ಮೋಹನಕುಮಾರ್ ಉಳ್ಳಾಲ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮಂಗಳೂರಿನ ಕೋಟೆಕಾರ್ನಲ್ಲಿ ೧೯೩೩ರಲ್ಲಿ ಜನಿಸಿದ ಶ್ರೀ ಮೋಹನಕುಮಾರರು ಪ್ರಾರಂಭದಲ್ಲಿ ವಿಠಲ್ ಮಾಸ್ಟರ್ ಮತ್ತು ರಾಜನ್ ಅಯ್ಯರ್ ಅವರುಗಳಲ್ಲಿ ನೃತ್ಯ ಶಿಕ್ಷಣ ಪಡೆದು, ಮುಂದೆ ಸೇಲಂ ರಾಜರತ್ನಂ ಪಿಳ್ಳೆ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿ ಭರತನಾಟ್ಯ ಸಾಧನೆ ಮಾಡಿದ್ದಾರೆ. “ನಾಟ್ಯ ನಿಕೇತನ”ದ ಭೋದಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಪ್ರಸಾರ -ಪ್ರಚಾರಕರಾಗಿ ದುಡಿಯುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದಲ್ಲೂ ವಿದೇಶಗಳಲ್ಲೂ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ರಾಜ್ಯ ಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ತಮ್ಮ ಪಾಂಡಿತ್ಯವನ್ನು ಬಳಸಿದ್ದಾರೆ. ಕಾಮದಹನ, ಶ್ರೀ ಕೃಷ್ಣ ಪಾರಿಜಾತ, ಪರಶುರಾಮ, ಶ್ರೀ ಕೃಷ್ಣಲೀಲೆ, ಪಳನಿ ಮಹಾತ್ಮೆ, ದಶಾವತಾರ ಮುಂತಾದ ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತುಳುವಿನಲ್ಲೂ ನೃತ್ಯ ರೂಪಕವನ್ನು ಸಂಯೋಜಿಸಿರುವುದೊಂದು ವಿಶೇಷ. ಕೆಲ ಸಾಕ್ಷ್ಯಚಿತ್ರಗಳಿಗೂ ನಾಟ್ಯ ಸಂಯೋಜನೆ ಮಾಡಿರುವ ಶ್ರೀಯುತರಿಗೆ ಈ ಹಿಂದೆ ಅಕಾಡೆಮಿಯ ಪುರಸ್ಕಾರವೂ, ತಮ್ಮ ಹುಟ್ಟೂರಿನಲ್ಲಿ “ನಾಟ್ಯ ಮೋಹನ” ಎಂಬ ಅಭಿನಂದನಾ ಗ್ರಂಥವೂ ಸಮರ್ಪಣೆಯಾಗಿದೆ. ಈ ನಾಟ್ಯಾಚಾರ್ಯರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೧-೯೨ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.