ಯೇಸುವಿನ ಪವಿತ್ರ ಹೃದಯಾಲಯ

ವಿಕಿಪೀಡಿಯ ಇಂದ
Jump to navigation Jump to search

ಬೆಂಗಳೂರಿನ ಯೇಸುವಿನ ಪವಿತ್ರ ಹೃದಯಾಲಯವು (ಸೇಕ್ರೆಡ್ ಹಾರ್ಟ್ ಚರ್ಚ್) ಮೊದಲಿಗೆ ವಿಕ್ಟೋರಿಯಾ ರಸ್ತೆಯ ಕೊನೆಯಲ್ಲಿದ್ದ ಹಳೇ ರೇಸ್ ಕೋರ್ಸ್ ರಸ್ತೆಯ ಮೈದಾನದಲ್ಲಿ ಒಂದು ಬಾಡಿಗೆಯ ಬಂಗಲೆಯಲ್ಲಿ ಪ್ರಾರಂಭವಾಯಿತು. ದಂಡುಪ್ರದೇಶಸಂತ ಮೇರಿ ಬೆಸಿಲಿಕಾದ ಅಧೀನದಲ್ಲಿದ್ದ ಕೆಲ ಪ್ರದೇಶಗಳು ೧೮೮೦ರಲ್ಲಿ ಈ ಹೊಸ ಚರ್ಚಿನ ಸುಪರ್ದಿಗೆ ಬರುವ ಮೂಲಕ ಮೊದಲ ಧರ್ಮಗುರುಗಳಾಗಿ ಸ್ವಾಮಿ ಪೀಟರ್ ಮೆನೆಜಿಸ್ ಅವರ ನೇತೃತ್ವದಲ್ಲಿ ಹೊಸ ಚರ್ಚು ಉಗಮಗೊಂಡು ಇದುವರೆಗೂ ಹಲವರು ಗುರುಗಳೂ ಜನಸಾಮಾನ್ಯರೂ ಈ ಚರ್ಚಿನ ಉನ್ನತಿಗೆ ದುಡಿದಿದ್ದಾರೆ.

೧೯೯೫ರಲ್ಲಿ ನಡೆದ ಈ ಚರ್ಚಿನ ಶತಮಾನೋತ್ಸವ ಸಮಾರಂಭಕ್ಕೆ ಶುಭ ಕೋರುತ್ತಾ ನಮ್ಮ ದೇಶದ ರಾಷ್ಟ್ರಾಧ್ಯಕ್ಷರು “ಪವಿತ್ರ ಹೃದಯ ದೇವಾಲಯವು ಸಾಂತ್ವನದ, ಆತ್ಮೋನ್ನತಿಯ ಮತ್ತು ಶಿಕ್ಷಣದ ಸೆಲೆಯಾಗಿದೆ. ಅದರ ಮಾನವೀಯ ಚಟುವಟಿಕೆಗಳು ನಮ್ಮ ಜಾತ್ಯತೀತ ಪರಂಪರೆಯ ಸಂಮಿಲನ – ಸೌಹಾರ್ದಗಳನ್ನು ಬಲಗೊಳಿಸಲು ನೆರವಾಗಿವೆ” ಎಂದು ಬರೆದಿದ್ದಾರೆ. ಅದೇ ಶಿಕ್ಷಣ ಮತ್ತು ಸೇವೆಯ ನಡಿಗೆಯು ಇತಿಹಾಸದೊಂದಿಗೆ ಮಿಳಿತಗೊಂಡು ಚರ್ಚಿನ ಭವಿಷ್ಯದ ತೂಗುಗೊಂಚಲುಗಳಾಗಿ ತೋರುತ್ತಿವೆ.

೨೦೦೬ರಲ್ಲಿ ಒಬ್ಬರೇ ಪೋಷಕರಿರುವ ಕುಟುಂಬದ ಬಡಮಕ್ಕಳಿಗಾಗಿ ಪ್ರಾರಂಭವಾದ ಬಾಲಕರ ನಿವಾಸದಲ್ಲಿ ೪ ರಿಂದ ೭ ನೇ ತರಗತಿಯ ೨೬ ಹುಡುಗರಿದ್ದು ಅವರೊಂದಿಗೇ ವಾಸಿಸುವ ಬ್ರದರುಗಳ ಮೇಲುಸ್ತುವಾರಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇದೊಂದು ಮನೆಯಾಚೆಯ ಮನೆಯಾಗಿದ್ದು ವಾಸ, ಶಿಕ್ಷಣದ ಜೊತೆಗೆ ಮನೋವಿಕಾಸ ಮತ್ತು ಗುರಿನಿಷ್ಕರ್ಷೆಗೆ ನೆರವಾಗಲಿದೆ. ಈ ಧರ್ಮಕೇಂದ್ರದ ಶಿಕ್ಷಣನಿಧಿಯು ಇಂದು ೨೫೦ ಮಕ್ಕಳಿಗೆ ನೆರವು ನೀಡುತ್ತಿದೆ.

ಅದೇ ರೀತಿ ೨೦೦೬ರಲ್ಲಿ ಶುರುವಾದ ಬೆಂಗಳೂರು ಸಮುದಾಯ ಕಾಲೇಜು ಕೆಳಸ್ತರದವರಿಗೆ ವಿದ್ಯಾಭ್ಯಾಸ, ಜೀವನಕೌಶಲ್ಯ, ಗಣಕ ತರಬೇತಿ, ಇಂಗ್ಲಿಷ್ ಮಾತು, ಕಚೇರಿ ಸಹಾಯ, ಆಡಳಿತ ನಿರ್ವಹಣೆಗಳ ನಿಟ್ಟಿನಲ್ಲಿ ತರಬೇತಿ ನೀಡುತ್ತಿದೆ ಮಾತ್ರವಲ್ಲ ಕಲಿಕೆ ಮುಗಿಯುತ್ತಿದ್ದಂತೆ ಕೆಲಸ ದೊರಕಿಸುವ ಪರಿಪಾಠವೂ ಇದೆ. ಪ್ರತಿವರ್ಷವೂ ಇಲ್ಲಿ ಸೇರಿಕೊಳ್ಳುವ ೧೬ ರಿಂದ ೩೦ ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ನಿವೃತ್ತ ಪ್ರೊಫೆಸರುಗಳೂ ಕಾಲೇಜು ಉಪನ್ಯಾಸಕರೂ ಬೋಧಿಸುತ್ತಾರೆ. ಇಲ್ಲಿ ಕಲಿತ ಎಷ್ಟೋ ಮಂದಿ ಶಿಕ್ಷಣ ಮುಂದುವರಿಸಿ ಉನ್ನತ ಪದವಿಗಳನ್ನು ಪಡೆದು ಒಳ್ಳೊಳ್ಳೆಯ ಕಡೆ ಕೆಲಸದಲ್ಲಿದ್ದಾರೆ. ಅವರ ಕತೆಯೂ ಚರ್ಚಿನ ಉನ್ನತಿಯ ಕತೆಯೊಂದಿಗೆ ಬೆರೆತು ಅದೇ ಮತ್ತೊಂದು ಯಶೋಗಾಥೆಯಾಗಿದೆ.

೨೦೦೭ರಲ್ಲಿ ರೂಪುಗೊಂಡ ಮತ್ತೊಂದು ಸ್ವಸಹಾಯ ಗುಂಪು ಕಡುಬಡವರ ಕಾಳಜಿ ಮಾಡುತ್ತಿದೆ. ಕ್ರೈಸ್ತರು ಇತರರು ಎಂಬ ತಾರತಮ್ಯವಿಲ್ಲದೆ ಆಸರೆಯಿಲ್ಲದ ವೃದ್ದರನ್ನು ಗುರುತಿಸಿ ವೃದ್ಧಾಶ್ರಮಗಳಿಗೆ ಸೇರಿಸಿ ಅವರ ಜೀವನ ಕೊನೆಯುಸಿರಿನವರೆಗೂ ಅವರ ಜವಾಬ್ದಾರಿ ಹೊರುತ್ತಿದೆ. ಅಲ್ಲದೆ ವರ್ಷವರ್ಷವೂ ಕಣ್ಣು ಪರೀಕ್ಷಾ ಶಿಬಿರಗಳನ್ನು ನಡೆಸುತ್ತಿದೆ.

ಇವೆಲ್ಲವುಗಳಿಗೆ ಹೊರತಾಗಿ ಪವಿತ್ರಹೃದಯ ಶಾಲೆಯು ಶೈಶವದಿಂದ ಹತ್ತನೇ ತರಗತಿಯವರೆಗಿನ ೨೦೦೦ ಹುಡುಗರಿಗೆ ಶಿಕ್ಷಣ ನೀಡುತ್ತಿದೆ. ಸಮಾಜದ ಕಡುಬಡವರಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಈ ಶಾಲೆಯ ಧ್ಯೇಯವಾಗಿದೆ.

ಹಬ್ಬದ ಸಂದರ್ಭದ ನವೇನವು ಒಂದು ವಿಶೇಷ ಅಧ್ಯಾತ್ಮಿಕ ಪ್ರಕ್ರಿಯೆಯಾಗಿದೆ. ಈ ಸಂದರ್ಭದಲ್ಲಿ ದೂರದೂರಗಳಿಂದ ಭಕ್ತಾದಿಗಳು ಬಂದು ಯೇಸುಕ್ರಿಸ್ತನ ಕೃಪೆಗೆ ಪಾತ್ರರಾಗುತ್ತಾರೆ. ರೋಗಿಗಳಿಗೆಂದೇ ಮಧ್ಯಾಹ್ನ ೧೧:೩೦ಕ್ಕೆ ವಿಶೇಷ ಪೂಜಾವ್ಯವಸ್ಥೆ ಇರುತ್ತದೆಯಲ್ಲದೆ ಪರಮಪ್ರಸಾದದ ಆರಾಧನೆಯು ಇಡೀ ದಿನ ಇರುತ್ತದೆ. ಇವೆಲ್ಲವುಗಳ ಪರಣಾಮವಾಗಿ ದೇವಾಲಯದ ಅಧ್ಯಾತ್ಮದ ನೆಲೆಯು ಉದ್ದೀಪನಗೊಂಡು ಜನರಲ್ಲಿ ಉನ್ನತ ಮಟ್ಟದ ದೈವೀಭಾವವನ್ನು ಸ್ಥಿರಪಡಿಸುತ್ತಿದೆ.