ವಿಷಯಕ್ಕೆ ಹೋಗು

ಮುಷ್ಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಷ್ಕರವು ಸಮಾನೋದ್ದೇಶ ಸಾಧನೆಗಾಗಿ ಕಾರ್ಮಿಕ ವರ್ಗ ಮತ್ತು ಇತರರು ಅನುಸರಿಸುತ್ತಿರುವ ಒಂದು ಮಾರ್ಗ (ಸ್ಟ್ರೈಕ್). ಇದನ್ನು ಸಂಪು, ಚಳವಳಿ ಎಂತಲೂ ಕರೆಯುವುದುಂಟು. ಗಾಂಧೀಜಿಯವರು ಇದನ್ನು ಸ್ವಾತಂತ್ರ್ಯ ಸಂಗ್ರಾಮದ ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಂಡು ಸತ್ಯಾಗ್ರಹವೆಂಬ ವಿಶಾಲ ಹೆಸರು ಕೊಟ್ಟರು.

ಕಾರ್ಮಿಕರು ಹಾಗೂ ಇತರರು ತಮ್ಮ ಸಂಬಳ ಹೆಚ್ಚಿಸಿಕೊಳ್ಳುವುದು, ಕೆಲಸದ ಕಾಲಾವಧಿ ಕಡಿಮೆ ಮಾಡಿಸುವುದು, ಕೆಲಸಗಾರರ ಹಕ್ಕುಗಳನ್ನು ಧನಿಗಳು ಉಲ್ಲಂಘಿಸಿದರೆ ಅವನ್ನು ಮತ್ತೆ ಸ್ಥಾಪಿಸುವುದು; ಕೆಲಸದಿಂದ ಅನ್ಯಾಯವಾಗಿ ನಿವೃತ್ತಿಗೊಳಿಸಿದವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸುವುದು, ಮಾಲೀಕರ ದಬ್ಬಾಳಿಕೆಗಳನ್ನು ಪ್ರತಿಭಟಿಸುವುದು-ಇವೇ ಮುಂತಾದ ವಿವಿಧ ಕಾರಣಗಳಿಗಾಗಿ ಮುಷ್ಕರ ನಡೆಯಬಹುದು. ಮುಷ್ಕರ ಹೂಡುವ ಕಾಲದಲ್ಲಿ ಕಾರ್ಮಿಕ ತಂಡಗಳು ಒಟ್ಟುಗೂಡಿ ತಾವು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಬಿಡುವರು. ಕಲ್ಲಿದ್ದಲು ಮುಂತಾದ ಗಣಿಗಳು, ರೈಲುಮಾರ್ಗ, ಸಮುದ್ರ ಕರಾವಳಿ, ಮುದ್ರಣಾಲಯ, ಕೃಷಿ, ವ್ಯಾಪಾರ, ಟ್ರಾಮ್ ಇತ್ಯಾದಿ ಉದ್ಯಮಗಳಲ್ಲಿ. ಉಕ್ಕು ಲೋಹ ಮತ್ತು ಬಟ್ಟೆ ತಯಾರಿಕಾ ಕಾರ್ಖಾನೆಗಳಲ್ಲಿ ಮುಷ್ಕರಗಳು ನಡೆಯಬಹುದು. ತಮ್ಮ ದೇಶದಲ್ಲಿ ಜನಪ್ರಿಯವಲ್ಲದ ಸರ್ಕಾರದ ನೀತಿಗಳನ್ನು ಖಂಡಿಸಲು, ಬೇಡವಾದ ಯುದ್ಧದ ಸಂಬಂಧವಾಗಿಯೂ ಅನೇಕ ಸಂಪುಗಳಾಗಿವೆ.

ಮುಷ್ಕರಗಳ ಆಚರಣೆಯಲ್ಲಿ ನಾನಾಬಗೆಗಳಿವೆ. ಅದರಲ್ಲಿ ಒಂದಾದ ಧರಣಿಯಲ್ಲಿ ಮುಷ್ಕರಗಾರರು ತಾವು ಕುಳಿತ ಜಾಗದಲ್ಲೇ ಪಟ್ಟಾಗಿ ಕುಳಿತುಕೊಂಡು ತಮ್ಮ ಮುಷ್ಕರ ನಡೆಸುವರು. ಇದರಲ್ಲಿ ಸಂಪುಗಾರರು ಕೆಲವುವೇಳೆ ತಾವು ಕೆಲಸ ಮಾಡುವ ಸ್ಥಳಗಳಲ್ಲೇ ಕುಳಿತು ತಮ್ಮ ಬೇಡಿಕೆ ನೆರವೇರುವ ತನಕವೂ ತಮ್ಮ ಸ್ಥಾನಗಳನ್ನು ಬಿಟ್ಟುಹೋಗುವುದಿಲ್ಲ. ಪ್ರಪಂಚದಲ್ಲಿ ಪ್ರಥಮ ಮಹಾಯುದ್ಧದ ಅನಂತರ ಇಟಲಿಯಲ್ಲಿ ಇಂಥ ಧರಣಿ ಮುಷ್ಕರ ನಡೆಯಿತು. 1930ರಲ್ಲಿ ಫ್ರಾನ್ಸಿನ ಜನರು ಇದನ್ನು ಹೆಚ್ಚಾಗಿ ಬಳಸಡಿಕೊಂಡರು. ಈ ಬಗೆಯ ಮುಷ್ಕರವನ್ನು ವಸಾಹತುಗಳ ಸ್ಥನಿಕ ಕೆಲಸಗಾರರೂ ಬಳಸಿಕೊಳ್ಳಲಾರಂಭಿಸಿದರು. 1930ರಲ್ಲೇ ಇದು ಅಮೆರಿಕಕ್ಕೂ ಹರಡಿತು. ಈ ಬತಗೆಯ ಮುಷ್ಕರ 1937ರಲ್ಲಿ ಮಿಷಿಗನ್ನಿನ ಫ್ಲಿಂಟ್ ಎಂಬಲ್ಲಿ ಜನರಲ್ ಮೋಟರ್ ಕಂಪನಿಯ ಫಿಷರ್ ಬಾಡಿ ಪ್ಲಾಂಟ್‍ಗಳಲ್ಲಿ ನಡೆಯಿತು. ಅದೇ ವರ್ಷ ಕ್ರಿಸ್ಟರ್ ಕಾರ್ಪೊರೇಷನ್ ಯಂತ್ರ ಸಮುದಾಯಗಳ ಎಂಟು ಕ್ಷೇತ್ರಗಳಲೂ ನಡೆಯಿತು. ಈ ಕಾಲದಲ್ಲೇ ಕಾಂಗ್ರೆಸ್ ಆಫ್ ಇಂಡಸ್ಟ್ರಿಯಲ್ ಆರ್ಗನೈಜೇಷನ್ ಸ್ಥಾಪನೆಯಾಗಿ ಕಾರ್ಮಿಕರಿಗೆ ಹೆಚ್ಚು ಬೆಂಬಲ ದೊರೆಯಿತು. ಮಾಲೀಕರು ಯಾವುದೇ ಒಪ್ಪಂದಕ್ಕೆ ಬರದೆ ಮುಷ್ಕರ ಬಹಳ ಕಾಲ ನಡೆದರೆ ಅದರ ಮುಂದುವರಿಕೆಯಿಂದ ಮಾಲೀಕ, ನೌಕರ ಎರಡೂ ವರ್ಗಕ್ಕೆ ನಷ್ಟ ಸಂಭವಿಸುವ ಸಮಯದಲ್ಲಿ ಎರಡೂ ಕಡೆಯ ಒಳಿತಿಗಾಗಿ ಮತ್ತು ಸೌಹಾರ್ದಯುತ ಸಮಸ್ಯೆ ಬಗೆಹರಿಸಲು ಸರ್ಕಾರ ಪಂಚಾಯತರನ್ನು ನೇಮಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬಹುದು.

ಮುಷ್ಕರಗಾರರು ಬಲು ನಿಧಾನವಾಗಿ ಕೆಲಸ ಮಾಡುತ್ತಾ ಮಾಲೀಕರಿಗೆ ನಷ್ಟ ಉಂಟುಮಾಡುವುದು ಒಂದು ಬಗೆಯಾದರೆ ಮನಸ್ಸು ಬಂದಂತೆ ಕೆಲಸ ಮಾಡುತ್ತಾ, ನಿಲ್ಲಿಸುತ್ತಾ ಮಾಲೀಕರನ್ನು ಕಾಡಿಸುವುದೂ ಮತ್ತೊಂದು ಬಗೆಯಾಗಿದೆ. ಕೆಲವು ವೇಳೆ ಕಾರ್ಮಿಕರ ಪಕ್ಷಗಳಲ್ಲೆ ಮತಭೇದವೇರ್ಪಟ್ಟು ಅವರ ಮುಷ್ಕರ ಫಲಪ್ರದವಾಗದೆ ನಿಲ್ಲುವುದೂ ಉಂಟು. ಉದ್ರಿಕ್ತ ಕಾರ್ಮಿಕರು ಕೆಲವು ವೇಳೆ ಕಾರ್ಖಾನೆಗೆ ನಷ್ಟವುಂಟುಮಾಡುವ ಸಂದರ್ಭ ಬಂದರೆ ಮಾಲೀಕರು ಬೀಗಮುದ್ರೆ ಘೋಷಿಸುತ್ತಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮುಷ್ಕರ&oldid=1057548" ಇಂದ ಪಡೆಯಲ್ಪಟ್ಟಿದೆ