ವಿಷಯಕ್ಕೆ ಹೋಗು

ಮುದ್ದಮ್ಮ ದೇವಾಲಯ, ಏಳಗಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಶ್ರೀ ತಾಯಿ ಮುದ್ದಮ್ಮ ದೇವಾಲಯ ಕನಕಪುರದಿಂದ ೨೩ಕಿ.ಮೀ ದೂರದ ಏಳಗಳ್ಳಿಯಲ್ಲಿದೆ. ಇಲ್ಲಿಯ ದೇವಿಯ ಪ್ರಸಾದ ತಲ್ಲೆಯಲ್ಲಿ ಗಾಯ(ನಾಗರ)ಹಾಗೂ ಹಾವು ಕಡಿದವರಿಗೆ ಮದ್ದು ಎಂಬ ನಂಬಿಕೆ ಇದೆ.


ಶ್ರೀ ತಾಯಿಮುದ್ದಮ್ಮ ದೇವಸ್ಥಾನ ಏಳಗಳ್ಳಿ

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಬರುವ ಗ್ರಾಮವೇ ಏಳಗಳ್ಳಿ. ಇಲ್ಲಿನ ಶ್ರೀ ತಾಯಿಮುದ್ದಮ್ಮನ ದೇವಸ್ಥಾನ ಪ್ರಸಿದ್ಧವೂ ಪವಿತ್ರವೂ ಆಗಿದೆ. ಇಲ್ಲಿನ ವಿಶೇಷವೇನೆಂದರೆ ಯಾವುದೇ ರೀತಿಯ ನಾಗರು ಚರ್ಮರೋಗ ಮತ್ತು ಕುಷ್ಠರೋಗದಂತಹ ಮಹಾರೋಗಗಳು ಇಲ್ಲಿನ ದೇವಾಲಯಕ್ಕೆ ಬಂದರೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.


ಏಳಗಳ್ಳಿ ಶ್ರೀ ತಾಯಿಮುದ್ದಮ್ಮ ದೇವಿಯ ದೇವಾಲಯದ ಪರಿಚಯ ಸಮಸ್ತ ಭಕ್ತಕೋಟಿಗೆ -

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಏಳಗಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ತಾಯಿಮುದ್ದಮ್ಮನವರ ದೇವಾಲಯ ಇಡೀ ರಾಮನಗರ ಜಿಲ್ಲೆಯಲ್ಲೇ ಪ್ರಸಿದ್ದಿ ಹೊಂದಿದೆ. ಈ ದೇವಾಲಯವು ಎಲ್ಲಾ ರೀತಿಯ ಕುಷ್ಠರೋಗ, ಚರ್ಮರೋಗ, ನಾಗರು, ಮಕ್ಕಳ ತಲೆಯ ಗಾಯಗಳನ್ನು ವಾಸಿಮಾಡಲು ಹೆಸರುವಾಸಿಯಾಗಿದೆ.

ದೇವಾಲಯದ ಐತಿಹ್ಯ -

ಹಿಂದೆ ಮುದ್ದಪ್ಪ ಒಡೆಯರು ಎಂಬ ಶರಣರು ಅಣ್ಣನಾದ ಮಲ್ಲಪ್ಪ ಒಡೆಯ ಎಂಬುವವರ ಜೊತೆ ಕೌಟುಂಬಿಕ ಕಲಹ ಮಾಡಿಕೊಂಡ ಹಿನ್ನೆಲೆ ಪತ್ನಿ ಶಿವಾಂಬಿಕೆಯ ಜೊತೆ ತಮ್ಮ ಗ್ರಾಮ ತೊರೆದು ದಕ್ಷಿಣ ಕರ್ನಾಟಕದ ಭಾಗಕ್ಕೆ ಬರುತ್ತಾರೆ. ಆದರೆ ಅವರಿಗೆ ಮಕ್ಕಳಿಲ್ಲದ ಕಾರಣ ಭಾರತ ದೇಶದ ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶನ ಮಾಡಿದರೂ ಅವರಿಗೆ ಮಕ್ಕಳ ಫಲ ದೊರೆಯುವುದಿಲ್ಲ. ನಂತರ ಅವರು ನಂಜನಗೂಡು ಮುಡುಕುತೊರೆ ಮೊದಲಾದ ಕ್ಷೇತ್ರ ದರ್ಶನ ಮಾಡಿದರೂ ಸಹ ಮಕ್ಕಳ ಫಲ ಲಭಿಸುವುದಿಲ್ಲ. ಇದರಿಂದ ಮುದ್ದಪ್ಪ ಒಡೆಯರು ತಮ್ಮ ಪತ್ನಿಯಾದ ಶಿವಾಂಬಿಕೆಯ ಜೊತೆ ಕಾವೇರಿ ನದಿ ತೀರದಲ್ಲಿ ಸಂಚಾರ ಮಾಡುತ್ತಾ ಕನಕಪುರ ತಾಲೂಕಿನ ಸಂಗಮಕ್ಕೆ ಬಂದು ರಾತ್ರಿಯಾದ ಕಾರಣ ಅಲ್ಲಿಯೇ ಒಂದು ಕಾಡಿನ ಬಳಿ ಸೊಪ್ಪಿನ ಗುಡಿಸಲು ಹಾಕಿ ರಾತ್ರಿ ಕಳೆಯಲು ತೀರ್ಮಾನಿಸುತ್ತಾರೆ. ಆ ರಾತ್ರಿ ಅವರಿಗೆ ಓಂಕಾರ ನಾದ ಕೇಳಿಬರುತ್ತದೆ. ಇದನ್ನು ಕೇಳಿ ಅವರು ಕುತೂಹಲದಿಂದ ಏನಿರಬಹುದು ಎಂದು ಹುಡುಕುತ್ತಾ ಬರಲು ಅವರು ಹಿರೇ ಮಡಿವಾಳ ಗ್ರಾಮದ ಕಾಡಿನ ಮಧ್ಯೆ ಇದ್ದ ಪ್ರಾಚೀನ ದೇಗುಲ ಶಿವನಂಕಾರೇಶ್ವರ ಸ್ವಾಮಿಯ ದೇವಾಲಯ ಕಾಣುತ್ತಾರೆ. ಅಲ್ಲಿ ಸ್ವಾಮಿಯು ಓಂಕಾರ ನಾದ ಮಾಡುತ್ತಿರುತ್ತಾರೆ. ಶಿವನ ದರ್ಶನ ಮಾಡಿದ ಶರಣ ದಂಪತಿಗಳು ಸಂತೋಷಭರಿತರಾಗಿ ಶಿವನಿಗೆ ವಂದಿಸುತ್ತಾರೆ. ಅವರು ತಮಗೆ ಮಕ್ಕಳಿಲ್ಲ ಎಂದು ತಮ್ಮ ಕಷ್ಟವನ್ನು ಸ್ವಾಮಿಯ ಮುಂದೆ ತೋಡಿಕೊಳ್ಳಲು ಶಿವನಂಕಾರೇಶ್ವರ ಸ್ವಾಮಿಯು ಅವರಿಗೆ ಗಂಡು ಮಗನ ಫಲ ದೊರೆಯಲಿ ಎಂದು ಆಶೀರ್ವದಿಸುತ್ತಾನೆ. ಹಾಗೂ ಶರಣ ದಂಪತಿಗಳು ತಮಗೆ ಒಂದು ನೆಲೆ ನೀಡಬೇಕು ಎಂದು ಬೇಡಲು ಸ್ವಾಮಿಯು ತನ್ನ ಬಳಿ ಇದ್ದ ಏಳು ತಲೆಯ ಸರ್ಪವನ್ನು ಕರೆದು ಅವರಿಗೆ ನೆಲೆ ತೋರಲು ಆಜ್ಞಾಪಿಸುತ್ತಾನೆ. ಶಿವನ ಅಣತಿಯ ಪ್ರಕಾರ ಏಳು ಹೆಡೆಯ ಸರ್ಪವು ಶರಣ ದಂಪತಿಗಳ ಜೊತೆ ಸೇರಿ ಮುಂದೆ ತೆರಳುತ್ತದೆ. ಸರ್ಪವು ಮುಂದೆ ಮುಂದೆ ಹೋಗುತ್ತಾ ಒಂದಷ್ಟು ದೂರ ಕ್ರಮಿಸಿ ಒಂದು ಗ್ರಾಮದಲ್ಲಿ ಆ ಸರ್ಪವು ಒಂದು ಏಳುಬಾಯಿ ಹುತ್ತವನ್ನು ಕಂಡು ಅದರೊಳಗೆ ಹೊಕ್ಕು ಇದೇ ನಿಮ್ಮ ನೆಲೆ ಎಂದು ತಿಳಿಸುತ್ತದೆ. ಹೀಗೆ ಅವರಿಗೆ ನೆಲೆ ತೋರಿದ ಗ್ರಾಮವೇ ಏಳಗಳ್ಳಿ.

ಅವರು ಏಳಗಳ್ಳಿ ಗ್ರಾಮದಲ್ಲಿ ನೆಲೆಯಾಗಿ ಒಂಬತ್ತು ತಿಂಗಳು ಕಳೆದ ನಂತರ ಒಂದು ಗಂಡು ಮಗು ಜನಿಸುತ್ತದೆ. ಆ ಮಗುವಿಗೆ ಶಿವನಂಕಾರೇಶ್ವರ ಸ್ವಾಮಿಯ ಹೆಸರನ್ನು ಹಿಡಿದು ತಾಯಿ ಶಿವಾಂಬಿಕೆ ಹೆಸರು ಹಿಡಿದು ಶಿವಪ್ಪ ಒಡೆಯರು ಎಂದು ನಾಮಕರಣ ಮಾಡುತ್ತಾರೆ. ಆ ಮಗು ಬೆಳೆಯುತ್ತಾ ಇರಬೇಕಾದರೆ ಅವರಿಗೆ ತಮಗೊಂದು ಹೆಣ್ಣು ಮಗು ಬೇಕೆಂಬ ಬಯಕೆ ಉಂಟಾಗಿ ಶಿವನಂಕಾರೇಶ್ವರ ಸ್ವಾಮಿಯ ಬಳಿ ಹೋಗಿ ತಮ್ಮ ಇಚ್ಛೆಯನ್ನು ಹೇಳಲು ಶಿವನು ತನ್ನ ಮತ್ತೊಂದು ರೂಪವಾದ ಶಿವಗಿರಿ ಕ್ಷೇತ್ರದಲ್ಲಿ ನೆಲೆಯಾಗಿರುವ ಶ್ರೀ ಶಿವಾಲ್ದಮೂರ್ತಿಯ ಬಳಿ ಕೇಳಲು ಹೇಳಿ ಕಳಿಸುತ್ತಾನೆ. ಆಗ ಆ ದಂಪತಿಗಳು ಕನಕಪುರ ತಾಲೂಕಿನ ಶಿವಗಿರಿ ಕ್ಷೇತ್ರ ಶ್ರೀ ಶಿವಾಲ್ದಪ್ಪನ ಬೆಟ್ಟಕ್ಕೆ ಬಂದು ಶಿವನ ಬಳಿ ತಮಗೆ ಒಂದು ಹೆಣ್ಣು ಸಂತಾನ ಬೇಕು ಎಂದು ಬೇಡಲು ಶಿವಾಲ್ದಾಮೂರ್ತಿಯು ಒಂದು ವಿಭೂತಿಯನ್ನು ಪ್ರಸಾದವನ್ನಾಗಿ ನೀಡಿ ಕಳಿಸುತ್ತಾನೆ. ಇದಾದ ಒಂಬತ್ತು ತಿಂಗಳ ಬಳಿಕ ಬಳಿಕ ಹೆಣ್ಣು ಮಗುವೊಂದಕ್ಕೆ ತಾಯಿ ಶಿವಾಂಬಿಕೆಯು ಜನ್ಮ ಕೊಡುತ್ತಾಳೆ. ಆ ಮಗುವಿಗೆ ತಂದೆ ಮುದ್ದಪ್ಪ ಒಡೆಯರ ಹೆಸರು ಹಿಡಿದು ತಾಯಿಮುದ್ದಮ್ಮ ಎಂದು ನಾಮಕರಣ ಮಾಡುತ್ತಾರೆ.

ಹೀಗೆ ಮಕ್ಕಳು ಬೆಳೆಯುತ್ತಾ ಇರುವಾಗ ಒಂದು ದಿನ ಆ ಶರಣ ದಂಪತಿಗಳು ಲಿಂಗೈಕ್ಯರಾಗುತ್ತಾರೆ. ಆಗ ಅಣ್ಣ ತಂಗಿ ಇಬ್ಬರೇ ತಮ್ಮ ಜೀವನ ಕಳೆಯುತ್ತಿರುತ್ತಾರೆ. ತಾಯಿಮುದ್ದಮ್ಮನು ಮಹಾ ಶಿವಶರಣೆ ಅನೇಕ ಪವಾಡ ಮಾಡುವ ಶಕ್ತಿಯನ್ನು ಶಿವನ ಆಶೀರ್ವಾದ ಬಲದಿಂದ ಸಂಪಾದಿಸಿಕೊಂಡಿರುತ್ತಾಳೆ. ತಾಯಿಮುದ್ದಮ್ಮನ ನಿತ್ಯ ಕಾಯಕ ಏನೆಂದರೆ ಪ್ರತಿದಿನ ಕನಕಪುರ ತಾಲೂಕಿನ ಕಾವೇರಿ ನದಿಯ ಸಂಗಮದಲ್ಲಿ ಸ್ನಾನ ಮಾಡಿ ಸರ್ಪವನ್ನು ಸಿಂಬಿಯ ಮಾಡಿ ಮರಳಿನಲ್ಲಿ ಬಿಂದಿಗೆ ಮಾಡಿ ಶಿವಾಲ್ದಾಮೂರ್ತಿ ಸನ್ನಿಧಾನಕ್ಕೆ ಶಿವಪೂಜೆಗೆ ನೀರು ತರುವುದು. ಇದರಿಂದ ತಾಯಿಮುದ್ದಮ್ಮ ಅಪಾರ ಶಕ್ತಿಸಂಪನ್ನೆ ಆಗಿರುತ್ತಾಳೆ. ಶಿವನಂಕಾರೇಶ್ವರ ಹಾಗೂ ಶಿವಾಲ್ದಾಮೂರ್ತಿ ದೇವರುಗಳ ಆಶೀರ್ವಾದ ಬಲದಿಂದ ಅನೇಕ ಪವಾಡ ಮಾಡುವ ಶಕ್ತಿ ಹೊಂದಿರುತ್ತಾಳೆ.

ಹೀಗಿರುವಾಗ ಒಂದು ದಿನ ಏಳಗಳ್ಳಿಯ ಬಳಿ ಇದ್ದ ಮಾದರಹಳ್ಳಿ ಎಂಬ ಗ್ರಾಮದಲ್ಲಿ ಮಾದಯ್ಯ ಎಂಬ ಶರಣನೊಬ್ಬ ಇದ್ದನು. ಅವನ ಕಾಯಕ ಎಲ್ಲಾ ಶಿವಾಲಯಗಳಿಗೆ ವಿಭೂತಿ ತಯಾರಿಸಿ ಕೊಡುವ ಕಾಯಕ. ಇದರಿಂದ ಅವನ ಹೆಸರು ವಿಭೂತಿಗಟ್ಟಿ ಮಾದಯ್ಯ. ಒಂದು ದಿನ ಅವನ ಹೆಂಡತಿ ಮಕ್ಕಳಿಗೆ ಬೆನ್ನುಪಿಣೆ ರೋಗವು ಬರುತ್ತದೆ. ಆಗ ಆ ಶರಣನು ಶಿವಾಲ್ದಾಮೂರ್ತಿಯ ಬಳಿ ತನ್ನ ಕಷ್ಟ ನಿವೇದಿಸಿಕೊಳ್ಳಲು ಶಿವನು ತನ್ನ ಶರಣೆಯಾದ ಮುದ್ದಮ್ಮನ ಬಳಿ ಕಷ್ಟ ಹೇಳಿಕೋ ಅವಳೇ ನಿನ್ನ ಕಷ್ಟ ಪರಿಹರಿಸುತ್ತಾಳೆ ಎಂದು ಹೇಳುತ್ತಾನೆ. ಆಗ ಶಿವಪೂಜೆಗೆ ಸಂಗಮದಿಂದ ನೀರು ತರುತ್ತಿದ್ದ ತಾಯಿ ಮುದ್ದಮ್ಮನನ್ನು ಕಂಡು ಅವಳ ಪಾದ ಹಿಡಿದು ತನ್ನ ಕಷ್ಟ ಹೇಳಿಕೊಳ್ಳಲು ತಾಯಿಯು ತನಗೆ ಏನು ಹರಕೆ ಮಾಡಿಕೊಳ್ಳುವೆ ಎಂದು ಕೇಳಲು ಮಾದಯ್ಯನು ಇನ್ನು ಮುಂದೆ ಶಿವಪೂಜೆಗೆ ನೀರು ತರಲು ಒಂದು ಕೊಳ ಕಟ್ಟಿಸಿಕೊಡುತ್ತೇನೆ ಎಂದು ಬೇಡಿಕೊಳ್ಳುತ್ತಾನೆ. ಆಗ ತಾಯಿಯು ಮೊದಲು ಕೊಳ ಕಟ್ಟಿಸು, ಅದರ ತೀರ್ಥದಿಂದ ನಿನ್ನ ಹೆಂಡತಿ ಮಕ್ಕಳ ಬೆನ್ನುಪಿಣೆ ರೋಗ ವಾಸಿಯಾಗುತ್ತದೆ ಎಂದು ಹೇಳಲು ಮಾದಯ್ಯ ಒಂದು ಕೊಳವನ್ನು ಏಳಗಳ್ಳಿಯ ಬಳಿ ಕಟ್ಟಿಸಿಯೇ ಬಿಡುತ್ತಾನೆ. ಆ ಕೊಳದಿಂದ ಕಾವೇರಿ ನೀರು ಉಕ್ಕಿ ಬರಲು ಅದನ್ನು ತೀರ್ಥವಾಗಿ ತೆಗೆದುಕೊಂಡು ಮಾದಯ್ಯ ತನ್ನ ಹೆಂಡತಿ ಮಕ್ಕಳಿಗೆ ನೀಡಲು ಅವರ ಬೆನ್ನುಪಿಣೆ ರೋಗ ವಾಸಿಯಾಗುತ್ತದೆ. ಆಗ ಅವನು ತಾಯಿಗೆ ಮಹಾ ಭಕ್ತನಾಗುತ್ತಾನೆ. ಆಗ ಆ ಕೊಳದಿಂದ ತಾಯಿಯು ಶಿವಾಲ್ದಮೂರ್ತಿಗೆ ತೀರ್ಥ ತಂದು ಕೊಡಲು ಶಿವನು ಇನ್ನು ಮುಂದೆ ನೀನು ಲೋಕಕ್ಕೇ ದೇವರಾಗುವೆ. ನಿನ್ನ ಸನ್ನಿಧಾನಕ್ಕೆ ಬರುವ ಭಕ್ತರ ಸಕಲ ಕಷ್ಟಗಳನ್ನು, ರೋಗಗಳನ್ನು ನಿವಾರಿಸಿ ಸಕಲ ಭಕ್ತರಿಗೂ ತಾಯಿಯಾಗಿ ತಾಯಿಮುದ್ದಮ್ಮನಾಗಿ ಲೋಕಪೂಜಿತೆಯಾಗು ಎಂದು ಆಶೀರ್ವದಿಸಿ ಕಳಿಸುತ್ತಾನೆ.

ಹೀಗಿರುವಾಗ ಒಂದು ದಿನ ಕೊಳ್ಳೇಗಾಲದ ಮೋಡಿ ಮಾಂತ್ರಿಕರು ಜಾತಿಯಲ್ಲಿ ಗಾಣಿಗರು ತಮಗೆ ಬೇಕಾದ ಗಿಡಮೂಲಿಕೆಗಳನ್ನು ಹುಡುಕುತ್ತಾ ಶಿವಾಲ್ದಪ್ಪನ ಬೆಟ್ಟಕ್ಕೆ ಬಂದು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬರುವಾಗ ಬೆಟ್ಟದ ಮೇಲಿಂದ ಏಳಗಳ್ಳಿ ಗ್ರಾಮ ನೋಡುತ್ತಾರೆ. ಆ ಗ್ರಾಮದಲ್ಲಿ ಇಂದು ಮೋಡಿ ಆಟಗಳನ್ನು ಆಡಿ ಮಾಟ ಮಾಡಿ ಹಣ ಸಂಪಾದಿಸಬೇಕು ಎಂದು ಆ ಗ್ರಾಮಕ್ಕೆ ಬರುತ್ತಾರೆ. ತಾಯಿಮುದ್ದಮ್ಮ ಹಾಗೂ ಶಿವಪ್ಪ ಒಡೆಯರು ಗ್ರಾಮದಿಂದ ಸ್ವಲ್ಪ ದೂರ ಒಂದು ಕಲ್ಲು ಬಂಡೆಯ ಮೇಲೆ ಕುಳಿತಿರುತ್ತಾರೆ. ಆ ಗ್ರಾಮಕ್ಕೆ ಬಂದ ಮೋಡಿ ಮಾಂತ್ರಿಕರು ಜನರನ್ನು ಸೇರಿಸಿ ಮೋಡಿ ಆಟ ಆಡಲು ಆರಂಭಿಸುತ್ತಾರೆ. ಅವರ ಮೋಡಿ ಆಟ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ. ಅವರು ಮೊದಲಿಗೆ ರಾಜಮೋಡಿ ಹಾಕುತ್ತಾರೆ, ಆದರೆ ರಾಜಮೋಡಿಯು ಕೆಲಸ ಮಾಡಲಿಲ್ಲ. ರಕ್ತಮೋಡಿ ಹಾಕಲು ಅದೂ ಕೆಲಸ ಮಾಡಲಿಲ್ಲ. ಕೊನೆಗೆ ರಣಮೋಡಿ ಹಾಕುತ್ತಾರೆ, ಅದೂ ಸಹ ಕೆಲಸ ಮಾಡಲಿಲ್ಲ. ಇದಕ್ಕೆ ಕಾರಣ ತಾಯಿಮುದ್ದಮ್ಮ ಆ ಗ್ರಾಮದಲ್ಲಿ ನೆಲೆಸಿರುವುದು. ಅವರಿಗೆ ಆಶ್ಚರ್ಯ. ಯಾವುದೇ ಗ್ರಾಮದಲ್ಲಿ ಮೋಡಿ ಹಾಕಿದರೂ ಇಲ್ಲಿಯವರೆಗೂ ಅದು ಹುಸಿಯೇ ಆಗಿರಲಿಲ್ಲ, ಆದರೆ ಇಲ್ಲಿ ಮೋಡಿ ಆಟ ನಡೆಯುತ್ತಿಲ್ಲ, ನಮ್ಮ ಮಾನ ಹೋಗುತ್ತಿದೆ, ನಾವು ಹಾಕುವ ಮೋಡಿ ನಮಗೇ ತಿರುಗುತ್ತಿದೆ ಎಂದು ಚಿಂತೆಗೀಡಾಗಲು ಒಬ್ಬ ಮಾಂತ್ರಿಕ ತಾಯಿಮುದ್ದಮ್ಮ ಹಾಗೂ ಶಿವಪ್ಪ ಒಡೆಯರನ್ನು ನೋಡಿ ಇವರೇ ಏನೋ ನಮ್ಮ ಮೋಡಿಗೆ ಭಂಗ ತರುತ್ತಿರಬಹುದು ಎಂದು ಶಂಕಿಸಿ ಆ ಅಣ್ಣ ತಂಗಿ ಇಬ್ಬರಿಗೂ ಕುಳಿತ ಸ್ಥಳದಿಂದ ಮೇಲೆ ಏಳದಂತೆ ಮೋಡಿ ಹಾಕಿ ಅವರು ಸಂಗಮದ ಮಾರ್ಗ ತಮ್ಮ ಊರು ಕೊಳ್ಳೇಗಾಲಕ್ಕೆ ಹೋಗಲು ಸಿದ್ಧರಾಗುತ್ತಾರೆ. ಇದನ್ನು ಕಂಡ ತಾಯಿಮುದ್ದಮ್ಮ ನಾನು ಇರುವ ಸ್ಥಳದಲ್ಲೇ ನಮಗೇ ಮೋಡಿ ಹಾಕಿ ಹೋಗುವ ಮಾಂತ್ರಿಕರು ಮುಂದೆ ನಾನು ಈ ಸ್ಥಳದಲ್ಲಿ ಗುಡಿಯಲ್ಲಿ ನೆಲೆಯಾದಾಗ ಬೇರೆ ಯಾರಾದರೂ ಬಂದು ನನ್ನ ಭಕ್ತರಿಗೆ ಮಾಟ ಮಾಡಬಹುದು, ಇವರಿಗೆ ತಕ್ಕ ಶಿಕ್ಷೆ ಕೊಡುವೆ ಎಂದು ತಾಯಿಯು ಎರಡು ಹೆಗ್ಗಡಜ ಮಾಡಿ ಆ ಗಾಣಿಗರಿಗೆ ಕಡಿಯಿರಿ ಎಂದು ಹೇಳಿ ಕಳಿಸುತ್ತಾಳೆ. ಆ ಕಡಜಗಳು ಹೋಗಿ ಆ ಮಾಂತ್ರಿಕರಿಗೆ ಕಚ್ಚಿ ಕಚ್ಚಿ ಏಳಗಳ್ಳಿ ಗ್ರಾಮಕ್ಕೆ ಕರೆತಂದು ಅಲ್ಲಿ ಮಾಯವಾಗುತ್ತವೆ. ಇವರಿಗೆ ಆಶ್ಚರ್ಯ. ತಾಯಿ ಮುದ್ದಮ್ಮ ಹೆಗ್ಗಡಜ ಬಂದ ಸ್ಥಳಕ್ಕೆ ಹೆಗ್ಗನೂರು ಎಂದು ನಾಮಕರಣ ಮಾಡುತ್ತಾಳೆ.

ಆಗ ಆ ಗಾಣಿಗರು ಮೈಸೂರು ಮಾರ್ಗವಾಗಿ ತಮ್ಮ ಸ್ಥಳಕ್ಕೆ ತಲುಪಬೇಕು ಎಂದು ದೊಡ್ಡ ಆಲಹಳ್ಳಿಯ ಮಾರ್ಗ ಹೋಗುತ್ತಾರೆ. ಆಗ ತಾಯಿಯು ಎರಡು ಅರಿಶಿಣ ಕಡಜ ಮಾಡಿ ಅವರಿಗೆ ಕಚ್ಚಲು ಕಳಿಸುತ್ತಾಳೆ. ಆ ಅರಿಶಿಣದ ಕಡಜಗಳು ಆ ಮಾಂತ್ರಿಕರನ್ನು ಅಡ್ಡ ಹಾಕಿ ಕಡಿಯಲು ಆರಂಭಿಸುತ್ತವೆ. ಆಗ ಆ ಗಾಣಿಗರು ಒಂದು ಕೆರೆಯಲ್ಲಿ ಮುಳುಗಿ ಕೂರುತ್ತಾರೆ. ಮೇಲೆ ಕಡಜಗಳು, ಒಳಗೆ ಉಸಿರು ಕಟ್ಟಲು ಸಾಧ್ಯವಿಲ್ಲ. ಆಗ ಅವರು ನೀರಿನಿಂದ ಮೇಲೆದ್ದ ಕೂಡಲೇ ಕಡಜಗಳು ಅವರನ್ನು ಕಚ್ಚಿ ಕಚ್ಚಿ ಪುನಃ ಏಳಗಳ್ಳಿ ಗ್ರಾಮಕ್ಕೆ ಬಿಟ್ಟು ಮಾಯವಾಗುತ್ತವೆ. ತಾಯಿ ಮುದ್ದಮ್ಮ ಅರಿಶಿಣದ ಕಡಜಗಳು ಹೋದ ಸ್ಥಳಕ್ಕೆ ಅರಿಶಿಣಕೆರೆ ಎಂದು ನಾಮಕರಣ ಮಾಡುತ್ತಾಳೆ.

ಪುನಃ ಗಾಣಿಗರು ಹೇಗಾದರೂ ಮಾಡಿ ಕೊಳ್ಳೇಗಾಲ ತಲುಪಲೇಬೇಕು ಎಂದು ತಮಿಳುನಾಡಿನ ಹಾದಿ ಹಿಡಿಯುತ್ತಾರೆ. ಕೊಂಗನಾಡಿನ ಕಡೆಗೆ ಮೂಡಲ ದಿಕ್ಕಿಗೆ ನಲ್ಲಹಳ್ಳಿ ಎಂಬ ಗ್ರಾಮದ ಬಳಿ ಓಡುತ್ತಿರುವ ಗಾಣಿಗರನ್ನು ನೋಡಿದ ತಾಯಿಯು ಎರಡು ಮುಳ್ಳು ಕಡಜಗಳನ್ನು ಮಾಡಿ ಮಾಂತ್ರಿಕರಿಗೆ ಕಡಿಯಲು ಕಳಿಸುತ್ತಾಳೆ. ಆ ಎರಡು ಮುಳ್ಳು ಕಡಜಗಳು ಅವರನ್ನು ಅಡ್ಡಬಳಸಿ ಕಡಿಯಲು ಆರಂಭಿಸುತ್ತವೆ. ಆ ಗಾಣಿಗರು ಮತ್ತೆ ಹಿಂದಕ್ಕೆ ಏಳಗಳ್ಳಿಗೇ ಬಂದಾಗ ಆ ಮುಳ್ಳು ಕಡಜಗಳು ಮಾಯವಾಗುತ್ತವೆ. ತಾಯಿಮುದ್ದಮ್ಮ ಆ ಮುಳ್ಳು ಕಡಜಗಳು ಬಂದ ಸ್ಥಳಕ್ಕೆ ಮುಳ್ಳಹಳ್ಳಿ ಎಂದು ನಾಮಕರಣ ಮಾಡುತ್ತಾಳೆ. ಗಾಣಿಗರಿಗೆ ಆಶ್ಚರ್ಯವೋ ಆಶ್ಚರ್ಯ. ಮೂರೂ ಬಾರಿಯೂ ಕಡಜಗಳು ಕಡಿದು ಕಡಿದು ತಮ್ಮನ್ನು ಈ ಸ್ಥಳಕ್ಕೆ ಬಿಟ್ಟು ಮಾಯವಾದವು. ಇಲ್ಲೇನೋ ಮಹತ್ವವಿದೆ ಎಂದು ಅವರು ಅಂಜನ ಹಾಕಿ ನೋಡಲು ಇದಕ್ಕೆ ಕಾರಣ ತಾಯಿಮುದ್ದಮ್ಮ, ಈ ಸ್ಥಳದಲ್ಲಿ ಮೋಡಿ ಹಾಕಿದರೆ, ಮಾಟ ಮಾಡಿದರೆ ಅದು ನಡೆಯುವುದಿಲ್ಲ ಎಂದು ತಿಳಿಯುತ್ತಾರೆ. ನಂತರ ತಾಯಿಯ ಬಳಿ ಹೋಗಿ ತಮ್ಮ ತಪ್ಪನ್ನು ಮನ್ನಿಸು ಎಂದು ಬೇಡುತ್ತಾರೆ. ಆಗ ತಾಯಿಯು ನಾನು ನಿಂತ ನೆಲದಲ್ಲಿ ಯಾರೇ ಯಾವುದೇ ಮೋಡಿ ಹಾಕಲೀ, ಮಾಟ ಮಾಡಲೀ ಅದು ನಡೆಯುವುದಿಲ್ಲ. ಇನ್ನು ಮುಂದೆ ನೀವು ಕೇವಲ ಮೋಡಿ ಹಾಕಿಕೊಂಡು ನಿಮ್ಮ ಜೀವನ ನಡೆಸಿ. ಮೊದಲು ತಾಯಿಮುದ್ದಮ್ಮ ಎಂದು ನನ್ನ ಹೆಸರನ್ನು ಹೇಳಿ ಮೋಡಿ ಹಾಕಿ. ಅದು ಸುಸೂತ್ರವಾಗಿ ನೆರವೇರುತ್ತದೆ. ನಾನು ಇರುವ ಸ್ಥಳದಲ್ಲಿ ಮೋಡಿ ಹಾಕಬೇಡಿ ಎಂದು ಅವರಿಗೆ ಆಶೀರ್ವಾದ ಮಾಡುತ್ತಾಳೆ. ಅಂದಿನಿಂದ ಆ ಗಾಣಿಗರು ತಾಯಿಮುದ್ದಮ್ಮನನ್ನು ತಮ್ಮ ಕುಲದೇವತೆಯನ್ನಾಗಿ ಸ್ವೀಕರಿಸಿ ವರ್ಷಕ್ಕೆ ಒಂದು ದಿನ ಬಂದು ತಾಯಿಯ ಸೇವೆ ಮಾಡಿಕೊಂಡು ಹೋಗುತ್ತಾರೆ.

ಒಂದು ದಿನ ಕೈಲಾಸದಲ್ಲಿ ಶಿವಪಾರ್ವತಿಯರು ತಾಯಿಮುದ್ದಮ್ಮನ ಅಣ್ಣನಾದ ಶಿವಪ್ಪ ಒಡೆಯರನ್ನು ತಮ್ಮ ಬಳಿಗೆ ಕರೆಸಿಕೊಳ್ಳಬೇಕು, ಆಗ ತಾಯಿಯ ಮಹಿಮೆ ಲೋಕಕ್ಕೇ ತಿಳಿಯುವುದು ಎಂದು ತೀರ್ಮಾನಿಸಿ ಶಿವಪ್ಪ ಒಡೆಯರನ್ನು ಕೈಲಾಸಕ್ಕೆ ಕರೆಸಿಕೊಳ್ಳುತ್ತಾರೆ. ಶಿವಪ್ಪ ಒಡೆಯರು ಶಿವೈಕ್ಯರಾಗುತ್ತಾರೆ. ಆಗ ಆ ಏಳಗಳ್ಳಿ ಗ್ರಾಮದಲ್ಲಿ ತಾಯಿಮುದ್ದಮ್ಮ ಒಬ್ಬಳೇ ಉಳಿಯುತ್ತಾಳೆ.

ಹೀಗಿರುವಾಗ ಒಂದುದಿನ ಏಳಗಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮದ ಮಕ್ಕಳು ಆಟ ಆಡುತ್ತಿರುತ್ತಾರೆ. ಆಗ ಅಲ್ಲಿ ಒಂದು ಪಾಳುಬೆಕ್ಕಲು ಮೆಳೆಯೊಳಗೆ ಒಂದು ಹುತ್ತದ ಒಳಗಿಂದ ಎಳೆ ನಾಗರಹಾವಿನ ಮರಿ ಬಂದು ಒಂದು ಮಗುವನ್ನು ಮುಟ್ಟುತ್ತದೆ. ಇದರಿಂದ ಹೆದರಿದ ಮಗುವಿನ ತಾಯಿ ತಂದೆ ಅತ್ತೂ ಕರೆದು ಮಗುವನ್ನು ಎತ್ತಿಕೊಂಡು ತಾಯಿಮುದ್ದಮ್ಮನ ಬಳಿ ಬಂದು ಈ ಮಗುವನ್ನು ಹೇಗಾದರೂ ಮಾಡಿ ಬದುಕಿಸಿಕೊಡಬೇಕೆಂದು ಬೇಡುತ್ತಾರೆ. ಆಗ ತಾಯಿಯು ತನ್ನ ಕೊಳದ ನೀರು ಹಾಗೂ ಭಸ್ಮವನ್ನು ಪ್ರಸಾದದ ರೂಪದಲ್ಲಿ ಮಗುವಿನ ಬಾಯಿಗೆ ಕೊಡುತ್ತಾರೆ. ಆಗ ಮಗು ಮೇಲಕ್ಕೆ ಎದ್ದು ಕುಳಿತುಕೊಳ್ಳುತ್ತದೆ. ತಾಯಿಮುದ್ದಮ್ಮ ಒಂದು ಯೋಚನೆ ಮಾಡುತ್ತಾಳೆ. ಇನ್ನುಮುಂದೆ ಯಾರಿಗೇ ಆಗಲೀ ನಾನು ನಿಂತ ನೆಲೆಯಲ್ಲಿ ಯಾವುದೇ ಹಾವು ಕಡಿದರೂ ಯಾರಿಗೂ ವಿಷ ಏರಬಾರದು ಎಂದು ತೀರ್ಮಾನಿಸಿ ತನ್ನ ಎಲ್ಲೆಯ ಸುತ್ತಾ ಒಂದು ಗೆರೆ ಎಳೆಸಿ ಎಲ್ಲಾ ಜಾತಿಯ ಹಾವುಗಳನ್ನು ಆ ಗೆರೆಯೊಳಕ್ಕೆ ಕರೆಯುತ್ತಾಳೆ. ಎಲ್ಲಾ ಹಾವುಗಳು ಬಂದು ಆ ಗೆರೆಯೊಳಗೆ ಸೇರುತ್ತವೆ. ಆದರೆ ಮಂಡಲದ ಹಾವು ಮಾತ್ರ ಒಳಗೆ ಬರದೇ ಹೊಂಚು ಹಾಕುತ್ತಿರುತ್ತದೆ. ಕೂಡಲೇ ತಾಯಿಯು ತನ್ನ ಚಂದ್ರಾಯುಧ ಕತ್ತಿಯಿಂದ ಆ ಹಾವನ್ನು ಕತ್ತರಿಸಿ ದೂರ ಎಸೆಯುತ್ತಾಳೆ. ಇನ್ನು ಮುಂದೆ ಈ ಗ್ರಾಮದಲ್ಲಿ ಯಾವುದೇ ಹಾವು ಕಚ್ಚಿದರೂ ಜನಗಳಿಗೆ ವಿಷ ಮುಟ್ಟದೇ ಹೋಗಲಿ, ಆದರೆ ಈ ಮಂಡಲದ ಹಾವು ಕಚ್ಚಿದರೆ ವಿಷವು ತಪ್ಪುವುದಿಲ್ಲ. ಆದರೂ ಯಾರಿಗೇ ಯಾವುದೇ ಜಾತಿಯ ಹಾವು ಕಚ್ಚಿದರೂ ನನ್ನ ದೇವಾಲಯದ ಕಲ್ಯಾಣಿ ಕೊಳದ ತೀರ್ಥ ಹಾಗೂ ನನ್ನ ವಿಭೂತಿಯನ್ನು ಹಚ್ಚಿದರೆ ಅವರ ಮೈಯೊಳಗಿನ ವಿಷ ಇಳಿದು ಜೀವ ಉಳಿಯಲಿ ಎಂದು ಆಶೀರ್ವದಿಸುತ್ತಾಳೆ. ಅಂದು ತಾಯಿಯು ಸುತ್ತಲಿನ ಗ್ರಾಮಸ್ಥರನ್ನು ಕರೆದು ಇನ್ನು ನಾನು ಇಲ್ಲಿನ ಏಳುಬಾಯಿ ಹುತ್ತದೊಳಗೆ ಹೋಗಿ ಐಕ್ಯಳಾಗುವೆ. ಇಲ್ಲಿ ನನಗೆ ಒಂದು ಗುಡಿ ಕಟ್ಟಿ ಪೂಜಿಸಿ. ಯಾರಿಗೇ ಯಾವುದೇ ರೀತಿಯ ಕುಷ್ಠರೋಗ, ಚರ್ಮರೋಗ, ನಾಗರು, ಕಿವಿ ಸೋರುವುದು, ಗಾಯವಾಗುವುದು ಆದರೆ ಅವರಿಗೆ ನನ್ನ ಕೊಳದ ತೀರ್ಥ ನನ್ನ ಧೂಳ್ತವೇ ಪ್ರಸಾದವಾಗಿ ಔಷಧಿಯಾಗಲಿ, ನನಗೆ ಹರಕೆ ಮಾಡಿಕೊಂಡು ನನ್ನ ದೇವಾಲಯದ ನಿಯಮ ಪದ್ಧತಿಯನ್ನು ಅನುಸರಿಸಿದ ಎಲ್ಲರಿಗೂ ಒಳ್ಳೆಯದು ಮಾಡುವೆ. ನನ್ನ ದೇವಾಲಯದಲ್ಲಿ ಯಾವುದೇ ರೀತಿಯ ಅಂಟು ಮುಟ್ಟು ಮಾಡಿದರೆ ಅವರಿಗೆ ವಿವಿಧ ರೋಗಗಳನ್ನು ನೀಡುವೆ. ಬೇಡಿದರೆ ಬೆಂಗಾವಲಾಗಿ ನಿಲ್ಲುವೆ ಎಂದು ಜನರಿಗೆ ಆಶೀರ್ವದಿಸಿ ತಾಯಿಮುದ್ದಮ್ಮ ಏಳುಬಾಯಿ ಹುತ್ತದ ಒಳಗೆ ಮರೆಯಾಗುತ್ತಾಳೆ. ಆಗ ಸುತ್ತಮುತ್ತಲಿನ ಗ್ರಾಮಸ್ಥರು ತಾಯಿಗೆ ಗುಡಿ ಗೋಪುರಗಳನ್ನು ಕಟ್ಟಿ ಪೂಜಿಸಲು ಆರಂಭಿಸುತ್ತಾರೆ.

ಅಂದಿನಿಂದ ಇಂದಿನವರೆಗೂ ತಾಯಿಮುದ್ದಮನ ಸನ್ನಿಧಾನ ಪವಾಡಗಳನ್ನು ಸೃಷ್ಟಿಸುವ ಕೇಂದ್ರವಾಗಿದೆ. ಯಾವುದೇ ರೀತಿಯ ಕುಷ್ಠರೋಗ, ಚರ್ಮರೋಗ, ನಾಗರು, ಮಕ್ಕಳ ಗಾಯಗಳನ್ನು ವಾಸಿಮಾಡುತ್ತಾ, ಸರ್ಪ ಕಚ್ಚಿದವರಿಗೆ ಔಷಧ ನೀಡುತ್ತಾ ಎಲೆಮರೆಯ ಕಾಯಿಯಂತೆ ಈ ದೇವಾಲಯ ಇಂದು ಈ ಭೂಮಿಯ ಮೇಲೆ ನೆಲೆಸಿದೆ. ಇಂದಿಗೂ ಸಹ ಯಾರಿಗೇ ಹಾವು ಕಚ್ಚಿದರೂ ಅವರು ಸಾಯುವ ಮೊದಲು ಈ ಗ್ರಾಮಕ್ಕೆ ಅವರನ್ನು ತಂದರೆ ಸಾಕು, ಅವರ ದೇಹ ಸೇರಿರುವ ವಿಷದ ತಾಪ ಇಳಿಯುತ್ತದೆ. ಇನ್ನು ಇಲ್ಲಿನ ತೀರ್ಥ ಭಸ್ಮ ತೆಗೆದುಕೊಂಡರೆ ಸಂಪೂರ್ಣವಾಗಿ ವಿಷವು ಇಳಿದುಹೋಗುತ್ತದೆ. ಈ ದೇವಾಲಯದಲ್ಲಿ ಕಲ್ಯಾಣಿಕೊಳದಿಂದ ನೀರು ತಂದು ತಾಯಿಮುದ್ದಮ್ಮನ ಹಾಗೂ ಬಸವೇಶ್ವರ ವಿಗ್ರಹಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಆ ನೀರು, ಜೊತೆಗೆ ಅಲ್ಲಿ ತೆಂಗಿನಕಾಯಿ ಒಡೆದ ಎಳೆನೀರು ಮುಂತಾದವುಗಳು ಒಂದು ತೊಟ್ಟಿಗೆ ಹೋಗಿ ಸಂಗ್ರಹವಾಗುತ್ತವೆ. ಅಲ್ಲಿ ಸಂಗ್ರಹವಾಗುವ ನೀರೇ ಕುಷ್ಠರೋಗ ಹಾಗೂ ಚರ್ಮರೋಗ, ನಾಗರು ಮುಂತಾದವುಗಳನ್ನು ವಾಸಿ ಮಾಡುವ ದಿವ್ಯ ಔಷಧ.

ನಮಗೆ ಈ ರೀತಿಯ ಚರ್ಮರೋಗಗಳು ವಾಸಿಯಾಗಬೇಕಾದರೆ ನಾವು ಇಲ್ಲಿನ ಕೆಲವು ನಿಯಮಗಳಿಗೆ ಪದ್ಧತಿಗಳಿಗೆ ಬದ್ಧರಾಗಿರಬೇಕು. ರೋಗ ವಾಸಿಯಾಗುವ ತನಕ ಮಾಂಸಾಹಾರ ಸೇವಿಸುವಂತಿಲ್ಲ. ಆಗ ಮಾತ್ರ ರೋಗಗಳು ವಾಸಿಯಾಗುತ್ತವೆ.

ಯಾರೇ ಈ ಸನ್ನಿಧಾನಕ್ಕೆ ಬಂದರೂ ಒಂದು ಹೊತ್ತು ಉಪವಾಸವಿದ್ದು ಕಲ್ಯಾಣಿಯ ನೀರಿನಿಂದ ಮುಖ ತೊಳೆದು ಇಲ್ಲವೇ ಸ್ನಾನ ಮಾಡಿಕೊಂಡು ಕಲ್ಯಾಣಿಯ ಪೂಜೆಮಾಡಿ ತಾಯಿಯ ಸೇವೆ ಮಾಡಿ ಬಂದರೆ ಅಂತವರಿಗೆ ತಾಯಿಯು ಒಲಿಯುತ್ತಾಳೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಯಾರೇ ಆಗಲೀ ಒಂದು ವಾರ ಮಾಂಸಾಹಾರ ಮಾಡುವಂತಿಲ್ಲ.

ಇನ್ನು ಈ ತಾಯಿಯ ಒಕ್ಕಲಿನವರು ಕನಕಪುರ ರಾಮನಗರ ಚನ್ನಪಟ್ಟಣ ಆನೇಕಲ್ ಕೊಳ್ಳೇಗಾಲ ಹನೂರು ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅನೇಕ ಜನರಿದ್ದಾರೆ. ಶ್ರೀ ತಾಯಿಮುದ್ದಮ್ಮನ ಜಾತ್ರೆಯ ಸಂದರ್ಭದಲ್ಲಿ ಹಾಗೂ ಕಾರ್ತಿಕ ಸೋಮವಾರಗಳಲ್ಲಿ ಅಸಂಖ್ಯಾತ ಜನರು ಬಂದು ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ. ಯಾವುದೇ ಜಾತಿ ಧರ್ಮಗಳ ಎಲ್ಲೆಗಳಿಲ್ಲದೇ ಎಲ್ಲರೂ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹಿಂದೂ ಮುಸಲ್ಮಾನ ಕ್ರೈಸ್ತ ಜನಾಂಗದವರೂ ಸಹ ಇಲ್ಲಿ ಚರ್ಮರೋಗ ವಾಸಿಮಾಡಿಕೊಂಡ ಸಾಕಷ್ಟು ಉದಾಹರಣೆಗಳಿವೆ.

ಯಾವಾಗಲಾದರೂ ಸಮಯ ಸಿಕ್ಕಲ್ಲಿ ಶ್ರೀ ತಾಯಿಮುದ್ದಮ್ಮನ ಸನ್ನಿಧಿಗೆ ಬಂದು ಧನ್ಯರಾಗಿ.

ವಂದನೆಗಳು