ಮಾವಿನಕಾಯಿಯ ಅಡುಗೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವಿನ ಕಾಯಿಯ ಚಟ್ನಿ[ಬದಲಾಯಿಸಿ]

ಬೇಕಾಗುವ ಸಾಮಗ್ರಿಗಳು:- ಮಾವಿನಕಾಯಿ ಎರಡು, ಹಸಿಮೆಣಸಿನಕಾಯಿನಾಲ್ಕು, ತೆಂಗಿನಕಾಯಿ ಅರ್ಧ, ಇಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಉದ್ದಿನಬೇಳೆ, ಕರಿಬೇವು, ಒಗ್ಗರಣೆಗೆ ಕೊಬ್ಬರಿ ಎಣ್ಣೆ. ೮ ಎಸಳು ಬೆಳ್ಳುಳಿ.

ಮಾಡುವ ವಿಧಾನ: ಮೊದಲಿಗೆ ಮಾವಿನಕಾಯಿಯನ್ನು ಹೆಚ್ಚಿಕೊಳ್ಳಬೇಕು. ಸ್ವಲ್ಪ ಇಂಗು, ಹಸಿಮೆಣಸಿನಕಾಯಿ ಮತ್ತು ತೆಂಗಿನ ಕಾಯಿಯ ಜೊತೆಗೆ ಉಪ್ಪು ಹಾಕಿ ಚನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಅದನ್ನು ಒಂದು ತಟ್ಟೆಗೆ ಹಾಕಿ, ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಇಂಗು, ಜಜ್ಜಿದ ಬೆಳ್ಳುಳಿಯನ್ನು ಹಾಕಿ, ಘಂ ಎಂಬ ಪರಿಮಳ ಬಂದ ಮೇಲೆ ಒಗ್ಗರಣೆ ಹಾಕಿ ಮುಚ್ಚಿ ಇಡಿ.

ಮಾವಿನ ಕಾಯಿಯ ತಂಬುಳಿ[ಬದಲಾಯಿಸಿ]

ಬೇಕಾಗುವ ಸಾಮಗ್ರಿಗಳು:-ಮಾವಿನಕಾಯಿ ಅರ್ಧ, ತೆಂಗಿನಕಾಯಿ ಅರ್ಧ, ಮಜ್ಜಿಗೆ ಒಂದು ತಟ್ಟೆ, ಒಣಮೆಣಸು ಮತ್ತು ಹಸಿಮೆಣಸು ತಲಾ ಒಂದು, ಕರಿಬೇವಿನಸೊಪ್ಪು ಸ್ವಲ್ಪ, ಇಂಗು ಒಗ್ಗರಣೆಗೆ.

ಮಾಡುವ ವಿಧಾನ:- ಮಾವಿನಕಾಯಿಯನ್ನು ಚನ್ನಾಗಿ ಬೇಯಿಸಿಕೊಳ್ಳಬೇಕು. ತೆಂಗಿನ ಕಾಯಿಯನ್ನು ತುರಿದು ಸ್ವಲ್ಪ ಇಂಗನ್ನು ಹಾಕಿ ರುಬ್ಬಬೇಕು. ರುಬ್ಬಿದ ನಂತರ ಕಾಯಿಯ ಹಾಲನ್ನು ಸೋಸಿ ಅದಕ್ಕೆ ಬೇಕಾದಷ್ಟು ಮಜ್ಜಿಗೆಯನ್ನು ಹಾಕಬೇಕು. ಒಗ್ಗರಣೆಗೆ ಕೊಬ್ಬರಿ ಎಣ್ಣೆಯನ್ನು ಇಟ್ಟು ಸಾಸಿವೆ, ಇಂಗು, ಹಸಿಮೆಣಸು ಮತ್ತು ಒಣ ಮೆಣಸನ್ನು ಹಾಕಿ, ಕರಿಬೇವಿನಸೊಪ್ಪನ್ನು ಹಾಕಿ ಸಾಸಿವೆ ಸಿಡಿದ ನಂತರ ಒಗ್ಗರಣೆಯನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ ಹತ್ತು ನಿಮಿಷಗಳು ಮುಚ್ಚಿಡಬೇಕು. ನಂತರ ಅನ್ನಕ್ಕೆ ಉಪಯೋಗಿಸಲು ಈ ತಂಬುಳಿ ರುಚಿಯಾಗಿರುತ್ತದೆ,

ಮಾವಿನ ತೊಕ್ಕು[ಬದಲಾಯಿಸಿ]

ಬೇಕಾಗುವ ಸಾಮಗ್ರಿಗಳು:-ಮಾವಿನಕಾಯಿ ೮, ಕೊತ್ತುಂಬರಿ ಒಂದು ಚಮಚ, ಜೀರಿಗೆ ಒಂದು ಚಮಚ, ಬೆಳ್ಳುಳಿ ಒಂದು ಗಡ್ಡೆ, ಒಣಮೆಣಸು ೧೫-೨೦, ಕೊಬ್ಬರಿ ಎಣ್ಣೆ ಒಗ್ಗರಣೆಗೆ ಇಂಗು, ಸಾಸಿವೆ, ಕರಿಬೇವು.

ಮಾಡುವ ವಿಧಾನಗಳು:- ಮೊದಲಿಗೆ ಮಾವಿನಕಾಯಿಯನ್ನು ಬೇಯಿಸಿಕೊಂಡು ಚನ್ನಾಗಿ ಗಿವುಚಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಒಣಮೆಣಸು, ಕೊತ್ತುಂಬರಿ, ಜೀರಿಗೆ, ಬೆಳ್ಳುಳಿ ಹಾಕಿ ಹುರಿದುಕೊಂಡು ಬೇಯಿಸಿದ ಮಾವಿನಕಾಯಿಯನ್ನು ಹಾಕಿ ಚನ್ನಾಗಿ ರುಬ್ಬಬೇಕು. ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲವನ್ನು ಹಾಕಿ ಒಗ್ಗರಣೆಗೆ ಕರಿಬೇವು, ಇಂಗು, ಸಾಸಿವೆ, ಮತ್ತು ಬೆಳ್ಳುಳಿ ಹಾಕಿ ಚನ್ನಾಗಿ ಕುದಿಸಿದರೆ ಮಾವಿನಕಾಯಿಯ ತೊಕ್ಕು ತಿನ್ನಲು ಸಿದ್ದ. ಇದನ್ನು ಅನ್ನದೊಂದಿಗೆ, ಚಪಾತಿಯೊಂದಿಗೆ ಉಪಯೋಗಿಸಬಹುದು. ಚನ್ನಾಗಿ ಶೇಖರಿಸಿದರೆ ೮-೧೫ ದಿನಗಳು ಹಾಳಾಗದೇ ಇರುತ್ತದೆ.