ವಿಷಯಕ್ಕೆ ಹೋಗು

ಮುಖಬೆಲೆ ಸೀಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೇರು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಯಾವುದೇ ಒಂದು ಒಂದು ಶೇರಿನ ಮುಖಬೆಲೆಯನ್ನು ವಿಭಜಿಸುವ ಪ್ರಕ್ರಿಯೆಗೆ ಮುಖಬೆಲೆ ಸೀಳಿಕೆ (ಆಂಗ್ಲ ಭಾಷೆಯಲ್ಲಿ-Stock split) ಎಂದು ಕರೆಯಲಾಗುತ್ತದೆ. ಮುಖಬೆಲೆ ವಿಭಜನೆ ಮಾಡುವುದರಿಂದ, ಮಾರುಕಟ್ಟೆಯಲ್ಲಿ ಆ ಶೇರಿನ ದ್ರವ್ಯತೆ(ಕೊಳ್ಳುವ ಮತ್ತು ಮಾರುವ ಪ್ರಮಾಣ) ಹೆಚ್ಚುತ್ತದೆ. ಶೇರಿನ ಮುಖಬೆಲೆಯನ್ನು ವಿಭಜಿಸುವುದರಿಂದ ಆ ಸಂಸ್ಥೆಯ ಶೇರಿನ ಬೆಲೆಯಲ್ಲಿ ವ್ಯತ್ಯಾಸವಾಗಬಹುದು ಹೊರತಾಗಿ, ಸಂಸ್ಥೆಯ ಮಾರುಕಟ್ಟೆ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಹಿನ್ನೆಲೆ

[ಬದಲಾಯಿಸಿ]

ಸಾಮಾನ್ಯವಾಗಿ, ಒಂದು ಸಂಸ್ಥೆ ಶೇರ್ ಮಾರುಕಟ್ಟೆಯಲ್ಲಿ ಶೇರನ್ನು ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ ಮಾರಾಟಕ್ಕೆ ಬಿಡುಗಡೆ ಮಾಡಿದ ಮೇಲೆ ಆ ಶೇರು ಸಾರ್ವಜನಿಕರಿಗೆ ಖರೀದಿಗೆ ಲಭ್ಯವಾಗುತ್ತದೆ. ಸುಮಾರು ವರ್ಷಗಳ ನಂತರ ಯಾವುದಾದರೊಂದು ಕಾರಣದಿಂದಾಗಿ ಆ ಸಂಸ್ಥೆಯ ವ್ಯಾಪಾರದಲ್ಲಿ, ಬಂಡವಾಳದಲ್ಲಿ, ಅಥವಾ ಗಳಿಸಿದ ಲಾಭದಲ್ಲಿ ನಷ್ಟವಾದರೆ, ಸಂಸ್ಥೆಯ ಶೇರಿನ ಮಾರುಕಟ್ಟೆಯ ಬೆಲೆಯಲ್ಲಿ(ಮುಖಬೆಲೆ ಅಲ್ಲ! ಇದು ಸ್ಥಿರವಾಗಿರುತ್ತದೆ.) ಇಳಿಕೆ ಕಾಣಬಹುದು. ಅಥವಾ ಉನ್ನತ ಮಟ್ಟದ ಬೆಳವಣಿಗೆ ಏನಾದರೂ ಕಂಡುಬಂದರೆ ಆ ಸಂಸ್ಥೆಯ ಶೇರಿನ ಮಾರುಕಟ್ಟೆ ಬೆಲೆ ಏರುತ್ತಾ ಹೋಗುತ್ತದೆ. ಇದು ಸಹಜವಾಗಿ ನಡೆಯುವ ಬೆಳವಣಿಗೆ.

ಕೆಲವು ಸಂದರ್ಭಗಳಲ್ಲಿ, ಆ ಸಂಸ್ಥೆಯ ಸಂಸ್ಥೆಯ ಶೇರಿನ ಮಾರುಕಟ್ಟೆ ಬೆಲೆ ಏರುತ್ತಾ ಹೋಗಿ, ಹಳೆಯ ಮತ್ತು ಹೊಸ ಹೂಡಿಕೆದಾರರಿಗೆ ಆ ಶೇರನ್ನು ಖರೀದಿಸಲು ಆಗದೇ ಇರುವಷ್ಟು ಎತ್ತರಕ್ಕೆ ಮುಟ್ಟಬಹುದು. ಉದಾ: ಎಮ್ ಆರ್‌ ಎಫ್ (ಮದ್ರಾಸ್ ರಬ್ಬರ್ ಫ್ಯಾಕ್ಟರಿ). ಇದು ವಾಹನಗಳಿಗೆ ಬೇಕಾದ ವಿವಿಧ ರೀತಿಯ ರಬ್ಬರ್ ಆಧಾರಿತ ಚಕ್ರಗಳನ್ನು ತಯಾರಿಸುವ ಸಂಸ್ಥೆ. ಈ ಸಂಸ್ಥೆಯ ಒಂದು ಶೇರನ್ನು ಖರೀದಿಸಬೇಕಾದರೆ, ₹೭೬,೨೯೬.೮೫ ಹಣವನ್ನು ಪಾವತಿಸಬೇಕಾಗುತ್ತದೆ![] ಈ ರೀತಿ ಶೇರಿನ ಮಾರುಕಟ್ಟೆಯ ಬೆಲೆ ಎತ್ತರಕ್ಕೆ ಏರಿದಾಗ, ಮಾರುಕಟ್ಟೆಯಲ್ಲಿ ಆ ಶೇರಿನ ಚಲನೆ ನಿಧಾನವಾಗುತ್ತದೆ(ಮಾರುಕಟ್ಟೆಯಲ್ಲಿ ಶೇರಿನ ಚಲನೆಗೆ ಲಿಕ್ವಿಡಿಟಿ ಅಥವಾ ದ್ರವ್ಯತೆ ಎನ್ನುತ್ತಾರೆ). ಶೇರನ್ನು ಕೊಡುವ-ಕೊಳ್ಳುವವರು ಅದರ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಸಂಸ್ಥೆಯು ಮಾರುಕಟ್ಟೆಗೆ ಕಾಲಿಟ್ಟ ಹೊಸತರಲ್ಲಿ, ಶೇರು ಖರೀದಿಸಿದವರು ಲಾಭ ಮಾಡಿಕೊಂಡಿರಬಹುದು. ಆದರೆ ಹೊಸ ಹೂಡಿಕೆದಾರರು ಮಾರುಕಟ್ಟೆಗೆ ಬಂದಾಗ ಈ ಶೇರು ಬಹಳ ದುಬಾರಿಯಾಗಿರುತ್ತದೆ.

ಇನ್ನೊಂದು ಉದಾಹರಣೆಯನ್ನು ನೋಡೋಣ: ಮೇಲೆ ಹೇಳಿದಂತೆ ಎಮ್ಆರ್‌ಎಫ್ ಸಂಸ್ಥೆಯ ಒಂದು ಶೇರಿಗೆ ₹೭೬,೨೯೬.೮೫ ಬೆಲೆ ಇದೆ[]. ವಾಹನದ ಚಕ್ರ ತಯಾರಿಕೆಯ ಕ್ಷೇತ್ರದಲ್ಲಿ ಇರುವ ಇತರ ಸಂಸ್ಥೆಗಳೆಂದರೆ ಅಪೋಲೋ ಟಯರ್ಸ್, ಜೆಕೆ ಟಯರ್ಸ್, ಸಿಯೆಟ್, ಬಾಲಕೃಷ್ಣ ಇಂಡಸ್ಟ್ರೀಸ್. ಈ ಸಂಸ್ಥೆಗಳ ಶೇರು ಒಂದರ ಬೆಲೆ ಕ್ರಮವಾಗಿ: ₹೨೩೫.೩೦[], ₹೧೪೦.೦೫[], ₹೧,೧೪೯.೪೫[] ಮತ್ತು ₹೨,೫೦೬.೩೦[]ಇದೆ. ಎಮ್ಆರ್‌ಎಫ್ ಸಂಸ್ಥೆಯ ಶೇರಿನ ಬೆಲೆಯನ್ನು ಹೋಲಿಸಿದರೆ ಇವುಗಳ ಶೇರಿನ ಬೆಲೆ ಬಹಳ ಕಡಿಮೆ ಇದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಎಮ್ಆರ್‌ಎಫ್ ಅನ್ನು ಬಿಟ್ಟು ಈ ಕಂಪೆನಿಗಳ ಶೇರುಗಳನ್ನು ಕೊಳ್ಳಲು ಹೆಚ್ಚು ಒಲವು ತೋರಿಸಬಹುದು. ಹೀಗಾದಾಗ, ಎಮ್ಆರ್‌ಎಫ್ ಶೇರುಗಳು ಕ್ರಮೇಣವಾಗಿ ದ್ರವ್ಯತೆಯನ್ನು ಕಳೆದುಕೊಳ್ಳುತ್ತವೆ ಮತ್ತು ಮಾರುಕಟ್ಟೆಯಲ್ಲಿ ಎಮ್‌ಆರ್‌ಎಫ್ ಸಂಸ್ಥೆಯ ಶೇರಿನ ಬೆಲೆಯಲ್ಲಿ ಕ್ರಮೇಣ ಇಳಿಕೆಯಾಗಲೂಬಹುದು.

ಇಂಥಹ ಸಂದರ್ಭಗಳಲ್ಲಿ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ ಸಡೆದು, ನಿರ್ದೇಶಕರ ಒಪ್ಪಿಗೆಯನ್ನು ಪಡೆದು ಅಂತಿಮವಾಗಿ, ಮುಖಬೆಲೆ ವಿಭಜನೆಯ ಬಗ್ಗೆ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ.

ಪ್ರಕಾರಗಳು

[ಬದಲಾಯಿಸಿ]

ಮುಖಬೆಲೆ ಸೀಳಿಕೆಯಲ್ಲಿ ಎರಡು ವಿಧಗಳಿವೆ. ಅವು ಮುಮ್ಮುಖ ಮುಖಬೆಲೆ ಸೀಳಿಕೆ ಮತ್ತು ಹಿಮ್ಮುಖ ಮುಖಬೆಲೆ ಸೀಳಿಕೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.moneycontrol.com/india/stockpricequote/tyres/mrf/MRF
  2. https://www.moneycontrol.com/india/stockpricequote/tyres/mrf/MRF
  3. https://www.moneycontrol.com/india/stockpricequote/tyres/apollotyres/AT14
  4. https://www.moneycontrol.com/india/stockpricequote/tyres/jktyreindustries/JKT01
  5. https://www.moneycontrol.com/india/stockpricequote/tyres/ceat/C07
  6. https://www.moneycontrol.com/india/stockpricequote/tyres/balkrishnaindustries/BI03