ಮಾರ್ಕ್ ಟ್ವೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಕ್ ಟ್ವೇನ್ (1907)

ಮಾರ್ಕ್ ಟ್ವೇನ್ (1835-1910) ಒಬ್ಬ ಕಾದಂಬರಿಕಾರ ಮತ್ತು ಪ್ರವಾಸ ಕಥನಕಾರನಾಗಿದ್ದನು. ಇವನು ಅಮೆರಿಕದ ಪ್ರಸಿದ್ಧ ಹಾಸ್ಯಲೇಖಕ. ಮಾರ್ಕ್ ಟ್ವೇನ್ ಎಂಬುದು ಈತನ ಕಾವ್ಯನಾಮ. ಸ್ಯಾಮ್ಯುಯಲ್ ಲಾಂಗ್ ಹಾರ್ನ್ ಕ್ಲೆಮೆನ್ಸ್ ಎಂಬುದು ನಿಜನಾಮ.

ಜೀವನ[ಬದಲಾಯಿಸಿ]

ಹುಟ್ಟಿದ್ದು ಮಸೂರಿಯ ಫ್ಲಾರಿಡದಲ್ಲಿ. ತಂದೆ ವಕೀಲ. ಕ್ಲೆಮಂಜ್ ಐದು ವರ್ಷದವನಿದ್ದಾಗಲೇ ಕುಟುಂಬದವರು ಹ್ಯಾನಬಲ್‍ಗೆ ತೆರಳಿದರು. 1847ರಲ್ಲಿ ತಂದೆ ಕಾಲವಾದುದರಿಂದ ವ್ಯಾಸಂಗವನ್ನು ಮುಂದುವರಿಸದಾದ. ಮುದ್ರಣಾಲಯದಲ್ಲಿ ಉದ್ಯೋಗಿಯಾಗಿ ಸೇರಿ ತನ್ನ ಸಹೋದರ ನಡೆಸುತ್ತಿದ್ದ ಮಸೂರಿ ಕ್ಯೂರಿಯರ್‍ಗೆ ಲೇಖನಗಳನ್ನು ಬರೆಯತೊಡಗಿದ. ಪ್ರವಾಸಿ ಮುದ್ರಣಗಾರನಾಗಿ ಈತ ನ್ಯೂಯಾರ್ಕಿನ ಪೂರ್ವ ಭಾಗ ಹಾಗೂ ಫಿಲಿಡೆಲ್ಫಿಯಗಳನ್ನು ಸುತ್ತಿ ಬಂದ. ಅನಂತರ ದೋಣಿ ನಡೆಸುವ ಉದ್ಯೋಗದಲ್ಲಿ ನಿರತನಾದ. ಅಷ್ಟರಲ್ಲಿ ದೇಶದಲ್ಲಿ ಅಂತರ್ಯುದ್ಧ ತಲೆದೋರಿ ದೋಣಿಗಳ ಓಡಾಟಕ್ಕೆ ತಡೆಯುಂಟಾದುದರಿಂದ ಎರಡೇ ವಾರದಲ್ಲಿ ಆ ಹುದ್ದೆಯನ್ನು ತೊರೆದು ಪತ್ರಿಕೋದ್ಯಮವನ್ನು ಹಿಡಿದ. ವರ್ಜಿನ್ಯ ನಗರದ ಎಂಟರ್‌ಪ್ರೈಸ್ ಪತ್ರಿಕೆಯ ಸಂಪಾದಕನಾದ. ಆಗಲೆ ಈತ ಮಾರ್ಕ್‍ ಟ್ವೇನ್ ಎಂಬ ಕಾವ್ಯನಾಮ ಧರಿಸಿದ್ದು. ಹಾಸ್ಯ ಲೇಖಕ ಆರ್ಟೆಮಸ್ ವಾರ್ಡ್‍ನ ಸಹವಾಸದಿಂದ ಸಾಹಿತ್ಯಕಾಂಕ್ಷೆಯನ್ನು ಬೆಳೆಸಿಕೊಂಡ. ಬ್ರೆಟ್ ಹಾರ್ಟ್‍ನೊಂದಿಗೆ ಸೇರಿಕೊಂಡು ಸಾಹಿತ್ಯ ಸೃಜಿಸಿದ. 1865ರಲ್ಲಿ ಈತನ ಒಂದು ಕಥೆಯಾದ ದಿ ಸೆಲೆಬ್ರೇಟೆಡ್ ಜಂಪಿಂಗ್ ಫ್ರಾಗ್ ಆಫ್ ಕಾಲೆವರಾಸ್ ಕೌಂಟಿ ಎಂಬುದು ನ್ಯೂಯಾರ್ಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಂದಿನಿಂದಲೇ ಈತ ದೊಡ್ಡ ನಗೆ ಬರಹಗಾರನೆಂದು ಖ್ಯಾತನಾದ. ಅನಂತರ ಸ್ಯಾಕ್ರಾಮೆಂಟೋ ಸಂಸ್ಥೆಯವರು ಈತನನ್ನು ಪ್ರವಾಸ ಲೇಖನಗಳನ್ನು ಬರೆಯಲು ನೇಮಿಸಿಕೊಂಡು ಮೊದಲು ಹವಾಯಿಗೆ ಕಳುಹಿಸಿದರು. ಅನಂತರ ಪ್ರಪಂಚ ಪರ್ಯಟನೆ ಮಾಡಲು ಅನುಮತಿ ನೀಡಿದರು. ಈತ ಅದಕ್ಕೆ ಬದಲಾಗಿ ಮೆಡಿಟರೇನಿಯನ್ ಕಡೆ ಹೊರಟ ಗುಂಪಿನಲ್ಲಿ ಸೇರಿಕೊಂಡು ದಿ ಇನ್ನೊಸೆಂಟ್ಸ್ ಅಬ್ರಾಡ್ (1869) ಎಂಬ ಕೃತಿಯನ್ನು ಬರೆದು ಪ್ರಕಟಿಸಿದ. ಈ ಕೃತಿ ಬಹುಬೇಗ ಜನಪ್ರಿಯತೆ ಗಳಿಸಿತು. ಅಮೆರಿಕಗೆ ಹಿಂತಿರುಗಿ ಬಂದು ನ್ಯೂ ಯಾರ್ಕಿನ ಶ್ರೀಮಂತ ಕುಟುಂಬದ ಕನ್ಯೆ ಆಲಿವಿಯ ಲಾಂಗ್‍ಡನ್ ಎಂಬಾಕೆಯನ್ನು ಮದುವೆಯಾಗಿ ಹಾರ್ಟ್‍‌ಫರ್ಡ್‍‌ನಲ್ಲಿ 1871ರಿಂದ 1891 ರ ವರೆಗೆ ವಾಸಿಸಿದ. ಈ ದಿವಸಗಳು ಕ್ಲೆಮೆಂಜ಼್‍ನ ಜೀವಮಾನದಲ್ಲಿ ಸುಖದ ದಿನಗಳು ಎನ್ನಬಹುದಾದಂಥವು. ಇಲ್ಲಿಯೇ ಈತ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿದುದು. ಬಾಲ್ಯದ ನೆನಪುಗಳ ಮೋಹಕ ಪುನರ್‍ಸೃಷ್ಟಿ ಎನಿಸಿದ ದಿ ಅಡ್ವೆಂಚರ್ಸ್ ಆಫ್ ಟಾಮ್ ಸಾಯರ್ (1876), ದಿ ಲೈಫ್ ಆನ್ ದಿ ಮಿಸಿಸಿಪಿ (1883), ದಿ ಅಡ್ವೆಂಚರ್ಸ್ ಆಫ್ ಹಕ್ಲ್‍ಬೆರಿ ಫಿನ್ (1884)-ಇವು ಟ್ವೇನನ ಶ್ರೇಷ್ಠ ಕೃತಿಗಳು. ದಿ ಪ್ರಿನ್ಸ್ ಅಂಡ್ ದಿ ಪಾಪರ್ (1880), ಎ ಕನೆಕ್ಟಿಕಟ್‍ಯಾಂಕಿ ಇನ್ ಕಿಂಗ್ ಆರ್ಥರ್ಸ್ ಕೋರ್ಟ್ (1889)-ಇವು ಈತನ ಜನಪ್ರಿಯ ಕಥೆಗಳು. ಈ ವೇಳೆಗೆ ವಿಧಿ ಕ್ಲೆಮೆಂಜ಼್‍ನ ಜೀವನದ ಮೇಲೆ ತನ್ನ ದೃಷ್ಟಿಯನ್ನು ಹಾಯಿಸಿತು. 1884ರಲ್ಲಿ ಪ್ರಕಾಶನ ಸಂಸ್ಥೆಯಾದ ಚಾರಲ್ಸ್ ಎಲ್. ವೆಬ್‍ಸ್ಟರ್ ಕಂಪನಿಯಲ್ಲಿ ತನ್ನಲ್ಲೇ ಹಣವನ್ನು ತೊಡಗಿಸಿದ್ದ. ಆ ಕಂಪನಿ 1894ರಲ್ಲಿ ಉಪನ್ಯಾಸ ಮಾಡಿ ಹಣ ಸಂಪಾದಿಸಬೇಕೆಂದು ವಿಶ್ವಪರ್ಯಟನ ಕೈಗೊಂಡ. 1897ರಲ್ಲಿ ಫಾಲೋಯಿಂಗ್ ದಿ ಇಕ್ವೇಟರ್ ಎಂಬ ಕೃತಿಯನ್ನು ಪ್ರಕಟಿಸಿದ. ಹೀಗೆ ಹಣ ಗಳಿಸಿ, ಮಾಡಿದ್ದ ಸಾಲಗಳನ್ನು ತೀರಿಸಿಕೊಂಡ. ಆರ್ಥಿಕ ತೊಂದರೆಗಳಿಂದ ಇನ್ನೇನು ಪಾರಾದೆ ಎನ್ನುವಲ್ಲಿ ಗೃಹಕೃತ್ಯದಲ್ಲಿ ತುಂಬಲಾರದ ಇನ್ನೊಂದು ನಷ್ಟಕ್ಕೆ ಒಳಗಾದ. ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ಸತ್ತರು. ಈ ನೋವಿನಿಂದಾಗಿ ಈತನ ಬರೆವಣಿಗೆ ಕುಂಠಿತವಾಗಿ ಜೀವನದಲ್ಲಿ ಕಟು ನಿರಾಶೆ ಇಣುಕಿತು. ದಿ ಮ್ಯಾನ್ ಹೂ ಸ್ಪಾಯಿಲ್ಡ್ ಹೈಡಲ್‍ಬರ್ಗ್ (1899) ಎಂಬ ಕೃತಿಯೇ ಟ್ವೇನನ ನಿರಾಶಾ ಜೀವನಕ್ಕೆ ಸಾಕ್ಷಿ.

ಟ್ವೇನನಿಗೆ ಸಾರ್ವಜನಿಕವಾಗಿ ಅನೇಕ ಪ್ರಶಸ್ತಿಗಳು ಲಭಿಸಿದವು. ಯೇಲ್ ವಿಶ್ವವಿದ್ಯಾಲಯ ಮೊದಲೇ ನೀಡಿದ್ದ ಎಂ.ಎ. ಪದವಿಯ ಜೊತೆಗೆ 1901ರಲ್ಲಿ ಎಲ್.ಎಲ್.ಡಿ. ಪದವಿಯನ್ನು ನೀಡಿ ಗೌರವಿಸಿತು. 1902ರಲ್ಲಿ ಮಸೂರಿ 1907ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳು ಗೌರವ ಪದವಿಗಳನ್ನು ನೀಡಿದುವು. ಕನೆಕ್ಟಿಕಟ್‍ನ ರೆಡಿಂಗ್‍ನಲ್ಲಿ ತಾನೇ ಒಂದು ಮನೆಯನ್ನು ಕಟ್ಟಿ ತನ್ನ ಕೊನೆಯ ದಿವಸಗಳನ್ನು ಅಲ್ಲಿಯೇ ಕಳೆದ. ಈತನ ಮರಣಾನಂತರ ಅನೇಕ ಕೃತಿಗಳು ಹೊರಬಂದವು. 1924ರಲ್ಲಿ ಈತನ ಆತ್ಮಕಥೆ ಪ್ರಕಟವಾಯಿತು. ಈತ ಪತ್ರಿಕೆಗಳಿಗೆ ಬರೆದ ಲೇಖನಗಳನ್ನೆಲ್ಲ ಸಂಪಾದಿಸಿ ಅನೇಕ ಸಂಪುಟಗಳಲ್ಲಿ ಪ್ರಕಟಿಸಲಾಯಿತು. ಅವುಗಳಲ್ಲಿ ಮಾರ್ಕ್ ಟ್ವೇನ್ ಟ್ರಾವಲ್ಸ್ ವಿತ್ ಮಿಸ್ಟರ್ ಬ್ರೌನ್ (1940) ಸೇರಿದೆ. ಈತನನ್ನು ಅಮೆರಿಕ ಸಾಹಿತ್ಯದ ಲಿಂಕನ್ ಎಂದು ಕರೆಯಲಾಗಿದೆ.

ಟ್ವೇನನ ಗುರಿ ಬರಿಯ ವಿನೋದವಲ್ಲ, ನೀತಿಬೋಧೆ. ಗದ್ಯ ಶೈಲಿಯಲ್ಲಿ ಅದುವರೆಗೂ ನಡೆದು ಬಂದ ಸಾಂಪ್ರಾದಾಯಿಕತೆ ಅನೈಜತೆಗಳನ್ನು ತೊಡೆದು ಹಾಕಿ ಅದಕ್ಕೊಂದು ಸರಳತೆ ಸ್ಪಷ್ಟತೆ ವಸ್ತುಸಾಮೀಪ್ಯಗಳನ್ನಿತ್ತು ಬರೆವಣಿಗೆಯನ್ನು ಈತ ಸಹಜವಾಗಿಸಿದ. ಮುಂದೆ ಹೆಮಿಂಗ್ವೇ ಕೈಲಿ ಸಿದ್ಧಿ ಕಂಡ ಗದ್ಯ ಶೈಲಿಗೆ ಈತನೇ ಜನಕ ಎನ್ನಬಹುದು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಆನ್‍ಲೈನ್ ಆವೃತ್ತಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: