ವಿಷಯಕ್ಕೆ ಹೋಗು

ಮಾರ್ಗರೇಟ್ ಸ್ಟಾರಮ್ ಜೇಮ್ಸ್‌ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಗರೇಟ್ ಸ್ಟಾರಮ್ ಜೇಮ್ಸ್‌ನ್ (1897-1986). ಬ್ರಿಟಿಷ್ ಕಾದಂಬರಿಗಾರ್ತಿ; ವಿಮರ್ಶಕಳೂ ಪ್ರವಾಸಲೇಖಕಿಯೂ ಹೌದು. ವಿಪುಲವಾಗಿ ಬರೆದಿದ್ದಾಳೆ.

ಬದುಕು

[ಬದಲಾಯಿಸಿ]

ಜನನ ಯಾರ್ಕ್‍ಷೈರಿನ ವ್ಹಿಟ್‍ಬಿ ಗ್ರಾಮದಲ್ಲಿ, ಪ್ರಾರಂಭದಲ್ಲಿ ಜಾಹೀರಾತು-ಪತ್ರಿಕಾ ವ್ಯವಸಾಯದಿಂದ ಹೆಸರು ಪಡೆದು ಅನಂತರ ಸ್ವತಂತ್ರ ಕಾದಂಬರಿ ಜಗತ್ತಿಗೆ ಪ್ರವೇಶ ಮಾಡಿದಳು.

ಹಡಗು ಕಟ್ಟುವವರ ಮನೆತನದಲ್ಲಿ, ಮುಖ್ಯವಾಗಿ, ಕಳೆದ ಎರಡು ಮಹಾಯುದ್ಧಗಳ ಪರಿಣಾಮ ಮಧ್ಯಮವರ್ಗೀಯ ಗೃಹ್ಯಜೀವನದ ನೀತಿ-ನಡತೆಗಳನ್ನು ಹೇಗೆ ಬದಲಾಯಿಸಿತೆಂಬ ವಸ್ತು ಇವಳ ಕಾದಂಬರಿಗಳಿಗೆ ಸ್ಪೂರ್ತಿಕೊಟ್ಟಿದೆ. ಜೊತೆಗೆ ಸಮುದ್ರಯಾನದ ನಿಕಟಪರಿಚಯ ಇವಳ ಕಾದಂಬರಿಗಳಲಿ ಪ್ರಯಾಣ-ಸ್ಥಾನ ಪಲ್ಲಟಗಳ ಹಿನ್ನೆಲೆ ಒದಗಿಸಿದೆ. ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಇವಳಿಗೆ ಎಂ.ಎ. ವರೆಗೆ ಶಿಕ್ಷಣ ದೊರಕಿತು. ಅನಂತರ ಇವಳ ಲೇಖನಕಲೆಗಾಗಿ ಅದೇ ವಿಶ್ವವಿದ್ಯಾಲಯ ಡಿ.ಲಿಟ್, ಪದವಿಯನ್ನು ದಯಪಾಲಿಸಿತು. ಇವಳ ಮೊದಲ ಮೂರು ಕಾದಂಬರಿಗಳ ಒಕ್ಕೂಟದ ಹೆಸರು ದಿ ಟ್ರಯಂಫ್ ಆಫ್ ಟೈಮ್. ಇದರಲ್ಲಿ ದಿ ಲವ್ಲಿ ಷಿಷ್ (1927), ದಿ ವಾಯೆಜ್ ಹೋಂ (1930), ಎ ರಿಚರ್ ಡಸ್ಟ್ (1931)-ಎಂಬ ಕಾದಂಬರಿಗಳು ಸಮಾವೇಶಗೊಂಡಿದ್ದು, ಮೇರಿ ಹಾರ್ವೆ ಎಂಬ ಪಾತ್ರದ ಮನಃಸ್ಥಿತಿಯ ಪಲ್ಲಟಗಳನ್ನು ಬಣ್ಣಿಸುತ್ತದೆ. ತನಗೆ ಚಿರಪರಿಚಿತವೆನಿಸಿದ್ದ ಹಡಗು ಕಟ್ಟುವ ಜನರ ಜೀವನವನ್ನಿಲ್ಲಿ ಈಕೆ ಹೃದಯಂಗಮವಾಗಿ ಚಿತ್ರಿಸಿದ್ದಾಳೆ. ಮೇರಿ ಹಾರ್ವೆಯ ಮೊಮ್ಮಗ ಹಾರ್ವೆ ರಸಲೆ ಎಂಬ ಪಾತ್ರ ಕೇಂದ್ರವಾಗಿರುವ ಇನ್ನೊಂದು ಕಾದಂಬರಿತ್ರಯದಲ್ಲಿ ದಟ್ ವಾಸ್ ಯೆಸ್ಟರ್‍ಡೇ (1932), ಕಂಪನಿ ಪರೇಡ್ (1934), ಲವ್ ಎನ್ ವಿಂಟರ್ (1935) ಸೇರಿವೆ. ದಿ ಗ್ರೀನ್ ಮ್ಯಾನ್ (1952) ಎಂಬುದು 1930-45ರ ಮಧ್ಯದ ಗೃಹಜೀವನವನ್ನು ಚಿತ್ರಿಸುತ್ತದೆ. ಇದರಲ್ಲಿ ಎರಡನೆಯ ಮಹಾಯುದ್ಧದ ಪಡಿನೆಳಲು ಕಾಣುತ್ತದೆ. ದಿ ಆರ್ಲಿ ಲೈಫ್ ಸ್ಟೀಫನ್ ಹಿಂಡ್ ಎಂಬುದು ಒಬ್ಬ ವ್ಯಕ್ತಿಯ ಚಾರಿತ್ರ್ಯ ಸೃಷ್ಟಿಯ ಸೂಕ್ಷ್ಮ ಚಿತ್ರಣ. ಇವಳು ಮೂವತ್ತಾರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾಳೆ. ಮಾಡರ್ನ್ ಡ್ರಾಮ ಇನ್ ಯೂರೋಪ್ (1920), ದಿ ರೈಟರ್ಸ್ ಸಿಚುಯೇಷನ್ (1950)-ಇವು ಇವಳ ವಿಮರ್ಶಾತ್ಮಕಗ್ರಂಥಗಳು. ಇಷ್ಟಲ್ಲದೆ ಈಕೆ ಫುಲ್ ಸರ್ಕಲ್ (1928) ಎಂಬ ಏಕಾಂಕ ನಾಟಕವನ್ನೂ ನೋ ಟೈಂ ಲೈಕ್ ದಿ ಪ್ರೆಸೆಂಟ್ (1933) ಎಂಬ ಆತ್ಮಕಥೆಯನ್ನೂ ಬರೆದಿದ್ದಾಳೆ. ಪಿ.ಇ.ಎನ್. ಸಂಸ್ಥೆಯ ಮುಖಾಂತರ ಈಕೆ ಯೂರೋಪಿನಲ್ಲಿ ಹಿಂಸೆಗೀಡಾದ ಲೇಖಕರ ಸೇವೆಮಾಡಿದಳು.