ವಿಷಯಕ್ಕೆ ಹೋಗು

ಮುತ್ತಾಣೆಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುತ್ತಾಣೆಗೆರೆ ಎಂಬ ಗ್ರಾಮವು ಕಡೂರಿನಿಂದ 40 ಕಿ.ಮೀ ದೂರದಲ್ಲಿ ಸಿಂಗಟಗೆರೆ ಹಾಗೂ ಪಂಚನಹಳ್ಳಿಯ ನಡುವೆ ಇದೆ. ಈ ಗ್ರಾಮದಲ್ಲಿ ಸರಿಸುಮಾರು 400 ರಿಂದ 500 ಮನೆಗಳಿದ್ದು ಒಟ್ಟು 1000-1100 ಜನರು ವಾಸಿಸುತ್ತಿದ್ದಾರೆ.ಮುತ್ತಿನ ಕೆರೆ ಎಂಬ ಹೆಸರಿನಿಂದ ಮುತ್ತಾಣೆಗೆರೆ ಎಂಬ ಹೆಸರು ಬಂತು. ಗ್ರಾಮದಲ್ಲಿ ಪುರಾತನ ಕಾಲದಿಂದಲು ನೆಲೆಸಿರುವ ಆಂಜನೇಯಸ್ವಾಮಿಯ ವಿಗ್ರಹ ವಿರಾಜಮಾನವಾಗಿ ದರ್ಶನ ನೀಡುತ್ತಿದೆ.ಆಂಜನೇಯಸ್ವಾಮಿಯಲ್ಲಿ ಹೂವಿನ ಪ್ರಸಾದ ಕೇಳುವ ಪದ್ಧತಿ ಇದೆ.ಈ ಕಾರಣಕ್ಕಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶ್ರೀ ಸ್ವಾಮಿಯ ಹೂವಿನ ಪ್ರಸಾದದ ಅಪ್ಪಣೆ ಎಂದಿಗೂ ಸುಳ್ಳಾಗುವುದಿಲ್ಲ ಎಂಬುದು ಇಲ್ಲಿನ ಹಿರಿಯರ ಅನುಭವದ ಮಾತು.ಈಗಿರುವ ದೇವಾಲಯವನ್ನು 1976 ರಲ್ಲಿ ಜೀರ್ಣೋದ್ಧಾರಗೊಳಿಸಿದ್ದು,ವಸಂತಋತು ಚೈತ್ರಮಾಸ ಶುಕ್ಲಪಕ್ಷ ನವಮಿಯಂದು ಶ್ರೀಸೀತಾರಾಮಾಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವನ್ನು ಪಂಚರಾತ್ರಾಗಮೊಕ್ತವಾಗಿ ಅಚರಿಸುತ್ತಾರೆ ಹಾಗೂ ಹನುಮಜಯಂತಿ ಸಂದರ್ಭದಲ್ಲಿ ವಿಶೇಷ ಉತ್ಸವಗಳನ್ನು ನೆಡೆಸುತ್ತಾರೆ.

ಈ ಗ್ರಾಮದಲ್ಲಿ ಒಟ್ಟು 11 ದೇವಾಲಯಗಳಿವೆ ಅದರಲ್ಲಿ ಪ್ರಮುಖವಾದ ದೇವಾಲಯಗಳೆಂದರೆ ಶ್ರೀಸೀತಾರಾಮಾಂಜನೇಯ ಹಾಗೂ ಶ್ರೀಲಕ್ಷೀವೆಂಕಟೇಶ್ವರ ದೇವಾಲಯಗಳು.

ಈ ಗ್ರಾಮದ ಪ್ರಮುಖ ಆಕರ್ಷಣೆಗಳೆಂದರೆ ಊರಿನಕೆರೆ ಹಾಗೂ ಕಲ್ಯಾಣಿ. 18ನೆಯ ಶತಮಾನದಲ್ಲಿ ಕಲ್ಯಾಣಿಯನ್ನು ಯಜಮಾನ ಗುರುಭಕ್ತ ತಿಮ್ಮೇಗೌಡರು ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕಲ್ಯಾಣಿಯ ಜಲವನ್ನು ಪೂಜಾ ಕೈಂಕರ್ಯಗಳಿಗೆ ಈಗಲೂ ಸಹ ಉಪಯೋಗಿಸುತ್ತಾರೆ.

ಈ ಗ್ರಾಮದ ಪ್ರಮುಖ ಮನೆತನವೆಂದರೆ ಹೆಬ್ಬಾಗಿಲುಮನೆ ತಿಮ್ಮೇಗೌಡರ ಮನೆತನ. ಏಕೆಂದರೆ, ತಿಮ್ಮೇಗೌಡರು ಗುರುಭಕ್ತರಾಗಿದ್ದು ತ್ರಿಕಾಲ ಶಿವಪೂಜೆಯನ್ನು ನೆಡೆಸುತ್ತಿದ್ದರು ಹಾಗೂ ಹಸಿದವರಿಗೆ/ಬಡವರಿಗೆ ಆಹಾರ,ಆಶ್ರಯ ನೀಡುತ್ತಿದ್ದರು.ಇವರ ಮಗನಾದ ಟಿ.ಎಚ್.ಶಿವನಂಜೇಗೌಡರು ಅಂದಿನ ಮೈಸೂರು ಸಂಸ್ಥಾನದ ಕಡೂರು ಜಿಲ್ಲೆಯ ಅಮುಲ್ದಾರರಾಗಿ ಮತ್ತು ಅಮೃತಪುರದ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿದ್ದಾರೆ ಹಾಗು ರೈತರಿಗೆ ಜಮೀನನ್ನು ದಾನ ನೀಡುವ ಮೂಲಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಅಂತೆಯೇ ಶಿಕ್ಷಣಕ್ಕೂ ಸಹ ಉತ್ತೇಜನ ನೀಡಿದ್ದಾರೆ.

ಇಂದಿಗೂ ಕೂಡ ಇವರ ವಾಸ್ತುಗೃಹದಲ್ಲಿ ಕಾಣಬಹುದಾದ ಕೆಲಕುರುಹುಗಳೆಂದರೆ:-ಮನೆಯ ಒಳಗೆ ಇರುವಂತಹ ಬಾವಿ,18/19ನೆಯ ಶತಮಾನದಲ್ಲಿ ಉಪಯೋಗಿಸಿರುವ ವಸ್ತುಗಳು,ಹಿಂದಿನಕಾಲದ ಓಲೆಗರಿಗಳು,ಧಾರ್ಮಿಕ ಗ್ರಂಥಗಳು,ಪೂಜಾ ಸಾಮಗ್ರಿಗಳು ಇತ್ಯಾದಿ.....

ಈ ಗ್ರಾಮದಲ್ಲಿ ಪ್ರಮುಖವಾಗಿ ತೆಂಗು,ರಾಗಿ,ಜೋಳ,ಹೆಸರು,ಉದ್ದು,ಅವರೆ,ಹುರುಳಿ,ಎಳ್ಳು,ಸಾಮೆ ಇತ್ಯಾದಿ... ಬೆಳೆಗಳನ್ನು ಬೆಳೆಯುತ್ತಾರೆ.

ವರ್ಷದಲ್ಲಿ ಯಾವ ಬೆಳೆ ಹೆಚ್ಚು ಫಲ ನೀಡುವುದು ಎಂಬುದನ್ನು ತಿಳಿಯಲು ಜನರು ಕಾರಹುಣ್ಣಿಮೆಯ ಸಂದರ್ಭದಲ್ಲಿ ಕಾರಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಸಾಂಪ್ರದಾಯಕವಾಗಿ ತಿಮ್ಮೇಗೌಡರ ವಂಶಸ್ಥರು ತಲಾ-ತಲಾಂತರದಿಂದ ನೆಡೆಸಿಕೊಂಡು ಬರುತ್ತಿದ್ದಾರೆ.


ಈ ಸ್ಥಳವು ಬೆಂಗಳೂರಿನಿಂದ 220 ಕಿ.ಮೀ ದೂರವಿದ್ದು ಬಿ.ಎಚ್.ರಸ್ತೆಯ ಮೂಲಕ ಬಾಣಾವಾರಕ್ಕೆ ಬಂದು20 ಕಿ.ಮೀ ಹುಳಿಯಾರು ರಸ್ತೆಯಲ್ಲಿ ಚಲಿಸಿ ಎಡಭಾಗಕ್ಕೆ ಗಿರಿಬೊಮ್ಮನಹಳ್ಳಿಯ ಮಾರ್ಗವಾಗಿ3 ಕಿ.ಮೀ ಚಲಿಸಿದರೆ ಸಿಗುವುದು ಮುತ್ತಾಣೆಗೆರೆ.