ವಿಷಯಕ್ಕೆ ಹೋಗು

ರಂಗಯ್ಯನದುರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

’ರಂಗಯ್ಯನದುರ್ಗ’ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು ಹೊಂದಿರುವ ಅರಣ್ಯಪ್ರದೇಶ. ಅರಣ್ಯ ಪ್ರದೇಶವನ್ನು ಕೊಂಡು ಕುರಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವಂತೆ ಬಹಳ ಹಿಂದಿನಿಂದಲೂ ಜನತೆ, ಜನ ಪ್ರತಿನಿಧಿಗಳ ಬೇಡಿಕೆ ಇತ್ತು. ಕೊನೆಗೂ ಇದಕ್ಕೆ ಸ್ಪಂದಿಸಿರುವ ಸರ್ಕಾರ ಇದೀಗ ರಂಗಯ್ಯನದುರ್ಗ ಅರಣ್ಯ ಪ್ರದೇಶವನ್ನು ಕೊಂಡು ಕುರಿ ಮತ್ತಿತರೆ ವನ್ಯ ಜೀವಿಗಳ ಸಂರಕ್ಷಿಸುವ ಮತ್ತು ನಿರ್ವಹಿಸುವ ನಿಟ್ಟಿನಲ್ಲಿ ಪ್ರತ್ಯೇಕ ವಲಯವನ್ನಾಗಿ ಸೃಜಿಸಿ, ಕ್ರಮ ಕೈಗೊಂಡಿದೆ. ವನ್ಯಜೀವಿ ರಕ್ಷಣೆ:[] ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಕೊಂಡು ಕುರಿಗಳೂ ಸೇರಿದಂತೆ ಹಲವಾರು ವನ್ಯಜೀವಿಗಳು ಇದ್ದು, ಅವುಗಳನ್ನು ಸಂರಕ್ಷಿಸಲು, ನಿರ್ವಹಿಸಲು ಸರ್ಕಾರವು ರಂಗಯ್ಯನ ದುರ್ಗವನ್ನು ಇದೀಗ ಪ್ರತ್ಯೇಕವಾಗಿ ಸೃಜಿಸಿ ಆದೇಶ ಹೊರಡಿಸಿದೆ. ಈ ವನ್ಯಜೀವಿ ವಲಯದ ಕೇಂದ್ರ ಸ್ಥಾನವು ಹೊಸಕೆರೆ ಗ್ರಾಮದಲ್ಲಿ ಕಾರ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ. 80 ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಇಲ್ಲಿ ಶ್ರೀಗಂಧ, ಹೊಳೆಮತ್ತಿ, ಕಮರಾ, ದಿಂಡಗ, ಕಾಚು, ಮರಾಲೆ, ಪಚಾಲಿ, ಜಾನೆ, ಹೊನ್ನೆ, ನಗರಿ, ಬೆಟ್ಟದ ತಾವರೆಯಂತಹ ಗಿಡಮರಗಳಿದ್ದು, ಆಯುರ್ವೇದಕ್ಕೆ ಬಳಸುವ ಬೆಟ್ಟದ ನೆಲ್ಲಿ, ಕಾಡು ಕೊತ್ತಂಬರಿ, ಮಧುನಾಶಿನಿ, ಮೆಕ್ಕೆಗಿಡ (ಹೃದಯ ರೋಗಿಗಳಿಗೆ ದಿವ್ಯೌಷಧಿ), ಕಾಡು ಈರಳ್ಳಿ (ಪಶು ಚಿಕಿತ್ಸೆಗೆ ಬಳಸುತ್ತಾರೆ), ಆಲಿಕಾ-ಉಳ್ಳಿಕಾ, ತೊಟ್ಲುಕಾಯಿ, ಅಳಿಲು ಕಾಯಿ, ಧೂಪದಂತಹ ಔಷಧಿ ಸಸ್ಯಗಳು ಇವೆ. ಕೇರಳದ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಿಸುವ ‘ಲೆಮನ್ ಗ್ರಾಸ್’ನಂತಹ ಔಷಧಿ ಸಸ್ಯ ಸಮೃದ್ಧವಾಗಿ ಬೆಳೆದಿದೆ. ಕೃಷ್ಣಮೃಗ, ಚಿರತೆ, ಕರಡಿ, ಕೊಂಡುಕುರಿ, ನಕ್ಷತ್ರ ಆಮೆ, ತೋಳ, ಕತ್ತೆ ಕಿರುಬ, ಕಾಡುಬೆಕ್ಕು, ಚಿಪ್ಪು ಹಂದಿ ಉಡ, ನವಿಲು ಇದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುವ ‘ದರವಾಯಿನ’ ಎಂಬ ಹಕ್ಕಿ ಇಲ್ಲಿನ ಅರಣ್ಯ ವಲಯದಲ್ಲಿದೆ. ’ರಂಗಯ್ಯನದುರ್ಗ’ ಅರಣ್ಯ ವಲಯ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ’ಕಪ್ಪತಗುಡ್ಡ’ ಮಾದರಿಯಲ್ಲಿದೆ ಆಯುರ್ವೇದ ಔಷಧಿ ಸಸ್ಯಗಳ ಜತೆಗೆ ಅಳಿವಿನಂಚಿನಲ್ಲಿರುವ ಅತ್ಯಂತ ನಾಚಿಕೆ ಸ್ವಭಾವದ ’ಕೊಂಡುಕುರಿ’ಯಂತಹ ಅಮೂಲ್ಯ ಪ್ರಾಣಿ ಸಂಕುಲ ಹೊಂದಿರುವ ರಾಜ್ಯದ ಏಕೈಕ ಅರಣ್ಯ ಪ್ರದೇಶವಾಗಿದೆ. ರಕ್ಕಸನ ಘಟ್ಟ, ಹೊನ್ನಜ್ಜಿ ಕುಂಟೆ, ಸೋಮಲಿಂಗನ ಕಟ್ಟೆ, ಕ್ವಾರಮಟ್ಟಿ, ಕುರ್ಚಿಕಲ್ಲು, ಬಿಕ್ಕಲು, ಜಾನೆ ಕಣಿವೆ, ರೂಡಿಗನ ಮಟ್ಟಿ, ಯಮನ ಮಲ್ಡಿ, ನೀಲಗಿರಿ ನೆಡುತೋಪು, ಗೊರಗುದ್ದನ ಹಳ್ಳ, ವಾಲ್‌ಗುಂಡು, ಕೊಡಗುಂಡಿನ ಕಲ್ಲು, ಮಲಯಮ್ಮನ ದೊಣೆ ಎಂಬ ಬೆಟ್ಟ-ತೊರೆಯುಳ್ಳ ಸ್ಥಳಗಳು ನೈಸರ್ಗಿಕ ರಮಣೀಯತೆಗೆ ಸಾಕ್ಷಿಯಾಗಿವೆ. . ಆದರೆ, ರಂಗಯ್ಯನದುರ್ಗ ಹೊರಜಗತ್ತಿಗೆ ಪರಿಚಯವಿಲ್ಲದೇ ಇರುವುದರಿಂದ ಅಷ್ಟಾಗಿ ಪ್ರಸಿದ್ಧಿಗೆ ಬಂದಿಲ್ಲ.ಎರಡು ವರ್ಷಗಳಿಂದ ಈ ಅರಣ್ಯ ವಲಯಕ್ಕೆ ಕಾವಲುಗಾರರನ್ನು ಇಲಾಖೆ ನೇಮಿಸದಿರುವುದರಿಂದ ಇಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿರುವ ಗಿಡಮೂಲಿಕೆ ಸಸ್ಯ ಮತ್ತು ವನ ಸಂಪತ್ತು ಲೂಟಿಕೋರರ ದಾಳಿಗೆ ತುತ್ತಾಗತೊಡಗಿದೆ. ಕೇವಲ ಎರಡು ವರ್ಷಗಳಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಅರಣ್ಯ ನಾಶವಾಗಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ. ಸುಣ್ಣದ ಭಟ್ಟಿ, ಇಟ್ಟಿಗೆ ಭಟ್ಟಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮರಗಳನ್ನು ಕಡಿದು ಮಾರಾಟ ಮಾಡಲಾಗುತ್ತಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ದಾವಣಗೆರೆ".