ಯುಏವಿ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುಏವಿ ವ್ಯವಸ್ಥೆ

ಯುಏವಿಗಳು ಹೇಗೆ ಕೆಲಸ ಮಾಡುತ್ತವೆ?[ಬದಲಾಯಿಸಿ]

ಒಂದು ಯುಏವಿ ವ್ಯವಸ್ಥೆಯಲ್ಲಿ ಮೂರು ಉಪವ್ಯವಸ್ಥೆಗಳಿರುತ್ತವೆ. ಇವೆಂದರೆ ಭೂ ನಿಯಂತ್ರಣ ಕೊಠಡಿ (Ground Control Station), ಯುಏವಿ ವಿಮಾನಗಳು ಮತ್ತು ಮಾಹಿತಿ ಕೊಂಡಿ (Datalink).

ಭೂ ನಿಯಂತ್ರಣ ಕೊಠಡಿ[ಬದಲಾಯಿಸಿ]

ಭೂ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಚಾಲಕರು ಯುಏವಿಯನ್ನು ಹಾರಬಿಡುತ್ತಾರೆ. ಇಲ್ಲಿ ಚಾಲಕರು ಭೂ ನಿಯಂತ್ರಣ ಕೊಠಡಿ, ಮಾಹಿತಿ ಕೊಂಡಿ ಹಾಗೂ ಯುಏವಿಗಳನ್ನು ನಿಯಂತ್ರಿಸಲು ಬಳಸುವ ಎಲ್ಲಾ ಉಪಕರಣಗಳಿರುತ್ತವೆ. ಅಲ್ಲದೆ, ಯುಏವಿಯಲ್ಲಿ ಅಳವಡಿಸಿರುವ ಕ್ಯಾಮೆರವನ್ನು ಕೂಡ ಇಲ್ಲಿಂದಲೇ ನಿಯಂತ್ರಿಸಲಾಗುತ್ತದೆ. ಟಿವಿ ಪರದೆಯ ಮೇಲೆ ಯುಏವಿ ಬಿತ್ತರಿಸುವ ವಿಡಿಯೊ ಮೂಡಿ ಬರುತ್ತದೆ. ವಿಮಾನದ ಧೋರಣೆಯನ್ನು (Attitude) ಕೂಡ ಇವರಿಗೆ ಮಾಪಕಗಳು ತಿಳಿಸುತ್ತವೆ.

ಭೂ ನಿಯಂತ್ರಣ ಕೊಠಡಿ

ಇಲ್ಲಿಂದಲೇ ಯುಏವಿಯ ಹಾರಾಟ ಹಾಗೂ ಯುಏವಿಯು ಮಾಡಬೇಕಾದ ಕಾರ್ಯಗಳ ಬಗ್ಗೆ ಚಾಲಕರು ಆಜ್ಞೆಗಳನ್ನು ಕಳುಹಿಸುತ್ತಾರೆ. ಯುಏವಿ ಚಾಲಕರು ವಿಮಾನ ನಿಲ್ದಾಣದ ನಿಯಂತ್ರಣ ಕೇಂದ್ರದೊಂದಿಗೆ (Air Traffic Control) ಸಂಪರ್ಕವನ್ನು ಹೊಂದಿದ್ದು, ಅಲ್ಲಿನ ನಿಯಂತ್ರಕರ ಸಹಯೋಗದಿಂದ ಯುಏವಿಯನ್ನು ನಿರ್ದಿಷ್ಟ ಹಾದಿಯಲ್ಲಿ, ಇತರ (ಪೌರ ಹಾಗೂ ಸೈನಿಕ) ವಿಮಾನಗಳಿಗೆ ಅಡ್ಡ ಬರದಂತೆ ನಿಯಂತ್ರಿಸುತ್ತಾರೆ.

ಮಾಹಿತಿ ಕೊಂಡಿ (Datalink)[ಬದಲಾಯಿಸಿ]

ಭೂ ನಿಯಂತ್ರಣ ಕೊಠಡಿಯಿಂದ ಚಾಲಕರು ಕಳುಹಿಸುವ ಆಜ್ಞೆಗಳನ್ನು ವಿದ್ಯುತ್ ರೂಪದಲ್ಲಿ ಮಾಹಿತಿ ಕೊಂಡಿಗೆ ರವಾನಿಸಲಾಗುತ್ತದೆ. ಮಾಹಿತಿ ಕೊಂಡಿಯು ಈ ಆಜ್ಞೆಗಳನ್ನು ವಿದ್ಯುದಯಸ್ಕಾಂತೀಯ ಅಲೆಗಳ (Electromagnetic/radio waves) ರೂಪಕ್ಕೆ ಪರಿವರ್ತಿಸಿ ಸಂದೇಶಗಳಾಗಿ ಯುಏವಿ ವಿಮಾನದತ್ತ ಬಿತ್ತರಿಸುತ್ತದೆ.

ಭೂ ನಿಯಂತ್ರಣ ಕೋಣೆ

ಭೂ ಮಾಹಿತಿ ಕೊಂಡಿಯಿಂದ ಯುಏವಿಯತ್ತ ಬಿತ್ತರಿಸಲ್ಪಡುವ ಸಂದೇಶಗಳನ್ನು ಮೇಲ್ಮುಖ ಕೊಂಡಿ (Uplink) ಎಂದು ಕರೆಯಲಾಗುತ್ತದೆ. ಯುಏವಿಯು ಬಿತ್ತರಿಸುವ ಮಾಹಿತಿಯನ್ನು ಮಾಹಿತಿ ಕೊಂಡಿಯು ಆಲಿಸಿ, ವಿದ್ಯುತ್ ರೂಪಕ್ಕೆ ಪರಿವರ್ತಿಸಿ ಭೂ ನಿಯಂತ್ರಣ ಕೊಠಡಿಗೆ ಕಳುಹಿಸುತ್ತದೆ. ಯುಏವಿಯಿಂದ ಭೂ ಮಾಹಿತಿ ಕೊಂಡಿಗೆ ಬಿತ್ತರಿಸುವ ಸಂದೇಶವನ್ನು ಕೆಳಮುಖ ಕೊಂಡಿ (Downlink) ಎಂದು ಕರೆಯಲಾಗುತ್ತದೆ. ಈ ಮಾಹಿತಿ ಕೊಂಡಿಯ ಬಿತ್ತರಿಕೆ ಟೆಲಿಮಿಟ್ರಿ ರೂಪದಲ್ಲಿರುತ್ತದೆ.

ಯುಏವಿ[ಬದಲಾಯಿಸಿ]

ಯುಏವಿಗಳನ್ನು ಅನೇಕ ವಿಧಗಳಲ್ಲಿ ಹಾರಬಿಡಬಹುದು; ವಿದ್ಯುತ್ ಅಥವಾ ಒತ್ತಡಕೊಳಪಡಿಸಿದ ವಾಯುಶಕ್ತಿಯಿಂದ (pneumatic) ಕಾರ್ಯನಡೆಸುವ ಕವಣೆಯಿಂದ ಹಾರಬಿಡುವ (catapult launch), ರಾಕೆಟ್ ಶಕ್ತಿಯಿಂದ ಮತ್ತು ಓಡುದಾರಿಯಲ್ಲಿ (Runway) ಓಡಿ ವೇಗ ಪಡೆದು ಹಾರುವ ವಿಧಗಳು.

ಕವಣೆಯಿಂದ ಹಾರಿಸಲಾಗುವ ಯುಏವಿ

ಕವಣೆಯಿಂದ ಮತ್ತು ರಾಕೆಟ್ ಶಕ್ತಿಯಿಂದ ಹಾರಬಿಡುವ ಯುಏವಿಗಳು ಇಳಿಯಲು ಪ್ಯಾರಾಚೂಟನ್ನು ಬಳಸುತ್ತವೆ.

ಪ್ಯಾರಾಚೂಟ್ ಉಪಯೋಗಿಸಿ ಇಳಿಯುವ ಯುಏವಿ

ಓಡುದಾರಿಯನ್ನು ಬಳಸುವ ಯಏವಿಗಳು ಇಳಿಯಲು ಕೂಡ ಓಡುದಾರಿಯನ್ನೇ ಬಳಸುತ್ತವೆ. ಓಡುದಾರಿಯನ್ನು ಬಳಸುವ ಯುಏವಿಗಳ ಉಡ್ಡಯನ (Take off) ಮತ್ತು ನೆಲಕ್ಕಿಳಿಸುವಿಕೆ (Landing) ಸ್ವನಿಯಂತ್ರಿತ ಅಥವಾ ಚಾಲಕ ನಿಯಂತ್ರಿತವಾಗಿರಬಹುದು. ಮಾಹಿತಿ ಕೊಂಡಿಯು ಬಿತ್ತರಿಸಿದ ಚಾಲಕರ ಆಜ್ಞೆಗಳನ್ನು ಯುಏವಿಯು ಆಲಿಸಿ ಅದರಂತೆ ನಡೆಯುತ್ತದೆ. ತನ್ನ ಧೋರಣೆಯನ್ನು [ಎತ್ತರ (Altitude), ವೇಗ (Airspeed), ದಿಕ್ಕು (Heading), ಸ್ಥಳ (Position), ಏರುವಿಕೆ (Climb), ಇಳಿಯುವಿಕೆ (Descent) ಇತ್ಯಾದಿ] ಅರಿಯಲು ಯುಏವಿಯು ತನ್ನಲ್ಲೇ ಅಳವಡಿಸಲಾದ ಸಂವೇದಕಗಳನ್ನು (Sensors) ಬಳಸುತ್ತದೆ ಹಾಗೂ ಈ ಮಾಹಿತಿಗಳನ್ನು ನೆಲಕ್ಕೆ ಬಿತ್ತರಿಸುತ್ತದೆ. ವಿಡಿಯೊಗಾಗಿ ಯುಏವಿಯಲ್ಲಿ ಶಕ್ತಿಶಾಲಿಯಾದ ಕ್ಯಾಮೆರವನ್ನು ಅಳವಡಿಸಲಾಗುತ್ತದೆ.

ಯುಏವಿಯ ಕ್ಯಾಮೆರ

ಈ ಕ್ಯಾಮೆರವು ಹಗಲು (Day camera) ಹಾಗೂ ರಾತ್ರಿಯಲ್ಲಿ (Infra-red) ಕೆಲಸ ಮಾಡಲು ಸಮರ್ಥವಾಗಿರುತ್ತದೆ. ಕ್ಯಾಮೆರ ಚಿತ್ರೀಕರಿಸುವ ವಿಡಿಯೊವನ್ನು ತಕ್ಷಣ ನಿಜ-ಸಮಯದಲ್ಲೇ ನೆಲಕ್ಕೆ ಬಿತ್ತರಿಸಲಾಗುತ್ತದೆ (ನೇರ ಪ್ರಸಾರದಂತೆ). ಇವಲ್ಲದೆ ಈ ಕ್ಯಾಮೆರದಲ್ಲಿ ಲೇಸರ್ ಕಿರಣವನ್ನು ಹೊಮ್ಮಿಸುವ ಉಪಕರಣವನ್ನೂ ಅಳವಡಿಸಲಾಗುತ್ತದೆ. ಭೂ ನಿಯಂತ್ರಣ ಕೊಠಡಿಯಲ್ಲಿ ಕುಳಿತಿರುವ ಚಾಲಕರು ಕ್ಯಾಮೆರದ ಕಣ್ಣಿಗೆ ಕಾಣುವ ಲಕ್ಷ್ಯವನ್ನು (ಗುರಿ) ಲೇಸರ್ ಕಿರಣದಿಂದ ಹೊಡೆಯುತ್ತಾರೆ. ಈ ಲೇಸರ್ ಕಿರಣದ ಪ್ರತಿಫಲನವನ್ನು ಗುರುತಿಸಿ ಲಕ್ಷ್ಯದ ದೂರವನ್ನು ಅಳೆಯಲಾಗುತ್ತದೆ. ಅಲ್ಲದೆ ಹಿಂಬಾಲಿಸಿ ಬರುವ ಸಮರ ವಿಮಾನದ (Fighter Aircraft) ಚಾಲಕನು ಈ ಪ್ರತಿಫಲನವನ್ನು ವಿಶೇಷ ಉಪಕರಣದ ಮೂಲಕ ಗಮನಿಸಿ ತನ್ನ ವಿಮಾನದಿಂದ ಬಾಂಬನ್ನು ಎಸೆಯುತ್ತಾನೆ. ಈ ಬಾಂಬು ಲೇಸರ್ ಪ್ರತಿಫಲನವನ್ನೇ ಮಾರ್ಗದರ್ಶಿಯಾಗಿಸಿಕೊಂಡು ಗುರಿಯನ್ನು ನಿಖರವಾಗಿ ಹೊಡೆಯುತ್ತದೆ (Laser Guided Bomb).

ಇವನ್ನೂ ನೋಡಿ[ಬದಲಾಯಿಸಿ]

ಯುಏವಿ ಅಥವಾ ಮಾನವರಹಿತ ವಾಯು ವಿಮಾನ