ಮೇರಿ ಟಸೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇರಿ ಟಸೋ (Marie Tussaud)-ಮೇಣದ ಗೊಂಬೆಗಳನ್ನು ಮಾಡುವುದರಲ್ಲಿ ಪ್ರಖ್ಯಾತಳಾದ ಸ್ವಿಸ್ ಮಹಿಳೆ. ತನ್ನ ಹೆಸರಿನಲ್ಲಿಯೇ ಮೇಣದ ಗೊಂಬೆಗಳ ಪ್ರದರ್ಶನವೊಂದನ್ನು ಲಂಡನ್ನಿನಲ್ಲಿ ಸ್ಥಾಪಿಸಿದಳು.

ಬದುಕು[ಬದಲಾಯಿಸಿ]

ಈಕೆ ಜನಿಸಿದ್ದು ಸ್ಟ್ರಾಸ್‍ಬರ್ಗ್‍ನಲ್ಲಿ.

ಬರ್ನ್ ಮತ್ತು ಪ್ಯಾರಿಸಿನಲ್ಲಿ ಬೆಳೆದಳು. ಚಿಕ್ಕಪ್ಪ ಫಿಲಿಪ್ ಕುರ್ಷಿಯಸ್‍ನಿಂದ ಮೇಣದ ಗೊಂಬೆಗಳನ್ನು ಮಾಡುವ ವಿಧಾನವನ್ನು ಕಲಿತಳು. 1794ರಲ್ಲಿ ಆತನ ಮರಣಾನಂತರ ಅವನ ಅಧೀನದಲ್ಲಿದ್ದ ಎರಡು ವಸ್ತುಸಂಗ್ರಹಾಲಯಗಳ ಒಡೆತನ ಪಡೆದಳು. 1780ರಿಂದ ಫ್ರೆಂಚ್ ಮಹಾಕ್ರಾಂತಿ ಆರಂಭವಾಗುವವರೆಗೂ ಪ್ಯಾರಿಸಿನಲ್ಲಿದ್ದಳು. ವರ್ಸೆಲ್ಸಿನಲ್ಲಿ 16ನೆಯ ಲೂಯಿಯ ಸಹೋದರಿಯಾದ ಮದಾಂ ಎಲಿಜಬೆತ್‍ಳಿಗೆ ಕಲೆಯ ಶಿಕ್ಷಕಿಯಾಗಿದ್ದಳು. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಸೆರೆಮನೆಗೆ ಹೋದಳು. ಅಲ್ಲದೆ ಆ ಸಮಯದಲ್ಲಿ ಗಿಲೋಟೀನಿನಿಂದ ತುಂಡರಿಸಿದ ತನ್ನ ಗೆಳೆಯರ ತಲೆಬುರುಡೆಗಳ ಅಚ್ಚನ್ನು ತಯಾರಿಸುವ ಭಯಂಕರ ಕೆಲಸ ಈಕೆಯದಾಗಿತ್ತು.

1795ರಲ್ಲಿ ಮೇರಿ ಫ್ರಾನ್ಸಿಸ್ ಟಸೋನೊಡನೆ ವಿವಾಹ ಮಾಡಿಕೊಂಡಳು. ಈತ ಮಾಕನ್‍ನಲ್ಲಿ ಇಂಜಿನಿಯರ್ ಆಗಿದ್ದ. ವಿವಾಹ ಯಶಸ್ವಿಯಾಗಲಿಲ್ಲ. 1802ರಲ್ಲಿ ತನ್ನ ಇಬ್ಬರು ಪುತ್ರರನ್ನು ಕರೆದುಕೊಂಡು ತಾನು ಸಂಗ್ರಹಿಸಿದ ಮೇಣದ ಗೊಂಬೆಗಳನ್ನೂ ತೆಗೆದುಕೊಂಡು ಇಂಗ್ಲೆಂಡಿಗೆ ತೆರಳಿದಳು. ಸುಮಾರು 33 ವರ್ಷಗಳ ಕಾಲ ಬ್ರಿಟಿಷ್ ದ್ವೀಪಗಳಲ್ಲೆಲ್ಲ ತಿರುಗಾಡಿದಳು. ಅನಂತರ ಲಂಡನ್ನಿನಲ್ಲಿ ನೆಲಸಿದಳು. ಅಲ್ಲಿ ಸುಮಾರು 8 ವರ್ಷಗಳ ಕಾಲ ತನ್ನ ಕಲಾಕಾರ್ಯವನ್ನು ಮುಂದುವರಿಸಿದಳು.

ಮೇಣದ ಪ್ರತಿಮೆಗಳು[ಬದಲಾಯಿಸಿ]

ಮೇರಿ ರಚಿಸಿದ ಪ್ರತಿಮೆಗಳು ಕಲಾದೃಷ್ಟಿಯಿಂದ ಹಾಗೂ ಐತಿಹಾಸಿಕ ದೃಷ್ಟಿಯಿಂದ ಅಮೂಲ್ಯವಾದವು. ತನ್ನ ಸಮಕಾಲೀನರ ಪ್ರತಿಮೆಗಳನ್ನು ಈಕೆ ಸಮರ್ಥವಾಗಿ ತಯಾರಿಸಿದ್ದುಂಟು. ವಾಲ್ಟೇರ್, ಬೆಂಜಮಿನ್ ಫ್ರಾಂಕ್ಲಿನ್, ಹೊರಾಶಿಯೊ, ನೆಲ್ಸನ್, ಸರ್ ವಾಲ್ಟರ್ ಸ್ಕಾಟ್ ಮುಂತಾದವರ ಪ್ರತಿಮೆಗಳು ಈಕೆಯ ಶ್ರೇಷ್ಠ ಕೃತಿಗಳಲ್ಲಿ ಕೆಲವು, ಈಕೆಯ ಸಂಗ್ರಹಕ್ಕೆ ಸೇರಿದಂತಿರುವ ಚೇಂಬರ್ ಆಫ್ ಹಾರರ್ಸ್ (ಭಯಂಕರ ವಸ್ತುಗಳ ವಿಭಾಗ) ಎಂಬ ಭಾಗದಲ್ಲಿ ಸುಪ್ರಸಿದ್ಧ ಪಾತಕಿಗಳ ಅವಶೇಷಗಳು ಹಾಗೂ ಅವರು ಉಪಯೋಗಿಸುತ್ತಿದ್ದ ರೂಕ್ಷ ಆಯುಧಗಳು ಇವೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: