ಮೂರ್ಲೆ ನಲಿಕೆ

ವಿಕಿಪೀಡಿಯ ಇಂದ
Jump to navigation Jump to search

ನಾಗಾರಾಧನೆಯ ಒಂದು ಪ್ರಭೇದದ ಕುಣಿತ, ಇದನ್ನು ತುಳುನಾಡಿನಲ್ಲಿ ನಲಿಕೆ ಜನಾಂಗದವರು ಮಾಡುತ್ತಾರೆ.

ಹಿನ್ನೆಲೆ[ಬದಲಾಯಿಸಿ]

ಭತ್ತದ ಬೇಸಾಯವನ್ನು ನಲಿಕೆಯವರು ಒಂದು ವೃತ್ತಿಯನ್ನಾಗಿ ಪರಿಗಣಿಸದೆ ಒಂದು ಆಚರಣೆಯನ್ನಾಗಿ ನಡೆಸುತ್ತಾರೆ. ಕೆಡ್ಡೆಸವನ್ನು ಅವರು ಭೂಮಿದೇವಿಯ ಋತುಮತಿಯಾದ ಹಬ್ಬವೆಂದು ಬಗೆದರೆ ಗದ್ದೆ ಕೆಲಸದ ಮುಕ್ತಾಯ ಕಂಡಕೋರಿಯನ್ನು ಭೂಮಿದೇವಿಯ ಮದುವೆ ಎಂದು ಭಾವಿಸುತ್ತಾರೆ.

ಕಟ್ಟಲೆ[ಬದಲಾಯಿಸಿ]

ಕಂಡಕೋರಿಯ ದಿನ ಮೂರ್ಲೆ ಕೊಟ್ಯವಿರುತ್ತದೆ. ಈ ಗುಡಿಯಲ್ಲಿ ಎತ್ತರಕ್ಕೆ ಒಂದು ಹಲಗೆ ಇಟ್ಟಿರುತ್ತಾರೆ. ಈ ಹಲಗೆಯ ಮೇಲೆ ಮೂರು ಮಣ್ಣಿನ ಕಲಶಗಳಿರುತ್ತವೆ. ಅವುಗಳನ್ನು ಮೂರಿ ಎನ್ನುತ್ತಾರೆ. ಈ ಕಲಶಗಳ ಹೊರಮೈಗೆ ನಾಗನ ಹೆಡೆಯ ಚಿತ್ತಾರವಿರುತ್ತದೆ. ಈ ಕಲಶಗಳನ್ನು ತೊಳೆದು ಶುದ್ಧ ನೀರನ್ನು ತುಂಬಿ ಪೂಜಾರಿ ಪೂಜೆ ನಡೆಸುತ್ತಾನೆ. ಇದರ ಎದುರು ಭಾಗದಲ್ಲಿ ಮೂರು ಎಡೆ ಬಿಡಿಸಲಾಗುತ್ತದೆ. ನಲಿಕೆ ಹೆಂಗಸರು ಮಿಂದು ಮುಡಿಯುಟ್ಟು ಬಂದು ಕಲಶಗಳ ಮುಂದೆ ನಿಲ್ಲುತ್ತಾರೆ. ಮೂರ್ಲೆ ಪೂಜೆ ಮುಗಿದ ಬಳಿಕ ಅವರು ಮೂರ್ಲೆ ಕೊಟ್ಯದ ಎದುರು ಹಾಡು ಹೇಳಿಕೊಂಡು ತೆಂಬರೆ ಬಡಿಸುಕೊಂಡು ಕುಣಿತ ನಡೆಸುತ್ತಾರೆ. ಈ ಹಾಡಿನಲ್ಲಿ ಮೂರ್ಲೆ ಸೃಷ್ಟಿಯಾದ ಕತೆ ಇದೆ. ಕುಣಿತದಲ್ಲಿ ಕೆಲವರಿಗೆ ಆವೇಶ ಬರುತ್ತದೆ. ಕುಣಿತ ಮುಗಿದ ಬಳಿಕ ಮನೆಯ ಯಜಮಾನ ಅವರಿಗೆ ಸೀರೆಯ ಉಡುಗೊರೆ ನೀಡುತ್ತಾನೆ.

ಆಚರಣೆ ಇರುವ ಪ್ರದೇಶ[ಬದಲಾಯಿಸಿ]

ಇದು ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ.

ಉಲ್ಲೇಖ[ಬದಲಾಯಿಸಿ]