ವಿಷಯಕ್ಕೆ ಹೋಗು

ಮೊಗ್ಗಲ್ಲಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಗ್ಗಲ್ಲಾನ ಬುದ್ಧನ ಸಂಘಕ್ಕೆ ಆರಂಭದೆಸೆಯಲ್ಲೇ ಶಾರಿಪುತ್ರನೊಂದಿಗೆ ಸೇರಿ ಅದರ ಯಶಸ್ಸಿಗೆ ಕಾರಣನಾದವ. ಜನರ ಬಾಯಿಯಲ್ಲಿ ಮೌದ್ಗಲ್ಯಾಯನ.

ಮೊಗ್ಗಲ್ಲಾನ ಮತ್ತು ಶಾರಿಪುತ್ರ ಇಬ್ಬರೂ ನಾಲಂದದ ಬಳಿಯೇ ಬ್ರಾಹ್ಮಣಕುಲದಲ್ಲಿ ಹುಟ್ಟಿದವರು. ಬಾಲ್ಯದಿಂದಲೂ ಸ್ನೇಹಿತರಾಗಿದ್ದವರು. ಇಬ್ಬರೂ ಅಶ್ವಜಿತನನ್ನು ರಾಜಗೃಹದಲ್ಲಿ ಸಂಧಿಸಿ ಬುದ್ಧನ ಬಳಿ ಪ್ರವ್ರಜ್ಯ ಪಡೆದು ಬುದ್ಧನ ಶಿಷ್ಯರಾಗಿ ಪ್ರಮುಖರಾದರು. ಈತ ಬುದ್ಧ ಬದುಕಿರುವಾಗಲೇ ಶಾರಿಪುತ್ರನ ಅನಂತರ ತೀರಿಕೊಂಡ. ಶಾರಿಪುತ್ರ ತೀರಿಕೊಂಡಾಗ ಮೊಗ್ಗಲ್ಲಾನನಿಂದ ಬಂದ ಉದ್ಗಾರ ಥೇರಗಾಥಾದಲ್ಲಿ (1159) ಉಳಿದುಬಂದಿದೆ. ಮೊಗ್ಗಲ್ಲಾನನನ್ನು ಆಜೀವಕರು ಕೊಲೆಮಾಡಿದರೆಂದು ಧಮ್ಮಪದಟ್ಠ ಕಥೆ ನಿರೂಪಿಸುತ್ತದೆ.

ಮೊಗ್ಗಲ್ಲಾನ ಐಂದ್ರಜಾಲಿಕ ವಿದ್ಯೆ (ಇದ್ಧಿಪದ) ಸಂಪೂರ್ಣವಾಗಿ ವಶಮಾಡಿಕೊಂಡಿದ್ದವ. ಅದನ್ನು ಬೌದ್ಧಧರ್ಮದ ಪ್ರಚಾರಕ್ಕಾಗಿ ಪ್ರಯೋಗಿಸಿದ ಈತನಿಗೆ ಸ್ವರ್ಗ, ನರಕ, ಪ್ರೇತಲೋಕ, ಅಸುರಲೋಕಗಳಲ್ಲಿ ಸರಾಗವಾಗಿ ಓಡಾಡುವ ಸಾಮಥ್ರ್ಯವಿತ್ತು, ಬೇಕಾದ ರೂಪವನ್ನು ತಳೆಯುವ ಶಕ್ತಿಯಿತ್ತು. ಈ ಅದ್ಭುತಗಳಿಂದ ವ್ಯಕ್ತವಾದ ಮೊಗ್ಗಲ್ಲಾನನ ಹಿರಿಮೆ ಮಜ್ಝಿಮನಿಕಾಯ, ಸಂಯುಕ್ತನಿಕಾಯ, ವಿಮಾನವತ್ಥು, ಮಹಾವಸ್ತುಗಳಲ್ಲಿ ನಿರೂಪಿತಗೊಂಡಿದೆ. ಸಂಯುಕ್ತನಿಕಾಯದಲ್ಲಿ ಮೊಗ್ಗಲ್ಲಾನನೇ ಮಾಡಿದ ಪ್ರವಚನಗಳನ್ನು ಉಳಿಸಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: