ಮುಘಲಾನಿ ಬೇಗಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಘಲಾನಿ ಬೇಗಂ[ಬದಲಾಯಿಸಿ]

ಮುರದ್ ಬೇಗಮ್ [೧] ಎಂದೂ ಕರೆಯಲ್ಪಡುವ ಮುಘಲಾನಿ ಬೇಗಮ್ ಅವರು [೨] ೧೭೫೩ ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಆಡಳಿತ ನಡೆಸುತ್ತಿದ್ದರು. ಅವರು ಲಾಹೋರ್‌ ಅನ್ನು ರಾಜಧಾನಿಯನ್ನಾಗಿಸಿಕೊಂಡಿದ್ದರು. ಅವರು ವೈಯಕ್ತಿಕ ಲಾಭಗಳಿಗಾಗಿ ಹೋರಾಟ ಮಾಡಿದರು.ಅವರು ೧೭೪೮ ರಿಂದ ೧೭೫೩ ರವರೆಗೆ ಲಾಹೋರ್‌ನ ಸುಬಾಹ್‌ನ ಗವರ್ನರ್‌ ಆಗಿದ್ದ ಮೊಯಿನ್-ಉಲ್-ಮುಲ್ಕ್ (ಮೀರ್ ಮನ್ನು) ಅವರನ್ನು ವಿವಾಹವಾಗಿದ್ದರು. ಅಲ್ಲದೆ ಅಫ್ಘಾನಿಸ್ತಾನದ ಚಕ್ರವರ್ತಿ ಅಹ್ಮದ್ ಶಾ ಅಬ್ದಾಲಿ ಅವರನ್ನು ಪ್ರೀತಿಸುತ್ತಿದ್ದರು. [೩]

ಅಧಿಕಾರಕ್ಕಾಗಿ ಕಾದಾಟ[ಬದಲಾಯಿಸಿ]

ನವೆಂಬರ್ ೧೭೫೩ ರಲ್ಲಿ, ಮೊಯಿನ್-ಉಲ್-ಮುಲ್ಕ್ ಕುದುರೆ ಅಪಘಾತದಲ್ಲಿ ಸಾವನ್ನಪ್ಪಿದರು. ಇವರ ಮಗನಾದ ಅಪ್ರಾಪ್ತ ಬಾಲಕನನ್ನು ಮೊಘಲ್ ಚಕ್ರವರ್ತಿ ಅಹ್ಮದ್ ಶಾ ಬಹದ್ದೂರ್ ಅವರು ಪಂಜಾಬ್‌ನ ಗವರ್ನರ್ ಆಗಿ ನೇಮಿಸಿದರು. ಮುಘಲಾನಿ ಬೇಗಂ ಈಗ ರಾಜಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲಾರಂಭಿಸಿದರು. ತಮ್ಮ ಅಧಿಕಾರದ ದುರ್ಲಾಭ ಪಡೆದುಕೊಂಡ ಅವರು ಆಡಳಿತವನ್ನು ನಿರ್ಲಕ್ಷಿಸಿದರು. ಇವರು ಅನೇಕ ಪುರುಷರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಇದನ್ನರಿತ ಮೊಘಲ್ ದೊರೆಗಳು ಇವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಆ ಸ್ಥಾನಕ್ಕೆ ಮಿರ್ಜಾ ಖಾನ್ ಅವರನ್ನು ನೇಮಿಸಿದರು. ಇದರಿಂದ ಕುಪಿತಗೊಂಡ ಮುಘಲಾನಿ, ಅಧಿಕಾರಕ್ಕಾಗಿ ತಮ್ಮ ಚಿಕ್ಕಪ್ಪನಾದ ಅಬ್ದಾಲಿಯ ಸಹಾಯ ಹಸ್ತ ಚಾಚಿದರು. ಅಬ್ದಾಲಿಯು ಲಾಹೋರ್‌ಗೆ ಸಣ್ಣ ಸೈನ್ಯವನ್ನು ಕಳುಹಿಸಿದನು, ಮಿರ್ಜಾ ಖಾನ್‌ನನ್ನು ವಶಪಡಿಸಿಕೊಂಡನು ಮತ್ತು ಮುಘಲಾನಿಗೆ ಅಧಿಕಾರವನ್ನು ಪುನಃಸ್ಥಾಪಿಸಿದನು. ಆದರೆ ಸ್ವಲ್ಪ ಸಮಯದ ನಂತರ, ಅವರ ಮಗ ಸತ್ತು ಮತ್ತೆ ಅವರು ಅಧಿಕಾರವನ್ನು ಕಳೆದುಕೊಂಡರು.

ಮುಘಲಾನಿ ಈಗ ತಮ್ಮ ಚಿಕ್ಕಪ್ಪನೊಂದಿಗೆ ಸೇರಿ ಮತ್ತೆ ಅಧಿಕಾರಕ್ಕಾಗಿ ಹೋರಾಟಕ್ಕಿಳಿದರು. ಆದರೆ ಅಪಜಯಗೊಂಡರು. ಏಕೆಂದರೆ ಅಬ್ದಾಲಿಯ ಹಿಂಬಾಲಕರು ಇದನ್ನು ಬೆಂಬಲಿಸಲಿಲ್ಲ. ಇದರಿಂದ ಇನ್ನಷ್ಟು ಕೆರಳಿದ ಮುಘಲಾನಿ, ಮ್ಮ ಮಗಳಾದ ಉಮ್ದಾ ಬೇಗಂಳೊಂದಿಗೆ ನಿಶ್ಚಿತಾರ್ಥವಾಗಿದ್ದ, ದೆಹಲಿಯ ಮೊಘಲ್ ವಜೀರ್ ಆಗಿದ್ದ ಇಮಾದ್-ಉಲ್-ಮುಲ್ಕ್ ಅವರ ಸಹಾಯವನ್ನು ಕೋರಿದರು. ಇಮಾದ್ ತನ್ನ ಸೈನ್ಯವನ್ನು ಕಳುಹಿಸುವ ಮೂಲಕ ಸಹಾಯ ಮಾಡಲು ಒಪ್ಪಿಕೊಂಡನು. ಆದರೆ ಮುಘ್ಲಾನಿಯವರ ಅನೇಕ ಅಕ್ರಮ ಸಂಬಂಧಗಳ ಬಗ್ಗೆ ತಿಳಿದಾಗ ಆತ ಹಿಂದೆ ಸರಿದನು. ಇದು ತನ್ನ ಕುಟುಂಬಕ್ಕೆ ಅಪಮಾನಕರ ಎಂದು ಭಾವಿಸಿದನು. ಅವನು ರಹಸ್ಯವಾಗಿ ಸೈನಿಕರ ತುಕಡಿಯನ್ನು ಲಾಹೋರ್‌ಗೆ ಕಳುಹಿಸಿ ಮುಘಲಾನಿಯವರ ಅರಮನೆಯನ್ನು ಆಕ್ರಮಿಸಿದನು ಮತ್ತು ಬಲವಂತವಾಗಿ ಮೊಘಲಾನಿಯವರನ್ನು ಸಿರ್ಹಿಂದ್‌ಗೆ ಅಟ್ಟಿದನು.

ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ[ಬದಲಾಯಿಸಿ]

ಮುಘ್ಲಾನಿಯವರು ನಂತರ ಈಗ ಅಹ್ಮದ್ ಶಾ ಅಬ್ದಾಲಿಗೆ ತಮ್ಮ ಮಾವ ದಿವಂಗತ ವಜೀರ್ ಕಮ್ರುದ್ದೀನ್ ಖಾನ್ ಅವರ ಪೂರ್ವಜರ ಅರಮನೆಯಲ್ಲಿರುವ ನಿಧಿಯನ್ನು ಕಾಣಿಕೆಯಾಗಿ ನೀಡುವುದಾಗಿ ಭರವಸೆ ನೀಡಿದರು. ಇಮಾದ್-ಉಲ್-ಮುಲ್ಕ್ ವಿರುದ್ಧ ಸಂಚು ರೂಪಿಸಿದ ಮತ್ತು ದೆಹಲಿಯನ್ನು ಆಕ್ರಮಿಸಲು ಅಬ್ದಾಲಿಯನ್ನು ಆಹ್ವಾನಿಸಿದ ಇತರರು ಇದ್ದರು. ಅಬ್ದಾಲಿ ಆಮಿಷಕ್ಕೆ ಬಲಿಯಾಗಿ ದೆಹಲಿಯನ್ನು ಆಕ್ರಮಿಸಲು ನಿರ್ಧರಿಸಿದನು. ಮುಂಬರುವ ಆಕ್ರಮಣದ ಸುದ್ದಿಯು ಇಮಾದ್‌ಗೆ ತಲುಪಿದಾಗ, ಅವನಿಗಾಗಿ ಹೋರಾಡಲು ಸಿದ್ಧರಿರುವ ಸೈನ್ಯವಾಗಲಿ ಅಥವಾ ಮಿತ್ರರಾಷ್ಟ್ರಗಳಾಗಲಿ ಇರಲಿಲ್ಲ. ಹತಾಶೆಯಿಂದ ಅವನು ಶಾಂತಿಯನ್ನು ಬಯಸಿದನು ಮತ್ತು ಆಕ್ರಮಣವನ್ನು ತಡೆಯಲು ಮುಘಲಾನಿಯವರನ್ನು ತಮ್ಮ ರಾಯಭಾರಿಯಾಗಿ ಅಬ್ದಾಲಿಗೆ ಕಳುಹಿಸಿದನು. ಮುಘಲಾನಿ ಅಬ್ದಾಲಿಯನ್ನು ಹಿಂದೆ ಸರಿಯುವಂತೆ ಮಾಡಲು ಅವರ ಮನವೊಲಿಸಲು ಪ್ರಯತ್ನಿಸಿದರು, ಆದರೆ ಅವರು ಈಗಾಗಲೇ ದೆಹಲಿಯ ಹೊಸ್ತಿಲಲ್ಲಿರುವುದರಿಂದ ನಿರಾಕರಿಸಿದರು.

ಮುಘಲಾನಿಯು ಇಮಾದ್‌ಗೆ, ಅಬ್ದಾಲಿಯೊಂದಿಗೆ ಹೋರಾಡಲು ಧೈರ್ಯವಿಲ್ಲದಿದ್ದರೆ ಸುರಕ್ಷಿತ ಸ್ಥಳಕ್ಕೆ ಓಡಿಹೋಗುವಂತೆ ರಹಸ್ಯ ಟಿಪ್ಪಣಿಯನ್ನು ಕಳುಹಿಸಿದರು. ಇಮಾದ್ ಅಂತಿಮವಾಗಿ ಶರಣಾದನು ಮತ್ತು ಅವರ ಎಲ್ಲಾ ಅಧಿಕಾರಗಳು ಮತ್ತು ಸಂಪತ್ತನ್ನು ಕಸಿದುಕೊಳ್ಳಲಾಯಿತು. ಅಬ್ದಾಲಿಯು ದೆಹಲಿ ನಗರವನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದನು. ಮುಘಲಾನಿ ಶ್ರೀಮಂತ ಜನರನ್ನು ಅವನಿಗೆ ತೋರಿಸಿದರು, ಅದಕ್ಕಾಗಿ ಅವರಿಗೆ ಕಾಣಿಕೆಗಳನ್ನು ಮತ್ತು ಭೂಮಿಯನ್ನು ಇನಾಮ್ ಆಗಿ ನೀಡಲಾಯಿತು.

ಅಬ್ದಾಲಿ ತನ್ನ ಲೂಟಿಯೊಂದಿಗೆ ಅಫ್ಘಾನಿಸ್ತಾನಕ್ಕೆ ಮರಳಿದಾಗ, ಎಸ್ಟೇಟ್ಗಳನ್ನು ಮುಘಲಾನಿಯವರಿಂದ ಕಿತ್ತುಕೊಳ್ಳಲಾಯಿತು. ಅವರಿಗೆ ಪಿಂಚಣಿ ನೀಡಲಾಯಿತು. ಅದನ್ನು ಅವರು ಅಹಂಕಾರದಿಂದ ನಿರಾಕರಿಸಿದರು ಮತ್ತು ಬಡತನದಲ್ಲಿ ಲಾಹೋರ್‌ನಲ್ಲಿ ವಾಸಿಸಿದರು.

ಜನಪ್ರಿಯ ಸಂಸ್ಕೃತಿಯಲ್ಲಿ[ಬದಲಾಯಿಸಿ]

ಭಾರತೀಯ ಚಲನಚಿತ್ರ ನಿರ್ದೇಶಕ ಸುರ್ಜಿತ್ ಸಿಂಗ್ ಸೇಥಿ ಅವರು ಮುಘಲಾನಿ ಬೇಗಂ ಎಂಬ ಚಿತ್ರವನ್ನು ೧೯೭೯ ರಲ್ಲಿ ನಿರ್ಮಿಸಿದರು. ಪಂಜಾಬಿ ಭಾಷೆಯ ಈ ಚಿತ್ರದಲ್ಲಿ ಬೇಗಂ ಮತ್ತು ಮೀರ್ ಮನ್ನು ಕುರಿತು ಮಾಹಿತಿಯಿದೆ. ಇದರಲ್ಲಿ ಪ್ರೀತ್ ಕನ್ವಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. [೪]

ಉಲ್ಲೇಖಗಳು[ಬದಲಾಯಿಸಿ]

  1. "Hemantonline.com - Mughlani Begum 1979 VCD: Punjabi". Hemantonline.com. Retrieved 19 November 2018.
  2. Singha, H. S. (2000-01-01). The Encyclopedia of Sikhism (over 1000 Entries) (in ಇಂಗ್ಲಿಷ್). Hemkunt Press. ISBN 9788170103011.
  3. Mehta, Jaswant Lal (2005-01-01). Advanced Study in the History of Modern India 1707-1813 (in ಇಂಗ್ಲಿಷ್). Sterling Publishers Pvt. Ltd. ISBN 9781932705546.
  4. Ashish Rajadhyaksha; Paul Willemen (1994). Encyclopaedia of Indian Cinema. British Film Institute. p. 527. ISBN 978-0-85170-455-5.