ವಿಷಯಕ್ಕೆ ಹೋಗು

ಯೋಹಾನ್ ಸೆಬಾಸ್ಟಿಯನ್ ಬಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಖ್, ಯೋಹನ್ ಸೆಬಾಸ್ಟಿಯನ್ 1685-1750. ಜರ್ಮನಿಯ ಅರ್ಗನ್‍ವಾದಕ, ಕೃತಿಕಾರ, ಪ್ರಪಂಚದ ಒಬ್ಬ ಸಾರ್ವಕಾಲಿಕ ಮಹಾನ್ ಸಂಗೀತವಿದ.

ಬದುಕು[ಬದಲಾಯಿಸಿ]

ಈಗ ಜರ್ಮನಿಯಲ್ಲಿರುವ ಐಸೆನಾಖ್ ಎಂಬಲ್ಲಿ 1685 ಮಾರ್ಚ್ 21ರಂದು ಜನನ. ತಂದೆ ಯೋಹನ್ ಆಂಬ್ರೋಸಿಯಾಸ್ ಸ್ಥಳೀಯ ಪುರಸಭೆಯಲ್ಲಿ ತಂತ್ರೀವಾದಕನಾಗಿ ಕೆಲಸಮಾಡುತ್ತಿದ್ದ. ಅಣುಗ ಸೆಬಾಸ್ಟಿಯನ್ ತನ್ನ ಮೊದಲ ಸಂಗೀತಪಾಠವನ್ನು ತಂದೆಯಿಂದಲೇ ಕಲಿತಿರಬಹುದು. 1695ರ ವೇಳೆಗೆ ಇವನ ತಂದೆ ತಾಯಿ ಗತಿಸಿದ್ದರಿಂದ ಮುಂದೆ ಕೆಲ ಕಾಲ ಅಣ್ಣನ ಆಶ್ರಯದಲ್ಲಿ ಬೆಳೆದ. ಸ್ವತಃ ವಾದ್ಯಕಾರನಾದ ಈತ ತಮ್ಮನಿಗೆ ವಾದ್ಯವಾದನ ಕಲೆಗೆ ಶಾಸ್ತ್ರೀಯ ಪ್ರವೇಶ ನೀಡಿದ. ಆದರೆ ಶಿಸ್ತಿನ ಬಗೆಗಿನ ತಪ್ಪು ಗ್ರಹಿಕೆಯಿಂದಲೋ ತನಗಿಂತ ಉಜ್ವಲ ಪ್ರತಿಭಾನ್ವಿತನಾಗಿದ್ದ ತಮ್ಮನ ಬಗೆಗಿನ ಮತ್ಸರದಿಂದಲೋ ಈ ಅಣ್ಣ ತನ್ನ ತಮ್ಮನ ಕಣ್ಣಿಗೆ ಮಹಾಕೃತಿಕಾರರ ರಚನೆಗಳು ಬೀಳದಂತೆ ಎಚ್ಚರವಹಿಸಿದ. ಬಾಖನ ಜ್ಞಾನದಾಹ ಅಪಾರವಾಗಿದ್ದುದರಿಂದ ಈತ ಅವನ್ನು ಗುಟ್ಟಾಗಿ ಸಂಪಾದಿಸಿ ತಿಂಗಳ ಬೆಳಕಿನಲ್ಲಿ ನಕಲುಮಾಡಿ ಅಭ್ಯಸಿಸತೊಡಗಿದ.

ಬಾಲಕ ಸೆಬಾಸ್ಟಿಯನ್ನನ ಶಾರೀರ ಸುಮಧುರವಾಗಿತ್ತು. ಹೀಗಾಗಿ ಸಂಗೀತ ಮೇಳಗಳಲ್ಲಿ ತಾರಸ್ಥಯಿ ಗಾಯಕನ ಸ್ಥಾನ ಲಭಿಸಿತು. ಆದರೆ ವಯೋ ಧರ್ಮಾನುಸಾರ ಕಂಠ ಒಡೆದು ಧ್ವನಿಗೊಗ್ಗರವಾದಾಗ ಈತ ಪಿಟೀಲುಗಾರನಾಗಿ ಮೇಳಗಳಲ್ಲಿ ಭಾಗವಹಿಸತೊಡಗಿದ. 1703ರಲ್ಲಿ ವೈಮರಿನ ರಾಜಾಸ್ಥಾನದಲ್ಲಿ ಉದ್ಯೋಗ ದೊರೆಯಿತು. ಅಲ್ಲಿ ಇತಾಲಿಯನ್ ಸಂಗೀತ ಅಭ್ಯಸಿಸಿದ. ಅದೇ ಸುಮಾರಿಗೆ ಸ್ವಂತ ಕೃತಿಗಳನ್ನು ಕೂಡ ರಚಿಸತೊಡಗಿದ

ಸಂಗೀತಕ್ಷೇತ್ರದಲ್ಲಿ ಸಾಧನೆ[ಬದಲಾಯಿಸಿ]

ಪಾಶ್ಚಾತ್ಯ ಸಂಗೀತಕ್ಕೆ ಖಚಿತ ಅಂತಸ್ತು ಮತ್ತು ಗತಿಶೀಲತೆ ತಂದುಕೊಟ್ಟ ಈತನ ಕೃತಿಗಳನ್ನು ಅಭ್ಯಾಸದ ಸೌಕರ್ಯಕ್ಕಾಗಿ ಐದು ವಿಭಾಗಗಳಲ್ಲಿ ಪರಿಗಣಿಸುವುದುಂಟು: ಮೌಖಿಕ ಸಂಗೀತ ಕೃತಿಗಳು (ಧಾರ್ಮಿಕ ಮತ್ತು ಲೌಕಿಕ), ವಾದ್ಯಮೇಳ ಕೃತಿಗಳು, ಕೊಠಡಿಸಂಗೀತ ಕೃತಿಗಳು (ಚೇಂಬರ್ ಮ್ಯೂಸಿಕ್), ಆರ್ಗನ್ ಸಂಗೀತ ಕೃತಿಗಳು, ಹಾಪ್ರ್ಸಿಕಾರ್ಡ್ ಸಂಗೀತಕೃತಿಗಳು. ಸ್ವಂತ ವಾದನಗಳಿಂದ, ದಿಗ್ದರ್ಶನದಿಂದ ಮತ್ತು ಕೃತಿಗಳಿಂದ ಇತಿಹಾಸವನ್ನೇ ನಿರ್ಮಿಸಿದನಾದರೂ ಬಾಖನ ಖ್ಯಾತಿ ಜನಜನಿತವಾದದ್ದು ಈತ ಮರಣಹೊಂದಿ (28) ಜುಲೈ 1750, ಲೈಲ್ಝಿಗ್), ಸುಮಾರು ಅರ್ಧ ಶತಮಾನ ಕಾಲ ಸಂದ ಮೇಲೆಯೇ.

ಬಾಖ್ (1685-1750), ಹೇಯ್ಡನ್ (1732-1809), ಮೊಝಾರ್ಟ್ (1756-91) ಮತ್ತು ಬೇತೋವನ್ (1770-1827) ಈ ನಾಲ್ವರನ್ನು ಪಾಶ್ಚಾತ್ಯ ಅಭಿಜಾತ ಸಂಗೀತದ ಆಚಾರ್ಯ ಪುರುಷರೆಂದು ಪರಿಗಣಿಸುವುದು ವಾಡಿಕೆ. ಇವರ ಪೈಕಿ ವಿನೂತನತೆ, ಸೃಷ್ಟಿಶೀಲತೆ ಮತ್ತು ಸಂವಹನತೆ ಈ ಕಾರಣಗಳಿಗಾಗಿ ಕೆಲವು ವಿಮರ್ಶಕರು ಬಾಖನಿಗೆ ಅಗ್ರಸ್ಥಾನ ನೀಡಿದ್ದಾರೆ.