ಮಹಾರಾಜ ಕಾಲೇಜಿನ ಕನ್ನಡ ಸಂಘ
ಮಹಾರಾಜ ಕಾಲೇಜಿನ ಕನ್ನಡ ಸಂಘ[೧]ಕ್ಕೆ ಮಹಾರಾಜ ಕಾಲೇಜಿನಷ್ಟೇ ಸುದೀರ್ಘ ಚರಿತ್ರೆ ಇದೆ. ಇದು ಮೊದಲಿಗೆ 'ಕರ್ಣಾಟಕ ಸಂಘ'[೨]ವಾಗಿ ಆರಂಭಗೊಂಡು, ನಂತರದ ದಿನಗಳಲ್ಲಿ ಕರ್ಣಾಟಕ ಸಂಘ[೩] 'ಕನ್ನಡ ಮತ್ತು ಜಾನಪದ ಸಂಘ'ವಾಗಿ, ಆ ನಂತರ "ಕನ್ನಡ ಸಂಘ'ವಾಗಿ ಪರಿವರ್ತನೆಗೊಂಡಿತು.
ಇತಿವೃತ್ತ
[ಬದಲಾಯಿಸಿ]"ಕರ್ಣಾಟಕ ಸಂಘ" [೪]ಇತಿಹಾಸ ಪ್ರಾರಂಭಗೊಳ್ಳುವುದು ೧೯೧೭ರಲ್ಲಿ. ಆಗ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಅಧ್ಯಕ್ಷರಾಗಿದ್ದ ಬಿ.ಎಂ. ಶ್ರೀಕಂಠಯ್ಯನವರು ಈ ಸಂಘಕ್ಕೂ ಅಧ್ಯಕ್ಷರಾದರಲ್ಲದೆ ತಾವು ನಿವೃತ್ತರಾಗುವವರೆಗೂ ಎರಡೂ ಸಂಘಗಳ ಅಧ್ಯಕ್ಷರಾಗಿಯೇ ಮುಂದುವರೆದಿದ್ದರು. ನಾಡಿನ ಸರ್ವಶ್ರೇಷ್ಠ ವಿದ್ವಾಂಸರು, ಪಂಡಿತ್ತೋತ್ತಮರು ಈ ಕನ್ನಡ ಸಂಘದಿಂದ ಪ್ರಸಿದ್ಧರಾಗಿದ್ದಾರೆ. ೧೯೪೪ರಲ್ಲಿ "ಕರ್ಣಾಟಕ ಸಂಘ"ವು ಬೆಳ್ಳಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡಿದೆ. ಇದಕ್ಕೆ ನಿದರ್ಶನವಾಗಿ ವಾರ್ಷಿಕ ಸಂಚಿಕೆಯೊಂದು ಹೊರಬಂದಿರುವುದನ್ನು ಮನಗಾಣಬಹುದಾಗಿದೆ.
ಕರ್ಣಾಟಕ ಸಂಘದ ಬೆಳ್ಳಿಹಬ್ಬ
[ಬದಲಾಯಿಸಿ]ಕರ್ಣಾಟಕ ಸಂಘ[೫]ದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ ಸಂಘವು ೩೮ ಕನ್ನಡ ಸಂಘದ ಜನಪ್ರತಿನಿಧಿಗಳನ್ನು ಕರೆಸಿ ಅದ್ದೂರಿ ಉತ್ಸವವನ್ನು ಏರ್ಪಡಿಸಿ, ಬೆಳ‍್ಳಿಯ ೩೭ ಬಹುಮಾನಗಳನ್ನು, ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಂಚಿ, ಸಮಾರಂಭದ ಅಧ್ಯಕ್ಷರಾಗಿದ್ದ ರಾಜಸೇವಾಸಕ್ತ ಬಿ.ಎಂ.ಶ್ರೀ ಹಾಗೂ ಮುಖ್ಯ ಅತಿಥಿಗಳಾಗಿದ್ದ ಮಾಸ್ತಿವೆಂಕಟೇಶ್ ಅಯ್ಯಂಗಾರ್ ಅವರಿಗೆ ಬಿನ್ನವತ್ತಳೆಯನ್ನು ಓದಿ ಸಮರ್ಪಿಸಲಾಯಿತು. ಅಂದು ಕರ್ಣಾಟಕ ಸಂಘದಲ್ಲಿ ೫೦೦ಕ್ಕೂ ಮೇಲ್ಪಟ್ಟ ಸದಸ್ಯರಿದ್ದರು. ಅವರಲ್ಲಿ ಎಲ್ಲಾ ಜಾತಿ. ಮತ, ಧರ್ಮದವರಿಗೂ ಆದ್ಯತೆ ಇತ್ತು. ಸಂಘದ ಸದಸ್ಯರೆಲ್ಲರೂ ಒಂದೇ ತಾಯಿಯ ಮಕ್ಕಳಂತಿದ್ದರು. ೧೯೧೭ರಿಂದ ೧೯೪೫ರವರೆಗೆ ಕರ್ಣಾಟಕ ಸಂಘದ ಅಧ್ಯಕ್ಷರಾಗಿದ್ದ ಮಹೋಪಧ್ಯಾಯರ ವಿವರಗಳು ಇಂತಿವೆ.
ಕರ್ಣಾಟಕ ಸಂಘದ ಅಧ್ಯಕ್ಷರ ಪಟ್ಟಿ
[ಬದಲಾಯಿಸಿ]ಕ್ರಮ ಸಂಖ್ಯೆ | ಅಧ್ಯಕ್ಷರ ಹೆಸರು | ಇಸವಿ |
---|---|---|
೧ | ಬಿ.ಎಂ.ಶ್ರೀಕಂಠಯ್ಯ | ೧೯೧೭-೧೯೧೯ |
೨ | ಬಿ.ಕೃಷ್ಣಪ್ಪ | ೧೯೧೯-೧೯೨೦ |
೩ | ಎ.ಆರ್.ಕೃಷ‍್ಣಶಾಸ್ತ್ರಿ | ೧೯೨೦-೧೯೨೨ |
೪ | ಎನ್.ಎಸ್.ನಾರಾಯಣಶಾಸ್ತ್ರಿ | ೧೯೨೨-೧೯೨೪ |
೫ | ಎನ್. ಅನಂತರಂಗಾಚಾರ್ | ೧೯೨೪-೧೯೨೬ |
೬ | ಟಿ.ಎಸ್.ವೆಂಕಣ್ಣಯ್ಯ | ೧೯೨೭-೧೯೨೮ |
೭ | ವಿ.ವೆಂಕಟಾಚಾರ್ | ೧೯೨೮-೧೯೨೯ |
೮ | ಚೆ.ದೊಡ್ಡವೀರಪ್ಪ | ೧೯೨೯-೧೯೩೦ |
೯ | ತಾಂಡವೇಶ್ವರ | ೧೯೩೦-೧೯೩೧ |
೧೦ | ಎಂ.ಪಿ.ಲಕ್ಷ್ಮೀನರಸಿಂಹಶಾಸ್ತ್ರಿ | ೧೯೩೧-೧೯೩೨ |
೧೧ | ಪಿ.ಅಪ್ಪೂರಾವ್ | ೧೯೩೨-೧೯೩೩ |
೧೨ | ಬಿ.ವಿ.ಶಿವಲಿಂಗಪ್ಪ | ೧೯೩೩-೧೯೩೪ |
೧೩ | ಎ.ಸಿ.ಭೈರಪ್ಪ | ೧೯೩೪-೧೯೩೫ |
೧೪ | ಕೆ.ಲಕ್ಕಪ್ಪ | ೧೯೩೫-೧೯೩೬ |
೧೫ | ಟಿ.ವೆಂಕಟೇಶ್ವರಯ್ಯ | ೧೯೩೫-೧೯೩೬ |
೧೬ | ಕೆ.ಪುಟ್ಟಸ್ವಾಮಿ | ೧೯೩೭-೧೯೩೮ |
೧೭ | ಸಿ.ಟಿ.ಈಶ್ವರನ್ | ೧೯೩೮-೧೯೩೯ |
೧೮ | ಟಿ.ಬಸವಯ್ಯ | ೧೯೩೯-೧೯೪೦ |
೧೯ | ಬಿ.ಎಲ್.ಸಿದ್ದಪ್ಪ | ೧೯೪೦-೧೯೪೧ |
೨೦ | ಕೆ.ವಿ.ಕುಮಾರಸ್ವಾಮಿ | ೧೯೪೧-೧೯೪೨ |
೨೧ | ಆರ್.ಪಿ.ರೇವಣ್ಣ | ೧೯೪೨-೧೯೪೩ |
೨೨ | ಕೆ.ಆರ್.ಲಿಂಗಪ್ಪ | ೧೯೪೩-೧೯೪೪ |
೨೩ | ಎ.ಪಿ.ನಾಗಪ್ಪ | ೧೯೪೪-೧೯೪೫ |
ಕನ್ನಡ ಸಂಘದ ನೇತಾರರು
[ಬದಲಾಯಿಸಿ]- ಟಿ. ಎಸ್. ವೆಂಕಣ್ಣಯ್ಯನವರೂ ಎ. ಆರ್. ಕೃಷ್ಣಶಾಸ್ತ್ರಿಗಳೂ ಕನ್ನಡದ ಸಂಘಸೇವೆಯಲ್ಲೂ ಇಬ್ಬರದ್ದೂ ಅವಳಿಯುಗ. ಎ.ಆರ್. ಕೃಷ್ಣಶಾಸ್ತ್ರಿಗಳು ಮೈಸೂರಿಗೆ ವರ್ಗವಾದಾಗ, ವೆಂಕಣ್ಣಯ್ಯನವರು ಸೆಂಟ್ರಲ್ ಕಾಲೇಜು ಸಂಘದ ಉಪಾಧ್ಯಕ್ಷರಾಗಿ ಕೆಲವರ್ಷ ದುಡಿದರು. ಅವರು ೧೯೨೬-೨೭ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾಗಿ ನೇಮಕಗೊಂಡ ಮೇಲೆ, ಅಲ್ಲೊಂದು ಕರ್ಣಾಟಕ ಸಂಘವನ್ನು ಹುಟ್ಟುಹಾಕಿದರು.
- ಆಗ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಅಧ್ಯಕ್ಷರಾಗಿದ್ದ ಬಿ.ಎಂ. ಶ್ರೀಕಂಠಯ್ಯನವರು ಈ ಸಂಘಕ್ಕೂ ಅಧ್ಯಕ್ಷರಾದರಲ್ಲದೆ ತಾವು ನಿವೃತ್ತರಾಗುವವರೆಗೂ ಎರಡೂ ಸಂಘಗಳ ಅಧ್ಯಕ್ಷರಾಗಿದ್ದರು. ಸಂಘ ಪ್ರಾರಂಭವಾದ ಮಾರನೆಯ ವರ್ಷವೇ ಕಿರಿಯ ಕಾಣಿಕೆ-ವಿದ್ಯಾರ್ಥಿಗಳಿಂದ ರಚಿತವಾದ ಕವನಗಳ ಸಂಕಲನ-ಪ್ರಕಟವಾಯಿತು. ೧೯೩೦ರಲ್ಲಿ ಅದೇ ಮಾದರಿಯ ತಳಿರು ಎಂಬ ಹೊತ್ತಗೆ ಪ್ರಕಟವಾಯಿತು.
- ಇಂಗ್ಲಿಷ್ ಗೀತೆಗಳು ಸಂಕಲನದಿಂದ ಸ್ಫೂರ್ತಿಗೊಂಡು ಹೊಸಕವಿತೆಯ ಸೃಷ್ಟಿಗೆ ತೊಡಗಿದ್ದ ತರುಣ ಕವಿಗಳು ಇವೆರಡರ ಮೂಲಕ ಬೆಳಕಿಗೆ ಬಂದರು. ಅವರ ಪೈಕಿ ಕಾವ್ಯ ರಚನೆಯನ್ನು ಮುಂದುವರಿಸಿಕೊಂಡು ಬಂದವರು-ಕೆ. ವಿ. ಪುಟ್ಟಪ್ಪ (ಕುವೆಂಪು), ಪು. ತಿ. ನರಸಿಂಹಾಚಾರ್, ಜಿ. ಪಿ, ರಾಜರತ್ನಂ, ರಾಘವ (ಎಂ.ವಿ. ಸೀತಾರಾಮಯ್ಯ) ಮತ್ತು ದಿನಕರ ದೇಸಾಯಿ.
- ೧೯೩೦ರಲ್ಲಿ, ಪ್ರಸಿದ್ಧ ಕಾದಂಬರಿಕಾರ ಗಳಗನಾಥರನ್ನು ಸಂಘ ಬರಮಾಡಿಕೊಂಡು ಸನ್ಮಾನಿಸಿ ಬಿನ್ನವತ್ತಳೆ ಅರ್ಪಿಸಿತು. ಕುಮಾರವ್ಯಾಸ ಜಯಂತಿಯನ್ನು (೧೯೩೧) ನಡೆಸಿ ಮೂರು ದಿನ ಸುಪ್ರಸಿದ್ಧ ಗಮಕಿಗಳಿಂದ ಕನ್ನಡ ಭಾರತದ ಕಥಾ ಪ್ರಸಂಗಗಳನ್ನು ವಾಚನ ಮಾಡಿಸಿತು. ಈ ಉತ್ಸವದ ಸ್ಮಾರಕವಾಗಿ, ೧೯೪೦ರಲ್ಲಿ ಕುಮಾರವ್ಯಾಸ ಪ್ರಶಸ್ತಿ ಪ್ರಕಟವಾಯಿತು.
- ಆಷಾಢಭೂತಿ, ಸಾವಿನ ಸಮಸ್ಯೆ, ನಾಗಾನಂದ-ಇವು ಸಂಘದ ಇತರ ಪ್ರಕಟಣೆಗಳು. ಈ ಸಂಘದ ಕಾರ್ಯಪ್ರಮಾಣ ಚಿಕ್ಕದಾದರೂ ತನ್ನ ಹಿರಿಯ ಸೋದರ ಸಂಘದೊಂದಿಗೆ - ಮುಂದೆ ನಾಡಿನ ಕಾಲೇಜುಗಳಲ್ಲಿ ಶಾಲೆಗಳಲ್ಲಿ ಇತರ ಕಡೆಗಳಲ್ಲಿ ಅಸಂಖ್ಯಾತವಾಗಿ ಕರ್ನಾಟಕ ಸಂಘಗಳು ಸ್ಥಾಪನೆಗೊಳ್ಳಲು ಮಾರ್ಗದರ್ಶಕವಾಗಿ ಕೆಲಸ ಮಾಡಿತು.
ಕನ್ನಡ ಸಂಘದ ಪ್ರಕಟಣೆಗಳು
[ಬದಲಾಯಿಸಿ]- ಕರ್ಣಾಟಕ ಸಂಘವು ಕೈಗೊಂಡಿದ್ದ ಗ್ರಂಥ ಪ್ರಕಟಣೆಯಿಂದ ೧೯೨೮ರಲ್ಲಿ "ಕಿರಿಯರ ಕಾಣಿಕೆ" ಎಂಬ ಕವನ ಸಂಕಲನ ಹೊರಬಂದಿತು. ಆಗ ಇದನ್ನು ಆರಂಭೀಸಿದವರು-ಕೆ.ವಿ.ಪುಟ್ಟಪ್ಪ, ಜಿ.ಪಿ.ರಾಜರತ್ನಂ, ಎಂ.ವಿ.ಸೀತಾರಾಮಯ್ಯ ಮೊದಲಾದವರು.
- ವಿ.ವೆಂಕಟಾಚಾರ್ ಅವರಿಂದ ರಚಿತವಾದ "ಸಾವಿನ ಸಮಸ್ಯೆ" ಎಂಬ ನಾಟಕ ೧೯೩೧ರಲ್ಲಿ ಪ್ರಕಟಗೊಂಡಿತು.
- ಎ.ಎನ್.ಮೂರ್ತಿರಾಯರ ನಾಟಕ "ಆಷಾಢಭೂತಿ" ೧೯೩೧ರಲ್ಲಿಯೇ ಪ್ರಕಟವಾಯಿತು.
- ನಾ.ಕಸ್ತೂರಿಯವರ "ಗಗ್ಗಯ್ಯನ ಗಡಿಬಿಡಿ" ಎಂಬ ಪ್ರಹಸನವನ್ನು ೧೯೪೧ರಲ್ಲಿ ಹೊರಬಂದಿತು.
- ಕೆ.ಎಸ್.ನರಸಿಂಹಸ್ವಾಮಿಯವರ "ಮೈಸೂರು ಮಲ್ಲಿಗೆ" ಕವನ ಸಂಕಲನವನ್ನು ೧೯೪೨ರಲ್ಲಿ ಇಲ್ಲಿಯೇ ಪ್ರಕಟಿಸಲಾಯಿತು.
- ವಿದ್ಯಾರ್ಥಿಗಳ ಉಪಯೋಗಕ್ಕಾಗಿ ೧೯೪೩-೪೪ರಲ್ಲಿ 'ನಾಗಾನಂದ' ನಾಟಕದ ಕನ್ನಡ ಅನುವಾದದ ೪ನೇ ಆವೃತ್ತಿಯನ್ನು ಮುದ್ರಿಸಿ ಪ್ರಕಟಿಸಲಾಯಿತು.
ಕನ್ನಡ ಸಂಘಕ್ಕೆ ಮರು ಚಾಲನೆ ಕೆ.ವಿ.ಪುಟ್ಟಪ್ಪ ಅವರಿಂದ
[ಬದಲಾಯಿಸಿ]- ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಕರ್ಣಾಟಕ ಸಂಘವು ಇದ್ದಕ್ಕಿದ್ದಂತೆ ಒಮ್ಮೆಗೆ ನಿಂತುಹೋಯಿತು. ಕಾಲ ನಿಲ್ಲುವುದಿಲ್ಲ. ಯಾರನ್ನೂ ಕಾಯುವುದಿಲ್ಲ. ಆ ಕಾಲಮಾನದ ಗತಿಯೊಂದಿಗೆ ದನಿಗೂಡಿಸಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುವುದು ಸವಾಲಿನ ವಿಷಯವಾಗಿತ್ತು. ಅದಲ್ಲದೆ ಕರ್ನಾಟಕ ಏಕೀಕರಣಗೊಂಡಿದ್ದ ಸಂದರ್ಭ ಅದಾಗಿತ್ತು. ಆಗ ಪ್ರಾಧ್ಯಾಪಕರಾಗಿದ್ದ ಕುವೆಂಪುರವರು ಕನ್ನಡ ಸಂಘಕ್ಕೆ ಮರುಚಾಲನೆ ಕೊಟ್ಟು ಕರ್ಣಾಟಕ ಸಂಘವನ್ನು "ಕನ್ನಡ ಸಂಘ" ವೆಂದು ಸಂಕ್ಷೇಪಗೊಳಿಸಿದರು.
- ಸಮಾರಂಭವೊಂದರಲ್ಲಿ ಕುವೆಂಪು ಅವರು "ಮಣಿದಿರಲಿ ಮುಡಿ; ಮತ್ತೆ ಮುಗಿದಿರಲಿ ಕಯ್, ಮತ್ತೆ ಮಡಿಯಾಗಿರಲಿ ಬಾಳ್ವೆ" ಎಂದು ಹೇಳುತ್ತಾ ಕನ್ನಡ ಹೃದಯಗಳಿಗೆ ಕನ್ನಡ ಸಂಘ ಹತ್ತಿರವಾಗಬೇಕೆಂದು ಕರೆಕೊಟ್ಟರು. ವಿದ್ಯಾರ್ಥಿಗಳ ಬರವಣಿಗೆಯನ್ನು ಪ್ರೋತ್ಸಾಹಿಸಲು ಕುವೆಂಪು ಅವರು "ತಳಿರು" ಎಂಬ ಮಾಸ ಪತ್ರಿಕೆಯನ್ನು ಹೊರತಂದರು.
ಕನ್ನಡ ಸಂಘದ ಚಟುವಟಿಕೆಗಳು
[ಬದಲಾಯಿಸಿ]ಕನ್ನಡ ಸಂಘವು ಪ್ರತಿ ವರ್ಷ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತದೆ. ಅವುಗಳೆಂದರೆ...
- ಹಳಗನ್ನಡ ವಾಚನಸ್ಪರ್ಧೆ
- ಆಶುಭಾಷಣ
- ಕವಿತಾವಾಚನ
- ಪ್ರಬಂಧ ಸ್ಪರ್ಧೆ
- ಗಾದೆ ಮತ್ತು ಒಗಟುಗಳ ವಿಸ್ತರಣೆ
- ದೇಸಿ ಆಟಗಳ ಸ್ಪರ್ಧೆ
- ದೇಸಿ ವೇಷಭೂಷಣಗಳ ಸ್ಪರ್ಧೆ
- ಉಪನ್ಯಾಸ
- ಪದಬಂಧ
- ನಾಟಕ
- ಏಕಪಾತ್ರಾಭಿನಯ
- ವೃಂದಗಾನ
- ಕಥೆ ಹೇಳುವ ಸ್ಪರ್ಧೆ
- ಒಲೆರಹಿತ ಗ್ರಾಮೀಣ ಅಡುಗೆಗಳು
- ಚರ್ಚಾಸ್ಪರ್ಧೆ
- ಅಣುಕು ಸ್ಪರ್ಧೆ
- ಭಾಷಣ ಸ್ಪರ್ಧೆ
ಹೀಗೆ ಹತ್ತು ಹಲವು ಸ್ಪರ್ಧೆಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿ ಮುಂದುವರೆಯುತ್ತಿದೆ. ಕನ್ನಡ ಸಂಘದ ಪ್ರಧಾನ ಅಧ್ಯಕ್ಷರು ಪ್ರಾಂಶುಪಾಲರು, ಅಧ್ಯಕ್ಷರು ಕನ್ನಡ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಉಳಿದ ಎಲ್ಲಾ ಅಧ್ಯಾಪಕರು ಕನ್ನಡ ಸಂಘದ ಸದಸ್ಯರಾಗಿರುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://www.kanaja.in/dinamani/%E0%B2%AA%E0%B3%8D%E0%B2%B0%E0%B3%8A-%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B2%A3%E0%B3%8D-%E0%B2%A4%E0%B3%86%E0%B2%B2%E0%B2%97%E0%B2%BE%E0%B2%B5%E0%B2%BF/
- ↑ "ಆರ್ಕೈವ್ ನಕಲು". Archived from the original on 2016-05-26. Retrieved 2016-05-26.
- ↑ http://www.kanaja.in/%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8%E0%B2%BF-%E0%B2%95%E0%B2%82%E0%B2%A1-%E0%B2%B5%E0%B2%BF%E0%B2%9C%E0%B2%AF%E0%B2%A8%E0%B2%97%E0%B2%B0%C2%A0-%E0%B2%AA%E0%B3%8D%E0%B2%B0%E0%B2%B8/
- ↑ http://padmasridhara.blogspot.in/2015/11/blog-post_55.html
- ↑ https://www.facebook.com/kannadasampada/posts/849099798485677:0