ಮುರುಡ್- ಜಂಜೀರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Murud-Janjira
ಮುರುಡ್- ಜಂಜೀರಾ
ಮುರುಡ್- ಜಂಜೀರಾ ಭವ್ಯ ನೋಟ

ಮುರುಡ್- ಜಂಜೀರಾ ಮಹಾರಾಷ್ಟ್ರಾ ರಾಜ್ಯದ ರಾಯಗಡ ಜಿಲ್ಲೆಯ ಸಮುದ್ರ ತೀರದ ಒಂದು ಹಳ್ಳಿ. ಇಲ್ಲಿ ಸಮುದ್ರ ಮದ್ಯದಲ್ಲಿ ದ್ವೀಪದಂತಹ ಐತಿಹಾಸಿಕ ಕೋಟೆಯೊಂದು ಇದ್ದು ಇಲ್ಲಿನ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.

ಹೆಸರಿನ ಮೂಲ[ಬದಲಾಯಿಸಿ]

ಮೂಲ ಅರೇಬಿಕ್ ಭಾಷೆಯಲ್ಲಿ 'ಜಜೀರಾ' ಎಂದರೆ ದ್ವೀಪ ಎಂದರ್ಥ. ಅದರಿಂದಲೇ ಈ ದ್ವೀಪ ಕೋಟೆಗೆ ಜಂಜೀರಾ ಕೋಟೆ ಎಂಬ ಹೆಸರು ಬಂದಿದೆ. ಕೊಂಕಣಿ ಭಾಷೆಯಲ್ಲಿ ಮೊರೋಡ್ ಎಂಬ ಪದ ಬಳಕೆಯಲ್ಲಿದ್ದು ಇದರಿಂದಾಗಿಯೇ ಮುರುಡ್ ಎಂಬ ಹೆಸರು ಬಂದಿರಬಹುದು.

ಕೋಟೆಯ ವಿಶೇಷತೆಗಳು[ಬದಲಾಯಿಸಿ]

ದಕ್ಷಿಣ ಮುಂಬೈನಿಂದ ೧೬೫ ಕಿ ಮೀ ದೂರವಿರುವ ಬಂದರು ನಗರ ಮುರುಡ್ ಬಳಿಯಿರುವ ಅರಬ್ಬೀ ಸಮುದ್ರದಲ್ಲಿರುವ ಕಲ್ಲಿನಿಂದ ಕೂಡಿದ ಎತ್ತರ ಪ್ರದೇಶದ ಮೇಲೆ ಕೋಟೆ ಕಟ್ಟಲಾಗಿದೆ. ಸುತ್ತಲೂ ಸಮುದ್ರವಿದ್ದು ಶತ್ರುಗಳ ದಾಳಿ ಬರಿ ಜಲ ಮಾರ್ಗದ ಮೂಲಕ ಅಥವಾ ವೈಮಾನಿಕವಾಗಿ ಮಾಡಬಹುದಾಗಿದೆ. ಕೋಟೆ ಕಟ್ಟಿದ ಕಾಲಕ್ಕೆ ವೈಮಾನಿಕ ಅನುಕೂಲಗಳು ಇಲ್ಲದಿದ್ದ ಕಾರಣ ಬರಿಯ ಜಲ ಮಾರ್ಗವೊಂದೇ ದಾಳಿ ಮಾಡಲು ಮಾರ್ಗವಾಗಿತ್ತು. ಆದರೂ ಫಿರಂಗಿ, ತುಪಾಕಿ ಗಳು ಟನ್ನುಗಟ್ಟಲೆ ಭಾರವಿರುತ್ತಿದ್ದ ಕಾರಣ ಅವುಗಳನ್ನು ಕೋಟೆಯ ಬಳಿ ಸಾಗಿಸುವುದು ದುಸ್ಸಾಹಸ ಆಗುತ್ತದೆ. ಈ ಕೋಟೆ ಭಾರತದ ಪ್ರಮುಖ ಜಲಾಂತರ್ಗಾಮಿ ಕೋಟೆ ಎನ್ನುವುದು ಗಮನಾರ್ಹ.

ಕೋಟೆಯು ನೀರಿನಿಂದ ಆವೃತವಾಗಿದ್ದು ಸುಲಭವಾಗಿ ಹತ್ತಲು ಸಾಧ್ಯವಾಗದಷ್ಟು ಎತ್ತರದ ಗೋಡೆಗಳನ್ನು ಹೊಂದಿದೆ. ಈ ಕೋಟೆಯ ವಾಸ್ತುಶಿಲ್ಪ ವಿಭಿನ್ನವಾಗಿರುವುದು ಕೋಟೆಯ ಮುಖ್ಯ ದ್ವಾರ ರಚನೆಯಲ್ಲಿ. ದೂರದಿಂದ ನೋಡಿದ ಮಾತ್ರಕ್ಕೆ ಕೋಟೆಯ ದ್ವಾರವು ಕಾಣಿಸುವುದಿಲ್ಲ. ತೀರಾ ಹತ್ತಿರಕ್ಕೆ ಹೋದಾಗ ಮಾತ್ರ ಕೋಟೆಯ ದ್ವಾರದ ಇರುವಿಕೆ ಗೊತ್ತಾಗುತ್ತದೆ. ಕೋಟೆಯ ಒಳಗಿನಿಂದ ಹೊರಗೆ ಬರಲು ಗುಪ್ತ ಸುರಂಗ ಮಾರ್ಗವು ಒಂದು ಇದ್ದು ಸುಮುದ್ರ ನೀರಿನ ಕೆಳಗೆ ಸುರಂಗ ಸಾಗುತ್ತದೆ ಹಾಗು ಅದು ಕಡಲ ತಡಿಗೆ ತೆರೆದುಕೊಳ್ಳುತ್ತದೆ. ಭದ್ರತಾ ಕಾರಣಗಳಿಗಾಗಿ ಆ ಸುರಂಗವನ್ನು ಈಗ ಪ್ರವೇಶ ನಿಷೇಧ ವಲಯ ಮಾಡಲಾಗಿದೆ.

ಕೋಟೆಯ ಎಲ್ಲ ಸರಹದ್ದು ಗೋಡೆಗಳ ಮೇಲೆ ಫಿರಂಗಿಗಳನ್ನು ಇರಿಸಲಾಗಿದೆ. ಅದರಲ್ಲಿ ಕೆಲವು ಫಿರಂಗಿಗಳು ಈಗಲೂ ಅಲ್ಲೇ ಇವೆ. ಕೋಟೆಯ ಗೋಡೆಗಳಲ್ಲಿ ರಹಸ್ಯ ಕಿಂಡಿಗಳಿದ್ದು ಶತ್ರುಗಳ ಸಂಭವನೀಯ ದಾಳಿಗಳನ್ನು ಅವರಿಗೇ ತಿಳಿಯದಂತೆ ಕಣ್ಗಾವಲು ಇಡಲು ಅನುಕೂಲವಾಗಿವೆ. ಕೋಟೆಯೊಳಗೆ ಸಿಹಿನೀರಿನ ಕೊಳ, ಅಧಿಕಾರಿಗಳಿಗೆ ತಂಗುದಾಣವಾಗಿದ್ದ ಸ್ಥಳಗಳು, ಭವ್ಯ ಸಭಾ ಭವನ, ಮಸೀದಿ ಮುಂತಾದವುಗಳಿದ್ದು ಇದೀಗ ಅವೆಲ್ಲವೂ ನಾಮಾವಶೇಷ ಸ್ಥಿತಿಯಲ್ಲಿವೆ. ಇಲ್ಲಿರುವ ಸಭಾ ಭವನವು ಹಲವಾರು ಮಹಡಿಗಳನ್ನು ಹೊಂದಿತ್ತು ಎನ್ನಲು ಇನ್ನೂ ಉಳಿದಿರುವ ಅದರ ಒಂದು ಭಾಗ ಸಾಕ್ಷಿಯಾಗಿದೆ.

ಕೋಟೆಯ ಮುಖ್ಯ ದ್ವಾರದಲ್ಲಿ ಒಳಗೆ ಬರುವಾಗ ಎದುರಿಗೆ ಸಿಗುವ ಗೋಡೆಯ ಮೇಲೆ ಸಿಂಹವೊಂದು ಐದು ಆನೆಗಳ ಮೇಲೆ ಎರಗಿರುವಂತೆ ಚಿತ್ರಿಸಲಾಗಿದೆ. ಆ ಆನೆಗಳು ಛತ್ರಪತಿ ಶಿವಾಜಿ ಮಹಾರಾಜರ ಕಡು ವೈರಿಗಳನ್ನು ಹೋಲಿಕೆ ಮಾಡಿದ್ದಾಗಿವೆ. ಆದಿಲ್ ಶಾಹಿಗಳು, ಕುತಬ್ ಶಾಹಿಗಳು, ಮುಘಲ್ ಶಾಹಿಗಳು, ನಿಜಾಮ್ ಶಾಹಿಗಳೇ ಆ ಬದ್ಧ ವೈರಿಗಳು. ಕೋಟೆಯ ಪ್ರಮುಖ ದ್ವಾರಗಳ ಮೇಲೆ ಅಶೋಕ ಚಕ್ರವನ್ನು ಕಡೆಯಲಾಗಿದೆ. ಇನ್ನುಳಿದಂತೆ ಅಲ್ಲಲ್ಲಿ ಆಡುತ್ತಿರುವ ಆನೆ, ಸಿಂಹಗಳ ಕಲಾಕೃತಿಯನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ.

ಇತಿಹಾಸ/ರಾಜಕೀಯ[ಬದಲಾಯಿಸಿ]

ನಿಜಾಂಶದಲ್ಲಿ ಈ ಕೋಟೆ ಯನ್ನು ಸುಮಾರು ಹದಿನೈದನೇ ಶತಮಾನದಲ್ಲಿ 'ರಾಜಾ ರಾಮ್ ಪಾಟಿಲ್' ಎಂಬ ಒಬ್ಬ ಮರಾಠ ಮೀನುಗಾರ ತನ್ನ ಜನರನ್ನು ದಾಳಿಗಳಿಂದ ರಕ್ಷಿಸಿಕೊಳ್ಳಲು ಕಟ್ಟಿಸಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಆಗಿನ ಅಹ್ಮದ್ನಗರ ದೊರೆಗಳಾದ ನಿಜಾಮರು ಈ ಕೋಟೆಯನ್ನು ಆಕ್ರಮಿಸಿಕೊಳ್ಳಲು ತನ್ನ ಸೇನಾ ದಂಡ ನಾಯಕನಾದ ಹಾಗು ಸಿದ್ಧಿಗಳ ಪ್ರಮುಕನೂ ಆದ 'ಫಿರಂ ಖಾನ್'ನಿಗೆ ಕಟ್ಟಾಜ್ಞೆ ಹೊರಡಿಸುತ್ತಾರೆ. ಕೂಡಲೇ ಆತನು ಕೆಲವು ಹಡಗು, ಸೇನಾ ತುಕಡಿ ಹಾಗೂ ಯುದ್ಧ ಸಾಮಗ್ರಿಗಳೊಂದಿಗೆ ಬಂದು ಜಂಜೀರಾ ದ್ವೀಪ ಕೋಟೆಯನ್ನು ಸುತ್ತುವರಿಯುತ್ತಾನೆ ಅಷ್ಟೇ ಅಲ್ಲದೆ ನೀರು ಕುಡಿದಷ್ಟು ಸುಲಭವಾಗಿ ಕೋಟೆಯನ್ನು ಆಕ್ರಮಿಸಿ ಕೊಳ್ಳುತ್ತಾನೆ. ಇದಾದ ಮೇಲೆ ಅಲ್ಲೇ ನಿಂತ ಫಿರಂ ಖಾನ್ ಅಲ್ಲಿ ಅದಾಗಲೇ ಇದ್ದ ಕೋಟೆಯನ್ನು ನಾಶಪಡಿಸಿ ಕಲ್ಲು ಮತ್ತು ಅರೆದ ಗಾರೆಗಳಿಂದ ಬಲಿಷ್ಟವಾದ ಕೋಟೆಯನ್ನು ನಿರ್ಮಿಸುತ್ತಾನೆ ಹಾಗು ಸಿದ್ಧಿಗಳ ಅಧಿಕೃತ ತಾಣವನ್ನಾಗಿಯೂ ಮಾಡಿಕೊಳ್ಳುತ್ತಾನೆ. ಮುಂದೆ ಸಿದ್ಧಿಗಳು ಮತ್ತು ಮೊಘಲರು ಮೈತ್ರಿ ಮಾಡಿಕೊಂಡು ಈ ಕೋಟೆಯ ರಕ್ಷಣೆಗಾಗಿ ನಿಲ್ಲುತ್ತಾರೆ. ಹಾಗಾಗಿ ಇದರ ಮೇಲೆ ಆಸೆ ಇಟ್ಟಿದ್ದ ಬ್ರಿಟೀಷರು, ಡಚ್ಚರು ಮತ್ತು ಮರಾಠರು ನಿರಾಸೆಯಾಗಬೇಕಾಯಿತು.

೧೭೩೬ರಲ್ಲಿ ಮರಾಠರ ಪೇಶ್ವೆ ಬಾಜಿರಾಯನು ಸಿದ್ಧಿಗಳ ಮೇಲೆ ಯುದ್ಧ ಸಾರಿದನು. ಮರಾಠ ಸೇನಾ ದಂಡ ನಾಯಕ ಚಿಮಾಂಜಿ ಅಪ್ಪಾ ಎನ್ನುವರು 'ರಿವಾಸ್ ಕದನ'ದಲ್ಲಿ ಸಿದ್ಧಿಗಳ ಎಲ್ಲಾ ಭದ್ರ ಕೋಟೆಗಳ ಮೇಲೂ ಆಘಾತಕಾರಿ ದಾಳಿಗಳನ್ನೆಸಗಿದ. ಕಡೆಗೆ ಸಿದ್ಧಿಗಳ ನಾಯಕ ಪ್ರಮುಖರ ಹತ್ಯೆಯಾಗಿ ಸಿದ್ಧಿಗಳು ಶರಣಾಗತಿ ಬಯಸಿದಾಗ ಮರಾಠ ಸಾಮ್ರಾಜ್ಯ ಅವರಿಗೆ ಜಂಜೀರಾ ಕೋಟೆ, ಗೋವಲ ಕೋಟೆ, ಮತ್ತು ಅನ್ಜನವೆಲ್ಲು ಗಳನ್ನೂ ವಾಸಕ್ಕಾಗಿ ಕೊಟ್ಟಿತು. ಹೀಗೆ ಸಿದ್ಧಿಗಳ ಪ್ರಾಬಲ್ಯ ಕ್ರಮೇಣ ಅಳಿಯಿತು.

ಸಿದ್ಧಿಗಳ ಆಡಳಿತದಲ್ಲಿ ಈ ಕೋಟೆ ಇದ್ದಾಗ ಸ್ವತಹ ಶಿವಾಜಿ ಮಹಾರಾಜರೇ ಈ ಕೋಟೆಯ ಮೇಲೆ ದಾಳಿ ಮಾಡಿದರೂ ಹನ್ನೆರಡು ಮೀಟರ್ ಎತ್ತರವಿರುವ ಕೋಟೆಯ ಗೋಡೆಯನ್ನು ಏರಲು ಸಾಧ್ಯವಾಗಿರಲಿಲ್ಲ. ಕಾಲಾನಂತರ ಶಿವಾಜಿ ಮಹಾರಾಜರ ಮಗ ಸಂಭಾಜಿ ಕೂಡ ಅಂತಹುದೇ ಪ್ರಯತ್ನ ಮಾಡಿದರೂ ಸಫಲರಾಗಿರಲಿಲ್ಲ. ಮುಂದೆ ಸಂಭಾಜಿ ೧೬೭೬ರಲ್ಲಿ ಜಂಜೀರಾದಿಂದ ನೈಋತ್ಯ ದಿಕ್ಕಿಗೆ ಜಂಜೀರಾ ಕೋಟೆಗೆ ಸವಾಲಾಗಿ ಪದ್ಮ ದುರ್ಗ ಎಂಬ ಕೋಟೆಯನ್ನು ಕಟ್ಟಿಸುತ್ತಾರೆ. ಆ ಕೋಟೆಯನ್ನು ಖಾಸಗಿ ಕೋಟೆ ಎಂತಲೂ ಕರೆಯುತ್ತಾರೆ. ಇದೀಗ ಈ ಪದ್ಮದುರ್ಗ ಕೋಟೆ ಭಾರತೀಯ ಜಲ ಸೇನೆಯ ಆಡಳಿತದಲ್ಲಿದ್ದು ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಭಂದಿಸಲಾಗಿದೆ.

ಮುರುಡ್- ಜಂಜೀರಾ