ಮೆಳ್ಳೆಗಣ್ಣು

ವಿಕಿಪೀಡಿಯ ಇಂದ
Jump to navigation Jump to search
ಮೆಳ್ಳೆಗಣ್ಣಿನಿಂದ ಕಣ್ಣುಗಳು ಒಂದು ಬಿಂದುವಿಗೆ ಗುರಿಯಿಟ್ಟು ನೋಡಲಾಗುವುದಿಲ್ಲ. ಇಲ್ಲಿ ಎಕ್ಸೊಟ್ರೋಪಿಯಾದ ಪ್ರಕಾರವನ್ನು ತೋರಿಸಲಾಗಿದೆ

ಮೆಳ್ಳೆಗಣ್ಣು (ಮಾಲುಗಣ್ಣು) ಎಂದರೆ ಒಂದು ವಸ್ತುವನ್ನು ನೋಡುವಾಗ ಕಣ್ಣುಗಳು ಒಂದಕ್ಕೊಂದು ಹೊಂದದಿರುವ ಸ್ಥಿತಿ. ಇಕ್ಕಣ್ಣಿನ (ಬೈನಾಕ್ಯುಲಾರ್) ನೋಟ ಚೆನ್ನಾಗಿರಬೇಕಾದರೆ ಎರಡು ಕಣ್ಣುಗಳ ಚಲನೆಯೂ ಒಂದಕ್ಕೊಂದು ಹೊಂದಿಕೊಂಡಿರಬೇಕು ಒಂದೊಂದು ಕಣ್ಣುಗುಡ್ಡೆ ಸುತ್ತ ಆರು ಸ್ನಾಯುಗಳೂ ಮಿದುಳಲ್ಲಿ ಅವಕ್ಕೆ ಸಂಬಂಧಿಸಿದ ಹೊಂದುಗೂಡಿಸುವ ನರಕೇಂದ್ರಗಳೂ ಇವೆ. ವರ್ಷದ ಎಳೆಗೂಸು ತನ್ನ ಕಣ್ಣುಗಳ ಚಲನೆಯನ್ನು ಅಂಕೆಗೆ ತರುವುದನ್ನು ಕಲಿತುಕೊಳ್ಳುತ್ತದೆ. ಇದಕ್ಕೆ ಅಡ್ಡಿ ಬರುವ ಕಾರಣಗಳು ಕೆಲವಿದೆ. ಎರಡು ಕಣ್ಣುಗಳೂ ದೂರನೋಟದವೋ ಹತ್ತೆ ನೋಟದವೋ ಆಗಿರಬಹುದು, ಎರಡು ಕಣ್ಣುಗುಡ್ಡೆಗಳ ಬೆಳೆವಣಿಗೆಯಲ್ಲಿ ವ್ಯತ್ಯಾಸವಿರಬಹುದು. ಕಣ್ಣು ಹೊರಗಿನ ಸ್ನಾಯುಗಳ ಬಲ ಒಂದೊಂದರಲ್ಲಿ ಒಂದೊಂದು ಮಟ್ಟಕ್ಕೆ ಇರಬಹುದು. ಮೆದುಳಲ್ಲಿ ಹತೋಟಿ ಕೇಂದ್ರಗಳ ವಿಕಾಸ ಕುಂದಿರಬಹುದು. ಹೀಗೆ ಯಾವ ಮಟ್ಟದಲ್ಲಿ ಕೆಟ್ಟಿದ್ದರೂ ಒಟ್ಟಾರೆ ಪರಿಣಾಮ ಮಾತ್ರ ಒಂದೇ. ಗಮನ ಸೆಳೆವ ವಸ್ತುವಿನಲ್ಲಿ ಒಂದು ಕಣ್ಣು ನೇರವಾಗಿ ನೆಟ್ಟಿದ್ದರೆ, ಇನ್ನೊಂದು ಕಣ್ಣು ಒಳಕ್ಕೋ ಹೊರಕ್ಕೋ ಮೇಲಕ್ಕೋ ಕೆಳಕ್ಕೋ ತಿರುಗಿರುತ್ತದೆ. ಇದಕ್ಕೆ ಮೆಳ್ಳೆಗಣ್ಣು (ಸ್ಕ್ವಿಂಟ್, ಸ್ಟ್ರಬೀಸ್ಮಸ್) ಎಂದಿದೆ. ಇದನ್ನು ವಿವರಿಸುವಾಗ ಯಾವ ದಿಕ್ಕಿನದೆಂದು ಸೂಚಿಸುವುದುಂಟು. ಒಂದೊಂದು ಬಾರಿ ಒಂದೊಂದು ಕಣ್ಣು ಹೀಗೆ ತಿರುಗುವುದೋ ಯಾವಾಗಲೂ ಇರುವುದೋ ಒಂದೊಂದು ಬಾರಿ ಬರುವುದೋ ಎಂಬುದನ್ನು ಗಮನಿಸಬೇಕು.

ಎಳೆಮಕ್ಕಳಲ್ಲಿ ಮೆಳ್ಳೆಗಣ್ಣು ಕೇವಲ ಮೊಗದ ಅಂದ ಕೆಡಿಸುವುದು ಮಾತ್ರವಲ್ಲ: ಮೆಳ್ಳೆಗಣ್ಣಾಗಿದ್ದರೆ ಎರಡೂ ಕಣ್ಣುಗಳ ನಡುವೆ ಎಂದಿನ ಹೊಂದಾಣಿಕೆ ಬೆಳೆಯದು, ಬೇರೆಡೆಗೆ ತಿರುಗುವ ಕಣ್ಣಿನ ನೋಟದ ಬಲ ಕುಗ್ಗುತ್ತ ಹೋಗುತ್ತದೆ. ಒಂದೇ ಕಣ್ಣಿನ ಮಳ್ಳೆಗಣ್ಣಾಗಿದ್ದರೆ ತುಂಬ ಕೆಡುಕಾದ್ದರಿಂದ ಕೂಡಲೇ ಕಣ್ಣುವ್ಶೆದ್ಯರಿಗೆ ತೋರಿ ತಕ್ಕ ಚಿಕಿತ್ಸೆ ಮಾಡಿಸಬೇಕು.

ಕಣ್ಣುಗಳ ಚಲನೆಯ ಇನ್ನೊಂದು ಸಾಮಾನ್ಯ ಬೇನೆಯಿದೆ. ಇದರಲ್ಲಿ ಎರಡು ಕಣ್ಣುಗಳ ನೋಟವೂ ನೆಟ್ಟಗಿದ್ದು. ಬೇನೆ ಬಿದ್ದಾಗಲೂ ಬೇಸರದ ದಣಿವಾದಾಗಲೂ ಒಂದು ಕಣ್ಣು ಒಳಕ್ಕೋ ಹೊರಕ್ಕೋ ತಿರುಗುವುದು, ಉಳಿದ ಹೊತ್ತಿನಲ್ಲೆಲ್ಲ ಚೆನ್ನಾಗಿರುತ್ತದೆ. ಬಿಟ್ಟು ಬಿಟ್ಟು ತೋರುವ ಈ ಮೆಳ್ಳೆಗಣ್ಣಿನಲ್ಲಿ ಮೆದುಳಿನ ನರಕೇಂದ್ರದ ಹತೋಟಿ ಕೆಲವೇಳೆ ತಪ್ಪಿರುತ್ತದೆ.

ಬಿಟ್ಟು ಬಿಟ್ಟು ಬರುವ ಮೆಳ್ಳೆಗಣ್ಣಿಗೂ ಹೊರಗಾಣದ (ಲೇಟೆಂಟ್) ಬಗೆಯದಕ್ಕೂ ಸಂಬಂಧವಿದೆ. ಎರಡನೆಯದರಲ್ಲಿ ಒಂದು ಕಣ್ಣನ್ನು ಒಂದು ತೊಟ್ಟುಚೂರಿಂದ ಮುಚ್ಚಿದರೆ ಮೆಳ್ಳೆಗಣ್ಣು ಹೊರತೋರುವುದು. ಹೊರಗಾಣದ ಮೆಳ್ಳೆಗಣ್ಣಲ್ಲಿ ಕಣ್ಣು ತ್ರಾಸ ಇರುತ್ತದೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: