ವಿಷಯಕ್ಕೆ ಹೋಗು

ರಂಜನ್ ಸೋಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂಜನ್ ಸೋಧಿ
Bornಅಕ್ಟೋಬರ್ ೨೩, ೧೯೭೯
ಪಂಜಾಬಿನ ಫಿರೋಜ್ ಪುರ
Known forಶೂಟಿಂಗ್ ಕ್ರೀಡಾಪಟು

ರಂಜನ್ ಸೋಧಿ (ಅಕ್ಟೋಬರ್ ೨೩, ೧೯೭೯) ಭಾರತದ ಪ್ರಮುಖ ಶೂಟಿಂಗ್ ಸ್ಪರ್ಧಿಗಳಲ್ಲಿ ಪ್ರಮುಖರಾಗಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅವರು ೨೦೧೧ರ ವರ್ಷದಲ್ಲಿ ವಿಶ್ವದ ಶ್ರೇಷ್ಠ ಶೂಟಿಂಗ್ ಆಟಗಾರರ ಪೈಕಿ ಅಗ್ರಶ್ರೇಯಾಂಕದಲ್ಲಿದ್ದರು. ೨೦೧೩ರ ವರ್ಷದಲ್ಲಿ ರಂಜನ್ ಸೋಧಿ ಅವರಿಗೆ ಭಾರತದಲ್ಲಿ ಅಗ್ರ ಕ್ರೀಡಾಪಟುವಿಗೆ ನೀಡಲಾಗುವ 'ರಾಜೀವ್ ಗಾಂಧೀ ಖೇಲ್ ರತ್ನ' ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಸೋಧಿ ಅವರು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಅಕ್ಟೋಬರ್ 23, 1979ರ ವರ್ಷದಲ್ಲಿ ಜನಿಸಿದರು. ಭಾರತ-ಪಾಕ್ ಗಡಿ ಪ್ರದೇಶದ ಸಟ್ಲೇಜ್ ನದಿ ತೀರದಲ್ಲಿರುವ ಈ ಜಿಲ್ಲೆ ‘ವೀರರ ಭೂಮಿ’ ಎಂದೇ ಪ್ರಸಿದ್ಧ. ಅದಕ್ಕೆ ಕಾರಣ ಇಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು. ‘ವೀರರ ಭೂಮಿ’ ಮೂಲದ ಸೋಧಿ ಅವರ ಶೂಟಿಂಗ್ ಸಾಧನೆಗೆ ಈಗ ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ ಸಂದಿದೆ.

ಶ್ರೀಮಂತ ಕುಟುಂಬದ ಸೋಧಿ ಹಣವನ್ನು ನೆಚ್ಚಿಕೊಂಡು ಕ್ರೀಡಾ ಜಗತ್ತಿನೊಳಗೆ ಕಾಲಿಡಲಿಲ್ಲ. ಬದಲಾಗಿ ಕ್ರೀಡೆ ಎಂಬುದು ಅವರಲ್ಲಿ ರಕ್ತಗತವಾಗಿಯೇ ಬಂದಿದೆ. ಅವರ ಹೃದಯ ಬಡಿತ, ಅವರ ಮನಸ್ಸಿನ ತುಡಿತ ಶೂಟಿಂಗ್. ತಂದೆ ಮಾಲ್ವಿಂದರ್ ಸಿಂಗ್ ಸೋಧಿ ಕೂಡ ಶೂಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವರು. ಅವರ ಕುಟುಂಬ ವರ್ಗದ ಹೆಚ್ಚಿನವರು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಎಂಬಿಎ ಪದವೀಧರರಾಗಿರುವ ಸೋಧಿ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಳಾಂಗಣ ವಿನ್ಯಾಸಗಾರ್ತಿ ರುಚಿಕಾ ಅವರನ್ನು ವಿವಾಹವಾಗಿರುವ ಸೋಧಿ ಅವರಿಗೆ ನಾಲ್ಕು ವರ್ಷ ವಯಸ್ಸಿನ ಪುತ್ರನಿದ್ದಾನೆ.

ಹಲವು ಮೊದಲುಗಳ ಸರದಾರ

[ಬದಲಾಯಿಸಿ]

ಸೋಧಿ.ಅವರಿಗೆ ಗುರಿ ತಲುಪುವುದೇ ಅಂತಿಮವಲ್ಲ. ಅದಷ್ಟೇ ಯಶಸ್ಸೂ ಅಲ್ಲ. ಪ್ರತಿ ಬಾರಿ ಕೆಳಗೆ ಬಿದ್ದಾಗ ಮತ್ತೆ ಎದ್ದು ನಿಲ್ಲಬೇಕೆಂಬ ತುಡಿತ, ಛಲವಿದೆಯಲ್ಲ ಅದು ಯಶಸ್ಸು. ಈ ತತ್ವವನ್ನು ನಂಬಿಕೊಂಡು ಬಂದವರು ಡಬಲ್ ಟ್ರ್ಯಾಪ್ ಶೂಟಿಂಗ್ ಸ್ಪರ್ಧಿ ಸೋಧಿ. ಅವರು ಭಾರತದ ಶೂಟಿಂಗ್ ಕ್ಷೇತ್ರದಲ್ಲಿ ಹಲವು ಮೊದಲುಗಳ ಸರದಾರ.

ಚಿಕ್ಕ ವಯಸ್ಸಿನಲ್ಲೇ ಸ್ಪರ್ಧೆ ಆರಂಭಿಸಿದ್ದರೂ ಯಶಸ್ಸು ಲಭಿಸಿದ್ದು ನಿಧಾನವಾಗಿ. ೧೯೯೮ರಲ್ಲಿ ಅವರ ಶೂಟಿಂಗ್ ಜೀವನ ಶುರುವಾಯಿತು. ೨೦೦೭ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದು ಅವರ ಜೀವನದ ಮೊದಲ ಅತ್ಯುತ್ತಮ ಸಾಧನೆ. ೨೦೦೯ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ಆ ಬಳಿಕ ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಬಂದ ಸೋಧಿ ೨೦೧೦ರಲ್ಲಿ ಟರ್ಕಿಯ ಇಜ್ಮಿರ್ ವಿಶ್ವಕಪ್ ಫೈನಲ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದರು. ೨೦೧೧ರ ವಿಶ್ವಕಪ್ ಫೈನಲ್‌ನಲ್ಲೂ ಸ್ವರ್ಣ ಪದಕ ಜಯಿಸಿದ್ದರು. ಅದು ಭಾರತದ ಶೂಟಿಂಗ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕ್ಷಣ.

೨೦೧೦ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎರಡು ರಜತ ಪದಕ ಗೆದ್ದುಕೊಟ್ಟರು. ಅದೇ ವರ್ಷ ಚೀನಾದ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಶೂಟಿಂಗ್‌ನಲ್ಲಿ ಹಲವು ವರ್ಷಗಳ ಬಳಿಕ ಈ ಸಾಧನೆ ಮಾಡಿದ ಭಾರತೀಯ ಅವರು.

ಸೋಧಿ ೨೦೧೧ರಲ್ಲಿ ವಿಶ್ವ ಶೂಟಿಂಗ್ ಅಗ್ರಸಾಧಕರ ಪಟ್ಟಿಯಲ್ಲಿ ಅಗ್ರಶ್ರೇಯಾಂಕದೊಡನೆ ಮೊದಲ ಸ್ಥಾನದಲ್ಲಿ ವಿರಾಜಿತರಾಗಿದ್ದರು.. ಅವರು ಈ ಹಂತಕ್ಕೇರಿದ ಭಾರತದ ಮೊದಲ ಶೂಟರ್. ಅದೇ ವರ್ಷ ಮತ್ತೊಂದು ವಿಶ್ವಕಪ್ ಫೈನಲ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಈ ಮೂಲಕ ಹ್ಯಾಟ್ರಿಕ್ ಪದಕಗಳ ಸಾಧನೆಗೆ ಕಾರಣರಾಗಿದ್ದರು. ಇದರಿಂದ ಈ ಸಾಧನೆ ಮಾಡಿದ ಮೊದಲ ಭಾರತೀಯ ಅವರಾದರು.

ಒಲಿಂಪಿಕ್ಸ್ ನಿರಾಸೆ

[ಬದಲಾಯಿಸಿ]

ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅವರು ಆ ಕೂಟದಲ್ಲಿ ನಿರಾಸೆ ಮೂಡಿಸಿದ್ದರು. ‘ಲಂಡನ್ ಒಲಿಂಪಿಕ್ಸ್ನಲ್ಲಿ ನನಗೆ ಯಶಸ್ಸು ಸಿಗಲಿಲ್ಲ. ಆದರೆ ಇನ್ನುಳಿದ ಚಾಂಪಿಯನ್‌ಷಿಪ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಆದರೂ ಟೀಕೆಗಳು ಎದುರಾದವು. ಆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡವನಲ್ಲ. ಈಗ ನನ್ನ ಗುರಿ ೨೦೧೬ರ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು' ಎಂದಿದ್ದಾರೆ.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ರಂಜನ್ ಸೋಧಿ ಅವರಿಗೆ ೨೦೦೯ರ ವರ್ಷದಲ್ಲಿ ಅರ್ಜುನ ಪ್ರಶಸ್ತಿ ಹಾಗೂ ೨೦೧೩ರ ವರ್ಷದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳು ಸಂದಿವೆ.

ಮಾಹಿತಿ ಕೊಂಡಿಗಳು

[ಬದಲಾಯಿಸಿ]

'ಸಾಧನೆಯ ಸರದಾರ' ಪ್ರಜಾವಾಣಿ ಲೇಖನ

ಲೇಖಕರು: ಕೆ.ಓಂಕಾರ ಮೂರ್ತಿ. ಕೃಪೆ: ಪ್ರಜಾವಾಣಿ