೆಂಬರ್ ೧೦, ೧೮೭೨
ಸರೋದಾರ್, ಕಥಿಯಾವರ್, ಗುಜರಾಥ್
Diedಏಪ್ರಿಲ್ ೨, ೧೯೯೩
ಜಾಮ್ ನಗರ್ ಅರಮನೆ
Other namesರಣಜಿ, ಸ್ಮಿತ್
Known forಪ್ರಪ್ರಥಮ ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ, ನವಾನಗರ್ ರಾಜ್ಯದ ಮಹಾರಾಜ

ಕ್ರಿಕೆಟ್ ಬಗೆಗೆ ಅಪಾರ ಆಸಕ್ತಿ ಹೊಂದಿರುವ ಭಾರತ ದೇಶದಲ್ಲಿ ಕುಮಾರ್ ಶ್ರೀ ರಣಜಿತಸಿನ್ಹಜಿ ಅವರ ಹೆಸರು ಅಜರಾಮರವಾದದ್ದು. ಕೆ. ಎಸ್ ರಣಜಿತ್ಸಿನ್ಹಜಿ ಅಥವಾ ರಣಜಿ ಎಂದು ಪ್ರಖ್ಯಾತರಾದ ಇವರ ಹೆಸರಿನಲ್ಲೇ ಭಾರತದಾದ್ಯಂತ ನಡೆಯುವ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿರುವುದು.

ಭಾರತೀಯ ರಾಜಮನೆತನಕ್ಕೆ ಸೇರಿದವರಾದ ರಣಜಿತ್ಸಿನ್ಹಜಿ ಅವರು ಇಂಗ್ಲಿಷ್ ಟೆಸ್ಟ್ ಕ್ರಿಕೆಟ್ ತಂಡದ ಸದಸ್ಯರಾಗಿ ಆಡಿ, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟುದಾರರಲ್ಲೊಬ್ಬರೆಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಣಜಿತ್ಸಿನ್ಹಜಿ ಅವರು ತಮ್ಮ ಆಟದಲ್ಲಿ ಹೆಚ್ಚಿನ ರನ್ನುಗಳನ್ನು ಪೇರಿಸಿರುವುದಕ್ಕೆ ಮಾತ್ರವಲ್ಲದೆ ತಮ್ಮದೇ ರೀತಿಯ ವೈಶಿಷ್ಟ್ಯಮಯ ಕ್ರಿಕೆಟ್ ಹೊಡೆತಗಳಿಗೂ ಪ್ರಖ್ಯಾತಿ ಪಡೆದಿದ್ದರು.

‘ಬ್ಲ್ಯಾಕ್ ಪ್ರಿನ್ಸ್ ಆಫ್ ದಿ ಕ್ರಿಕೆಟರ್ಸ್’ ಎಂಬ ಪ್ರಖ್ಯಾತಿಗೆ ಪಾತ್ರರಾದ ರಣಜಿತ್ಸಿನ್ಹಜಿ ಅವರು ಸೆಪ್ಟೆಂಬರ್ ೧೦, ೧೮೭೨ರ ವರ್ಷದಲ್ಲಿ ಗುಜರಾತಿನ ಕಥಿಯಾವರ್ ಜಿಲ್ಲೆಯ ಸರೋದಾರ್ ಎಂಬಲ್ಲಿ, ನವಾನಗರ್ ರಾಜಮನೆತನದಲ್ಲಿ ಜನಿಸಿದರು. ರಾಜಕೋಟಿನ ರಾಜ್ ಕುಮಾರ್ ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿದ ನಂತರದಲ್ಲಿ ರಣಜಿತ್ಸಿನ್ಹಜಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಹ್ಯಾರೋ ಅಂಡ್ ಟ್ರಿನಿಟಿ ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಕೈಗೊಂಡರು.

ಕ್ರಿಕೆಟ್ಟಿಗರರಾದದ್ದು

[ಬದಲಾಯಿಸಿ]

ತಮ್ಮ ಕೇಂಬ್ರಿಡ್ಜ್ ವಿದಾರ್ಥಿ ದೆಸೆಯಲ್ಲಿ ವ್ಯವಸ್ಥಿತ ಕ್ರಿಕೆಟ್ ಆಟಗಾರಿಕೆಯನ್ನು ಪ್ರಾರಂಭಿಸಿದ ರಣಜಿತ್ಸಿನ್ಹಜಿ ಅವರು ತಮ್ಮ ಓದಿನ ನಂತರದಲ್ಲಿ ಸಸ್ಸೆಕ್ಸ್ ತಂಡದ ಪ್ರಮುಖ ಆಟಗಾರರಾದರು. ಮೇ ೧೮೯೫ರಲ್ಲಿ ಸಸ್ಸೆಕ್ಸ್ ಪರವಾಗಿ ಆಡಿದ ಪ್ರಥಮ ಪಂದ್ಯದಲ್ಲೇ ಅವರು ಎಂ. ಸಿ. ಸಿ ತಂಡದ ವಿರುದ್ಧ ೭೭ ಮತ್ತು ೧೫೦ ರನ್ನುಗಳನ್ನು ಪೇರಿಸಿದರು. ಈ ದಿನಗಳಲ್ಲಿ ಕ್ರೀಡೆ, ರಾಜಕೀಯ, ಬೋಧನೆ, ಬರಹಗಳಿಗೆ ಪ್ರಸಿದ್ಧರಾದ ಚಾರ್ಲ್ಸ್ ಬರ್ಗೆಸ್ ಫ್ರೈ ಅವರು ರಣಜಿತ್ಸಿನ್ಹಜಿ ಅವರ ಆಪ್ತ ಗೆಳೆಯರಾಗಿದ್ದರು.

ರಣಜಿತ್ಸಿನ್ಹಜಿ ಅವರು ೧೮೯೬ರ ವರ್ಷದ ಜುಲೈ ೧೬ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಪಾದಾರ್ಪಣೆ ಮಾಡುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಆಡಿದ ಪ್ರಥಮ ಭಾರತೀಯರೆನಿಸಿದರು. ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಮೊದಲ ಇನ್ನಿಂಗ್ಸಿನಲ್ಲಿ ೬೨ ರನ್ನುಗಳನ್ನೂ, ಎರಡನೇ ಇನ್ನಿಂಗ್ಸಿನಲ್ಲಿ ಔಟಾಗದೆ ೧೫೪ ರನ್ನುಗಳನ್ನೂ ಗಳಿಸಿ ಪ್ರಖ್ಯಾತರಾದರು. ಅವರ ಬ್ಯಾಟಿಂಗಿನಲ್ಲಿದ್ದ ಕ್ಷಿಪ್ರತೆ ಮತ್ತು ಅಸಾಂಪ್ರದಾಯಿಕ ಕ್ರಿಕೆಟ್ ಹೊಡೆತಗಳು ಎಲ್ಲ ಕ್ರಿಕೆಟ್ ಪ್ರೇಮಿಗಳ ಮನೆಮಾತಾಗಿಬಿಟ್ಟವು.

೧೮೯೭-೯೮ರ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ ರಣಜಿತ್ಸಿನ್ಹಜಿ ಅವರು ತಾವಾಡಿದ ಒಟ್ಟಾರೆ ಪಂದ್ಯಗಳಲ್ಲಿ ಒಟ್ಟು ೧೧೫೭ರನ್ನುಗಳನ್ನು ೬೦.೮೯ ಸರಾಸರಿಯಲ್ಲಿ ಕಲೆಹಾಕಿದ್ದರು.

೧೮೯೯-೧೯೦೩ರ ಅವಧಿಯಲ್ಲಿ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದ ಅವರು ೧೯೦೪ರ ವರ್ಷದಲ್ಲಿ ತಮ್ಮ ರಾಜಮನೆತನದ ಕೆಲವೊಂದು ಜವಾಬ್ಧಾರಿಗಳನ್ನು ನಿರ್ವಹಿಸಲು ಭಾರತಕ್ಕೆ ಹಿಂದಿರುಗಬೇಕಾಯಿತು. ಮುಂದೆ ಅವರು ಸುಮಾರು ೫ ವರ್ಷಗಳ ಕಾಲ ಕ್ರಿಕೆಟ್ ಆಟದಿಂದ ಹೊರಗಿದ್ದರಾದರೂ ೧೯೦೮ರಿಂದ ೧೯೧೨ರ ಅವಧಿಯಲ್ಲಿ ಪುನಃ ಹಲವು ಪ್ರಥಮ ದರ್ಜೆ ಪಂದ್ಯಗಳನ್ನಾಡಿದರು. ಆದರೆ ರಣಜಿತ್ಸಿನ್ಹಜಿ ಅವರು ಕೊನೆಯ ಟೆಸ್ಟ್ ಪಂದ್ಯ ಆಡಿದ್ದು ಮಾತ್ರ ಜುಲೈ ೨೪, ೧೯೦೨ರಂದು. ಆ ಪಂದ್ಯದಲ್ಲಿ ಅವರು ಕೇವಲ ೬ ರನ್ನುಗಳನ್ನು ಮಾತ್ರ ಗಳಿಸಿದ್ದರು.

ಒಟ್ಟಾರೆ ಹದಿನೈದು ಟೆಸ್ಟ್ ಪಂದ್ಯಗಳನ್ನು ಆಡಿದ ರಣಜಿತ್ಸಿನ್ಹಜಿ ಅವರು ಒಟ್ಟು ೯೮೯ ರನ್ನುಗಳನ್ನು ಗಳಿಸಿದ್ದು, ಅವುಗಳಲ್ಲಿ ೨ ಶತಕಗಳು ಹಾಗೂ ೬ ಅರ್ಧ ಶತಕಗಳಿದ್ದವು. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ ೪೪.೯೫ ಹಾಗೂ ಇನ್ನಿಂಗ್ಸ್ ಒಂದರಲ್ಲಿ ಗಳಿಸಿದ ಅತಿ ಹೆಚ್ಚಿನ ರನ್ನುಗಳು ೧೭೫ ಆಗಿತ್ತು. ಒಂದು ಟೆಸ್ಟ್ ಪಂದ್ಯದಲ್ಲಿ ೩೯ರನ್ನುಗಳನ್ನಿತ್ತು ಒಂದು ವಿಕೆಟ್ ಉರುಳಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ಟಿನಲ್ಲಿ ಒಟ್ಟು 307 ಪಂದ್ಯಗಳನ್ನಾಡಿದ್ದ ರಣಜಿತ್ಸಿನ್ಹಜಿ ಅವರು ೨೪,೬೯೨ ರನ್ನುಗಳ ಬೃಹತ್ ಸಾಧನೆ ಮಾಡಿದ್ದು ಅದರಲ್ಲಿ ೭೨ ಶತಕಗಳು, ೧೦೯ ಅರ್ಧಶತಕಗಳೂ ಇದ್ದು, ಸರಾಸರಿ ೫೬/೩೭ ಹಾಗೂ ಅತಿ ಗರಿಷ್ಟ ಔಟಾಗದ ೨೮೫ ರನ್ನುಗಳ ಗಳಿಕೆಯೂ ಸೇರಿತ್ತು.

ಮಹಾರಾಜಾ

[ಬದಲಾಯಿಸಿ]

೧೯೦೭ರ ವರ್ಷದಲ್ಲಿ 'ಮಹಾರಾಜಾ ಜಾಮ್ ಸಾಹಿಬ್ ಆಫ್ ನವಾನಗರ್' ಎಂದು ಘೋಷಿಸಲ್ಪಟ್ಟ ರಣಜಿತ್ಸಿನ್ಹಜಿ ಅವರು ತಮ್ಮ ಪ್ರಜೆಗಳಿಂದ ಕರುಣಾಳು ರಾಜರೆಂದು ಹೆಸರು ಪಡೆದಿದ್ದರು. ಭಾರತವನ್ನು ಲೀಗ್ ಆಫ್ ನೇಷನ್ಸ್ ಸಂಘಟನೆಯಲ್ಲಿ ಪ್ರತಿನಿಧಿಸಿದ್ದ ಅವರನ್ನು ಅಧಿಕೃತವಾಗಿ ಹಿಸ್ ಹೈನೆಸ್ ಶ್ರೀ ಸರ್ ರಣಜಿತ್ಸಿನ್ಹಜಿ ವಿಭಾಜಿ, ಜಾಮ್ ಸಾಹಿಬ್ ಆಫ್ ನವಾನಗರ್ ಎಂದು ಕರೆಯಲಾಗುತ್ತಿತ್ತು.

ದುಲೀಪ್ ಸಿನ್ಹಜಿ

[ಬದಲಾಯಿಸಿ]

ಇವರ ಸಹೋದರ ಪುತ್ರರಾದ ದುಲೀಪ್ ಸಿನ್ಹಜಿ ಅವರು ಕೂಡಾ ಇಂಗ್ಲೆಂಡಿನ ಪರವಾಗಿ ಭಾರತೀಯ ಕ್ರಿಕೆಟ್ ಆಟಗಾರರಾಗಿದ್ದರು,

ವಿದಾಯ

[ಬದಲಾಯಿಸಿ]

ತಮ್ಮ ಜೀವನ ಪರ್ಯಂತ ವಿವಾಹ ಬಂಧನದಿಂದ ಮುಕ್ತರಾಗಿದ್ದ ರಣಜಿತ್ಸಿನ್ಹಜಿ ಅವರು ಏಪ್ರಿಲ್ ೨, ೧೯೩೩ರಂದು ಈ ಲೋಕವನ್ನಗಲಿದರು.

ರಣಜಿ ಟ್ರೋಫಿ ಪಂದ್ಯಗಳು

[ಬದಲಾಯಿಸಿ]

1935ರ ವರ್ಷದಲ್ಲಿ ಪಾಟಿಯಾಲದ ದೊರೆ ಭೂಪಿಂದರ್ ಸಿಂಗ್ ಅವರು ರಣಜಿತ್ಸಿನ್ಹಜಿ ಅವರ ಹೆಸರಿನಲ್ಲಿ ರಣಜಿ ಟ್ರೋಫಿ ಪಂದ್ಯಗಳನ್ನು ಆರಂಭಿಸುವುದರ ಮೂಲಕ ದೇಶದ ಪ್ರತಿಷ್ಟಿತ ರಣಜಿ ಪಂದ್ಯಾವಳಿಗಳಿಗೆ ಪ್ರಾರಂಭಿಕ ಸ್ವರೂಪವನ್ನು ಕೊಟ್ಟರು. ಇಂದು ಇದು ದೇಶಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಆಟಗಾರರನ್ನು ತಯಾರು ಮಾಡುವ ಪ್ರತಿಷ್ಟಿತ ವೇದಿಕೆಯಾಗಿ ಹೊರಹೊಮ್ಮಿದೆ. ಹೀಗಾಗಿ ರಣಜಿತಸಿನ್ಹಜಿ ಅವರು ಭಾರತೀಯ ಕ್ರಿಕೆಟ್ಟಿನೊಂದಿಗೆ ಅಜರಾಮರರಾಗಿದ್ದಾರೆ.

ಮಾಹಿತಿ ಕೊಂಡಿ

[ಬದಲಾಯಿಸಿ]

ಇಂಗ್ಲಿಷ್ ವಿಕಿಪೀಡಿಯಾ